"ನಾನು ಆಕೆಯನ್ನು ರಿಜೆಕ್ಟ್ ಮಾಡಿದ್ದು ಆಕೆ ಫಾರ್ಮಲ್ ಬಟ್ಟೆ ಹಾಕಿಲ್ಲ ಎಂದಲ್ಲ ಅಥವಾ ಆಕೆ ಮೈ ಪ್ರದರ್ಶನ ಮಾಡಿದ್ದಾಳೆ ಎಂದೂ ಅಲ್ಲ'.. ಟೀ ಶರ್ಟ್ ಮೇಲಿದ್ದ ಆ ಒಂದು ವಾಕ್ಯಕ್ಕೆ ಕೆಲಸ ಕಳೆದುಕೊಂಡ ಯುವತಿ: ಅಮೆಜಾನ್ ಎಕ್ಸಿಕ್ಯೂಟಿವ್ ಹಂಚಿಕೊಂಡ ರೋಚಕ ಕಥೆ ಇಲ್ಲಿದೆ ನೋಡಿ..

ಟೀ ಶರ್ಟ್ ಮೇಲಿದ್ದ ಒಂದು ವಾಕ್ಯಕ್ಕೆ 'ಕೆಲಸ'ಕ್ಕೆ ಸೆಲೆಕ್ಟ್ ಆಗದ ಯುವತಿ: ಅಮೆಜಾನ್ ಎಕ್ಸಿಕ್ಯೂಟಿವ್ ಹಂಚಿಕೊಂಡ ರೋಚಕ ಕಥೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೆಲಸದ ಸಂದರ್ಶನ (Job Interview) ಎಂದರೆ ನಾವೆಲ್ಲರೂ ತುಂಬಾನೇ ಸಿದ್ಧತೆ ಮಾಡಿಕೊಳ್ಳುತ್ತೇವೆ. ಉಡುಪು, ಮಾತುಗಾರಿಕೆ, ರೆಸ್ಯೂಮೆ (Resume) ಎಲ್ಲವೂ ಪರ್ಫೆಕ್ಟ್ ಆಗಿರಬೇಕು ಎಂದು ಬಯಸುತ್ತೇವೆ. ಆದರೆ ಇತ್ತೀಚಿನ 'ಕೂಲ್' ಸಂಸ್ಕೃತಿಯಲ್ಲಿ ಕೆಲವೊಮ್ಮೆ ಅತಿಯಾದ ಆತ್ಮವಿಶ್ವಾಸ ಅಥವಾ ವಿಚಿತ್ರವಾದ ಫ್ಯಾಷನ್ ಸೆನ್ಸ್ ಹೇಗೆ ಮುಳುವಾಗಬಹುದು ಎಂಬುದಕ್ಕೆ ಈ ಘಟನೆ ಒಂದು ಅತ್ಯುತ್ತಮ ಉದಾಹರಣೆ.

ಮುಂಬೈ ಮೂಲದ ಅಮೆಜಾನ್ ಪ್ರೈಮ್ ವಿಡಿಯೋದ (Amazon Prime Video) ಸೋಶಿಯಲ್ ಮತ್ತು ಎಡಿಟೋರಿಯಲ್ ಲೀಡ್ ಆಗಿರುವ ಭವಿಷಾ ಜೈನ್ (Bhavisha Jain) ಇತ್ತೀಚೆಗೆ ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡ ಒಂದು ವೃತ್ತಿಪರ ಅನುಭವ ಈಗ ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕೇವಲ ಒಂದು ಟೀ ಶರ್ಟ್ ಮೇಲಿದ್ದ ಬರಹದಿಂದಾಗಿ ಒಬ್ಬ ಪ್ರತಿಭಾವಂತ ಅಭ್ಯರ್ಥಿ ಹೇಗೆ ಕೆಲಸದ ಅವಕಾಶವನ್ನು ಕಳೆದುಕೊಂಡಳು ಎಂಬುದು ಈ ಕಥೆಯ ಸಾರಾಂಶ.

ಪ್ರತಿಭೆ ಇದ್ದರೂ ಸಂದರ್ಶನದಲ್ಲೇ ರಿಜೆಕ್ಟ್!

