Asianet Suvarna News Asianet Suvarna News

ಈ ಅಪಾಯಕಾರಿ ಡೇಟಿಂಗ್ ಟ್ರೆಂಡ್ಸ್‌ನ ಸಂತ್ರಸ್ತರಾಗಬೇಡಿ!

ಇಂದು ಹೊಸ ಹೊಸ ಡೇಟಿಂಗ್ ಆ್ಯಪ್ಸ್, ಸೋಷ್ಯಲ್ ಮೀಡಿಯಾಗಳು ಹೊಸಬರನ್ನು ಪರಿಚಯ ಮಾಡಿಕೊಂಡು ಮುಂದುವರಿಯಲು ಬೃಹತ್ ವೇದಿಕೆಯನ್ನೇ ಒದಗಿಸಿಕೊಟ್ಟಿವೆ. ಆದರೆ, ಅಲ್ಲಿ ಕೂಡಾ ಮೋಸ, ವಂಚನೆ, ಮಾನಸಿಕ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ. ಆಧುನಿಕ ಡೇಟಿಂಗ್‌ನಲ್ಲಿ ಸಂಬಂಧಗಳ ನಡುವಿನ ಎಲ್ಲ ವೈಪರೀತ್ಯದ ವರ್ತನೆಗಳಿಗೂ ಒಂದೊಂದು ಹೆಸರಿದೆ. 

6 creepy dating trends of 2019
Author
Bangalore, First Published Jul 30, 2019, 4:00 PM IST

ಈಗಿನ ಡೇಟಿಂಗ್ ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಿಲ್ಲ. ಪ್ರತಿ ವರ್ಷವೂ ಡೇಟಿಂಗ್‌ನಲ್ಲಿ ಹೊಸ ಹೊಸ ಟ್ರೆಂಡ್‌ಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಕಳೆದ ವರ್ಷ ಬ್ರೆಡ್‌ಕ್ರಂಬಿಂಗ್, ಬೆಂಚಿಂಗ್ ಎಂಬ ಟ್ರೆಂಡ್‌ಗಳಿದ್ದವು. ಈ ವರ್ಷ ಹೊಸತೇ ಇವೆ. ಕಳೆದ ಆರು ತಿಂಗಳಲ್ಲಿ ಬೆಳಕಿಗೆ ಬಂದ ಅಪಾಯಕಾರಿ ಡೇಟಿಂಗ್ ಟ್ರೆಂಡ್‌ಗಳು ಇಲ್ಲಿವೆ.

1. ಟಿಂಡ್ಸ್ಟಾಗ್ರಾಮಿಂಗ್

ಟಿಂಡರ್ ಹಾಗೂ ಇನ್ಸ್‌ಟಾಗ್ರಾಂ ಸೇರಿ ಈ ಟಿಂಡ್ಸ್ಟಾಗ್ರಾಮಿಂಗ್ ಎಂಬ ಪದ ಹುಟ್ಟಿಕೊಂಡಿದೆ. ಡೇಟಿಂಗ್ ಆ್ಯಪ್ ಟಿಂಡರ್‌ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಇನ್ಸ್‌ಟಾಗ್ರಾಂನಲ್ಲಿ ಹುಡುಕಿ ತಡಕಾಡುವ ಚಟವಿದು. ಹೊಸತಾಗಿ ಪರಿಚಯವಾದವರನ್ನು ಸೋಷ್ಯಲ್ ಮೀಡಿಯಾದಲ್ಲಿ ಸಿಗುವ ಮಾಹಿತಿಗಳನ್ನಾಧರಿಸಿ ಅಳೆದು ತೂಗುವ ಕೆಲಸವಿದು. 

2. ಕಿಟನ್‌ಫಿಶಿಂಗ್

ಡೇಟಿಂಗ್  ಆ್ಯಂಪ್ ಹಿಂಜ್  ಹುಟ್ಟು ಹಾಕಿದ ಪದವಿದು. ನಾವೇನು ಅಲ್ಲವೋ ಅದಾಗಿ, ಅತಿಯಾಗಿ ಪಾಸಿಟಿವ್ ಆಗಿ  ಡೇಟಿಂಗ್ ಸೈಟ್‌ನಲ್ಲಿ ತೋರಿಸಿಕೊಳ್ಳುವ ದುರಭ್ಯಾಸಕ್ಕೆ  ಕಿಟನ್ ಫಿಶಿಂಗ್ ಎಂದು ಹೆಸರು. ಅತಿಯಾಗಿ ಎಡಿಟ್ ಮಾಡಿದ, ಅಥವಾ ಹಳೆಯದಾದ  ಫೋಟೋಗಳನ್ನು ಪ್ರೊಫೈಲ್‌ಗೆ ಹಾಕಿಕೊಳ್ಳುವುದು, ವಯಸ್ಸು, ಎತ್ತರ, ಬಣ್ಣ, ಆಸಕ್ತಿಗಳು, ಉದ್ಯೋಗದ ಕುರಿತು ಸುಳ್ಳು ಹೇಳುವ ಕೆಲವರ  ಚಟಕ್ಕೆ ಹೀಗೆ ಕರೆಯಲಾಗುತ್ತದೆ. ಅದೇನು ಗೊತ್ತಿದ್ದು ಮಾಡುತ್ತಾರೋ, ಗೊತ್ತಿಲ್ಲದೆಯೋ- ಒಟ್ಟಿನಲ್ಲಿ ತಾವು ಜೀವಮಾನದ ಪ್ರೀತಿ ಕಂಡುಕೊಳ್ಳುವ ಆಸೆಯಲ್ಲಿ ಇನ್ನೊಬ್ಬರಿಗೆ ಮೋಸ ಮಾಡಲುಹೋಗಿ ತಮಗೆ ತಾವೇ ಮೋಸ ಮಾಡಿಕೊಳ್ಳುತ್ತಾರೆ.

