Bathroom Water Problem : ಬಾತ್ ರೂಮ್ ಬಳಸಿದಾಗ ನೀರು ಬಾಗಿಲಿನಿಂದ ಹೊರಗೆ ಬರ್ತಿರುತ್ತೆ. ಇದ್ರಿಂದ ಆಗೋದೇನಿದೆ, ಬರೀ ನೆಲ ಒದ್ದೆಯಾಗುತ್ತಲ್ಲ ಅಂತ ಅನೇಕರು ನಿರ್ಲಕ್ಷ್ಯ ಮಾಡ್ತಾರೆ. ನಿಮ್ಮ ಮನೆಯಲ್ಲೂ ಈ ಸಮಸ್ಯೆ ಇದ್ರೆ ಅದನ್ನು ನಿರ್ಲಕ್ಷ್ಯ ಮಾಡ್ಬೇಡಿ. ಇದನ್ನು ತಪ್ಪಿಸುವ ಉಪಾಯ ತಿಳಿದುಕೊಳ್ಳಿ.
ಬಾತ್ ರೂಮಿನಲ್ಲಿ ಸ್ನಾನ ಮಾಡುವಾಗ ಇಲ್ಲ ಬಾತ್ ರೂಮ್ ಬಳಸುವಾಗ, ಒಳಗಿನ ನೀರು ಹೊರಗೆ ಬರೋದಿದೆ. ಬಾಗಿಲಿನಿಂದ ಹೊರಗೆ ಬರುವ ಈ ನೀರು ಬರೀ ನೆಲ ಒದ್ದೆ ಮಾಡೋದಿಲ್ಲ. ಪ್ರತಿ ದಿನ ನೀರು ಹೊರಗೆ ಬರ್ತಿದ್ದರೆ ಬಾಗಿಲಿನ ಸುತ್ತಲಿನ ನೆಲ, ಗೋಡೆ ಮತ್ತು ಪೇಂಟ್ ಹಾನಿಯಾಗುತ್ತದೆ. ದುರ್ವಾಸನೆಯಂತಹ ಸಮಸ್ಯೆ ಕಾಡುವುದಿದೆ. ಬಾತ್ ರೂಮಿನಿಂದ ಬರ್ತಿರುವ ನೀರನ್ನು ತಡೆಯಲು ನೀವು ನೆಲ ಅಥವಾ ಗೋಡೆ ಒಡೆಯುವ ಅಗತ್ಯವಿಲ್ಲ.
ಬಾತ್ ರೂಮಿನಿಂದ ಬರುವ ನೀರು ತಡೆಯೋದು ಹೇಗೆ?
ಮೊದಲು ಬಾತ್ರೂಮ್ನಿಂದ ನೀರು ಹೊರಗೆ ಬರುತ್ತಿರುವುದಕ್ಕೆ ನಿಖರ ಕಾರಣವೇನು ಎಂಬುದನ್ನು ಕಂಡುಹಿಡಿಯಬೇಕು. ಕಾರಣ ಗೊತ್ತಾದರೆ, ಕೆಲವು ಸಂದರ್ಭಗಳಲ್ಲಿ ದೊಡ್ಡ ರಿಪೇರಿ ಮಾಡಿಸದೇನೇ ಸಮಸ್ಯೆಯನ್ನು ನಿಯಂತ್ರಿಸಬಹುದು. ಇದಕ್ಕೆ ಸಾಮಾನ್ಯ ಕಾರಣ ಬಾತ್ರೂಮ್ನ ನೀರು ಸರಿಯಾಗಿ ಡ್ರೈನ್ಗೆ ಹೋಗದಿರುವುದು. ನೆಲದ ಇಳಿಜಾರು ಡ್ರೈನ್ನ ಕಡೆಗೆ ಸರಿಯಾಗಿಲ್ಲದಿದ್ದರೆ, ನೀರು ಒಂದೇ ಕಡೆ ನಿಂತುಕೊಂಡು ನಿಧಾನವಾಗಿ ಬಾಗಿಲಿನ ಕಡೆಗೆ ಹರಿಯಬಹುದು.
