ಹಂಪಿ ನಮ್ಮ ಕರ್ನಾಟಕದ ಹೆಮ್ಮೆ, ಭವ್ಯ ಇತಿಹಾಸದ ಪಳೆಯುಳಿಕೆ, ವೈಭವೋಪೇತವಾಗಿ ಬಾಳಿ ಸಮಾಧಿಯಾದರೂ ಇನ್ನೂ ಆಕರ್ಷಣೆ ಉಳಿಸಿಕೊಂಡ ಕಲ್ಲುಗಳ ಲೋಕ. ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಿಕೊಂಡಿರುವ ಹಂಪಿ ಸಾಮಾನ್ಯವಾಗಿ ಹೆಚ್ಚು ಜನರಿಲ್ಲದೆ ಶಾಂತವಾಗಿಯೇ ಇರುತ್ತದೆ. ಹಂಪಿಯನ್ನು ಎರಡು ಭಾಗವಾಗಿ ವಿಂಗಡಿಸುತ್ತಾಳೆ ತುಂಗಾ. ಒಂದರ್ಧ ದೇವಾಲಯಗಳನ್ನೊಳಗೊಂಡ ಪಾರಂಪರಿಕ ತಾಣವಾದರೆ, ಮತ್ತರ್ಧ ಹಿಪ್ಪೀಗಳ ದ್ವೀಪ. ಟ್ರೆಕರ್‌ಗಳ ಸ್ವರ್ಗ. ಹಂಪಿಯಲ್ಲಿ ಪ್ರತಿಯೊಬ್ಬರಿಗೂ ಮಾಡಲು, ಅನುಭವಕ್ಕಾಗಿ ಸಾಕಷ್ಟಿದೆ. ಅದೇನೇನು ನೋಡೋಣ...

ಸೆಪ್ಟೆಂಬರ್ ಟ್ರಿಪ್ಪಿಗೆ ಈ ತಾಣಗಳು ಬೆಸ್ಟ್

1. ಹಂಪಿಯ ಹನುಮಾನ್ ದೇವಾಲಯದಿಂದ ಸೂರ್ಯಾಸ್ತ ನೋಡಿ

ಇಲ್ಲಿನ ಆಂಜನೇಯ ಗುಡ್ಡದ ಮೇಲಿರುವ ಹನುಮಾನ್ ದೇವಾಲಯ ಎತ್ತರದಲ್ಲಿರುವುದರಿಂದ ಸುತ್ತಲ ನೋಟ ಮನೋಹರವಾಗಿದೆ. ಬಾಳೆ ತೋಟ, ಭತ್ತದ ಗದ್ದೆಗಳು, ಇತರೆ ಗುಡ್ಡಗಳು ಈ ಸ್ಥಳದಿಂದ ಕಣ್ಣಿಗೆ ಹಬ್ಬವಾಗಿ ಕಾಣಿಸುತ್ತವೆ. ಇಲ್ಲಿ ನಿಂತು ಹಂಪಿಯನ್ನು 360 ಡಿಗ್ರಿಯಲ್ಲಿ ನೋಡಬಹುದು. ಸೂರ್ಯಾಸ್ತವಂತೂ ಬದುಕಿನಲ್ಲಿ ಮರೆಯಲಾಗದ ಸಂಜೆಯಾಗಿ ಉಳಿಯುತ್ತದೆ. ಈ ಸಂದರ್ಭದಲ್ಲಿ ಇಡೀ ಹಂಪಿ ಸೆಪಿಯಾ ಮೋಡ್‌ನಲ್ಲಿ ಫೋಟೋ ತೆಗೆಸಿಕೊಳ್ಳಲು ಕಾದು ನಿಂತಂತೆ ಭಾಸವಾಗುತ್ತದೆ.