ಮ್ಯಾಟ್ರಿಮೋನಿಯಲ್/ಡೇಟಿಂಗ್ ಸೈಟ್‌ನ ಪ್ರೊಫೈಲ್ ಫೋಟೋ ಹೀಗ್ ಹಾಕ್ಬೇಡಿ!

3. ಪಾಕೆಟಿಂಗ್

ಓರ್ವ ಪಾರ್ಟ್ನರ್ ಮತ್ತೊಬ್ಬರನ್ನು ತನ್ನ ಕುಟುಂಬ, ಗೆಳೆಯರು, ಪರಿಚಯಸ್ಥರಿಂದ ಮುಚ್ಚಿಡುವ ಡೇಟಿಂಗ್ ಅಭ್ಯಾಸಕ್ಕೆ ಪಾಕೆಟಿಂಗ್ ಎಂದು  ಹೆಸರು. ಇಬ್ಬರಿಗೂ ಪರಿಚಯವಾಗಿ ವಾರ ಕಳೆದು ತಿಂಗಳುಗಳಾಗಿ, ವರ್ಷವೇ ದಾಟುತ್ತಾ ಬಂದರೂ ಒಬ್ಬರು ತಮ್ಮ ಲವರನ್ನು ತಮ್ಮ ಯಾವ ಪರಿಚಯಸ್ಥರಿಗೂ ಪರಿಚಯ ಮಾಡಿಕೊಡುವುದೇ ಇಲ್ಲ. ಅಲ್ಲದೆ, ತಮಗೆ ಅನುಕೂಲವಾದಾಗ, ತಾವು ಹೇಳಿದ ಸ್ಥಳದಲ್ಲಿ ಮಾತ್ರ ಅವರು ತಮ್ಮ ಡೇಟನ್ನು ಭೇಟಿಯಾಗುತ್ತಿರುತ್ತಾರೆ. ನಿಧಾನವಾಗಿ ಮತ್ತೊಬ್ಬರಿಗೆ ತಾವು ಪಾಕೆಟಿಂಗ್ ಡೇಟಿಂಗ್‌ನ ಸಂತ್ರಸ್ತರಾಗಿರುವುದು ತಿಳಿದುಬರುತ್ತದೆ. 

4. ಕುಕೀ ಜಾರಿಂಗ್

ಒಬ್ಬರೊಂದಿಗೆ ಅದಾಗಲೇ ಸಂಬಂಧ ಹೊಂದಿ ಅದನ್ನು ಮುಚ್ಚಿಟ್ಟು ಮತ್ತೊಬ್ಬರನ್ನು ಬ್ಯಾಕಪ್‌ನಂತೆ ಬಳಸುತ್ತಾ, ಅವರೊಂದಿಗೆ ಸುತ್ತಾಡುವ ಈ ಕೆಟ್ಟ ಡೇಟಿಂಗ್ ಆಭ್ಯಾಸಕ್ಕೆ ಕುಕೀ ಜಾರಿಂಗ್ ಎನ್ನಲಾಗುತ್ತದೆ. ಇಲ್ಲಿ ವ್ಯಕ್ತಿಗೆ ಡೇಟ್ ಜೊತೆ ಬಹುಕಾಲದ  ಸಂಬಂಧದ ಯೋಚನೆಯೇ ಇರುವುದಿಲ್ಲ. ತಮ್ಮ ಮೊದಲ ಪಾರ್ಟ್ನರ್ ಕೈ ಕೊಟ್ಟರೆ ಇರಲಿ ಎಂಬಂತೆ ಮತ್ತೊಬ್ಬರನ್ನು ಬಳಸುತ್ತಿರುತ್ತಾರೆ. ವಂಚನೆಗಿಂತ ಇದು ಹೇಗೆ ಭಿನ್ನವಾಗುತ್ತದೆ ಅಲ್ಲವೇ? 

