ಮೈಸೂರು ರಾಜರ ಬೆಂಗಳೂರು ಅರಮನೆ ಈ ವಿಷ್ಯ ನಿಮ್ಗೆ ಗೊತ್ತಿರ್ಲಿಕ್ಕಿಲ್ಲ!
ಬೆಂಗಳೂರಿನಲ್ಲಿ ಪ್ರವಾಸಿಗರನ್ನು ಸೆಳೆವ ಪ್ರಮುಖ ತಾಣಗಳಲ್ಲಿ ಬೆಂಗಳೂರು ಅರಮನೆಯೂ ಒಂದು. ಆದರೆ, ಮೈಸೂರು ಅರಮನೆಯ ಬಗ್ಗೆ ತಿಳಿದಿರುವಷ್ಟು ವಿಷಯಗಳು ಬೆಂಗಳೂರ ಅರಮನೆ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ.
ಬೆಂಗಳೂರು ಅರಮನೆ ಅನ್ನೋಕಿಂತ ಬ್ಯಾಂಗ್ಳೂರ್ ಪ್ಯಾಲೇಸ್ ಎಂದರೆ ಹೆಚ್ಚು ಜನರಿಗೆ ತಿಳಿದೀತು. ಒಂದು ಕಾಲದಲ್ಲಿ ಮೈಸೂರು ಮಹಾರಾಜರ ನೆಚ್ಚಿನ ಬೇಸಿಗೆ ಮನೆಯಾಗಿದ್ದ ಬೆಂಗಳೂರು ಅರಮನೆ ಇಂದು ಅದ್ಧೂರಿ ಮದುವೆಗಳಿಗೆ ಸಾಕ್ಷಿಯಾಗುತ್ತಾ, ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿ ಉಳಿದಿದೆ. ಈಗ ಕೂಡಾ ಮೈಸೂರು ರಾಜ ಮನೆತನದ ಆಸ್ತಿಯಾಗಿಯೇ ಉಳಿದಿದೆ. ಇದರ ಕುರಿತು ಬಹುತೇಕರಿಗೆ ತಿಳಿದಿರದ 5 ವಿಷಯಗಳು ಇಲ್ಲಿವೆ.
1. ಅರಮನೆ ಮೈದಾನ
ಅರಮನೆ ಮೈದಾನವು ಬರೋಬ್ಬರಿ 453 ಎಕರೆ ಅಗಲಕ್ಕೆ ಹರಡಿದ್ದು, ತೀರಾ ಇತ್ತೀಚಿನವರೆಗೆ ಅಂತಾರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳ ಕೇಂದ್ರ ಬಿಂದುವಾಗಿತ್ತು. ಬ್ಯಾಕ್‌ಸ್ಟ್ರೀಟ್ ಬಾಯ್ಸ್, ಮೆಟಾಲಿಕಾ, ಡೀಪ್ ಪರ್ಪಲ್ ಹಾಗೂ ಇತರೆ ಪ್ರಖ್ಯಾತ ಬ್ಯಾಂಡ್‌ಗಳು ಇಲ್ಲಿ ತಮ್ಮ ಕನ್ಸರ್ಟ್ಸ್ ನೀಡಿವೆ. 1990 ಹಾಗೂ 2000ದ ದಶಕದಲ್ಲಿ ರಾಕ್ ಸಂಸ್ಕೃತಿ ಉತ್ತುಂಗದಲ್ಲಿದ್ದಾಗ ಈ ಪ್ಯಾಲೇಸ್ ಗ್ರೌಂಡ್ ರಾಕ್ ಅಭಿಮಾನಿಗಳ ಸ್ವರ್ಗವಾಗಿತ್ತು. ಅಂತಾರಾಷ್ಟ್ರೀಯ ರಾಕ್‌ಸ್ಟಾರ್‌ಗಳು ಇಲ್ಲಿ ಪರ್ಫಾರ್ಮೆನ್ಸ್ ನೀಡಲು ಕಾತರದಿಂದ ಕಾಯುತ್ತಿದ್ದರು. ದಿ ಐರನ್ ಮೈಡನ್ ಕನ್ಸರ್ಟ್ ಸುಮಾರು 38,000 ಜನರನ್ನು ಅರಮನೆ ಮೈದಾನಕ್ಕೆ ಎಳೆತಂದಿತ್ತು. ಆದರೆ, ಕೆಲ ವರ್ಷಗಳಿಂದೀಚೆಗೆ ಇಲ್ಲಿ ವಾಣಿಜ್ಯ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ.