ಭವಿಷಾ ಜೈನ್ ತಮ್ಮ ತಂಡಕ್ಕೆ ಸೃಜನಾತ್ಮಕ ಮಾರ್ಕೆಟಿಂಗ್ ಪಾತ್ರಕ್ಕಾಗಿ ಅಭ್ಯರ್ಥಿಗಳನ್ನು ಹುಡುಕುತ್ತಿದ್ದರು. ಆ ಸಮಯದಲ್ಲಿ ಅವರಿಗೆ ಒಬ್ಬ ಯುವತಿಯ ಪ್ರೊಫೈಲ್ ಗಮನ ಸೆಳೆಯಿತು. ಆಕೆ ಪ್ರತಿಷ್ಠಿತ ಬ್ರ್ಯಾಂಡ್‌ಗಳ ಜೊತೆ ಕೆಲಸ ಮಾಡಿದ ಅನುಭವ ಹೊಂದಿದ್ದಳು ಮತ್ತು ಸೋಶಿಯಲ್ ಮೀಡಿಯಾದಲ್ಲಿ 50 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದ ಪ್ರಭಾವಿಯಾಗಿದ್ದಳು (Influencer). ಆಕೆಯ ರೆಸ್ಯೂಮ್ ನೋಡಿ ಭವಿಷಾ ಅವರು ನಿಜಕ್ಕೂ ಪ್ರಭಾವಿತರಾಗಿದ್ದರು.

ಆದರೆ ಸಂದರ್ಶನ ಆರಂಭವಾದ ಮೊದಲ ನಿಮಿಷದಲ್ಲೇ ಭವಿಷಾ ಅವರ ಅಭಿಪ್ರಾಯ ಸಂಪೂರ್ಣವಾಗಿ ಬದಲಾಯಿತು. ಅದಕ್ಕೆ ಕಾರಣ ಆ ಯುವತಿಯ ಉಡುಪು! ಆಕೆ ಹಾಕಿದ್ದ ಟೀ ಶರ್ಟ್ ಮೇಲೆ ದೊಡ್ಡ ಅಕ್ಷರಗಳಲ್ಲಿ "I'm too hot for a job" (ನಾನು ಕೆಲಸ ಮಾಡಲು ಸಾಧ್ಯವಿಲ್ಲದಷ್ಟು ಸುಂದರಿ ಅಥವಾ ಹಾಟ್ ಆಗಿದ್ದೇನೆ) ಎಂದು ಬರೆಯಲಾಗಿತ್ತು. ಈ ಬರಹವನ್ನು ಕಂಡ ಭವಿಷಾ, ಆಕೆಯೊಂದಿಗೆ ಮಾತುಕತೆ ಆರಂಭಿಸುವ ಮೊದಲೇ ಆಕೆಯನ್ನು ತಿರಸ್ಕರಿಸಲು (Reject) ನಿರ್ಧರಿಸಿದರು.

ಇದು ಬಟ್ಟೆಯ ಪ್ರಶ್ನೆಯಲ್ಲ, ಜವಾಬ್ದಾರಿಯ ಪ್ರಶ್ನೆ!

ಈ ಬಗ್ಗೆ ಲಿಂಕ್ಡ್‌ಇನ್‌ನಲ್ಲಿ ಸುದೀರ್ಘವಾಗಿ ಬರೆದಿರುವ ಭವಿಷಾ, "ನಾನು ಆಕೆಯನ್ನು ರಿಜೆಕ್ಟ್ ಮಾಡಿದ್ದು ಆಕೆ ಫಾರ್ಮಲ್ ಬಟ್ಟೆ ಹಾಕಿಲ್ಲ ಎಂದಲ್ಲ ಅಥವಾ ಆಕೆ ಮೈ ಪ್ರದರ್ಶನ ಮಾಡಿದ್ದಾಳೆ ಎಂದೂ ಅಲ್ಲ. ಇದು ಸಂದರ್ಭದ ತಿಳುವಳಿಕೆ (Context) ಮತ್ತು ವಿವೇಚನಾ ಶಕ್ತಿಯ ಪ್ರಶ್ನೆ. ನೀವು ಮದುವೆಗೆ ಸ್ವಿಮ್‌ವೇರ್ ಹಾಕಿಕೊಂಡು ಹೋಗಲು ಸಾಧ್ಯವಿಲ್ಲ, ಹಾಗೆಯೇ ಜಿಮ್‌ಗೆ ಟುಕ್ಸೆಡೋ (Tuxedo) ಹಾಕಿಕೊಂಡು ಹೋಗುವುದು ಎಷ್ಟು ಹಾಸ್ಯಾಸ್ಪದವೋ, ಸಂದರ್ಶನಕ್ಕೆ ಈ ರೀತಿಯ ಟೀ ಶರ್ಟ್ ಧರಿಸುವುದೂ ಅಷ್ಟೇ ತಪ್ಪು," ಎಂದು ಸ್ಪಷ್ಟಪಡಿಸಿದ್ದಾರೆ.

