ಕಾಲ ನಿಲ್ಲುವುದಿಲ್ಲ, ವಯಸ್ಸು ಓಡುತ್ತಲೇ ಇರುತ್ತದೆ. ವಯಸ್ಸು ಹೆಚ್ಚಾದಂತೆಲ್ಲ ಮನಸ್ಸು ಮಾಗುತ್ತದೆ. ಅನುಭವಗಳು ಕಲಿಸುತ್ತವೆ. ಇದುವರೆಗೂ ಬದುಕಲ್ಲಿ ಮಾಡಿದ ತಪ್ಪುಗಳೆಲ್ಲವೂ ಸಾಲಿನಲ್ಲಿ ಬಂದು ಕೆಣಕೀ ಕೆಣಕಿ ಕಾಡುತ್ತವೆ. ಛೇ, ಇನ್ನೊಮ್ಮೆ ಬಾಲ್ಯ ಮರಳಿದ್ದರೆ ಈ ಬದುಕನ್ನು ಬೇರೆಯದೇ ರೀತಿ ಬದುಕಿ ತೋರಿಸುತ್ತಿದ್ದೆ ಎಂದು ಬಹುತೇಕ ಹಿರಿಯರು ಒಳಗೊಳಗೇ ಕೊರಗುತ್ತಿರುತ್ತಾರೆ. ಹಾಗೆ ನೀವು ವಯಸ್ಸಾದ ಮೇಲೆ ಕೊರಗಬಾರದೆಂದರೆ ತಕ್ಷಣ ಬದುಕು ಬದಲಿಸಿಕೊಳ್ಳಿ. ಇಷ್ಟಕ್ಕೂ ವಯಸ್ಸಾದ ಮೇಲೆ ಕೊರಗಾಗುವ ವಿಷಯಗಳು ಯಾವುವು ತಿಳ್ಕೋಬೇಕಾ? 

ಮೃತ ಆತ್ಮೀಯರೊಂದಿಗೆ ಮಾತನಾಡೋ ವಿಂಡ್ ಫೋನ್ ಬೂತ್!

1. ಅವಕಾಶವಿದ್ದಾಗ ತಿರುಗಾಟ ಮಾಡಲಿಲ್ಲ

ವಯಸ್ಸಾದ ಮೇಲೆ ತಿರುಗಾಟ ಕಷ್ಟ ಸಾಧ್ಯವಷ್ಟೇ ಅಲ್ಲ, ನಿಮ್ಮನ್ನು ನೋಡಿಕೊಳ್ಳಲೂ ಜನ ಬೇಕಾಗುತ್ತದೆ. ಯೌವನದಲ್ಲಿ ವಯಸ್ಸಾದಾಗ ಸುತ್ತಾಡುತ್ತೇನೆಂದು ಹಣ ಕೂಡಿಟ್ಟು, ವಯಸ್ಸಾದ ಮೇಲೆ ಹಣವಿದ್ದರೂ ಬಲವಿಲ್ಲವೆಂಬಂತಾಗುತ್ತದೆ. ಆರೋಗ್ಯವೂ ನೀವಂದಂತೆಲ್ಲ ಕೇಳಬೇಕಲ್ಲ.. 

2. ಬೇರೆ ಭಾಷೆ ಕಲಿಯಲಿಲ್ಲ

ಹೈಸ್ಕೂಲಿನಲ್ಲಿ ಮೂರು ವರ್ಷಗಳ ಕಾಲ ಹೇಳಿಕೊಟ್ಟರೂ ಕಲಿಯಲಿಲ್ಲ. ಹೋಗಲಿ, ಯೌವನ ಅಥವಾ 30ರ ದಶಕದಲ್ಲಾದರೂ ಕಲಿಯಬಹುದಿತ್ತು, ಆಗ ತಡವಾಯಿತು ಎಂದುಕೊಂಡಿರುತ್ತೀರಿ. ಆದರೆ, ವಯಸ್ಸಾದ ಮೇಲೆ ತಿಳಿಯುತ್ತದೆ ಆಗಲೂ ಇಂಗ್ಲಿಷ್, ಹಿಂದಿಯನ್ನು ಕಲಿಯಬಹುದಿತ್ತು ಎಂದು.

