ಅ ಪರಿಚಿತ ವ್ಯಕ್ತಿಯೊಬ್ಬ ಎದುರಾಗುವ ಸನ್ನಿವೇಶ ನೆನೆಸಿಕೊಳ್ಳಿ. ಅವನ ಉಡುಗೆ, ಮಾತಾಡುವ ಕ್ರಮ, ನೋಟ ಇತ್ಯಾದಿಗಳನ್ನೇ ಗಮನಿಸಿ ಅವನ ಸ್ವಭಾವ ಹೇಗಿರಬಹುದು, ಯಾವ ಧರ್ಮ, ಜಾತಿಗೆ ಸೇರಿದವನಿರಬಹುದು, ಮಿಡ್ಲ್ ಕ್ಲಾಸಾ, ಬಡವನಾ ಇತ್ಯಾದಿಗಳನ್ನು ಅಳೆದುಬಿಡುತ್ತೇವೆ. ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಆ ಗ್ರಹಿಕೆಯೇ ಕೊನೆಯವರೆಗೂ ಉಳಿದುಬಿಡುತ್ತದೆ. ಉಳಿದವರ ಕಣ್ಣಲ್ಲೂ ನಮ್ಮ ಚಿತ್ರ ಹಾಗೇ ಉಳಿದುಕೊಂಡು ಬಿಟ್ಟಿರುತ್ತದೆ. ಅವರು ನಮ್ಮ ಜೊತೆಗೆ ಮಾತನಾಡುವಾಗಲೆಲ್ಲ ತಮ್ಮ ಹಿಂದಿನ ಗ್ರಹಿಕೆಯ ಆಧಾರದ ಮೇಲೆ ಮಾತನಾಡುತ್ತಾರೆ. ಇದು ನಮ್ಮ ಭವಿಷ್ಯದ ಮೇಲೆ ಬೀರುವ ಪ್ರಭಾವವೂ ಚಿಕ್ಕದಲ್ಲ. ಹಾಗಿದ್ದರೆ ಮೊದಲ ಭೇಟಿಯಲ್ಲಿ ನಮ್ಮ ನಿಲುವು, ವರ್ತನೆ ಹೇಗಿರಬೇಕು..

ಒಟ್ಟಿಗೆ ಕೂತು ಉಂಡರೆ ಕುಟುಂಬದಲ್ಲಿ ಒಗ್ಗಟ್ಟು !

ಆಸ್ಟ್ರೇಲಿಯಾದ ಲೀಡರ್‌ಶಿಪ್ ಕೋಚ್ ಕ್ಯಾಥರಿನ್ ಮೊಲ್ಲಾಯ್ ಇತ್ತೀಚೆಗೆ ಮುಂಬೈಯಲ್ಲಿ ಒಂದು ಪುಸ್ತಕ ಬಿಡುಗಡೆ ಮಾಡಿದರು. ‘ದಿ ಮಿಲಿಯನ್ ಡಾಲರ್ ಹ್ಯಾಂಡ್‌ಶೇಕ್’ ಅಂತ ಅದರ ಹೆಸರು. ಎದುರಿಗಿರುವ ವ್ಯಕ್ತಿಯಲ್ಲಿ ನಮ್ಮ ಬಗ್ಗೆ ಪಾಸಿಟಿವ್ ಅಭಿಪ್ರಾಯ ಬೆಳೆಯಬೇಕು ಅಂದರೆ ನಮ್ಮ ಬಾಡಿ ಲ್ಯಾಂಗ್ವೇಜ್‌ನಲ್ಲಿ ಪಾಸಿಟಿವ್ ಅಪ್ರೋಚ್ ಇರಬೇಕು ಅಂತ ಹೇಳ್ತಾರೆ ಮೊಲ್ಲಾಯ್.