ಸಂದರ್ಶನಕ್ಕೆ ಬರುವಾಗ ನಿಮ್ಮ ಉಡುಪು ನಿಮ್ಮ ವೃತ್ತಿಪರತೆಯನ್ನು ಸಾರುತ್ತದೆ. "ನಾನು ಈ ಕೆಲಸಕ್ಕಿಂತ ಶ್ರೇಷ್ಠಳಾಗಿದ್ದೇನೆ" ಎಂಬ ಸಂದೇಶ ನೀಡುವ ಉಡುಪನ್ನು ಧರಿಸಿ ಬರುವುದು ಉದ್ಯೋಗದಾತರಿಗೆ ನೀಡುವ ತಪ್ಪು ಸಂದೇಶ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಫಸ್ಟ್ ಇಂಪ್ರೆಷನ್ ಈಸ್ ದಿ ಬೆಸ್ಟ್ ಇಂಪ್ರೆಷನ್!

"ಒಂದು ಸಂದರ್ಶನದಲ್ಲಿ ನಿಮ್ಮ ಪ್ರಭಾವ ಬೀರಲು ನಿಮ್ಮ ಬಳಿ ಕೇವಲ 30 ನಿಮಿಷಗಳಿರುತ್ತವೆ. ಆ ಸಮಯದಲ್ಲಿ ನಿಮ್ಮ ಪೋರ್ಟ್‌ಫೋಲಿಯೋ ಮಾತ್ರವಲ್ಲ, ನಿಮ್ಮ ನಡೆ-ನುಡಿ ಮತ್ತು ನೀವು ಹಾಕಿಕೊಂಡಿರುವ ಬಟ್ಟೆಯೂ ನಿಮ್ಮ ಬಗ್ಗೆ ಮಾತನಾಡುತ್ತದೆ. ಆಕೆ ತನ್ನ ಟೀ ಶರ್ಟ್ ಮೂಲಕ ತಾನು ಕೆಲಸಕ್ಕಿಂತ ದೊಡ್ಡವಳು ಎಂದು ಹೇಳುತ್ತಿದ್ದಳು. ಆಕೆ ಹೇಳಿದ್ದನ್ನು ನಾನು ಹಾಗೆಯೇ ನಂಬಿದೆ ಮತ್ತು ಆಕೆಗೆ ಕೆಲಸ ನೀಡಲಿಲ್ಲ," ಎಂದು ಭವಿಷಾ ಮಾರ್ಮಿಕವಾಗಿ ಹೇಳಿದ್ದಾರೆ.

ನೆಟ್ಟಿಗರ ನಡುವೆ ಭಾರಿ ಚರ್ಚೆ

ಭವಿಷಾ ಅವರ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಕೆಲವರು ಭವಿಷಾ ಅವರ ನಿರ್ಧಾರವನ್ನು ಬೆಂಬಲಿಸಿದ್ದು, "ಕನಿಷ್ಠ ಜ್ಞಾನವಿಲ್ಲದ ಅಭ್ಯರ್ಥಿಗಳಿಗೆ ಇಂತಹ ಪಾಠ ಅಗತ್ಯ" ಎಂದಿದ್ದಾರೆ. ಇನ್ನು ಕೆಲವರು ಆ ಯುವತಿಯ ಪರವಾಗಿ ಬ್ಯಾಟ್ ಬೀಸಿದ್ದು, "ಅದೊಂದು ಕೇವಲ ಜೋಕ್ ಆಗಿರಬಹುದು, ಉಡುಪಿಗಿಂತ ಪ್ರತಿಭೆಗೆ ಬೆಲೆ ನೀಡಬೇಕಿತ್ತು" ಎಂದು ವಾದಿಸಿದ್ದಾರೆ.

ಒಟ್ಟಾರೆಯಾಗಿ, ಈ ಘಟನೆಯು ಕಾರ್ಪೊರೇಟ್ ಜಗತ್ತಿನಲ್ಲಿ 'ಫ್ಯಾಷನ್' ಮತ್ತು 'ವೃತ್ತಿಪರತೆ' ನಡುವಿನ ತೆಳುವಾದ ಗೆರೆಯನ್ನು ನೆನಪಿಸಿದೆ. ನೀವು ಎಷ್ಟೇ ಪ್ರತಿಭಾವಂತರಾಗಿದ್ದರೂ, ಸಂದರ್ಭಕ್ಕೆ ತಕ್ಕಂತೆ ನಡೆದುಕೊಳ್ಳುವುದು ನಿಮ್ಮ ವ್ಯಕ್ತಿತ್ವದ ಭಾಗವಾಗಿರಬೇಕು ಎಂಬುದು ಈ ಲೈಫ್‌ಸ್ಟೈಲ್ ಸುದ್ದಿಯ ಸಾರಾಂಶ.