ಒಟ್ಟಿಗೆ ಕುಳಿತು ಉಣ್ಣುವ ಕುಟುಂಬ ಒಗ್ಗಟ್ಟಿನಿಂದಿರುತ್ತದೆ ಎಂಬ ಅನುಭವದ ಮಾತೇ ಇದೆ. ಆದರೆ, ಇಂದು ಸಮಯದ ಹಿಂದೆ ಪ್ರತಿಯೊಬ್ಬರೂ ಓಡುತ್ತಿರುವಾಗ ಒಟ್ಟಿಗೆ ಕುಳಿತು ಉಣ್ಣುವುದು ಅಪರೂಪಕ್ಕೊಮ್ಮೆ ಯೋಜಿಸಿ ಮಾಡಬೇಕಾದ ಕರ್ಮ. ಇದರಿಂದ ನಾವು ಎಷ್ಟೆಲ್ಲ ಕಳೆದುಕೊಳ್ಳುತ್ತಿದ್ದೇವೆ ಎಂಬುದು ನಮಗೇ ತಿಳಿದಿಲ್ಲ. ಕುಟುಂಬವೇ ನಮ್ಮೆಲ್ಲ ಸಂತೋಷದ ಮೂಲ. ಅದು ನಮ್ಮನ್ನು ಜೀವನದ ಎಲ್ಲ ಸವಾಲುಗಳನ್ನು ಸಲೀಸಾಗಿ ಸ್ವೀಕರಿಸಲು ಉತ್ತೇಜಿಸುತ್ತದೆ. ಇಂಥ ಕುಟುಂಬದೊಂದಿಗೆ ಒಟ್ಟಾಗಿ ಸೇರಲು ಇರುವ ಅತ್ಯಮೂಲ್ಯ ಸಮಯವೆಂದರೆ ಅದು ಊಟದ ಸಮಯ. ಹೀಗೆ ಕುಟುಂಬಸ್ಥರೆಲ್ಲರೂ ಒಟ್ಟಾಗಿ ಕುಳಿತು ಊಟ ಮಾಡುವುದರಿಂದ ಇರುವ ಪ್ರಯೋಜನಗಳೇನೇನು ಗೊತ್ತಾ?

1. ಉತ್ತಮ ಶಿಷ್ಟಾಚಾರ
ಪ್ರಪಂಚದ ಸಂತೋಷದ ವಿಷಯಗಳಲ್ಲೊಂದು ತಿನ್ನುವುದು. ಹೀಗಾಗಿ, ಕುಟುಂಬವು ಒಟ್ಟಾಗಿ ಕುಳಿತು ಊಟ ಮಾಡಿದಾಗ ಆ ಸಮಯ ಸಂತೋಷವಾಗಿ ಕಳೆಯುತ್ತದೆ. ಪೋಷಕರೊಂದಿಗೆ ಕುಳಿತು ಊಟ ಮಾಡುವ ಮಕ್ಕಳ ಎಮೋಶನಲ್ ಹೆಲ್ತ್ ಹೆಚ್ಚು ಸ್ಟ್ರಾಂಗ್ ಆಗಿರುತ್ತದೆ. ಅಲ್ಲದೆ ಈ ಮಕ್ಕಳಲ್ಲಿ ಉತ್ತಮ ಶಿಷ್ಟಾಚಾರ ಹಾಗೂ ನಡುವಳಿಕೆ ಬೆಳೆದು ಬರುತ್ತದೆ. 

ನಿಮ್ಮ ಫ್ರಿಡ್ಜೊಳಗೆ ಏನೇನಿರಬೇಕು!

2. ಉತ್ತಮ ಆಹಾರ
ಒಬ್ಬರಿಗೇ ಅಡಿಗೆ ಮಾಡುವಾಗ ಅಯ್ಯೋ, ಯಾರು ಮಾಡುತ್ತಾರೆ, ಮ್ಯಾಗಿ ಮಾಡಿಕೊಂಡು ತಿಂದರಾಯಿತು ಎಂದುಕೊಳ್ಳುತ್ತೀರಿ. ಆದರೆ ಕುಟುಂಬಕ್ಕೆಲ್ಲ ಅಡುಗೆ ಮಾಡಬೇಕೆಂದಾಗ ನೀವು ಹೆಚ್ಚು ಆರೋಗ್ಯಯುತವಾದ ವೈವಿಧ್ಯಮಯ ಆಹಾರ ತಯಾರಿಸುತ್ತೀರಿ. ಇದರಿಂದ ಜಂಕ್ ಫುಡ್ ಸೇವನೆ ಕಡಿಮೆಯಾಗುತ್ತದೆ. ಜೊತೆಗೆ, ಮಕ್ಕಳು ಪೋಷಕರನ್ನು ಗಮನಿಸುತ್ತಿರುತ್ತಾರೆ. ಅವರ ಆಹಾರ ಕ್ರಮವನ್ನೇ ಅನುಸರಿಸುವ ಸಂಭವ ಹೆಚ್ಚು. ಪೋಷಕರು ಉತ್ತಮ ಆಹಾರ ತಿನ್ನುವಾಗ ಮಕ್ಕಳು ಕೂಡಾ ಅದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. 

