ಮೂವತ್ತು ವರ್ಷಗಳ ಹಿಂದೆ, 1991 ರಲ್ಲಿ, ಡೆಮಿ ಮೂರ್ ಎಂಬ ಸುಂದರಿ ವ್ಯಾನಿಟಿ ಫೇರ್ ಪತ್ರಿಕೆಯ ಮುಖಪುಟದಲ್ಲಿ ತುಂಬುಗರ್ಭಿಣಿಯಾಗಿ ಕಾಣಿಸಿಕೊಂಡಳು. ಅಲ್ಲಿಂದೀಚೆಗೆ ಪ್ರೆಗ್ನೆನ್ಸಿ ಫೋಟೋಗ್ರಫಿ ಎಂಬ ಹಿತವಾದ ಮರುಳು ಶುರುವಾಯಿತೆಂದೇ ಹೇಳಬೇಕು. ಬಸುರಾಗಿದ್ದನ್ನು ಮುಚ್ಚಿಡಬೇಕು, ಅದನ್ನು ತೋರಿಸುವುದು ಸೌಂದರ್ಯದ ಲಕ್ಷಣವಲ್ಲ ಎಂಬ ಹಳೆಯ ನಂಬಿಕೆಯನ್ನು ತೊಡೆದುಹಾಕಿ ತಾಯಿಯಾಗುವ ಸಂಭ್ರಮವನ್ನು ಆಚರಿಸುವುದಕ್ಕೆ ನಾಂದಿ ಹಾಡಿದ್ದು ಡೆಮಿ ಮೂರ್. 

ಬದುಕಿನ ಪ್ರತಿಯೊಂದು ಸಂತಸದ ಕ್ಷಣಗಳನ್ನೂ ದಾಖಲು ಮಾಡಿ ಇಟ್ಟುಕೊಳ್ಳುವುದು ಮನುಷ್ಯನ ಸ್ವಭಾವ. ಒಂದು ಗಂಡು ಹೆಣ್ಣು ಮದುವೆಯ ಮೂಲಕ ಜೊತೆಯಾಗುವುದು ಅತ್ಯಂತ ಸಂತೋಷದ ಕ್ಷಣವಾದ್ದರಿಂದ ಮದುವೆಗೂ ಮೊದಲು ಪ್ರೀ ವೆಡ್ಡಿಂಗ್ ಶೂಟ್ ಎನ್ನುವ ಟ್ರೆಂಡ್ ಇತ್ತೀಚೆಗೆ ಶುರುವಾಗಿತ್ತು. ಈಗ ಮದುವೆಯ ನಂತರ ಹೆಣ್ಣಿನ ಪಾಲಿಗೆ ಸಿಗುವ ಮೊದಲ ದೊಡ್ಡ ಖುಷಿ ಎಂದರೆ ತಾಯ್ತನ. ಅದನ್ನೂ ಭಿನ್ನವಾಗಿ ದಾಖಲು ಮಾಡಿಟ್ಟುಕೊಳ್ಳುವ ಪರಂಪರೆಯೊಂದು ಶುರುವಾಗಿದೆ.

ಈ ಹಿಂದೆ ಈ ರೀತಿಯ ಫೋಟೋಶೂಟ್ ಅನ್ನು ಬಾಲಿವುಡ್‌ನ ಸಾಕಷ್ಟು ಮಂದಿ ಮಾಡಿಸಿದ್ದಾರೆ. ಶಿಲ್ಪಾ ಶೆಟ್ಟಿ, ಐಶ್ವರ್ಯ ರೈ ಬಚ್ಚನ್, ಲಿಸಾ ಹೆಡನ್, ಕರೀನಾ ಕಪೂರ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದೇ ರೀತಿ ಕನ್ನಡದ ನಟಿಯರೂ ನಾವ್ಯಾರಿಗೆ ಏನ್ ಕಮ್ಮಿ ಎಂದು ಪ್ರಗ್ನೆನ್ಸಿ ಫೋಟೋಶೂಟ್‌ಗೆ ಮುಂದಾಗಿದ್ದೂ ಇದೆ.

ಈ ಸಾಲಿನಲ್ಲಿ ಶ್ವೇತಾ ಶ್ರೀವತ್ಸವ್, ರಾಧಿಕಾ ಪಂಡಿತ್ ಮೊದಲಾದವರು ಇದ್ದರು. ಈಗ ಈ ಸಾಲಿಗೆ ಸೇರಿದ್ದಾರೆ ಕಿರುತೆರೆ ನಟಿ ದಿಶಾ ಮದನ್ ಮತ್ತು ಬಹುಭಾಷಾ ನಟಿಯರಾದ ಆ್ಯಮಿ ಜಾಕ್ಸನ್ ಮತ್ತು ಸಮೀರಾ ರೆಡ್ಡಿ.