ಸಂಗಾತಿಯೊಂದಿಗಿನ ವಯಸ್ಸಿನ ಅಂತರ ಭವಿಷ್ಯದ ಕನಸಿಗೆ ಕುತ್ತು!

5. ಸ್ಲೋ ಫೇಡ್

ಇದ್ದಕ್ಕಿದ್ದಂತೆ ಪಾರ್ಟ್ನರ್ ಜೊತೆ ಎಲ್ಲ ಸಂಬಂಧ ಮುರಿದು ಮರೆಯಾಗುವ ಗೋಸ್ಟಿಂಗ್‌ನಷ್ಟು ಭಯಾನಕ ಅಲ್ಲದಿರಬಹುದು. ಆದರೆ ಸ್ಲೋ ಫೇಡ್ ಗೋಸ್ಟಿಂಗ್‌ನ ಸ್ಲೋ ಮೋಶನ್ ವರ್ಶನ್. ಇಲ್ಲಿ ವ್ಯಕ್ತಿಯು ಆರೋಗ್ಯಕರ ಸಂಬಂಧವೊಂದರಿಂದ ನಿಧಾನವಾಗಿ ತನ್ನ ಎಲ್ಲ ಬಾಂದವ್ಯಗಳನ್ನು ಕಳಚಿಕೊಳ್ಳತೊಡಗುತ್ತಾನೆ. ಆತ ಸಿಗುವುದು  ಕಡಿಮೆಯಾಗತೊಡಗುತ್ತದೆ. ಫೋನ್ ಕಾಲ್‌ಗಳು ಕೂಡಾ ಪ್ರತಿ ದಿನಕ್ಕೆ 10 ಬಾರಿ ಇದ್ದಿದ್ದು, 10 ದಿನಕ್ಕೆ ಒಂದು ಬಾರಿ ಮಾಡಿದರೆ ಹೆಚ್ಚು ಎಂಬಂತಾಗುತ್ತದೆ. ಸೋಷ್ಯಲ್ ಮೀಡಿಯಾದಲ್ಲಿಯೂ ಸಂಪರ್ಕಕ್ಕೆ ಸಿಗುವುದಿಲ್ಲ. ಬ್ಯುಸಿ ನೆಪ ಹೇಳಬಹುದು. ಇದರಲ್ಲಿ ಎಲ್ಲಕ್ಕಿಂತ ಕ್ರೂರವೆಂದರೆ ಮತ್ತೊಬ್ಬ ಪಾರ್ಟ್ನರ್‌ಗೆ  ತಮ್ಮನ್ನು ಆತ ಏಕೆ ಅವಾಯ್ಡ್ ಮಾಡುತ್ತಿದ್ದಾನೆಂಬ ಕಾರಣ ಕೊನೆಗೂ ತಿಳಿಯುವುದಿಲ್ಲ. 

6. ಆರ್ಬಿಟಿಂಗ್

ಬ್ರೇಕಪ್ ಆದ ಬಳಿಕವೂ ಲವರ್‌ನ ಲೈಫ್ ಸುತ್ತವೇ ಸುತ್ತುವ ವರ್ತನೆಗೆ ಆರ್ಬಿಟಿಂಗ್ ಎನ್ನಲಾಗುತ್ತದೆ. ಇದೇನು  ಅಷ್ಟು  ಹೊಸತಲ್ಲ. ಆದರೆ, ಸೋಷ್ಯಲ್ ಮೀಡಿಯಾಗಳು ಈ ವರ್ತನೆಗೆ ಹೊಸ ಆಯಾಮ ನೀಡಿವೆ.  ನಿಮ್ಮ ಎಕ್ಸ್ ಲವರ್ ನಿಮ್ಮ ಪೋಸ್ಟ್‌ಗಳಿಗೆ ಕಮೆಂಟ್ ಮಾಡುತ್ತಿದ್ದರೆ, ಯಾವುದೋ ಸ್ಟೋಟಸಸ್‌ಗೆ  ನಿಮ್ಮನ್ನು ಲಿಂಕ್ ಮಾಡುತ್ತಿದ್ದರೆ ಅವರು ನಿಮ್ಮ ಜೀವನದ ಬಗ್ಗೆ ಎಲ್ಲವನ್ನೂ ಟ್ರ್ಯಾಕ್  ಮಾಡುತ್ತಿದ್ದಾರೆಂದರ್ಥ. ಹಳೆಯ ಜೀವನ ಮರೆತು ಹೊಸ ಬಾಳು ಕಟ್ಟಿಕೊಳ್ಳುವ ಆಸೆಯಲ್ಲಿದ್ದಾಗ ಎಕ್ಸ್ ಲವರ್‌ನ ಈ ವರ್ತನೆ ಹಿಂಸೆಯಾಗಬಹುದು. 

Follow Us:
Download App:
  • android
  • ios