3. ಹೊಸ ಆಹಾರ ಸೇವನೆ
ಮಕ್ಕಳೊಂದಿಗೆ ಊಟ ಮಾಡಿದಾಗ, ಮಕ್ಕಳು ತಮ್ಮ ಪೋಷಕರು ಎಲ್ಲ ಬಗೆಯ ಆಹಾರವನ್ನು ಸೇವಿಸುವುದನ್ನು ನೋಡಿ, ತಾವೂ ಹೊಸ ಆಹಾರಗಳನ್ನು ತಿಂದು ನೋಡುವ ಮನಸ್ಸು ಮಾಡುತ್ತವೆ. ಅರು ಬೆಳೆದಂತೆಲ್ಲ ತಿನ್ನುವ ವಿಷಯಕ್ಕೆ ರಗಳೆ ಕಡಿಮೆ ಇರುತ್ತದೆ. 

ನಿಮ್ಮ ವ್ಯಕ್ತಿತ್ವಕ್ಕೆ ಹೊಳಪು ನೀಡುವ 8 ಹವ್ಯಾಸಗಳು

4. ಕುಟುಂಬ ಸದಸ್ಯರೊಂದಿಗೆ ಉತ್ತಮ ಬಾಂಡಿಂಗ್
ಕುಟುಂಬವು ಒಟ್ಟಿಗೆ ಕುಳಿತು ಊಟ ಮಾಡುವಾಗ ಎಲ್ಲರೂ ಹಲವಾರು ವಿಷಯ ಚರ್ಚಿಸುತ್ತೀರಿ. ಎಲ್ಲರ ಬದುಕಿನಲ್ಲೂ ಪ್ರತಿದಿನ ಏನೇನಾಗುತ್ತಿದೆ ಎಂಬ ಅರಿವು ಇತರ ಎಲ್ಲರಿಗೂ ಇರುತ್ತದೆ. ಇದರಿಂದ ನಮಗಾಗಿ ಇಷ್ಟು ಜನವಿದ್ದಾರೆ, ನಾವೆಲ್ಲ ಒಂದೇ ಎಂಬ ಭಾವನೆ ಬೆಳೆಯುತ್ತದೆ. ಮಗುವಿಗೆ ಇದು ರಕ್ಷಣೆಯ ಭಾವ ನೀಡುತ್ತದೆ. 

5. ಶಾಲೆಯಲ್ಲಿ ಉತ್ತಮ ಫಲಿತಾಂಶ
ವಾರದಲ್ಲಿ ಕನಿಷ್ಠ 7 ಬಾರಿ ಕುಟುಂಬ ಸದಸ್ಯರೆಲ್ಲರೊಂದಿಗೆ ಕುಳಿತು ಉಣ್ಣುವ ಮಕ್ಕಳು ಶಾಲೆಯಲ್ಲಿ ಹೆಚ್ಚು ಚಟುವಟಿಕೆಯಿಂದಿದ್ದು, ಉತ್ತಮ ಫಲಿತಾಂಶ ಪಡೆಯುತ್ತಾರೆ ಎಂಬುದನ್ನು ಅಧ್ಯಯನಗಳು ಸಾಬೀತುಪಡಿಸಿವೆ. ಅಂದರೆ ಒಟ್ಟಾಗಿ ಕುಳಿತು ಊಟ ಮಾಡುವುದರಿಂದ ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆ ಹೆಚ್ಚುವುದರೊಂದಿಗೆ ಶೈಕ್ಷಣಿಕವಾಗಿಯೂ ಅವರು ಗೆಲ್ಲುತ್ತಾರೆ ಎಂದಾಯಿತು. 

6. ತೂಕ ನಿರ್ವಹಣೆ
ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿದಾಗ ಸಾಮಾನ್ಯವಾಗಿ ಉತ್ತಮ ಆಹಾರವನ್ನೇ ಸೇವಿಸುವುದರಿಂದ ತೂಕ ಏರಿ ಬೊಜ್ಜು ಬರುವ ತಲೆಬಿಸಿ ಕಡಿಮೆ. ಅದರಲ್ಲೂ ಮಕ್ಕಳು ಏನು ತಿನ್ನುತ್ತಿದ್ದಾರೆಂಬುದರ ಕಡೆಗೆ ಪೋಷಕರ ಗಮನವಿದ್ದಾಗ, ಕೆಟ್ಟ ಆಹಾರ ಸೇವನೆ ಹವ್ಯಾಸವನ್ನು ತಪ್ಪಿಸಿ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಬಹುದು. 