3. ಕೆಟ್ಟ ಸಂಬಂಧದಲ್ಲಿ ಹೆಚ್ಚು ಕಾಲ ಇದ್ದಿದ್ದು

ಸಂಬಂಧ ಹಳಸಿದೆ ಎಂದು ತಿಳಿದರೂ ಅದರಲ್ಲೇ ಸವೆಯುತ್ತಾ ಸಾಗಿರುತ್ತೀರಿ. ಆಗಲೇ ಗುಡ್‌ಬೈ ಹೇಳಿದ್ದರೆ, ಇಷ್ಟು ವರ್ಷದ ಬದುಕನ್ನು ಸಂತೋಷವಾಗಿಯಾದರೂ ಕಳೆಯಬಹುದಿತ್ತಲ್ಲಾ ಅಥವಾ ಬೇರೊಬ್ಬ ನನಗೆ ಸರಿ ಹೊಂದುವ ಸಂಗಾತಿ ಸಿಕ್ಕಿರುತ್ತಿದ್ದರೋ ಏನೋ ಎನಿಸದಿರದು.

ಹುಡುಗಿಯರು ಸೋಲೋ ಟ್ರಿಪ್‌ ಹೋಗುವುದು ಹೇಗೆ?

4. ಸನ್‌ಸ್ಕ್ರೀನ್ ಲೋಶನ್ ಕಡೆಗಣಿಸಿದ್ದು

ಮುಖದು ಸುಕ್ಕು, ಒಟ್ಟೆಗಳು, ಕಪ್ಪು ಕಲೆಗಳು, ಚರ್ಮದ ಕ್ಯಾನ್ಸರ್ ಇವುಗಳಲ್ಲಿ ಯಾವುದನ್ನೇ ನೋಡುವಾಗ, ನಾನು ಮುಂಚೆಯೇ ಸ್ವಲ್ಪ ಗಮನ ಕೊಡಬೇಕಿತ್ತು, ಚರ್ಮದ ರಕ್ಷಣೆ ಕಡೆಗಣಿಸಿದೆ ಎಂದು ಕೊರಗಲಾರಂಭಿಸುತ್ತೀರಿ.

5. ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆದರಿದ್ದು

ಕೆಲಸ ಬದಲಾಯಿಸುವುದಿರಬಹುದು, ಓದು ಮುಂದುವರೆಸದಿರುವುದೇ ಆಗಿರಬಹುದು ಅಥವಾ ಸಾಹಸಿ ಕ್ರೀಡೆಗಳನ್ನು ಎಂಜಾಯ್ ಮಾಡದಿರುವುದಿರಬಹುದು- ಇವುಗಳಿಗೆ ಏಕೆ ಹೆದರಿದೆ, ಅಗತ್ಯವೇ ಇರಲಿಲ್ಲವಲ್ಲ ಎನಿಸುತ್ತದೆ.

6. ಫಿಟ್ನೆಸ್ ಕಾಪಾಡಿಕೊಳ್ಳದ್ದು

ಯೌವನವನ್ನು ಸೋಫಾಸೆಟ್, ಹಾಸಿಗೆ, ಆರಾಮ್ ಚೇರ್‌ಗಳ ಮೇಲೆ ಉರುಳಾಡಿಕೊಂಡು ಅದೇ ಸುಖ ಎಂದು ಕಳೆದಿರುತ್ತೀರಿ. 60 ದಾಟಿದ ಮೇಲೆ ನಾನು ದೈಹಿಕ ಫಿಟ್ನೆಸ್ ಕಾಪಾಡಿಕೊಳ್ಳಲು ಏನೆಲ್ಲ ಮಾಡಬಹುದಿತ್ತಲ್ಲ ಎಂದು ಕೊರಗುತ್ತೀರಿ.

7. ಎಷ್ಟು ಸುಂದರವಿದ್ದೆವು ಎಂಬ ಅರಿವಿರದ್ದು

ಯೌವನದಲ್ಲಿರುವಾಗ ನಾವು ಚೆನ್ನಾಗಿಲ್ಲವೆಂದು ಕೊರಗಿ ಅದೇ ಕಾರಣಕ್ಕೆ ಎಷ್ಟೊಂದನ್ನು ಮಿಸ್ ಮಾಡಿಕೊಂಡಿರುತ್ತೇವೆ. ವಯಸ್ಸಾದ ಬಳಿಕ, ಆಗ ಅಷ್ಟು ಚೆನ್ನಾಗಿದ್ದೆನಲ್ಲ, ಆದರೂ ಕೊರಗಿದೆ ಎಂಬುದು ದುಃಖ ತರುತ್ತದೆ. 

8. ಐ ಲವ್ ಯೂ ಹೇಳದೇ ಹೋದದ್ದು

ವಯಸ್ಸಿರುವಾಗ ಐ ಲವ್ ಯೂ ಹೇಳಿದರೆ ಎಲ್ಲಿ ತಿರಸ್ಕರಿಸಲ್ಪಡುವೆನೋ ಎಂದು ಭಯ ಬಿದ್ದಿರುತ್ತೀರಿ. ವಯಸ್ಸಾದ ಮೇಲೆ, ತಿರಸ್ಕರಿಸಿದ್ದರೂ ಏನು ಮಹಾ ಆಗುತ್ತಿತ್ತು, ಯಾರಿಗೆ ಗೊತ್ತು ಒಪ್ಪಿಕೊಳ್ಳುತ್ತಿದ್ದಿರಲೂ ಬಹುದು, ನಾನು ಹೇಳಬೇಕಾಗಿತ್ತು ಎನಿಸುತ್ತದೆ.

