22ನೇ ವಯಸ್ಸಿನಲ್ಲಿ ಕ್ಯಾನ್ಸರ್ ಮಹಾಮಾರಿ. ಸತತ ಚಿಕಿತ್ಸೆ, ನರಕ ಯಾತನೆ ಅನುಭವಿಸಿದ ಕನಿಕಾ ಕೇವಲ 5600 ರೂಪಾಯಿ ಹೂಡಿಕೆ ಮಾಡಿ ಬರೋಬ್ಬರಿ 420 ಕೋಟಿ ರೂಪಾಯಿ ಸಾಮ್ರಾಜ್ಯ ಕಟ್ಟಿದ ಕತೆ ಇದೆ. ಸ್ಫೂರ್ತಿಯ ಕತೆ ಇಲ್ಲಿದೆ.
ಚಿಕ್ಕ ವಯಸ್ಸಿನಲ್ಲೇ ಹಲವು ಅಡೆ ತಡೆ ಎದುರಿಸಿ ಸಾಧನೆ ಮಾಡಿದ ಸಾಧಕರು ಹಲವರಿಗೆ ಸ್ಫೂರ್ತಿಯಾಗಿದ್ದಾರೆ. ಕನಿಕಾ ಟೇಕ್ರಿವಾಲ್ ಬದುಕಿನ ಪಯಣ ಎಲ್ಲರಿಗೂ ಸ್ಪೂರ್ತಿಯಾಗಿದೆ. ಒಂದೆಡೆ ಕ್ಯಾನ್ಸರ್ ಮಹಾಮಾರಿ ಆರೋಗ್ಯ ಸಮಸ್ಯೆ, ಜೀವನವೇ ಮುಗಿದು ಹೋಯಿತು ಎಂದುಕೊಳ್ಳುತ್ತಿದ್ದಂತೆ ಕ್ಯಾನ್ಸರ್ ವಿರುದ್ದ ಹೋರಾಟ ಮಾಡಿದ ಗಟ್ಟಿಗಿಟ್ಟಿ ಈ ಕನಿಕಾ ಟೇಕ್ರಿವಾಲ್. ಹಾಗಂತ ಕ್ಯಾನ್ಸರ್ ಗೆದ್ದು ತನ್ನ ಜೀವನ ಸಾರ್ಥಕ ಎಂದು ಕನಿಕಾ ಕುಳಿತುಕೊಳ್ಳಲಿಲ್ಲ. ಹೇಗೋ ಹೊಂದಿಸಿಕೊಂಡು 5600 ರೂಪಾಯಿ ಬಂಡವಾಳದಲ್ಲಿ ಉದ್ಯಮ ಆರಂಭಿಸಿ ಇದೀಗ 420 ಕೋಟಿ ರೂಪಾಯಿ ಸಾಮ್ರಾಜ್ಯ ಕಟ್ಟಿದ ಸಾಹಸಿ ಈ ಕನಿಕಾ ಟೇಕ್ರಿವಾಲ್.
22ನೇ ವಯಸ್ಸಿಗೆ ಕ್ಯಾನ್ಸರ್ ನೋವು
ಕನಿಕಾ ಟೇಕ್ರಿವಾಲ್ ತಮ್ಮ 22ನೇ ವಯಸ್ಸಿಗೆ ಆರೋಗ್ಯ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದರು. ಏನೋ ಸಾಧನೆ ಮಾಡಬೇಕು ಅನ್ನೋವಷ್ಟರಲ್ಲಿ ಕನಿಕಾ ಆರೋಗ್ಯದಲ್ಲಿ ಏರುಪೇರಾಗಿತ್ತು. 2ನೇ ಹಂತದ ಕ್ಯಾನ್ಸರ್ ರೋಗ ಪತ್ತೆಯಾಗಿತ್ತು. ಕಿಮೋಥೆರಫಿ ಚಿಕಿತ್ಸೆ ಸೇರಿದಂತೆ ಹಲವು ರೀತಿಯ ಚಿಕಿತ್ಸೆಯಲ್ಲಿ ಹಲವರು ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ. ಆದರೆ ಕನಿಕಾ ಹೋರಾಟ ಆರಂಭಿಸಿದ್ದರು. ಎರಡನೇ ಹಂತದ ಕ್ಯಾನ್ಸರ್ ಚಿಕಿತ್ಸೆಯಿಂದ ಫೀನಿಕ್ಸ್‌ನಂತೆ ಎದ್ದು ಬಂದಿದ್ದಳು. ನೋವು, ಯಾತನೆ ಎಲ್ಲವನ್ನು ಎದುರಿಸಿ ಕ್ಯಾನ್ಸರ್ ಮೆಟ್ಟಿ ನಿಂತ ಕನಿಕಾ ಹೊಸ ಬದುಕು ಕಟ್ಟಿಕೊಳ್ಳಲು ಆರಂಭಿಸಿದ್ದಳು.