- ನಿಮ್ಮ ತಾಕತ್ತೇನು ಅನ್ನೋದನ್ನು ತಿಳಿಸಬೇಕು 

ಮೊದಲ ಭೇಟಿಯಲ್ಲಿ ಎದುರಿಗಿರುವ ವ್ಯಕ್ತಿಗೆ ನಮ್ಮ ಶಕ್ತಿಯ ಬಗ್ಗೆ ತಿಳಿಯಬೇಕೇ ಹೊರತು ವೀಕ್‌ನೆಸ್ ಬಗೆಗಲ್ಲ. ನೀವೊಂದು ಇಂಟರ್‌ವ್ಯೆಗೆ ಹೋಗಿದ್ದೀರಿ ಅಂದ್ಕೊಳ್ಳಿ. ಎದುರಿಗೆ ಇರುವ ವ್ಯಕ್ತಿ ನಿಮ್ಮ ಭವಿಷ್ಯದ ಬಾಸ್ ಆಗಲಿರುವವರು. ಆ ಹೊತ್ತಿಗೆ ಎಂಥವರಿಗಾದರೂ ನರ್ವಸ್ ಆಗುತ್ತೆ. ಮೊದಲು ದೇಹವನ್ನು ಸ್ಟ್ರೈಟ್ ಮಾಡ್ಕೊಳ್ಳಿ. ಗಲ್ಲ ತಗ್ಗಿಸಿ, ಆತ್ಮವಿಶ್ವಾಸದ ಕಿರುನಗೆ ತುಟಿಗಳಲ್ಲಿ ತಂದುಕೊಳ್ಳಿ. ದೃಷ್ಟಿ ತಪ್ಪಿಸದೇ ಮಾತನಾಡಿ. ಇದರಿಂದ ನಿಮ್ಮ ಮೇಲೆ ನಿಮಗೆ ಹಿಡಿತ ಸಿಗುತ್ತದೆ. ಇತರರಿಗೂ ನೀವು ಕಾನ್ಫಿಡೆಂಟ್ ಆಗಿ ಕಾಣ್ತೀರಿ.

- ನೀವು ಬಾಗಿದರೆ ಅವರು ಬಾಗಲೇ ಬೇಕು

ನಿಮ್ಮ ಮಕ್ಕಳಿಗೆ ಈ ಗುಣಗಳನ್ನು ಹೇಳಿಕೊಟ್ಟಿದ್ದೀರಾ?

ಮಹತ್ವದ ವಿಚಾರಗಳಲ್ಲಿ ನಿಮ್ಮ ಮಾತಿನ ಬಗ್ಗೆ ಸಣ್ಣ ನೆಗೆಟಿವ್ ಇಮೇಜ್ ಸೃಷ್ಟಿಯಾಗಿದೆ ಅಂತಿಟ್ಟುಕೊಳ್ಳಿ. ಇದರಿಂದಾಗಿ ಅಂದುಕೊಂಡ ಹಾಗೆ ಆತ್ಮವಿಶ್ವಾಸದಿಂದ ಮಾತನಾಡಲಾಗುತ್ತಿಲ್ಲ. ಅಂಥ ಸಂದರ್ಭದಲ್ಲಿ ಚೀಟಿ, ಪೆನ್ನು ತೆಗೆದುಕೊಳ್ಳಿ. ಮುಂದಕ್ಕೆ ಬಾಗಿ ಈ ವಿಷಯಕ್ಕೆ ಸಂಬಂಧಿಸಿದಂತೆ ಏನೋ ಲೆಕ್ಕಾಚಾರ ಮಾಡುವಂತೆ ನೋಟ್ ಮಾಡಿ. ಮತ್ತೆ ಅವರತ್ತ ಬಾಗಿ ನಿಮ್ಮ ಸ್ಪಷ್ಟ ಅಭಿಪ್ರಾಯ ಹೇಳಿ. ನೀವು ಬಾಗಿದರೆ ಅವರೂ ಬಾಗಲೇಬೇಕಾಗುತ್ತದೆ. ನಿಮ್ಮ ಮಾತು ಕೇಳಲೇಬೇಕಾಗುತ್ತದೆ. ನಡೆಯುತ್ತ ಮಾತನಾಡುತ್ತಿರುವಾಗ ಮುಂದೆ ಬಾಗಿ ಏನನ್ನೋ ಬೊಟ್ಟು ಮಾಡಿ ತೋರಿಸಿ, ಆಮೇಲೆ ಮಾತು ಮುಂದುವರಿಸಿ. ಇಷ್ಟೊತ್ತಿಗೆ ಕಳೆದುಕೊಂಡ ಆತ್ಮವಿಶ್ವಾಸ ಮತ್ತೆ ಬಂದಿರುತ್ತೆ. 

- ಗಮನಿಸುವಿಕೆ ಬಹಳ ಮುಖ್ಯ

ಒಬ್ಬ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಬೇಕಾದರೆ ಸೂಕ್ಷ್ಮವಾಗಿ ಆತನನ್ನು ಗಮನಿಸುವುದು ಮುಖ್ಯವಾಗುತ್ತೆ. ಈ ಅಬ್ಸರ್‌ವೇಶನ್‌ನಲ್ಲಿ ಆತನ ಸ್ವಭಾವ ಎಂಥಾದ್ದು ಅನ್ನೋದರ ಅರಿವಾಗುತ್ತೆ. ಆತ ಏನು ಅಂತ ಗೊತ್ತಾದರೆ ಮತ್ತೆ ಮುಂದುವರಿಯೋದು ಸುಲಭ. ಹಾಗಾಗಿ ಅಪರಿಚಿತ ವ್ಯಕ್ತಿಯ ಭೇಟಿಯ ಮೊದಲ ೬೦ ನಿಮಿಷಗಳನ್ನು ಗಮನಿಸುವಿಕೆಗೆ ಮೀಸಲಿಡಿ. ಅಷ್ಟರಲ್ಲಿ ನಮ್ಮ ನಿಲುವನ್ನು ಆತನಿಗೆ ಹೇಗೆ ಮನದಟ್ಟು ಮಾಡುವುದು ಅನ್ನೋದು ತಿಳಿಯುತ್ತದೆ. 