2. ಅರಮನೆಗೆ ಪ್ರವೇಶ
ಮುಂಚೆ ಬೆಂಗಳೂರು ಅರಮನೆಯನ್ನು ಕೆಲ ಚಲನಚಿತ್ರಗಳಲ್ಲಿ, ಅದೂ ಹೌದೋ ಅಲ್ಲವೋ ಎಂಬಂತೆ ಕಣ್ತುಂಬಿಕೊಂಡು ಜನ ಹೋ ಎಂದು ಸಂತೋಷ ಪಡಬೇಕಿತ್ತು. ಏಕೆಂದರೆ, ಇಲ್ಲಿಗೆ ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ. ಆದರೆ, ಮುಂಚಿನ ಮೈಸೂರು ಮಹಾರಾಜ ಶ್ರೀಕಂಠದತ್ತ ಒಡೆಯರ್ ಈ ಅರಮನೆಯನ್ನು ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಿಸಿದರು. ಈಗ ಅರಮನೆಗೆ ಹೋಗಬೇಕೆಂದರೆ ಎಂಟ್ರೆನ್ಸ್ ಫೀ ಕಟ್ಟಿ, ಕ್ಯಾಮೆರಾ, ಫೋನ್‌ಗೆ ಎಕ್ಸ್ಟ್ರಾ ಫೀ ಕಟ್ಟಿದರಾಯಿತು. ಪ್ರವೇಶದ್ವಾರದಲ್ಲಿ ಹುಲ್ಲು ತುಂಬಿದ ಆನೆಯ ತಲೆಯನ್ನು ಕಾಣಬಹುದು.
3. ಒಳಾಂಗಣ ವಿನ್ಯಾಸ
ಬೆಂಗಳೂರು ಅರಮನೆಯ ಒಳಾಂಗಣ ವಿನ್ಯಾಸ ಕಣ್ಣಿಗೆ ಹಬ್ಬ. 1884ರಲ್ಲಿ ಬ್ರಿಟಿಷರಿಂದ ಅರಮನೆಯನ್ನು ಕೊಂಡುಕೊಂಡ ಬಳಿಕ ಮಹಾರಾಜ ಚಾಮರಾಜ ಒಡೆಯರ್ ಅರಮನೆಯ ಇಂಟೀರಿಯರ್ ಡಿಸೈನ್‌ನಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಿದ್ದು ಅವು ಇಂದಿಗೂ ಅರಮನೆಯ ಅಂದ ಹೆಚ್ಚಿಸುತ್ತಾ ಪ್ರವಾಸಿಗರಿಗೆ ಖುಷಿ ನೀಡುತ್ತಿವೆ. ಬೃಹತ್ ಲೈಟುಗಳು, ಮರದ ಮೆಟ್ಟಿಲು, ಕಾರಿಡಾರ್‌ನ ಉದ್ದಕೂ ಹರಡಿರುವ ಬೃಹತ್ ಪೇಂಟಿಂಗ್‌ಗಳು, ಫರ್ನಿಚರ್‌ಗಳು - ಎಲ್ಲವೂ ರಾಜೋಚಿತವಾಗಿ ಅರಮನೆಯನ್ನು ಅಲಂಕರಿಸಿವೆ. ರಾಜ ಮನೆತನಗಳು ಧರಿಸುತ್ತಿದ್ದ ಬಟ್ಟೆಗಳು ಪ್ರವಾಸಿಗರ ಗಮನವನ್ನು ತಕ್ಷಣಕ್ಕೆ ಸೆಳೆಯುತ್ತವೆ. ಇಲ್ಲಿರುವ ಮರದ ಸೋಫಾದಲ್ಲಿ ತೂಕದ ತಕ್ಕಡಿಯನ್ನು ಕೂಡಾ ಅಳವಡಿಸಲಾಗಿರುವುದು ವಿಶೇಷ. ಇದು ಬಹುಷಃ ರಾಜ ಅಥವಾ ರಾಣಿಯು ತಮ್ಮ ತೂಕವನ್ನು ಗಮನದಲ್ಲಿಟ್ಟುಕೊಳ್ಳುವಂತೆ ಎಚ್ಚರಿಸಲು ಮಾಡಿದ ವಿಧಾನವಾಗಿದೆ. ಆದರೆ, ಇಂದು ತೂಕದ ಮೆಷಿನ್ ಕೆಲಸ ಮಾಡುತ್ತಿಲ್ಲವಾದರೂ, ಸೋಫಾ ನೋಡುತ್ತಿದ್ದಂತೆ ಈ ಐಡಿಯಾ ನಿಮ್ಮ ಗಮನ ಸೆಳೆಯಬಹುದು.