5,600 ರೂಪಾಯಿ ಹೂಡಿಕೆಯಲ್ಲಿ ಆರಂಭ
5600 ರೂಪಾಯಿಯಲ್ಲಿ ಯಾವ ಸಂಸ್ಥೆ ಕಟ್ಟಲು ಸಾಧ್ಯ ಎಂದುಕೊಂಡರೆ ಸಾಧ್ಯವಿಲ್ಲ. ಆದರೆ ಕ್ಯಾನ್ಸರ್ ಗೆದ್ದ ಕನಿಕಾ 5600 ರೂಪಾಯಿ ಹೂಡಿಕೆಯಲ್ಲಿ ಜೆಟ್‌ಸೆಟ್‌ಗೋ ಅನ್ನೋ ಖಾಸಗಿ ಜೆಟ್ ಕಂಪನಿ ಆರಂಭಿಸಿದ್ದರು. ಸುಧಿರ್ ಪೆರ್ಲಾ ಜೊತೆ ಸೇರಿ ಖಾಸಗಿ ವಿಮಾನಯಾನದ ಅಗ್ರೀಗೇಟರ್ ಸಂಸ್ಥೆ ಹುಟ್ಟುಹಾಕಿದ್ದರು. ಈ ಆಗ್ರೇಗೇಟರ್ ಕಂಪನಿ ವಿಮಾನ ಬಾಡಿಗೆ ನೀಡುವಾಗ ಪಾರದರ್ಶಕತೆ ಅತೀ ಮುಖ್ಯವಾಗಿತ್ತು. ಈ ನಿಟ್ಟಿನಲ್ಲಿ ಜೆಟ್‌ಸೆಟ್‌ಗೋ ಪ್ರಮುಖ ಪಾತ್ರನಿರ್ವಹಿಸಿತ್ತು. ಆರಂಭಿಕ ಹಂತದಲ್ಲಿ ಕಂಪನಿ ಹೂಡಿಕೆದಾರರ ಆಕರ್ಷಿಕಸಲು ವಿಫಲವಾಗಿತ್ತು. ಜೊತೆಗೆ ಕಂಪನಿಯೂ ತೀವ್ರ ಹಿನ್ನಡೆ ಎದುರಿಸಿತ್ತು.
ಹಲವು ಸವಾಲುಗಳನ್ನು ಕನಿಕಾ ಎದರಿಸಬೇಕಾಯಿತು. ಪ್ರಮುಖವಾಗಿ ಖಾಸಗಿ ಜೆಟ್ ಕ್ಷೇತ್ರ ಶ್ರೀಮಂತ ಉದ್ಯಮಿಗಳು ಕೈಹಾಕುವ ಕ್ಷೇತ್ರ. ಕೋಟಿ ಕೋಟಿ ಆದಾಯವಿರುವ ವ್ಯಕ್ತಿಗಳು ಮಾತ್ರ ಈ ಕ್ಷೇತ್ರಕ್ಕೆ ಕೈಹಾಕುತ್ತಾರೆ. ಜೊತೆಗೆ ಮಹಿಳೆಯಾಗಿ ಖಾಸಗಿ ಜೆಟ್ ಕ್ಷೇತ್ರದಲ್ಲಿ ಉಳಿದುಕೊಳ್ಳುವುದು ಸವಲಾಗಿತ್ತು. ಈ ಎಲ್ಲಾ ಸವಾಲುಗಳನ್ನು ಕನಿಕಾ ಮೆಟ್ಟಿನಿಂತಿದ್ದರು.
9 ಖಾಸಗಿ ಗೆಟ್, 2 ಹೆಲಿಕಾಪ್ಟರ್, 420 ಕೋಟಿ ರೂ
ಕನಿಕಾ ಇದೀಗ ಅತೀ ದೊಡ್ಡ ಕಂಪನಿ ಕಟ್ಟಿದ್ದಾರೆ. ಇದೀಗ ಜೆಟ್‌ಸೆಟ್‌ಗೋ ಸಂಸ್ಥೆ 9 ಖಾಸಗಿ ಜೆಟ್, 2 ಹೆಲಿಕಾಪ್ಟರ್ ಸೇರಿದಂತೆ ಅತೀ ಹೆಚ್ಚು ಖಾಸಗಿ ಜೆಟ್ ಫ್ಲೀಟ್ ನಿರ್ವಹಿಸುತ್ತಿದೆ. 1 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ನೀಡಿದೆ. ಸದ್ಯ ಕನಿಕಾ ನಿವ್ವಳ ಲಾಭ 420 ಕೋಟಿ ರೂಪಾಯಿ ದಾಟಿದೆ.


