ನಿಂಬೆಹಣ್ಣು ವಿಟಮಿನ್ ಸಿಯ ಕಣಜ ಮಾತ್ರವಲ್ಲ, ಅಡುಗೆಯ ರುಚಿಯನ್ನು ಆಹಾದಿಂದ ವಾವ್‌ವರೆಗೆ ಹೆಚ್ಚಿಸುವ ಛಾತಿ ಇದಕ್ಕಿದೆ. ನಿಂಬೆಹಣ್ಣು ಕೇವಲ ಪರಿಮಳದಿಂದಲೇ ವಾಕರಿಕೆ ಹೋಗಿಸುತ್ತದೆ, ರುಚಿಯಿಂದ ಸ್ವಾದ ಹೆಚ್ಚಿಸುತ್ತದೆ, ಗುಣದಿಂದ ಹಲವಾರು ಆರೋಗ್ಯಲಾಭಗಳನ್ನು ತರುತ್ತದೆ. ಇಂಥ ಈ ನಿಂಬೆಹಣ್ಣಿನ ಉಪಯೋಗ ಇಷ್ಟಕ್ಕೇ ಸೀಮಿತವಾಗಿಲ್ಲ. ಅಡುಗೆ ಮನೆಯಲ್ಲಿ ಅವು ಹಲವು ರೂಪಾಂತರ ತಾಳಿ, ಬೇರೆ ಬೇರೆ ಕೆಲಸಗಳನ್ನು ಮಾಡಬಲ್ಲವು. ವಾಸನೆ ತೆಗೆಯುವುದರಿಂದ ಹಿಡಿದು ಪಾತ್ರೆಯನ್ನು ಫಳಫಳ ಎನಿಸುವವರೆಗೆ ನಿಂಬೆಹಣ್ಣು ಬದುಕನ್ನು ಸುಲಭವಾಗಿಸುತ್ತದೆ. 

ಮೈಕ್ರೋವೇವ್ ಕ್ಲೀನ್ ಮಾಡಲು
ಒಂದೂವರೆ ಕಪ್ ನೀರಿಗೆ 3 ಚಮಚ ನಿಂಬೆಹಣ್ಣಿನ ರಸ ಹಾಕಿ. ಇದನ್ನು ಮೈಕ್ರೋವೇವ್‌ನಲ್ಲಿಟ್ಟು 5-10 ನಿಮಿಷ ಹೈ ಮೋಡ್‌ನಲ್ಲಿ ಕುದಿಸಿ. ಇದು ಮೈಕ್ರೋವೇ‌ವ್‌ನೊಳಗೆ ಕಟ್ಟಿಕೊಂಡ ಗ್ರೀಸ್ ಅಥವಾ ಇತರೆ ಜಿಡ್ಡುಗಳನ್ನು ಲೂಸಾಗಿಸಿ ನೀರು ಮಾಡುತ್ತದೆ. ಒಳ್ಳೆಯ ಟವೆಲ್‌ನಿಂದ ಒರೆಸಿದರೆ ಸಾಕು. 

ಫೇಷಿಯಲ್‌ಗೂ ಬೆಸ್ಟ್ ಲಿಂಬೆ ರಸ

ಅಕ್ಕಿ ಅಂಟಿಕೊಳ್ಳದಂತೆ ನೋಡಿಕೊಳ್ಳುತ್ತದೆ
ಅನ್ನ ಅಂಟುಅಂಟಾಗಿ ಯಾವುದರ ಜೊತೆ ಕಲೆಸಿದರೂ ರುಚಿ ತಿಳಿಯುತ್ತಿಲ್ಲವೇ? ಹಾಗಿದ್ದರೆ, ಅನ್ನ ತಯಾರಿಸುವಾಗ ನೀರಿಗೆ 1 ಚಮಚ ನಿಂಬೆರಸ ಹಾಕುವುದರಿಂದ ಅದು ಅನ್ನ ಅಂಟಿಕೊಳ್ಳದಂತೆ ನೋಡಿಕೊಳ್ಳುತ್ತದೆ. ಜೊತೆಗೆ ಅನ್ನಕ್ಕೆ ಹೆಚ್ಚಿನ ಅರೋಮಾವನ್ನು ನೀಡುತ್ತದೆ. 

ಚಾಪಿಂಗ್ ಬೋರ್ಡ್ ಕ್ಲೀನ್ ಮಾಡಲು
ಚಾಪಿಂಗ್ ಬೋರ್ಡ್ ತಂದ ಕೆಲವೇ ದಿನದಲ್ಲಿ ಕಪ್ಪಗಾಗಿ ತರಕಾರಿ ಹಣ್ಣುಗಳನ್ನು ಕತ್ತರಿಸಲು ಕಿರಿಕಿರಿಯಾಗತೊಡಗುತ್ತದೆ. ಇದಕ್ಕಾಗಿ ನಿಂಬೆಹಣ್ಣಿನಿಂದ ಸ್ವಚ್ಚಗೊಳಿಸಿ. ಇದು ಕಪ್ಪನ್ನು ತೆಗೆಯುವ ಜೊತೆಗೆ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ಅದರ ರಸವನ್ನು ಬೋರ್ಡ್ ಮೇಲೆ ಹಿಂಡಿ. ಇದನ್ನು ಒರಟಾದ ಬಟ್ಟೆಯಿಂದ ಒರೆಸಿ. ಹತ್ತು ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ಆಹಾರದ ಕಲೆಗಳು ಮಾಯವಾಗಲಾರಂಭಿಸುತ್ತವೆ. 

