ಮನೆಯಲ್ಲಿ ಮಾಡುವ ಅಡುಗೆಗೆ ಹೋಟೆಲ್ ಶೈಲಿಯ ರುಚಿ ತರಲು ಷೆಫ್ ಮೋಹನ್ ಅವರು ಐದು ಸುಲಭವಾದ ಕಿಚನ್ ಟಿಪ್ಸ್ ಹಂಚಿಕೊಂಡಿದ್ದಾರೆ. ಪನೀರ್ ಮೃದುವಾಗಿರಿಸುವುದು, ದಪ್ಪ ಗ್ರೇವಿ ಮಾಡುವುದು, ಪಕೋಡ ಎಣ್ಣೆ ಹೀರದಂತೆ ಮಾಡುವುದು ಸೇರಿದಂತೆ ಹಲವು ಉಪಯುಕ್ತ ಮಾಹಿತಿ ಇದರಲ್ಲಿದೆ. ದುಬಾರಿ ಸಾಮಗ್ರಿಗಳಿಲ್ಲದೆ ಮನೆಯಲ್ಲೇ ರುಚಿಕರ ಅಡುಗೆ ಮಾಡಲು ಈ ಸಲಹೆಗಳು ನೆರವಾಗುತ್ತವೆ.

ಮನೆಯಲ್ಲಿ ಏನೇ ಮಾಡಿದರೂ ಹೋಟೆಲ್​ ಸ್ಟೈಲ್​ನ ರುಚಿ ಬರುವುದೇ ಇಲ್ಲ ಎನ್ನುವುದು ಹಲವು ಮಹಿಳೆಯರ ಬೇಸರ. ಹೋಟೆಲ್​ಗಳಲ್ಲಿ ಅದರಲ್ಲಿಯೂ ಸ್ಟಾರ್​ ಹೋಟೆಲ್​ಗಳಲ್ಲಿ ದುಬಾರಿಯ ಏನೇನೋ ಮಿಕ್ಸ್​ ಮಾಡುತ್ತಾರೆ, ಅದಕ್ಕಾಗಿಯೇ ಈ ಟೇಸ್ಟ್​ ಬರುತ್ತದೆ ಎಂದುಕೊಳ್ಳುವುದು ಉಂಟು. ಆದರೆ ಎಷ್ಟೋ ಬಾರಿ ಚಿಕ್ಕ ಪುಟ್ಟ ಹೋಟೆಲ್​ಗಳಲ್ಲಿಯೂ ಸ್ಟಾರ್​ ಹೋಟೆಲ್​ ಸ್ವಾದ ಮೀರಿಸುವ ಅಡುಗೆ ಸಿಗುವುದು ಇದೆ. ಆಗಲೂ ಏನೋ ಟೇಸ್ಟಿಂಗ್​ ಪೌಡರ್​ ಮಿಕ್ಸ್​ ಮಾಡ್ತಾರೆ ಎಂದುಕೊಳ್ಳುವವರೇ ಹೆಚ್ಚು. ಆದರೆ ಎಲ್ಲ ಸಂದರ್ಭಗಳಲ್ಲಿಯೂ ಇದು ನಿಜವಲ್ಲ. ಕೆಲವೊಂದು ಸುಲಭದ ಕಿಚನ್​ ಟಿಪ್ಸ್​ ಅರಿತುಕೊಂಡರೆ, ಮನೆಯಲ್ಲಿಯೇ ಇರುವ ತರಕಾರಿ ಅಥವಾ ಸಾಮಗ್ರಿಗಳಿಂದ ರೆಸ್ಟೋರೆಂಟ್​ ಸ್ಟೈಲ್​ನಲ್ಲಿಯೇ ರುಚಿಕರ ಅಡುಗೆ ಮಾಡಬಹುದು ಎನ್ನುವುದನ್ನು ಹೇಳಿಕೊಟ್ಟಿದ್ದಾರೆ ಷೆಫ್​ ಮೋಹನ್​.

