ಆಕೆ ನಿಮ್ಮ ಮೊದಲ ಆಯ್ಕೆಯಾಗಿಲ್ಲದೇ ಹೋದರೆ ಪ್ಲೀಸ್‌ ಅವಳ ಟೈಮ್‌ ವೇಸ್ಟ್‌ ಮಾಡಬೇಡಿ. ನೀವು ನಿಜವಾಗಲೂ ಆಕೆಯ ಜೊತೆಗೇ ಬದುಕಬೇಕು ಎಂದುಕೊಂಡಿಲ್ಲದೇ ಇದ್ದರೆ ಪದೇ ಪದೇ ಆಕೆಯ ಬೆನ್ನುಬೀಳದಿರಿ.

ಅವಳು ನಿಮ್ಮ ಏಕೈಕ ಪ್ರಯಾರಿಟಿ ಆಗಿಲ್ಲದೇ ಇದ್ದರೆ ಅವಳಿಗೆ ವೈಯಕ್ತಿಕ ಪ್ರಶ್ನೆಗಳನ್ನು ಕೇಳುವ ಸಾಹಸ ಬೇಡ. ಆಕೆಯ ಭೂತಕಾಲದ ಕತೆಗಳನ್ನು ಕೆದಕುವ, ಆಕೆಯ ಬಾಲ್ಯವನ್ನು ತಿಳಿದುಕೊಳ್ಳುವ, ಆಕೆಯ ಆತಂಕಗಳನ್ನು ನಿಮ್ಮ ಜತೆ ಹೇಳುವಂತೆ ಮಾಡುವ ಅತಿ ಒಳ್ಳೆಯತನ ಸಲ್ಲದು.

ಮದುವೆಯಾಗ್ತಿದೀರಾ? ಹಾಗಾದ್ರೆ ಈ 7 ವಿಷಯಗಳನ್ನು ಫೇಸ್ಬುಕ್ ನಲ್ಲಿ ಶೇರ್ ಮಾಡ್ಕೋಬೇಡಿ!

ನೀವು ಅವಳನ್ನು ಪ್ರೀತಿಸಲು ಸಿದ್ಧವಾಗಿಲ್ಲದೇ ಇದ್ದರೆ ಅವಳು ಅವಳ ಹೃದಯವನ್ನು ತೆರೆದು ನಿಮ್ಮೆದುರು ಇಡುವಂತೆ ಮಾಡದಿರಿ. ಅವಳ ಹೃದಯಲ್ಲಿ ವಾಸಿಸುವ ಮನಸ್ಸು ನಿಮಗಿಲ್ಲದೆಯೇ ಹೋದರೆ ಅಲ್ಲಿ ಒಂಚೂರು ಜಾಗವನ್ನು ಬೇಡದಿರಿ.

ಆಕೆ ನಿಮ್ಮ ಮೊದಲ ಆಯ್ಕೆಯಾಗಿಲ್ಲದೇ ಹೋದರೆ ಅವಳ ಕಣ್ಣಲ್ಲಿ ಕಣ್ಣನ್ನಿಡಬೇಡಿ. ಅವಳ ಕಿವಿಯಲ್ಲಿ ಪಿಸುಮಾತನ್ನಾಡಿ ಅವಳ ತುಟಿ ಅರಳುವಂತೆ ಮಾಡುವ ಹಕ್ಕು ನಿಮಗಿಲ್ಲ. ಅವಳ ಎದುರು ನಿಂತು ಬೇರೆ ಯಾರಲ್ಲೂ ಹೇಳಿಲ್ಲ ಅಂತ ನಿಮ್ಮ ರಹಸ್ಯಗಳನ್ನು ಹೇಳಬೇಡಿ ಮತ್ತು ಅವಳು ನೀವು ನಿದ್ದೆ ಮಾಡುವವರೆಗೂ ನಿಮ್ಮ ಜತೆ ಮಾತನಾಡಿ ಸಮಾಧಾನಿಸುತ್ತಾಳೆ ಎಂಬ ಕಾರಣಕ್ಕೆ ಗಂಟೆಗಟ್ಟಲೆ ಮಾತನಾಡುವದು ಬೇಡ.