2. ಭತ್ತದ ಗದ್ದೆಗಳಲ್ಲಿ ಫೋಟೋ ತೆಗೆದುಕೊಳ್ಳಿ
ಹಂಪಿಯ ಹಿಪ್ಪೀ ಐಲ್ಯಾಂಡ್ ಬಳಿ ಸೀಸನ್‌ನಲ್ಲಿ ಹೋದಿರಾದರೆ ಕಣ್ಣು ಹಾಯಿಸಿದಷ್ಟು ದೂರವೂ ಹಚ್ಚ ಹಸಿರು ಇಲ್ಲವೇ ಸ್ವಲ್ಪ ಹಳದಿ ಬಣ್ಣದಲ್ಲಿ ಹರಡಿ ನಿಂತ ಭತ್ತದ ಗದ್ದೆಗಳು, ಬಾಳೆತೋಟಗಳು ಕಣ್ಣನ್ನು ತಂಪು ಮಾಡದೆ ಇರಲಾರವು. ಆ ಹಸಿರ ಸಿರಿಯಲಿ ಮನಸ್ಸನ್ನು ಮೆರೆಸಿ ಸಾಕಷ್ಟು ಫೋಟೋಗಳನ್ನು ತೆಗೆದುಕೊಂಡು ಬನ್ನಿ. ಏಕೆಂದರೆ ಫೋಟೋಗಳಿಗೆ ಹಸಿರು ಬ್ಯಾಕ್‌ಗ್ರೌಂಡ್ ಬೆಸ್ಟ್. ನೀವು ಹಂಪಿಲ್ಲಿ ಒಂದು ದಿನ ಉಳಿಯುತ್ತೀರಾದರೆ, ಈ ಭತ್ತದ ಗದ್ದೆಗಳ ಮಧ್ಯೆ ಕಾಟೇಜ್‌ಗಳು ಕೂಡಾ ಇವೆ. 

ಗುಜರಾತ್ ಟ್ರಿಪ್‌ಗೆ ಹೊರಟ್ರಾ, ಈ ತಾಣಗಳಿಗೆ ತಪ್ಪದೇ ಭೇಟಿ ನೀಡಿ

3. ಕಲ್ಲಿನ ಹೂವುಗಳ ಸುಗಂಧ ಸವೆಯಿರಿ
ಹಂಪಿಯಲ್ಲಿ ಕೇವಲ 40 ಚದರ ಕಿಲೋಮೀಟರ್‌ನಲ್ಲಿ 1600ಕ್ಕೂ ಹೆಚ್ಚು  ಕಲ್ಲಿನ ಸ್ಮಾರಕಗಳು, ದೇವಾಲಯಗಳು, ಇತರೆ ಕೆತ್ತನೆಗಳು ಇವೆ. ಒಂದು ಭೇಟಿಯಲ್ಲಿ ಅಷ್ಟನ್ನೂ ನೋಡುವುದು ಹುಲು ಮಾನವನಿಂದ ಸಾಧ್ಯವಾದುದಲ್ಲ. ಆದರೆ, ಪ್ರಮುಖವಾದುದನ್ನು ತಪ್ಪಿಸಿಕೊಳ್ಳಬಾರದಲ್ಲ... ಇದಕ್ಕಾಗಿ ಲೋಕಲ್ ಗೈಡ್ ಬುಕ್ ಮಾಡಿಕೊಳ್ಳಿ. ಇವರು ಪ್ರಮುಖವಾದ, ನೋಡಲೇಬೇಕಾದ, ಇತಿಹಾಸದಲ್ಲಿ ಪ್ರಾಮುಖ್ಯತೆ ಪಡೆದ  ದೇವಾಲಯಗಳು, ಶಿಲೆಕೆತ್ತನೆಗಳತ್ತ ಕರೆದುಕೊಂಡು ಹೋಗುತ್ತಾರೆ. ಅಷ್ಟೇ ಅಲ್ಲ, ಇತಿಹಾಸ, ಕೆತ್ತನೆಯ ವಿವರವನ್ನೂ ತಿಳಿಸುತ್ತಾರೆ. ಹಂಪಿಯ ಇತಿಹಾಸವನ್ನು ಸ್ವಲ್ಪವಾದರೂ ತಿಳಿದುಕೊಳ್ಳಲು ಕನಿಷ್ಠ  ಒಂದು ದಿನ ಬೇಕೇ ಬೇಕು.  ವಿರೂಪಾಕ್ಷ ದೇವಾಲಯ, ಸಾಸಿವೆ ಕಾಳು ಗಣೇಶ, ಕಡಲೆಕಾಳು ಗಣೇಶ, ಅಚ್ಯುತರಾಯ ದೇವಾಲಯ, ವಿಜಯವಿಠಲ ದೇಗುಲ, ಹಂಪಿ ಬಜಾರ್ ಮುಂತಾದವನ್ನು ನೋಡಲು ಮರೆಯಬೇಡಿ.