Ladies Night life ಎಂಜಾಯ್ ಮಾಡೋಕೆ ಇಲ್ಲಿದೆ ಬೆಸ್ಟ್‌ ಜಾಗಗಳು..!

9. ತಂದೆತಾಯಿಯ ಮಾತು ಕೇಳದ್ದು

ತಂದೆತಾಯಿ ಸಲಹೆ ನೀಡುವಾಗ ಕಿರಿಕಿರಿಯಾಗುತ್ತಿರುತ್ತದೆ. ಸಿಟ್ಟು ಮಾಡಿ, ಕೂಗಾಡಿ, ಅತ್ತೂಕರೆದು, ನೆಗ್ಲೆಕ್ಟ್ ಮಾಡಿ ಅವರನ್ನು ನೋಯಿಸಿರುತ್ತೇವೆ. ಅವರು ಪಾಸ್ ಆದ ಸ್ಟೇಜ್‌ಗಳನ್ನೇ ದಾಟುವಾಗ ಅವರು ಹೇಳಿದ್ದೆಲ್ಲ ನಿಜವೆನಿಸಲಾರಂಭಿಸುತ್ತದೆ. ನಮ್ಮನ್ನು ಸಾಕಲು ಅವರೆಷ್ಟು ಕಷ್ಟ ಪಟ್ಟಿದ್ದಾರಲ್ಲ ಎಂಬುದು ಅರ್ಥವಾಗುತ್ತದೆ. ಅವರ ಮಾತು ಕೇಳಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಬಹುತೇಕರು ಕೊರಗುತ್ತಾರೆ.

10. ದ್ವೇಷ ಕಾರಿದ್ದು, ಅದರಲ್ಲೂ ಪ್ರೀತಿಪಾತ್ರರ ಮೇಲೆ

ಸೋತುಬಿಡಬಹುದಿತ್ತಲ್ಲ, ಗಂಟೇನು ಹೋಗುತ್ತಿತ್ತು? ದ್ವೇಷ ಕಾರಿ ಸಾಧಿಸಿದ್ದೇನು, ಇರುವುದೊಂದು ಬದುಕನ್ನು ದ್ವೇಷದಲ್ಲಿ ಕಳೆದುಬಿಟ್ಟೆನಲ್ಲಾ, ಒಂದೇ ಬಾರಿ ಅವರನ್ನು ಕ್ಷಮಿಸುವ ಮನಸ್ಸು ಮಾಡಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು, ವೃಥಾ ಪ್ರೀತಿಸುವವರನ್ನು ಕಳೆದುಕೊಂಡೆನಲ್ಲಾ ಎಂದು ಅನಿಸದಿದ್ದರೆ ಕೇಳಿ.

11. ಹಲ್ಲುಗಳ ಆರೋಗ್ಯ ಕಡೆಗಣಿಸಿದ್ದು

ಎದುರಿಗೇ ಫೇವರೇಟ್ ಕಡಲೆಯಿದ್ದರೂ ಅದನ್ನು ಅಗಿಯಲು ಹಲ್ಲುಗಳಿಲ್ಲದೆ, ಬೊಚ್ಚುಬಾಯಿ ಅಣಕಿಸುವಾಗ, ಛೇ, ದಿನಕ್ಕೆರಡಡು ಬಾರಿ ಬ್ರಶ್ ಮಾಡಿದ್ದರೆ, ಸರಿಯಾಗಿ ಹಲ್ಲಿನ ಚೆಕಪ್ ಮಾಡಿಸಿದ್ದರೆ ಇಂದು ಹೀಗೆ ತಿನ್ನುವ ಆಸೆ ಕಟ್ಟಿಕೊಂಡು ಕೂರಬೇಕಿರಲಿಲ್ಲ ಎನಿಸುತ್ತದೆ.

12. ಮಕ್ಕಳೊಂದಿಗೆ ಸಮಯ ಕಳೆಯದ್ದು

ನಮ್ಮೊಂದಿಗೆ ಆಡಬಯಸಿದಾಗ, ಸಾನಿಧ್ಯ ಬೇಡಿದಾಗ ನಾವಿರಲಿಲ್ಲ, ಈಗ ನಮಗೆ ಅವರು ಬೇಕೆಂದರೆ ಅವರಿಲ್ಲ ಎಂದು ