ಇದುವರೆಗೂ ಲಕ್ಷುರಿಯಾದ ಕ್ರೂಸ್ ಅನುಭವ ಬೇಕೆಂದಲ್ಲಿ ಭಾರತೀಯರು ವಿದೇಶಗಳಿಗೆ ಹಾರಿ ಒಂದಿಷ್ಟು ದಿನ ಜಾಲಿಯಾಗಿ ನೌಕಾವಿಹಾರ ಮಾಡಿಕೊಂಡು ಬರುತ್ತಿದ್ದರು. ಆದರೆ, ಈಗ ಭಾರತದಲ್ಲೇ ಅಂಥ ಹಲವಾರು ಲಕ್ಷುರಿ ನೌಕೆಗಳಿವೆ. ಅವು ನಿಮಗೆ ತೇಲುವ ಫೈವ್‌ಸ್ಟಾರ್ ಹೋಟೆಲ್‌ನಂತೆ ಭಾಸವಾಗಬಹುದು. ಜೊತೆಗೆ ಸೈಟ್ ಸೀಯಿಂಗ್ ಕೂಡಾ ಸೇರಿಕೊಂಡು ಅನನ್ಯ ಅನುಭವ ನೀಡುತ್ತವೆ. ದೇಶದ ಕ್ರೂಸ್ ಟೂರಿಸಂ ಈಗ ಜನಪ್ರಿಯತೆ ಗಳಿಸುತ್ತಿದೆ. ಅಂಥ ಕೆಲವು ಪ್ರಮುಖ ಕ್ರೂಸ್‌ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ನಿಮಗೆ ಬೇಕಾದ್ದನ್ನು ಆಯ್ದುಕೊಂಡು ಹಿತವಾದ ಸಮಯ ಕಳೆದುಕೊಂಡು ಬನ್ನಿ. 