ಅವಳನ್ನು ಪ್ರೀತಿಸುವ ಮನಸ್ಸು ನಿಮಗೆ ಇಲ್ಲದೇ ಇದ್ದರೆ ಅವಳಲ್ಲಿ ನಿಮ್ಮೆಡೆಗಿನ ಪ್ರೀತಿಯನ್ನು ಜಾಗೃತಗೊಳಿಸದಿರುವುದೇ ಲೇಸು. ಅವಳನ್ನು ತುಂಬಾ ಸುಲಭವಾಗಿ ಹೋಗಲು ಬಿಟ್ಟು ಬಿಡುತ್ತೀರಿ ಎಂದಾದರೆ ಅವಳನ್ನು ಹಿಡಿದುಕೊಳ್ಳುವ ಯತ್ನವೇ ಬೇಡ. ಅವಳು ಬಯಸುವ ಜೀವ ನೀವಾಗುವುದಿಲ್ಲವಾದರೆ ಸುಳ್ಳುಸುಳ್ಳೇ ಆ ಜೀವ ನೀವೇ ಎಂಬ ಭ್ರಮೆಯನ್ನು ಹುಟ್ಟಿಸದಿರಿ.

ಸಂಬಂಧಗಳಲ್ಲಿ ಹೊಂದಾಣಿಕೆ ಬೇಕು, ಹಾಗಂತ ಈ ವಿಷಯಗಳಲ್ಲಿ ತ್ಯಾಗ ಬೇಡ!

ಆಕೆ ನಿಮ್ಮ ಕನಸಿನ ಹುಡುಗಿ ಅಲ್ಲದೇ ಹೋದರೆ ಅವಳನ್ನು ಆರಾಧಿಸುವ ಜೀವವನ್ನು ಅವಳು ಹುಡುಕುವಾಗ ತಡೆಯಬೇಡಿ. ಅವಳು ಬೇರೆ ಹುಡುಗರ ಜತೆ ಮಾತನಾಡುವಾಗ ಅಸೂಯೆಯಾದಂತೆ ನಟಿಸಬೇಡಿ, ಸುಮ್ಮನೆ. ನೀನೇ ನನ್ನ ಜೀವ ಎಂದು ಹೇಳಿ ಸುಳ್ಳಿನ ಅರಮನೆಯಲ್ಲಿ ಕೂರಿಸದಿರಿ. ಅವಳನ್ನೂ ಮೂರ್ಖಳಂತೆ ನಡೆಸಿಕೊಳ್ಳಬೇಡಿ, ಯಾಕೆಂದರೆ ನೀವೇ ನಿಮಗೆ ಗೊತ್ತಿಲ್ಲದಂತೆ ನೀವೇ ಮೂರ್ಖರಾಗುತ್ತಿರುತ್ತೀರಿ.

ಆಕೆ ನಿಮ್ಮ ಮೊದಲ ಮತ್ತೆ ಕೊನೆಯ ಆಯ್ಕೆಯಾಗಿಲ್ಲದೇ ಹೋದರೆ, ದಯವಿಟ್ಟು ಬಿಟ್ಟುಬಿಡಿ. ಆಕೆಯ ನೆಮ್ಮದಿಗೆ ಭಂಗ ತರುವುದು ಬೇಡ. ಅವಳನ್ನು ಅರ್ಧ ಪ್ರೀತಿಸುವುದಕ್ಕಿಂತ ಪ್ರೀತಿಸದಿರುವುದೇ ಸಂತೋಷ. ಸುಳ್ಳು ಹೇಳುವುದಕ್ಕಿಂತ ಅವಳನ್ನು ತೊರೆದುಹೋಗುವುದೇ ಒಳ್ಳೆಯದು. ಕನಿಷ್ಠ ಪಕ್ಷ ಅವಳಿಗೆ ನಿಮ್ಮ ಅಗತ್ಯವಿಲ್ಲ ಎಂದು ಮನಗಂಡಾದರೂ ಅವಳನ್ನು ಬಿಟ್ಟುಬಿಡಿ. ಒಂದೊಳ್ಳೆ ಮನಸ್ಸು ಮಾಡಿ ಒನ್‌ ಫೈನ್‌ ಡೇ ನೀವೇ ಅವಳನ್ನು ಬಿಟ್ಟುಬಿಡಿ, ಇಲ್ಲದಿದ್ದರೆ ಅವಳೇ ನಿಮ್ಮನ್ನು ತೊರೆಯುತ್ತಾಳೆ.