ಷೆಫ್​ ಮೋಹನ್​ ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಆಗಿರುವ ಐದು ರೆಸ್ಟೋರೆಂಟ್​ ಗುಟ್ಟನ್ನು ಇಲ್ಲಿ ತಿಳಿಸಲಾಗಿದೆ.

ಪನೀರ್​ ಸುದೀರ್ಘ ಸಾಫ್ಟ್​ ಆಗಿರಲು

ಪನೀರ್​ ಅಡುಗೆ ಮನೆಯಲ್ಲಿ ಮಾಡಿದಾಗ, ಪನೀರ್​ ಮಾಡಿಟ್ಟ ಕೆಲವೇ ಗಂಟೆಗಳಲ್ಲಿ ಗಟ್ಟಿಯಾಗುವುದು ಇದೆ. ಆದರೆ ಅದು ಬೆಣ್ಣೆಯಂತೆ ಗಂಟೆಗಟ್ಟಲೆ ಸಾಫ್ಟ್​ ಆಗಿರಲು ಬೇಯಿಸಿದ ಬಳಿಕ ಎರಡು ನಿಮಿಷ ಪನೀರ್​ ಅನ್ನು ಉಗುರುಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಮಜ್ಜಿಗೆ ಹಾಕಿ ಇಡುವಂತೆ ಸಲಹೆ ನೀಡಲಾಗಿದೆ. ಇದರಿಂದ ಒಂದು ಗಂಟೆಯಾದರೂ ಬೆಣ್ಣೆಯಂತೆ ಮೃದುವಾಗಿರುತ್ತದೆ.

ಟೇಸ್ಟಿ ದಪ್ಪ ಗ್ರೇವಿಗೆ ಈರುಳ್ಳಿ ಟಿಪ್ಸ್​

ರೆಸ್ಟೋರೆಂಟ್​ ಸ್ಟೈಲ್​ಗಳಲ್ಲಿ ಕೆಲವೊಂದು ದಪ್ಪ ಗ್ರೇವಿ ನೋಡಬಹುದು. ಅದು ದಪ್ಪ ಮಾತ್ರವಲ್ಲದೇ ಸಕತ್​ ಟೇಸ್ಟ್​ ಕೂಡ ಆಗಿರುತ್ತದೆ. ಸಾಮಾನ್ಯವಾಗಿ ಹೀಗೆ ಮಾಡುವುದಿದ್ದರೆ ಗೋಡಂಬಿಯನ್ನು ರುಬ್ಬಿ ಅದರ ಪೇಸ್ಟ್​ ಹಾಕಲಾಗುತ್ತದೆ. ಆದರೆ ಪ್ರತಿಯೊಬ್ಬರೂ, ಅದರಲ್ಲಿ ಗೋಡಂಬಿ ಹಾಕುತ್ತಾರೆ, ಇದರಿಂದ ಟೇಸ್ಟ್​ ಬರುತ್ತದೆ ಎಂದೇ ಹಲವರು ಅಂದುಕೊಂಡಿದ್ದಾರೆ. ಆದರೆ ಅದು ತಪ್ಪು. ಇಷ್ಟು ದುಬಾರಿ ಗೋಡಂಬಿ ಹಾಕಿದರೆ ಅಷ್ಟೇ ಕಥೆ. ಅದಕ್ಕಾಗಿ ದೊಡ್ಡ ದೊಡ್ಡ ರೆಸ್ಟೋರೆಂಟ್​ಗಳಲ್ಲಿ, ಈರುಳ್ಳಿಯನ್ನು ಮಸಾಲೆ ಜೊತೆ ಸೇರಿಸಿ ಮಿಕ್ಸಿಯಲ್ಲಿ ಹಾಕಿ ರುಬ್ಬಿ ಆ ಪೇಸ್ಟ್​ ಅನ್ನು ಗ್ರೇವಿಗೆ ಹಾಕುತ್ತಾರೆ. ಆಗ ಬೆಣ್ಣೆಯಂಥ ಥಿಕ್​ನೆಸ್​ ಗ್ರೇವಿಗೆ ಬರುವುದು ಮಾತ್ರವಲ್ಲದೇ ಟೇಸ್ಟ್​ ಕೂಡ ಬರುತ್ತದೆ ಎಂದಿದ್ದಾರೆ ಷೆಫ್​

ಪಕೋಡ ಹೆಚ್ಚು ಎಣ್ಣೆ ಹೀರಬಾರದು ಎಂದರೆ...