ಇದರ ಜೊತೆಗೆ ಬಾಗಿಲಿನ ಕೆಳಗೆ ಸರಿಯಾದ ವಾಟರ್ ಬ್ಯಾರಿಯರ್ ಅಥವಾ ಥ್ರೆಶೋಲ್ಡ್ ಇಲ್ಲದಿದ್ದರೂ ನೀರು ಸುಲಭವಾಗಿ ಹೊರಗೆ ಬರುತ್ತದೆ. ಟೈಲ್ಸ್ ನಡುವಿನ ಗ್ರೌಟಿಂಗ್ ಹಾಳಾಗಿರುವುದೂ ಒಂದು ಕಾರಣ. ಗ್ರೌಟ್ನಲ್ಲಿ ಸಣ್ಣ ಸಣ್ಣ ಗ್ಯಾಪ್ಗಳು ಉಂಟಾದರೆ, ನೀರು ಅದರೊಳಗೆ ಸೇರಿಕೊಳ್ಳಬಹುದು. ಬಾತ್ರೂಮ್ನ ವಾಟರ್ಪ್ರೂಫಿಂಗ್ ಸರಿಯಾಗಿ ಆಗದಿದ್ದರೆ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಪೈಪ್ ಅಥವಾ ಬೇರೆ ಫಿಟ್ಟಿಂಗ್ಗಳಲ್ಲಿ ಲೀಕೇಜ್ ಇದ್ದರೂ ನೀರು ಹೊರಗೆ ಬರಬಹುದು. ಹಾಗಾಗಿ ಕೇವಲ ಬಾಗಿಲಿನ ಬಳಿ ನೀರು ತಡೆಯುವುದರಿಂದ ಸಮಸ್ಯೆ ಸಂಪೂರ್ಣವಾಗಿ ಪರಿಹಾರವಲ್ಲ.
ನೀರಿನ ಮೂಲ ಪತ್ತೆ ಹಚ್ಚಿ
ನೀರನ್ನು ತಡೆಯುವ ಮೊದಲು ಅದು ಎಲ್ಲಿಂದ ಬರುತ್ತಿದೆ ಎಂಬುದನ್ನು ಗಮನಿಸಿ. ಸ್ನಾನ ಮಾಡಿದ ನಂತರ ಬಾಗಿಲಿನ ಬಳಿ ಮಾತ್ರ ನೀರು ನಿಂತು ಹೊರಗೆ ಬರುತ್ತಿದ್ದರೆ, ನೆಲದ ಇಳಿಜಾರು ಮತ್ತು ಬಾಗಿಲಿನ ಸೀಲಿಂಗ್ ಪರಿಶೀಲಿಸಿ. ನೀರು ಗೋಡೆಯ ಬದಿ ಅಥವಾ ಟೈಲ್ಸ್ ಅಂಚಿನಿಂದ ನಿರಂತರವಾಗಿ ಬರುತ್ತಿದ್ದರೆ, ಗ್ರೌಟಿಂಗ್ ಅಥವಾ ಪೈಪ್ಲೈನ್ನಲ್ಲಿ ಸಮಸ್ಯೆ ಇರಬಹುದು.
ಇನ್ನು ಬಾತ್ರೂಮ್ನ ಕೆಳಗಿರುವ ಕೋಣೆಯ ಸೀಲಿಂಗ್ನಲ್ಲಿ ತೇವಾಂಶ, ನೀರಿನ ಕಲೆ ಅಥವಾ ಪೇಂಟ್ ಕಿತ್ತುಬರುವುದು ಕಂಡುಬಂದರೆ, ಒಳಗೆ ಲೀಕೇಜ್ ಇರುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಮೇಲೆ ಸೀಲಂಟ್ ಹಾಕುವುದಷ್ಟೇ ಸಾಕಾಗುವುದಿಲ್ಲ. ಲೀಕೇಜ್ನ ಮೂಲವನ್ನು ಪತ್ತೆಹಚ್ಚಬೇಕು.