ಅವಳು ಅವಳ ಜಗತ್ತನ್ನು ನಿಮ್ಮೊಂದಿಗೆ ಹೇಳಲು ಬಯಸಿದಾಗ ನೀವು ನಿಮ್ಮ ಕತೆಯನ್ನು ಬೇರೆಯವರೊಂದಿಗೆ ಹೇಳಲು ಬಯಸಿದರೆ ಅವಳು ನಿಮ್ಮನ್ನು ತೊರೆಯುತ್ತಾಳೆ. ನಿಮ್ಮ ಉಪಸ್ಥಿತಿಯಲ್ಲಿ ನಿಮ್ಮ ಅನುಪಸ್ಥಿತಿಗಿಂತ ಹೆಚ್ಚಿನ ವ್ಯತ್ಯಾಸ ಏನೂ ಇಲ್ಲ ಎಂದು ಅರಿವಾದಾಗ ಅವಳು ನಿಮ್ಮನ್ನು ತೊರೆಯುತ್ತಾಳೆ. ಅವಳು ನಿಮ್ಮನ್ನು ತೊರೆಯುತ್ತಾಳೆ, ಯಾಕೆಂದರೆ ಯಾರಾದರೂ ಅವಳನ್ನು ತಿರಸ್ಕರಿಸಿದರೆ ಅವರನ್ನು ತಿರಸ್ಕರಿಸಲು ಅವಳೂ ಈಗೀಗ ಕಲಿತುಕೊಂಡಿದ್ದಾಳೆ.

ಸಂಬಂಧ ಹಳತಾದರೂ ರೊಮ್ಯಾನ್ಸ್ ಹೊಸತರಂತಿರಲಿ!

ಆಕೆ ನಿಮ್ಮ ಮೊದಲ ಆಯ್ಕೆಯಾಗಿಲ್ಲದೇ ಹೋದರೆ ಅವಳ ಮೊದಲ ಆಯ್ಕೆಯೂ ನೀವಾಗಬೇಕೆಂಬ ಬಯಕೆ ಬೇಡ. ಯಾಕೆಂದರೆ ಅವಳ ಕಡೆಯ ಉಸಿರಿನವರೆಗೂ ಅವಳಿಗೆ ಅವಳಾಗಿಯೇ ಬದುಕಬೇಕೆಂಬ ಆಸೆ ಇದೆ. ರಾಜಕುಮಾರಿ ಕತೆಗಳನ್ನು ಕೇಳಿ ಬೆಳೆದವಳು ಅವಳು, ಅದನ್ನೇ ನಂಬುವವಳು. ನಕ್ಕ ಜೋಕನ್ನು ಕೇಳಿ ಮತ್ತೆ ಮತ್ತೆ ಜೋರಾಗಿ ನಗುವವಳು. ಅವಳು ಎಂತಹ ಹುಡುಗಿಯೆಂದರೆ ನಿಮಗೆ ಕಿಮೀಗಟ್ಟಲೆ ಲವ್‌ ಲೆಟರ್‌ಗಳನ್ನು ಬರೆಯುವವಳು.

ನಿಮ್ಮನ್ನು ನೋಡಿದ ತಕ್ಷಣ ನಿಮಗಿಷ್ಟವಾದ ಐಸ್‌ಕ್ಯಾಂಡಿಯನ್ನು ಕೊಂಡು ತರುವವಳು. ರಾಶಿ ರಾಶಿ ಪ್ರೇಮ ಗೀತೆಗಳನ್ನು ಕಳುಹಿಸುವವಳು. ನೀವು ಪ್ರೀತಿಯಿಂದ ಸಿಕ್ಕಾಗ ತನ್ನ ಜಗತ್ತನ್ನೇ ನಿಮಗೆ ನೀಡಲು ಬಯಸುವವಳು ಅವಳು. ಅಂಥಾ ಹುಡುಗಿಯ ಕನಸನ್ನು ಅರ್ಧದಲ್ಲೇ ಮುರಿಯಬೇಡಿ. ಅವಳ ಪ್ರೀತಿಯಲ್ಲೇ ಅರ್ಧದಲ್ಲೇ ಮುಗಿಸಬೇಡಿ.

ಅವಳದು ಒಂದೇ ಆಸೆ. ಒಂದೋ ಪೂರ್ತಿಯಾಗಿ ಒಪ್ಪಿಕೊಂಡು ಪ್ರೀತಿಸಿ. ಇಲ್ಲವೇ ಕತೆಯನ್ನು ಆರಂಭಿಸುವುದು ಬೇಡ.

- - ಸಾನಿಯಾ ರಾಹುಲ್‌