7. ಒತ್ತಡ ಕಡಿಮೆ
ದೊಡ್ಡವರಂತೆ ಮಕ್ಕಳಿಗೂ ಅವರದೇ ಆದ ಒತ್ತಡಗಳಿರುತ್ತವೆ. ಒತ್ತಡವು ವ್ಯಕ್ತಿಯ ಸಂತೋಷ ಹಾಗೂ ಸಕಾರಾತ್ಮಕತೆಯನ್ನು ಹಾಳುಮಾಡಬಲ್ಲದು. ಪ್ರೀತಿಪಾತ್ರರೊಂದಿಗೆ ಊಟ ಮಾಡುವುದರಿಂದ ಒತ್ತಡ ನಿವಾರಿಸುತ್ತದೆ. ಖುಷಿಯಾಗಿ ಊಟ ಮಾಡಿದಾಗ ದೇಹವು ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಇದು ನಿಮ್ಮ ಮೂಡನ್ನು ಚೆನ್ನಗಾಗಿಸುತ್ತದೆ. ಮೂಡ್ ಚೆನ್ನಗಾದರೆ ಒತ್ತಡ ಕಡಿಮೆಯಾಗುತ್ತದೆ.

ಮಾಂಸಾಹಾರಿಗಳಿಗಿಂತ ಪುಳ್ಚಾರ್‌ಗಳೇ ಆರೋಗ್ಯವಂತರು: ಆಕ್ಸ್‌ಫರ್ಡ್

8. ಸಮಸ್ಯೆಗಳಿಗೆ ಪರಿಹಾರ
ಊಟ ಹಾಗೂ ಮಾತು ಜೋಡೆತ್ತುಗಳು. ನಾವೆಲ್ಲರೂ ಕುಟುಂಬದೊಂದಿಗೆ ಊಟಕ್ಕೆ ಕುಳಿತಾಗ ಮಾತನಾಡಲು ಬಯಸುತ್ತೇವೆ. ಇಂಥ ಸಮಯದಲ್ಲಿ ಮಕ್ಕಳು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಬಾಯಿ ಬಿಡಲು ಅನುಕೂಲವಾಗುತ್ತದೆ. ಇದಕ್ಕೆ ನೀವು ನಿಧಾನವಾಗಿ ಯೋಚಿಸಿ ಪರಿಹಾರ ಕಂಡುಹಿಡಿಯಬಹುದು. ಮಕ್ಕಳಿಗೆ ಸಾಂತ್ವಾನ ಹೇಳಿ ಸಲಹೆ ಕೊಡಬಹುದು. ನೀವು ಕೂಡಾ ನಿಮ್ಮೆಲ್ಲ ಆತಂಕಗಳನ್ನು ಹಂಚಿಕೊಳ್ಳಲು ಊಟದ ಸಮಯವೇ ಸಕಾಲ. 

9. ಕಡಿಮೆಯಾಗುವ ಸ್ಕ್ರೀನ್ ಟೈಂ
ಸಾಮಾನ್ಯವಾಗಿ ಮಕ್ಕಳು ಸೇರಿದಂತೆ ನಾವೆಲ್ಲರೂ ಒಬ್ಬರೇ ಊಟ ಮಾಡುತ್ತಿದ್ದರೆ ಟಿವಿ ಹಾಕಿಕೊಳ್ಳುತ್ತೇವೆ. ಇಲ್ಲವೇ ಫೋನ್‌ನಲ್ಲಿ ಏನೋ ಮಾಡುತ್ತಿರುತ್ತೇವೆ. ಇದು ಅನಾರೋಗ್ಯಕಾರಿ ಅಭ್ಯಾಸವಾಗಿದ್ದು, ನಾವು ಏನು ತಿಂದೆವು, ಎಷ್ಟು ತಿಂದೆವು ಎಂಬ ಅರಿವಿರದೇ ಹೋಗಬಹುದು. ಇದರಿಂದ ಅತಿಯಾಗಿ ತಿಂದು ಬೊಜ್ಜು ಸೇರಿದಂತೆ ಇತರೆ ರೋಗಗಳು ನಮ್ಮನ್ನು ಹುಡುಕಿಕೊಂಡು ಬರಬಹುದು. ಎಲ್ಲರೊಂದಿಗೆ ಕುಳಿತು ಊಟ ಮಾಡುವುದರಿಂದ ಈ ಟಿವಿ ನೋಡುವ ಸಮಯ ಕಡಿಮೆಯಾಗಿ ಕಣ್ಣಿನ ಆರೋಗ್ಯವನ್ನೂ ಕಾಪಾಡುತ್ತದೆ.