1. ವಿವಧ ಪರಮಹಂಸ ಲಕ್ಷುರಿ ಕ್ರೂಸ್
ರಾಯಲ್ ಬೆಂಗಾಲ್ ಟೈಗರ್‌ಗಳಿಗೆ ಹೆಸರಾದ ಸುಂದರ್ಬನ್ಸ್ ಜಗತ್ತಿನಲ್ಲೇ ಅತಿ ದೊಡ್ಡ ಮ್ಯಾಂಗ್ರೋವ್ ಎಕೋಸಿಸ್ಟಂ ಹೊಂದಿದೆ. ಇದು ವಿಶ್ವ ಪಾರಂಪರಿಕ ತಾಣ ಕೂಡಾ. ಇಲ್ಲಿನ ವಿವಧ ಕ್ರೂಸ್‌ನಲ್ಲಿ ನಾಲ್ಕು ದಿನಗಳ ಕಾಲ ಸುಂದರ್‌ಬನ್ ಹುಲಿ ರಕ್ಷಿತಾರಣ್ಯದ ನಡುವಿನ ಚಾನಲ್‌ಗಳಲ್ಲಿ ಸುತ್ತಾಡಬಹುದು. ದೊಡ್ಡ ದೊಡ್ಡ ಮರಗಳ ಪ್ರತಿಬಿಂಬದಿಂದಾಗಿ ಹಸಿರಾಗಿ ಕಾಣುವ ನೀರಿನಲ್ಲಿ ತೇಲುವುದೇ ಮನಸ್ಸಿಗೆ ಧ್ಯಾನೋನ್ಮಾದ. ಬೃಹತ್ ಮೊಸಳೆಗಳ ತಾಣವಾದ ಭಾಗಬಟ್ಪುರ ದ್ವೀಪಕ್ಕೂ ಕರೆದೊಯ್ಯಲಾಗುತ್ತದೆ. ನೀವು ಪಕ್ಷಿಪ್ರಿಯರಾದರೆ ದಾರಿಯುದ್ದಕ್ಕೂ ಹಲವು ಸ್ಥಳೀಯ ಹಾಗೂ ವಲಸೆ ಪಕ್ಷಿಗಳನ್ನು ಕಣ್ಣು ಹಾಗೂ ಕ್ಯಾಮೆರಾಗೆ ತುಂಬಿಕೊಳ್ಳಬಹುದು. ಇಲ್ಲಿನ ಸ್ಥಳೀಯ ಜಾನಪದ ನೃತ್ಯಗಳನ್ನು ನೋಡಬಹುದು. ಅಕ್ಟೋಬರ್‌ನಿಂದ ಮಾರ್ಚ್ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ. ಇಲ್ಲಿ ನಾಲ್ಕು ದಿನಗಳಿಗೆ ಇಬ್ಬರಿಗೆ 48,000 ಚಾರ್ಜ್ ಮಾಡಲಾಗುತ್ತದೆ. ಕೋಲ್ಕತಾ ರೈಲ್ವೆ ಸ್ಟೇಶನ್‌ಗೆ ಕೇವಲ 7 ಕಿಲೋಮೀಟರ್ ದೂರದಲ್ಲಿ ಈ ಕ್ರೂಸ್ ಏರಬಹುದು. 2. ಒಬೆರಾಯ್ ಮೋಟಾರ್ ವೆಸೆಲ್ ವೃಂದಾ ಕ್ರೂಸ್
ದೇವರ ನಾಡಿನ ಹಿನ್ನೀರಿನ ಸೌಂದರ್ಯ ಸವಿಯಲು ಒಬೆರಾಯ್ ಮೋಟಾರ್ ವೆಸೆಲ್ ವೃಂದಾ ನೌಕೆ ಏರಲೇಬೇಕು. ಅಲೆಪ್ಪಿಯ ಶಾಂತ ನೀರಿನಲ್ಲಿ ತೇಲುತ್ತಾ, ವೆಂಬನಾಡ್ ಕೆರೆಯನ್ನು ದಾಟುತ್ತಾ, ಸುತ್ತಲಿನ ಹಸಿರಿನ ವೈಭೋಗ ಅನುಭವಿಸುತ್ತಾ ಕಥಕ್ಕಳಿ ಹಾಗೂ ಮೋಹಿನಿಅಟ್ಟಂ ಕಲಾಪ್ರಕಾರಗಳನ್ನು ಕೂಡಾ ಸವಿಯಬಹುದು. ಹಡಗಿನಲ್ಲಿ ಸಕಲ ಸೌಕರ್ಯಗಳೊಂದಿಗೆ ದೇಶದ ಮಾಸ್ಟರ್ ಶೆಫ್‌ಗಳು ತಯಾರಿಸಿದ ರಸಗವಳದ ರುಚಿ ಸವಿಯಲು ಅವಕಾಶವಿದೆ. 
ನವೆಂಬರ್‌ನಿಂದ ಏಪ್ರಿಲ್ ಈ ನೌಕೆಯೇರಲು ಹೇಳಿ ಮಾಡಿಸಿದ ಸಮಯ. ಇದರಲ್ಲಿ ನಾಲ್ಕು ದಿನ ಕಳೆಯಲು ಇಬ್ಬರಿಗೆ ಅಂದಾಜು 1,33,000 ರೂ.ಗಳಾಗುತ್ತದೆ.

ಬ್ಯಾಂಕಾಂಕ್ ಬೀಚಿನಲ್ಲಿ ಅಲೆದಾಡಿದ ಕನ್ನಡ ನಟಿಯರು

3. ಗಂಗಾ ಪಾರಂಪರಿಕ ನೌಕಾವಿಹಾರ
ಗಂಗಾ ನದಿಯು ಹಲವಾರು ಯಾತ್ರಾಸ್ಥಳಗಳ, ಪ್ರಸಿದ್ಧ ದೇವಾಲಯಗಳ ಹಾಗೂ ಹಸಿರು ಕಾಡುಗಳ ಸೌಂದರ್ಯವನ್ನು ತೋರಿಸುತ್ತಾ ಸುಮಾರು 280 ಕಿಲೋಮೀಟರ್ ಸಾಗಿಸುತ್ತದೆ. 32 ದೊಡ್ಡ ಕೋಣೆಗಳು, 80 ಜನರನ್ನು ಒಳಗೊಳ್ಳಬಲ್ಲ ಟೆರೇಸ್ ಡೈನಿಂಗ್ ಏರಿಯಾ, ಲೈವ್ ಕಿಚನ್ ಸೌಲಭ್ಯಗಲು ಇದರಲ್ಲಿವೆ. 