-  ಕೈ ಕುಲುಕೋದು

ನಮ್ಮ ಪರಿಚಯ ಹೇಳಿಕೊಂಡು ಶೇಕ್ ಹ್ಯಾಂಡ್‌ಗೆ ಕೈ ಚಾಚುವುದು ನಿಮ್ಮೆಡೆಗೆ ಆ ವ್ಯಕ್ತಿ ಪಾಸಿಟಿವ್ ಆ್ಯಟಿಟ್ಯೂಡ್ ಬೆಳೆಸಿಕೊಳ್ಳಲು ಸಹಕಾರಿ. ಬಿಗಿಯಾದ ಶೇಕ್‌ಹ್ಯಾಂಡ್ ಉತ್ತಮ. ಆತನ ಕೈಯನ್ನು ತನ್ನತ್ತ ಎಳೆದು ಶೇಕ್‌ಹ್ಯಾಂಡ್ ಮಾಡೋದು ಎದುರಿಗಿರುವ ವ್ಯಕ್ತಿಗೆ ನಮ್ಮ ಬಗ್ಗೆ ಗೊಂದಲ ಹುಟ್ಟುವಂತೆ ಮಾಡುತ್ತದೆ. ಶೇಕ್‌ಹ್ಯಾಂಡ್‌ಗೆ ಕೈಯನ್ನು ಅಗಲಕ್ಕೆ ವಿಸ್ತರಿಸಿದಷ್ಟು ಅದು ನಿಮ್ಮ ಶಕ್ತಿಯನ್ನು, ಔದಾರ‌್ಯವನ್ನೂ ತೋರಿಸುತ್ತದೆ ಅನ್ನುತ್ತಾರೆ ಕ್ಯಾಥರಿನ್ ಮೊಲ್ಲಾಯ್.

ಮೊದಲ ಭೇಟಿ: ಆಕೆ ಅವನಲ್ಲಿ ಗಮನಿಸುವುದೇನು?

- ಪ್ರಥಮ ಚುಂಬನ ದಂತಭಗ್ನವಾಗದಿರಲಿ

ಮೊದಲ ಭೇಟಿ ಆಹ್ಲಾದಕರವಾಗಿಲ್ಲ ಅಂತಿಟ್ಟುಕೊಳ್ಳಿ. ಹೆಚ್ಚು ನಿರಾಸೆ ಬೇಡ. ಮುಂದಿನ ಭೇಟಿಗೆ ಒಂದು ಮಾರ್ಗ ಹುಡುಕಿ. ಕಾಫಿಗೋ, ಫಂಕ್ಷನ್‌ಗೋ ಆಹ್ವಾನಿಸಿ. ಏನಾದರೂ ಸರ್‌ಪ್ರೈಸ್ ಇರಲಿ. ಅವರ ಆತ್ಮೀಯರು ನಿಮ್ಮ ಸ್ನೇಹಿತರಾಗಿದ್ದರೆ ಅವರನ್ನು ಕರೆಸಬಹುದು. ಆ ಸ್ನೇಹಿತ ನಿಮ್ಮ ಬಗ್ಗೆ ಒಳ್ಳೆಯ ಮಾತು ಹೇಳಿದರೆ ಆತನ ಮನೋಭಾವ ಬದಲಾಗಬಹುದು. ಆತ ಬಾಸ್ ಅಥವಾ ಆ ಲೆವೆಲ್‌ನವನಾಗಿದ್ದರೆ ನಿಮ್ಮ ಸಾಮರ್ಥ್ಯ ಆತನಿಗೆ ತಿಳಿಯುವಂಥಾ ಪ್ಲಾಟ್‌ಫಾರ್ಮ್ ಸೃಷ್ಟಿಸಲು ಪ್ರಯತ್ನಿಸಿ. ಇದ್ಯಾವುದೇ ಆಗದಿದ್ದರೆ ಇನ್ನೊಮ್ಮೆ ಮಾತನಾಡಿಸಲು ಪ್ರಯತ್ನಿಸಿ, ಅಲ್ಲಿ ಹಿಂದಿನಂತೆ ಯಾಮಾರಬೇಡಿ.