ಸಮಸ್ಯೆಗೆ ಹೀಗೆ ಪರಿಹಾರ
ಪೈಪ್ನಲ್ಲಿ ದೊಡ್ಡ ಲೀಕೇಜ್ ಇಲ್ಲದೆ, ಮುಖ್ಯವಾಗಿ ನೀರು ಬಾಗಿಲಿನ ಕಡೆಗೆ ಬರುವುದೇ ಸಮಸ್ಯೆಯಾಗಿದ್ದರೆ ಕೆಲವು ಸರಳ ಕ್ರಮಗಳನ್ನು ತೆಗೆದುಕೊಳ್ಳಬಹುದು.
1.ಮೊದಲಿಗೆ ಬಾಗಿಲಿನ ಕೆಳಭಾಗ ಮತ್ತು ನೆಲ ಸೇರುವ ಜಾಗವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಅಲ್ಲಿ ಸೇರಿರುವ ಕೊಳೆ, ಹಳೆಯ ಸೀಲಂಟ್ ಅಥವಾ ಹಾಳಾದ ಗ್ರೌಟ್ನಿಂದಲೂ ನೀರು ಹೊರಗೆ ಬರುವ ದಾರಿ ಹೆಚ್ಚಾಗಬಹುದು.
2.ಸ್ವಚ್ಛಗೊಳಿಸಿದ ನಂತರ ಆ ಜಾಗವನ್ನು ಸಂಪೂರ್ಣವಾಗಿ ಒಣಗಲು ಬಿಡಿ.
3.ನಂತರ ಬಾತ್ರೂಮ್ ಬಾಗಿಲಿನ ಕೆಳಭಾಗದಲ್ಲಿ ವಾಟರ್ಪ್ರೂಫ್ ಡೋರ್ ಸೀಲ್ ಅಥವಾ ಸೂಕ್ತವಾದ ರಬ್ಬರ್ ಸೀಲ್ ಹಾಕಬಹುದು. ಇದು ನೀರು ನೇರವಾಗಿ ಹೊರಗೆ ಬರುವುದನ್ನು ತಡೆಯಲು ಸಹಾಯ ಮಾಡುತ್ತದೆ.
4.ಬಾಗಿಲು ಮತ್ತು ನೆಲ ಸೇರುವ ಜಾಗದಲ್ಲೂ ವಾಟರ್ಪ್ರೂಫ್ ಸೀಲಂಟ್ ಬಳಸಬಹುದು. ಆದರೆ ಸೀಲಂಟ್ ಹಾಕುವ ಮೊದಲು ಆ ಜಾಗ ಸ್ವಚ್ಛವಾಗಿಯೂ ಸಂಪೂರ್ಣ ಒಣಗಿಯೂ ಇರಬೇಕು.
5.ನೀರು ಬಾಗಿಲಿನ ಬಳಿ ನೆಲದಿಂದ ಹೊರಗೆ ಬರುತ್ತಿದ್ದರೆ, ಸಣ್ಣ ವಾಟರ್ ಬ್ಯಾರಿಯರ್ ಅಥವಾ ಥ್ರೆಶೋಲ್ಡ್ ಹಾಕುವುದೂ ಉಪಯುಕ್ತ. ಇದರಿಂದ ನೀರು ಬಾತ್ರೂಮ್ನ ಒಳಗೇ ಉಳಿದು ಡ್ರೈನ್ನ ಕಡೆಗೆ ಹೋಗಲು ಸಹಾಯವಾಗುತ್ತದೆ.
