ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ಟೂರಿಸ್ಟ್ ಸ್ಥಳಗಳಿವೆ. ಧಾರ್ಮಿಕ, ಸಾಂಸ್ಕೃತಿಕ, ಪ್ರಾಕೃತಿಕ, ವೈಜ್ಞಾನಿಕ ಎಂದು 50ಕ್ಕೂ ಹೆಚ್ಚು ನೋಡುವಂಥ ಜಾಗಗಳಿವೆ. ಆದರೆ, ಬೆಂಗಳೂರಿಗರಿಗಿಂತ ಹೊರಗಿನವರೇ ಈ ಸ್ಥಳಗಳಿಗೆ ಭೇಟಿ ನೀಡುವುದು ಹೆಚ್ಚು. ಬೆಂಗಳೂರಿನವರು ವೀಕೆಂಡ್‌ನಲ್ಲಿ ಎಲ್ಲಿ ಹೋಗುವುದು ಎಂದು ಯೋಚಿಸಿ ಯಾವುದೂ ತಲೆಗೆ ಬರದೆ ಕಡೆಗೆ ಹೋಟೆಲ್‌ಗೆ ಹೋಗಿ ಮುಗಿಸುವುದೇ ಹೆಚ್ಚು. ಆದರೆ, ಮುಂದಿನ ವಾರ ತಿರುಗಾಡಬೇಕೆನಿಸಿದಾಗ ಈ ಸ್ಥಳಗಳಿಗೆ ಭೇಟಿ ನೀಡಿ.  

1. ಫನ್ ವರ್ಲ್ಡ್ ಅಮ್ಯೂಸ್‌ಮೆಂಟ್ ಪಾರ್ಕ್

ಸುಮಾರು 50ಕ್ಕೂ ಹೆಚ್ಚು ರೈಡ್‌ಗಳು, ಹಿರಿಕಿರಿಯರೆನ್ನದೆ ಎಲ್ಲರೂ ಸಂಭ್ರಮಿಸಬಹುದಾದಂಥ ಹತ್ತಾರು ಆಟಗಳು, ಜಲಕ್ರೀಡೆಗಳು ನಿಮ್ಮನ್ನು ಇಡೀ ದಿನ ರಂಜಿಸುತ್ತವೆ. ಇಲ್ಲಿ ನಿಮ್ಮ ಸಂತೋಷಕ್ಕೆ ಮಿತಿಯೇ ಇರದು. ವೀಕೆಂಡೊಂದನ್ನು ಪೂರ್ತಿ ಮಜವಾಗಿ ಕಳೆಯಲು ಇದಕ್ಕಿಂತ ಉತ್ತಮ ಸ್ಥಳ ಇನ್ನೊಂದಿಲ್ಲ. 

2. ನಂದಿ ಬೆಟ್ಟ

ಈ ಸ್ಥಳ ಟ್ರೆಕಿಂಗ್ ಪ್ರಿಯರಿಗೆ, ನಿಸರ್ಗಪ್ರೇಮಿಗಳಿಗೆ, ಒನ್ ಡೇ ಔಟಿಂಗ್‌ಗೆ ಹೇಳಿ ಮಾಡಿಸಿದ್ದು. ಅದರಲ್ಲೂ ಸೂರ್ಯೋದಯಕ್ಕೂ ಮುನ್ನ ಇಲ್ಲಿ ಹೋಗಿ ಸೂರ್ಯನ ಉದಯವನ್ನೇ ಕಾಯುವ ಮಜವೇ ಮಜಾ. ಮೋಡಗಳು ಧರೆಗಿಳಿದು ಬಂದು ನಿಮ್ಮನ್ನು ಆವರಿಸಿದಂತೆ ಭಾಸವಾಗುತ್ತದೆ. ಬೆಂಗಳೂರು ನಗರವನ್ನು ಇಲ್ಲಿಂದ ನೋಡಿ ಆನಂದಿಸಬಹುದು. ಆಗಸ್ಟ್‌ನಿಂದ ಮಾರ್ಚ್ ನಂದಿ ಬೆಟ್ಟ ಭೇಟಿಗೆ ಪರ್ಫೆಕ್ಟ್ ಸಮಯ. 

ಮೈಸೂರು ರಾಜರ ಬೆಂಗಳೂರು ಅರಮನೆ ಈ ವಿಷ್ಯ ನಿಮ್ಗೆ ಗೊತ್ತಿರ್ಲಿಕ್ಕಿಲ್ಲ!

3. ಸ್ನೋ ಸಿಟಿ 

ಬೆಂಗಳೂರಿನೊಳಗೆ ಹಿಮಾಲಯ ಪರ್ವತದ ತುಣುಕೊಂದು ಬಂದು ನಿಂತಂತೆ ಕಾಣುವ ಸ್ನೋ ಸಿಟಿ ಶೆಖೆಯ ದಿನಕ್ಕೆ ಸೂಪರ್ ತಾಣ. ಐಸ್ ಹಾಗೂ ಹಿಮದ ಥೀಮ್ ಉಳ್ಳ ಒಳಾಂಗಣ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಫ್ರೋಜನ್ ರೈಡ್ಸ್ ಹಾಗೂ ಇತರೆ ಕೌಟುಂಬಿಕ ಚಟುವಟಿಕೆಗಳಿಗೆ ಅವಕಾಶವಿದೆ. ಇಲ್ಲಿನ ಮೈನಸ್ 5 ಡಿಗ್ರಿ ತಾಪಮಾನ ಹಾಗೂ ಹಿಮದ ರಚನೆಗಳು ಬೆಂಗಳೂರಿನಲ್ಲಿರುವುದನ್ನೇ ಮರೆಸುವುದು ಪಕ್ಕಾ. ಮಕ್ಕಳಿಂದ ವೃದ್ಧರಾದಿಯಾಗಿ ಎಂಜಾಯ್ ಮಾಡಿಕೊಂಡು ಸಂಡೆಯೊಂದನ್ನು ಸುಂದರವಾಗಿ ಕಳೆಯಬಹುದು. ಇದು ವರ್ಷದ 365 ದಿನವೂ ತೆರೆದಿರುತ್ತದೆ. 