ಆ್ಯಮಿ ಜಾಕ್ಸನ್

ಬ್ರಿಟಿಷ್ ನಟಿ ಆ್ಯಮಿ ಜಾಕ್ಸನ್ ಹಿಂದಿ, ತಮಿಳು, ತೆಲುಗು, ಕನ್ನಡ ಚಿತ್ರರಂಗಕ್ಕೆಲ್ಲಾ ಪರಿಚಿತರು. ಇತ್ತೀಚೆಗೆ ತೆರೆಗೆ ಬಂದಿದ್ದ ಶಿವರಾಜ್ ಕುಮಾರ್, ಸುದೀಪ್ ನಟನೆಯ ‘ದಿ ವಿಲನ್’ ಚಿತ್ರದಲ್ಲಿ ನಾಯಕಿಯಾಗುವುದರ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಆ್ಯಮಿ ತಾವು ಗರ್ಭಿಣಿಯಾದ ಮೊದಲ ದಿನದಿಂದಲೂ ಬಗೆ ಬಗೆಯ ಫೋಟೋಗಳನ್ನು ತೆಗೆದು ಸೋಷಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಬಂದಿದ್ದಾರೆ.

ರೆಡ್‌ ಕಾರ್ಪೆಟ್‌ ಮೇಲೆ ಗರ್ಭಿಣಿ ಆ್ಯಮಿ ಜಾಕ್ಸನ್‌!

ಗರ್ಭಿಣಿಯಾದ ಮೇಲೂ ದೇಶ ವಿದೇಶಗಳ ಪರ್ಯಟನೆ ಮುಂದುವರೆಸುತ್ತಾ ತಾನಿದ್ದ ಕಡೆಯಲ್ಲೇ ಸುಂದರವಾದ ಹಿನ್ನೆಲೆ ಸೃಷ್ಟಿಸಿ ಚೆಂದದ ಮತ್ತು ಭಿನ್ನ ಭಿನ್ನವಾದ ಫೋಟೋಗಳನ್ನು ಅಪ್‌ಲೋಡ್ ಮಾಡಿಕೊಂಡೇ ಬಂದಿದ್ದಾರೆ ಆ್ಯಮಿ.

ಗರ್ಭಿಣಿಯಾಗಿ ಆರೂವರೆ ತಿಂಗಳು ತುಂಬಿದ್ದ ವೇಳೆಯಲ್ಲಿ ಜಿಮ್ ಮುಗಿಸಿಕೊಂಡು ಕೂತಿದ್ದ ಫೋಟೋವೊಂದನ್ನು ಹಾಕಿ ‘ನಾನು ಈಗಲೂ ಜಿಮ್‌ಗೆ ಹೋಗಬೇಕೇ? ಅಥವಾ ಒಂದು ಬಾಟೆಲ್ ಹನಿ ತಿನ್ನಬೇಕೇ? ಎಂದು ಪ್ರತಿ ಬೆಳಗಿನ ಜಾವ ನನ್ನೊಳಗೇ ಯುದ್ಧ ಶುರುವಾಗುತ್ತದೆ’ ಎನ್ನುವ ಪೋಸ್ಟ್ ಹಾಕಿಕೊಂಡಿದ್ದರು. 

ಸಮೀರಾ ರೆಡ್ಡಿ

ಕಿಚ್ಚ ಸುದೀಪ್ ಮತ್ತು ಚಿರಂಜೀವಿ ಸರ್ಜಾ ಜೊತೆಗೆ ‘ವರದ ನಾಯಕ’ ಚಿತ್ರದಲ್ಲಿ ನಟಿಸಿದ್ದ ಸಮೀರಾ ರೆಡ್ಡಿ ನೆರೆಯ ತಮಿಳುನಾಡಿನವರು. ಹಿಂದಿ, ತಮಿಳು, ತೆಲುಗು, ಬೆಂಗಾಳಿ ಭಾಷೆಯಲ್ಲೂ ನಟಿಸಿ ಬಂದಿದ್ದಾರೆ.

ಈಗ ಮೊನ್ನೆ ಮೊನ್ನೆಯಷ್ಟೇ ನೀರಿನ ಆಳದಲ್ಲಿ ಇಳಿದು ಫೋಟೋಶೂಟ್ ಮಾಡಿಸಿದ್ದು ಎಲ್ಲರ ಪಾಲಿಗೂ ಅಚ್ಚರಿ ಮತ್ತು ತೀರಾ ಹೊಸದು. ಗರ್ಭಿಣಿಯಾಗಿ ಒಂಭತ್ತನೇ ತಿಂಗಳಿನ ಆರಂಭದಲ್ಲಿರುವ ಸಮೀರಾ ರೆಡ್ಡಿ ಈಗಾಗಲೇ ಒಂದು ಮಗುವಿನ ತಾಯಿ. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಅವರು ಪ್ರಗ್ನೆನ್ಸಿಯ ಪ್ರಾರಂಭದ ದಿನಗಳಿಂದಲೂ ಫೋಟೋಶೂಟ್ ಮಾಡಿಸುತ್ತಲೇ ಬಂದಿದ್ದವರು. ಆದರೆ ಕಡೆಯದಾಗಿ ನೀರಿನ ಆಳದಲ್ಲಿ ಮಾಡಿಸಿದ ಫೋಟೋಶೂಟ್ ಸಖತ್ ವೈರಲ್ ಆಗಿತ್ತು.