4. ಎಂ.ವಿ. ಮಹಾಬಾಹು ನೌಕಾವಿಹಾರ
ಈಶಾನ್ಯರಾಜ್ಯಗಳ ಗೇಟ್‌ವೇ ಎಂದೇ ಹೆಸರಾಗಿರುವ ಅಸ್ಸಾಂ ಕಡೆ ಪಯಣ ಬೆಳೆಸುವ ಇಚ್ಚೆಯಿದ್ದರೆ ಮಹಾಬಾಹು ನೌಕಾವಿಹಾರ ಟ್ರೈ ಮಾಡಿ ನೋಡಿ. ಇದರಲ್ಲಿ ಎರಡರಿಂದ ಏಳು ದಿನಗಳವರೆಗೆ ಕಳೆಯಲು ಬೇರೆ ಬೇರೆ ಯೋಜನೆಗಳು ಲಭ್ಯವಿದ್ದು, ದೇವಸ್ಥಾನಗಳ ಭೇಟಿ, ಬುಡಕಟ್ಟು ಹಳ್ಳಿಗಳನ್ನು ನೋಡುವುದು. ಟೀ ಎಸ್ಟೇಟ್ ಹಾಗೂ ಬೌದ್ಧ ಮಂದಿರಗಳ ಭೇಟಿ ಕೂಡಾ ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ ಕಜಿರಂಗ ನ್ಯಾಷನಲ್ ಪಾರ್ಕ್ ಹಾಗೂ ಪೀಕಾಕ್ ದ್ವೀಪವನ್ನು ಕೂಡಾ ನೋಡಿಬರಬಹುದು. ಸ್ಪಾ, ಸ್ವಿಮ್ಮಿಂಗ್ ಪೂಲ್, ಝಕುಜಿಯಂಥ ಸೌಲಭ್ಯಗಳಿವೆ. ಅಕ್ಟೋಬರ್‌ನಿಂದ ಏಪ್ರಿಲ್ ಬೆಸ್ಟ್ ಟೈಂ. 

5. ಕೋಸ್ಟಾ ನಿಯೋಕ್ಲಾಸಿಕಾ ಕ್ರೂಸ್
ಪಶ್ಚಿಮ ತೀರ ಪ್ರದೇಶ ಮುಖೇನ ಮುಂಬೈನಿಂದ ಮಾಲ್ಡೀವ್ಸ್‌ಗೆ ಪ್ರಯಾಣ ಬೆಳೆಸುತ್ತೆ ಕೋಸ್ಟಾ ನಿಯೋಕ್ಲಾಸಿಕಾ ಕ್ರೂಸ್. ಮೂರರಿಂದ ಏಳು ದಿನಗಳ ನೌಕಾಯಾನವನ್ನು ನೀವು ಬುಕ್ ಮಾಡಿಕೊಳ್ಳಬಹುದು. ಏಳು ದಿನಗಳ ಪ್ರಯಾಣದಲ್ಲಿ ಮಧ್ಯೆ ಕೊಚಿನ್‌ನಲ್ಲೊಂದು ಸ್ಟಾಪ್ ನೀಡುತ್ತದೆ. ಇನ್ನು ಸಣ್ಣ ಟ್ರಿಪ್ ಸಾಕೆಂದರೆ ಮಂಗಳೂರಿನಿಂದ ಕೊಚಿನ್‌ಗೆ ಇದರಲ್ಲಿ ಪ್ರಯಾಣ ಬೆಳೆಸಬಹುದು. ಈ ಪ್ರಯಾಣದ ಮಧ್ಯೆ ಮಧ್ಯೆ ದೇವಾಲಯಗಳ ಭೇಟಿ, ಅಭಯಾರಣ್ಯಗಳು, ಬೀಚ್‌ಗಳನ್ನು ನೋಡಿ ಮನದಣಿಯ ಮಣಿಯಬಹುದು. ಈ ಕ್ರೂಸ್‌ನಲ್ಲಿ ಸ್ಪಾ, ಕ್ಯಾಸಿನೋ, ಮೂವಿ ಥಿಯೇಟರ್ ಝಕುಜಿ ಎಲ್ಲವೂ ಲಭ್ಯ. 8 ದಿನಗಳ ಕ್ರೂಸ್‌ಗೆ ಇಬ್ಬರಿಗೆ ಒಂದೂವರೆ ಲಕ್ಷವಾಗುತ್ತದೆ. 

ಸಮುದ್ರದಲ್ಲಿ ಕಂಡ ನೀಲಿ ಅಲೆಗಳ ರಹಸ್ಯವೇನು?