ಇದನ್ನು ಗಮನಿಸಿ
ಟೈಲ್ಸ್ ನಡುವಿನ ಗ್ರೌಟ್ ಒಡೆದಿದ್ದರೆ ಅಥವಾ ಸಣ್ಣ ಸಣ್ಣ ಗ್ಯಾಪ್ಗಳು ಕಾಣಿಸುತ್ತಿದ್ದರೆ, ನೀರು ಆ ಜಾಗದಿಂದ ಒಳಗೆ ಹೋಗಬಹುದು. ಇಂತಹ ಸಂದರ್ಭದಲ್ಲಿ ಹಾಳಾದ ಗ್ರೌಟ್ ತೆಗೆದು, ಆ ಭಾಗಕ್ಕೆ ಹೊಸದಾಗಿ ಗ್ರೌಟಿಂಗ್ ಮಾಡಬೇಕಾಗಬಹುದು. ಇದಕ್ಕಾಗಿ ಪ್ರತಿಬಾರಿಯೂ ಸಂಪೂರ್ಣ ಟೈಲ್ಸ್ ತೆಗೆಯುವ ಅಗತ್ಯವಿಲ್ಲ. ಸಮಸ್ಯೆ ಒಂದು ಸಣ್ಣ ಭಾಗಕ್ಕೆ ಮಾತ್ರ ಸೀಮಿತವಾಗಿದ್ದರೆ, ಆ ಭಾಗವನ್ನು ರಿಪೇರಿ ಮಾಡುವುದರಿಂದಲೇ ಪರಿಹಾರ ಸಿಗಬಹುದು. ಆದರೆ ಟೈಲ್ಸ್ ಕೆಳಗೆ ನಿರಂತರವಾಗಿ ನೀರು ಸೇರುತ್ತಿದ್ದರೆ ಅಥವಾ ವಾಟರ್ಪ್ರೂಫಿಂಗ್ ಹಾಳಾಗಿದ್ದರೆ, ತಜ್ಞರಿಂದ ಬಾತ್ರೂಮ್ ಪರಿಶೀಲನೆ ಮಾಡಿಸುವುದು ಉತ್ತಮ.
ಬಾತ್ರೂಮ್ ಬಳಸದೇ ಇದ್ದರೂ ತೇವಾಂಶ ಕಾಣಿಸಿಕೊಳ್ಳುತ್ತಿದ್ದರೆ, ಗೋಡೆಯಲ್ಲಿ ನಿರಂತರವಾಗಿ ಸೀಲನ್ ಇದ್ದರೆ, ಕೆಳಗಿನ ಕೋಣೆಯ ಸೀಲಿಂಗ್ನಲ್ಲಿ ನೀರಿನ ಕಲೆಗಳು ಕಾಣಿಸಿಕೊಂಡರೆ ಅಥವಾ ಪೈಪ್ನಿಂದ ನಿರಂತರವಾಗಿ ನೀರು ಸೋರಿಕೆಯಾಗುತ್ತಿದ್ದರೆ, ಇದನ್ನು ಕೇವಲ ಬಾಗಿಲಿನ ಸಮಸ್ಯೆ ಎಂದುಕೊಳ್ಳಬೇಡಿ. ಇಂತಹ ಸಂದರ್ಭಗಳಲ್ಲಿ ನೀರು ಸೋರಿಕೆಯಾಗುತ್ತಿರುವ ಮೂಲವನ್ನು ಪತ್ತೆಹಚ್ಚುವುದು ಮುಖ್ಯ. ಪೈಪ್ಲೈನ್ನಲ್ಲಿ ಸಮಸ್ಯೆ ಇದ್ದರೆ ಸಂಬಂಧಪಟ್ಟ ಭಾಗವನ್ನು ರಿಪೇರಿ ಮಾಡಬೇಕಾಗಬಹುದು. ವಾಟರ್ಪ್ರೂಫಿಂಗ್ನಲ್ಲಿ ಗಂಭೀರ ಸಮಸ್ಯೆ ಇದ್ದರೆ ತಜ್ಞರ ಸಹಾಯ ಪಡೆಯುವುದು ಅಗತ್ಯವಾಗಬಹುದು.