ಸಾಮಾನ್ಯವಾಗಿ ಮನೆಯಲ್ಲಿ ಪಕೋಡ ಮಾಡುವಾಗ ಹೆಚ್ಚು ಎಣ್ಣೆ ಹೀರಿಕೊಳ್ಳುತ್ತದೆ. ಅದಕ್ಕೂ ಸುಲಭದ ಟಿಪ್ಸ್​ ಇದೆ. ಹೋಟೆಲ್​ಗಳಲ್ಲಿ ನೀವು ಪಕೋಡ ತಿನ್ನುವಾಗ ಹೊರಗಡೆಯಿಂದ ಕ್ರಿಸ್ಪಿ ಇದ್ದರೂ ಎಣ್ಣೆ ಹೀರಿಕೊಳ್ಳದೇ ಇರುವುದನ್ನು ನೋಡಬಹುದು. ಹೀಗೆ ಬೇಕಾದರೆ ಕಡ್ಲೆಹಿಟ್ಟು ಕಲಸುವಾಗ ಬಿಸಿಯಾಗಿರುವ ಎಣ್ಣೆಯನ್ನು ಹಾಕಬೇಕು. ಇದರಿಂದ ಪಕೋಡಾ ಎಣ್ಣೆ ಹೀರಿಕೊಳ್ಳುವುದೇ ಇಲ್ಲ.

ಹಸಿಮೆಣಸು ಚಟ್ನಿ ದೀರ್ಘಕಾಲ ಹಸಿರಾಗಿ ಇರಲು..

ಹಸಿ ಮೆಣಸು ರುಬ್ಬಿದ ಬಳಿಕ ಕಪ್ಪಾಗುವುದು ಏಕೆ, ಆದರೆ ಹೋಟೆಲ್​ನಲ್ಲಿ ಎಷ್ಟು ಹೊತ್ತು ಇಟ್ಟರೂ ಹಸಿರಾಗಿಯೇ ಇರುತ್ತದೆ. ಅದಕ್ಕೂ ಸಲಹೆ ಕೊಟ್ಟಿರುವ ಷೆಫ್​, ಹಸಿಮೆಣಸನ್ನು ರುಬ್ಬುವಾಗ ಕೆಲವು ತುಂಡುಗಳ ಬರ್ಫ್​ ಜೊತೆ 2-3 ಹನಿ ನಿಂಬೆ ರಸ ಹಾಕುವಂತೆ ತಿಳಿಸಿದ್ದಾರೆ.

ಟೊಮ್ಯಾಟೋ ಗ್ರೇವಿ ಹುಳಿಯಾದ್ರೆ ಚಿಂತೆ ಬಿಡಿ..

ಟೊಮ್ಯಾಟೋ ಗ್ರೇವಿ ತುಂಬಾ ಹುಳಿಯಾಗಿದ್ದರೆ, ಅದಕ್ಕೆ ಉಪ್ಪು ಹಾಕಬೇಡಿ, ಬದಲಿಗೆ ಒಂದು ಚಿಟಿಕೆ ಅಡುಗೆ ಸೋಡಾ ಹಾಕಿ. ಅಡುಗೆ ಸೋಡಾ ಐದೇ ಸೆಕೆಂಡ್​ನಲ್ಲಿ ಎಲ್ಲಾ ಹುಳಿ ಹೀರಿಕೊಳ್ಳುತ್ತದೆ.