4. ಇನ್ನೋವೇಟಿವ್ ಫಿಲ್ಮ್ ಸಿಟಿ

ರಿಯಾಲಿಟಿ ಟಿವಿ ಸೆಟ್‌ ಟೂರ್‌ಗಳು, ಕೌಟುಂಬಿಕ ಆಟಗಳು, ಸ್ಕೇರಿ ಹೌಸ್, ವಾಟರ್ ಪಾರ್ಕ್ ಸೇರಿದಂತೆ ಇನ್ನೂ ಹಲವಾರು ಮನರಂಜನೆಗಳೊಂದಿಗೆ ಫುಡ್ ಕೋರ್ಟ್, ಶಾಪಿಂಗ್ ಸೆಂಟರ್ ಮುಂತಾದವು ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿವೆ. ಪ್ರೀ ವೆಡ್ಡಿಂಗ್ ಪೋಟೋಗ್ರಫಿ, ವಿಡಿಯೋ ಶೂಟಿಂಗ್, ಚಿತ್ರೀಕರಣಕ್ಕೆ ಉತ್ತಮ ಜಾಗ. ಬಿಗ್ ಬಾಸ್‌ನಂಥ ರಿಯಾಲಿಟಿ ಶೋ ಸೆಟ್‌ಗಳನ್ನೂ ಇಲ್ಲಿ ಕಾಣಬಹುದು. 

5. ಸರ್ಕಾರಿ ಮ್ಯೂಸಿಯಂ

ಬೆಂಗಳೂರಿನ ಅತ್ಯುತ್ತಮ ಐತಿಹಾಸಿಕ ತಾಣವಾಗಿರುವ ಸರ್ಕಾರಿ ಮ್ಯೂಸಿಯಂ, ಅರ್ಧ ದಿನದ ಭೇಟಿಗೆ ಉತ್ತಮ ತಾಣ. ದೇಶದ ಅತ್ಯಂತ ಹಳೆಯ ಮ್ಯೂಸಿಯಂಗಳಲ್ಲಿ ಒಂದಾಗಿರುವ ಇದು, 1865ರಲ್ಲಿ ತೆರೆದಿದೆ. ಹಲ್ಮಿಡಿ ಶಾಸನ, ಹಳೆಯ ನಾಣ್ಯಗಳು, ಆಭರಣಗಳು ಮುಂತಾದವು ಇಲ್ಲಿದೆ. 

ಹಂಪಿ: ದೇವಸ್ಥಾನ ನೋಡುವುದ ಬಿಟ್ಟು ಇನ್ನೇನು ಮಾಡ್ಬಹುದು?

6. ಕಬ್ಬನ್ ಪಾರ್ಕ್

ಶತಮಾನದಿಂದ ಜನರಿಗೆ ತಂಪನ್ನು ಹಾಗೂ ಮನರಂಜನೆಯನ್ನು ನೀಡುತ್ತಾ ಮುದಗೊಳಿಸುತ್ತಿದೆ ಕಬ್ಬನ್ ಪಾರ್ಕ್. 1870ರಲ್ಲಿ ಅಂದಿನ ಮೈಸೂರಿನ ನಿರ್ವಾಹಕ ಆಯುಕ್ತ ಜಾನ್ ಮೀಡ್ ಇದನ್ನು ಸಂಸ್ಥಾಪಿಸಿದರು. ಇಲ್ಲಿ ಪಾರ್ಕ್, ಲೈಬ್ರರಿ, ಮ್ಯೂಸಿಯಂ, ಅಕ್ವೇರಿಯಂ, ಟೆನಿಸ್ ಅಕಾಡೆಮಿ ಮುಂತಾದವಿದೆ. ಸುಮಾರು 300 ಎಕರೆ ಜಮೀನಿನಲ್ಲಿ 6000ಕ್ಕೂ ಹೆಚ್ಚು ವೆರೈಟಿಯ ಮರಗಳಿವೆ. 

7. ವಂಡರ್ ಲಾ

ಮೈಸೂರು-ಬೆಂಗಳೂರು ಹೈವೆಯಲ್ಲಿರುವ  ವಂಡರ್ ಲಾ ವಾಟರ್ ಪಾರ್ಕ್ ಮಕ್ಕಳು ಹಾಗೂ ದೊಡ್ಡವರಿಗೆ ಮ್ಯಾಕ್ಸಿಮಮ್ ಮಜಾ ಗ್ಯಾರಂಟಿ ನೀಡುತ್ತದೆ. 50ಕ್ಕೂ ಹೆಚ್ಚು ವಾಟರ್ ಗೇಮ್‌ಗಳು ನಿಮ್ಮ ಒಂದು ಕ್ಷಣವನ್ನೂ ವ್ಯರ್ಥವಾಗಲು ಬಿಡುವುದಿಲ್ಲ. ಇದರೊಂದಿಗೆ ರೋಲರ್ ಕೋಸ್ಟರ್‌ಗಳು, ಫೆರಿ ವ್ಹೀಲ್ಸ್, ವರ್ಚುಯಲ್ ರಿಯಾಲಿಟಿ ಅನುಭವಗಳು ಬೋನಸ್.

ಈ ಹಡಗು ಹತ್ತಿ ನೋಡು, ದೇಶ ಸುತ್ತಿ ನೋಡು