ದುರ್ವಾಸನೆಯಿಂದ ಮುಕ್ತಿ
ಬೆಳ್ಳುಳ್ಳಿ ಬಿಡಿಸಿದ ಬಳಿಕ, ಈರುಳ್ಳಿ ಹೆಚ್ಚಿದ ಮೇಲೆ ಕೈ ಅದರದೇ ವಾಸನೆ ಬರುತ್ತಿರುತ್ತದೆ. ಇದರಿಂದ ರಗಳೆಯೆನಿಸುತ್ತದೆ. ಅದಕ್ಕಾಗಿ ಸ್ವಲ್ಪ ನಿಂಬೆರಸವನ್ನು ಬಟ್ಟಲಿನಲ್ಲಿರುವ ಬಿಸಿನೀರಿಗೆ ಹಾಕಿ. ಅದರಲ್ಲಿ ಕೈ ಅದ್ದಿ ತೊಳೆಯಿರಿ. 

ಫ್ರಿಡ್ಜ್ ಫ್ರೆಶ್ ಆಗಿಸಿ
ನಿಮ್ಮ ಫ್ರಿಡ್ಜ್ ಅದರಲ್ಲಿರುವ ಹತ್ತಾರು ಪದಾರ್ಥಗಳಿಂದಾಗಿ ವಾಸನೆ ಬರುತ್ತಿದ್ದರೆ, ಒಂದು ಚಮಚ ನಿಂಬೆರಸಕ್ಕೆ ಹತ್ತಿಯ ತುಂಡನ್ನು ಅದ್ದಿ ಫ್ರಿಡ್ಜ್‌ನಲ್ಲಿಡಿ. ಇದು ಫ್ರಿಡ್ಜ್ ಸುಗಂಧ ಬೀರುತ್ತಾ ಸ್ವಚ್ಛವಾಗಿರುವಂತೆ ನೋಡಿಕೊಳ್ಳುತ್ತದೆ. 

ಪಾತ್ರೆಗಳು ಫಳಫಳ
ನಿಮ್ಮ ಮನೆಯ ಕಾಪರ್ ಹಾಗೂ ಬೆಳ್ಳಿಯ ಪಾತ್ರೆಗಳನ್ನು ನಿಂಬೆರಸದಿಂದ ಉಜ್ಜಿ. ರಾತ್ರಿಯಿಡೀ ಹಾಗೆಯೇ ಬಿಡಿ. ಬೆಳಗ್ಗೆ ಎದ್ದು ಸ್ವಲ್ಪ ಬೂದಿಯಿಂದ ತಿಕ್ಕಿ ತೊಳೆಯಿರಿ. ನಿಮ್ಮ ಹಳೆಯ ಪಾತ್ರೆಗಳು ಹಿಂದೆಂದೂ ಇಲ್ಲದಷ್ಟು ಹೊಳಪಿನಿಂದ ಕಂಗೊಳಿಸುತ್ತವೆ. 

ಸಿಂಕ್ ಕ್ಲೀನರ್
ನಿಂಬೆ ಹಣ್ಣು ಹಿಂಡಿ ಉಳಿದ ತುಂಡನ್ನು ನಿಮ್ಮ ಸಿಂಕ್‌ಗೆ ಹಾಕಿ ತಿಕ್ಕಿ. ಇದು ನೀರಿನ ಕಲೆಗಳನ್ನು ತೆಗೆದು ಸಿಂಕ್ ಹೊಳೆಯುವಂತೆ ಮಾಡುತ್ತದೆ. 

ಹಣ್ಣುಗಳ ತಾಜಾತನಕ್ಕೆ
ಸೇಬು, ಬೆಣ್ಣೆ ಹಣ್ಣು ಮುಂತಾದವು ಹೆಚ್ಚಿಟ್ಟ ಕೆಲ ಸಮಯದಲ್ಲೇ ಬಣ್ಣಗೆಡುತ್ತವೆ. ಇದರಿಂದ ಅವನ್ನು ತಿನ್ನಲು ಮನಸ್ಸು ಬಾರದು. ಹೀಗೆ ಹೆಚ್ಚಿಟ್ಟ ಹಣ್ಣುಗಳು ಬಣ್ಣಗೆಡದಂತೆ ಫ್ರೆಶ್ ಆಗಿರಲು ಅವಕ್ಕೆ ಸ್ವಲ್ಪ ನಿಂಬೆರಸವನ್ನು ಹಚ್ಚಿ. 

ಕೋಸು ವಾಸನೆ ತಡೆಯಲು
ಹೂಕೋಸು ಬೇಯಿಸುವಾಗ ಬರುವ ವಾಸನೆ ತಡೆಯಲು ಅದಕ್ಕೆ ಸ್ವಲ್ಪ ನಿಂಬೆರಸ ಹಾಕಿ. ಆಗ ಮನೆಯೆಲ್ಲ ಕೋಸು ವಾಸನೆ ಹರಡುವುದಿಲ್ಲ.

ಸೌಂದರ್ಯ ಹೆಚ್ಚಿಸೋ ಸಿಪ್ಪೆಗಳಿವು...