ಟ್ರೋಲ್ ಆಯ್ತು ಸಮೀರಾ ರೆಡ್ಡಿ ಅಂಡರ್‌ವಾಟರ್ ಫೋಟೋಶೂಟ್‌!

ಇದಾಗುತ್ತಿದ್ದಂತೆಯೇ ಆರೋಗ್ಯ ಸಂಬಂಧಿ ಪುರವಣಿಗಳು ಸಮೀರಾ ಫೋಟೋಶೂಟ್, ಅದರ ಸಾಧಕ-ಬಾಧಕಗಳನ್ನು ಚರ್ಚಿಸಿವೆ. ಜೊತೆಗೆ ಸಮೀರಾ ಕೂಡ ತುಂಬಾ ಎಚ್ಚರಿಕೆಯಿಂದ ಈ ರೀತಿಯ
ಫೋಟೋಶೂಟ್ ಮಾಡಿಸಬೇಕು ಎಂದೂ ಹೇಳಿದ್ದಾರೆ. 

ದಿಶಾ ಮದನ್ 

ಸೋಷಲ್ ಮೀಡಿಯಾದಲ್ಲಿ ಸದ್ದು ಮಾಡಿಕೊಂಡು, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು, ಕಿರುತೆರೆ ನಟಿಯಾಗಿ ಕಡೆಗೆ ಶಿವರಾಜ್ ಕುಮಾರ್ ನಿರ್ಮಾಣದ ವೆಬ್ ಸೀರಿಸ್‌ನಲ್ಲಿ ಪಾತ್ರ ಮಾಡಿ ಫೇಮಸ್ ಆಗಿದ್ದವರು ದಿಶಾ ಮದನ್.

ಮೊದಲು ‘ವಿ ಆರ್ ಪ್ರಗ್ನೆಂಟ್’ ಎಂದು ಸೋಷಲ್ ಮೀಡಿಯಾದಲ್ಲಿ ಘೋಷಣೆ ಮಾಡಿದ್ದರು. ಅದಾದ ಮೇಲೆ ಶುರುವಾಗಿದ್ದು ಅವರ ಭಿನ್ನ ಭಿನ್ನ ಪ್ರಗ್ನೆನ್ಸಿ ಫೋಟೋಶೂಟ್‌ಗಳ ಹರಿವು. ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಹೊಸ ಹೊಸ ಫೋಟೋಗಳನ್ನು ಅಪ್‌ಲೋಡ್ ಮಾಡುವುದರ ಜೊತೆಗೆ ಗರ್ಭಿಣಿ ಮಹಿಳೆಯರಿಗೆ ಧೈರ್ಯ ತುಂಬುವ ಕಾರ್ಯವನ್ನೂ ಮಾಡಿದ್ದರು, ತಮ್ಮ ಮನದಾಳವನ್ನೂ ತೆರೆದಿಟ್ಟಿದ್ದರು.

ವೈರಲ್‌ ಆಯ್ತು ಕಿರುತೆರೆ ನಟಿ ಬೇಬಿ ಬಂಪ್‌ ಫೋಟೋಸ್!

‘ಹೆಣ್ಣು ಗರ್ಭಿಣಿಯಾದ ವೇಳೆಯಲ್ಲಿ ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ತುಂಬಾ ಬದಲಾಗುತ್ತಾಳೆ. ಅವಳ ಪಾಲಿಗೆ ಇದೊಂದು ಮ್ಯಾಜಿಕಲ್ ಜರ್ನಿ. ಎಲ್ಲವನ್ನೂ ಪಾಸಿಟಿವ್ ಆಗಿ ಕಂಡು, ಸಂತೋಷದಿಂದ ಇರುವುದು, ಕಾಲ ಕಾಲಕ್ಕೆ ವೈದ್ಯರ ಸಲಹೆ ಪಡೆದು ಮುಂದುವರೆದು ತಾಯ್ತನವನ್ನು ಅನುಭವಿಸಬೇಕು’ ಎಂದು ಬರೆದುಕೊಂಡಿದ್ದರು. ಜೊತೆಗೆ ಭಿನ್ನವಾದ ಮತ್ತು ಸಾಂಪ್ರದಾಯಿಕವಾದ ಫೋಟೋಶೂಟ್‌ಗಳನ್ನೂ ಮಾಡಿಸಿದ್ದರು.