4. ಬ್ರಿಟಿಷರ ನಿರ್ಮಾಣ
ಇಂದಿನ ಸೆಂಟ್ರಲ್ ಕಾಲೇಜು ಎಂದು ಕರೆಸಿಕೊಳ್ಳುವ, ಅಂದಿನ ಸೆಂಟ್ರಲ್ ಹೈ ಸ್ಕೂಲ್‌ನ ಮೊದಲ ಪ್ರಿನ್ಸಿಪಾಲ್ ಆಗಿದ್ದ ರೆವೆರೆಂಡ್ ಜೆ. ಗ್ಯಾರೆಟ್ ಈ ಅರಮನೆಯನ್ನು ಕಟ್ಟಿಸಿದವರು. 1826ರಲ್ಲಿ ಮೈಸೂರು ಸಾಮ್ರಾಜ್ಯ ಬ್ರಿಟಿಷರ ಆಡಳಿತಕ್ಕೊಳಪಟ್ಟಿದ್ದ ಸಂದರ್ಭದಲ್ಲಿ, ಚಿಕ್ಕ ಚಾಮರಾಜೇಂದ್ರ ಒಡೆಯರ್ ಬ್ರಿಟಿಷ್ ಅಧಿಕಾರಿಗಳಿಂದ ಸಲಹೆ ಪಡೆಯುತ್ತಿದ್ದ ಕಾಲದಲ್ಲಿ, ಅವರಿಗಾಗಿ ಈ ಬೆಂಗಳೂರು ಅರಮನೆಯ ನಿರ್ಮಾಣವಾಗಿದೆ.
ಅಧ್ಯಾತ್ಮ ಅರಸುವವರಿಗೆ ಬೆಸ್ಟ್ ಆಶ್ರಮಗಳಿವು
5. ವಾಸ್ತುಕಲೆ
ಅರಮೆನೆಯ ಹೊರಾಂಗಣ ವಿನ್ಯಾಸವು ಟ್ಯೂಡರ್ ಸ್ಟೈಲ್ ಪ್ರತಿಬಿಂಬಿಸುತ್ತಿದೆ. ಇದು ಇಂಗ್ಲೆಂಡ್‌ನ ವಿಂಡ್ಸರ್ ಅರಮನೆಯ ಶೈಲಿಯಾಗಿದೆ. ಇನ್ನು ಒಳಾಂಗಣವು ಯೂರೋಪಿಯನ್ ಶೈಲಿಯ ವಾಸ್ತುಕಲೆಯಿಂದ ಕೂಡಿದೆ. ದರ್ಬಾರ್ ಹಾಲ್ ಹಾಗೂ ನೃತ್ಯ ಪ್ರಾಂಗಣಗಳು ಸ್ಪ್ಯಾನಿಳ್ ಬೆಂಚ್‌ಗಳನ್ನು ಹೊಂದಿದ್ದು, ಇವು ಅರಮನೆಯ ಪ್ರಮುಖ ಆಕರ್ಷಣೆಗಳೆನಿಸಿಕೊಂಡಿವೆ.