4. ಮೊಪೆಡ್ ಬಾಡಿಗೆ ಪಡೆದು ತಿರುಗಾಡಿ
ಹಂಪಿಯಲ್ಲಿ ಯಾವ ದಿಕ್ಕಿಗೆ ಹೋದರೂ ನೋಡಲು ಒಂದಲ್ಲಾ ಒಂದು ಇದ್ದೇ ಇದೆ. ಹಾಗಾಗಿ, ಇಲ್ಲಿ ಸಿಗುವ ಮೊಪೆಡ್ ಬಾಡಿಗೆಗೆ ಪಡೆದು ಬೇಕೆಂದ ದಾರಿಯಲ್ಲಿ ಸುತ್ತಿ. ಕುತೂಹಲವೆನಿಸಿದ ಕಡೆ ಹೋಗಿ. ನಿಮ್ಮ ಫೇವರೇಟ್ ತಾಣವನ್ನು ನೀವೇ ಹುಡುಕಿಕೊಂಡು  ಅಲ್ಲಿಂದಲೇ ಸೂರ್ಯೋದಯ, ಸೂರ್ಯಾಸ್ತ  ನೋಡಿ ಎಂಜಾಯ್ ಮಾಡಿ. ಜನನಿಬಿಡ ಪ್ರದೇಶದಿಂದ  ಹೊರ ಹೋಗಿ ಮನಸೋಇಚ್ಛೆ ಸುತ್ತಾಡಿ. ಅಂದ ಹಾಗೆ ಇಲ್ಲಿ ಸೈಕಲ್ ಕೂಡಾ ದಿನದ ಲೆಕ್ಕದಲ್ಲಿ ಬಾಡಿಗೆಗೆ ಸಿಗುತ್ತದೆ. ಅದನ್ನು ಕೂಡಾ ಬಳಸಿಕೊಳ್ಳಬಹುದು.

 

5. ತುಂಗಭದ್ರೆಯಲ್ಲಿ ಈಜಾಡಿ
ಬೇಸಿಗೆಯಲ್ಲಿ ಹಂಪಿಯ ತಾಪಮಾನ 40 ಡಿಗ್ರಿ ದಾಟುತ್ತದೆ. ಇಂಥ ಸಂದರ್ಭದಲ್ಲಿ ನೀರಿಗಿಳಿಯುವುದಕ್ಕಿಂತ ಹೆಚ್ಚು ಖುಷಿ ಕೊಡುವ ವಿಚಾರ ಯಾವುದಿದೆ? ಇಲ್ಲಿನ ಬಂಡೆಗಳ ನಡುವೆ ತುಂಬಿ ಹರಿವ ತುಂಗಭದ್ರೆಯಲ್ಲಿ ಈಜಾಡಿ. 

6. ಕರಡಿ ನೋಡಿ ಬನ್ನಿ
ನೀವು ವನ್ಯಪ್ರಾಣಿ ಪ್ರಿಯರಾದರೆ, ಇಲ್ಲಿನ ದರೋಜಿ ಸ್ಲೋತ್ ಬೇರ್ ಸ್ಯಾಂಕ್ಚುರಿಗೆ ಭೇಟಿ ನೀಡಿ. ಇಲ್ಲಿ ಸಫಾರಿ ಬುಕ್ ಮಾಡಿಕೊಂಡರೆ ಇವುಗಳ ಬಗ್ಗೆ ಗೈಡ್‌ಗಳು ಹೆಚ್ಚಿನ ಮಾಹಿತಿ ನೀಡುತ್ತಾ ತೋರಿಸುತ್ತಾ ಹೋಗುತ್ತಾರೆ.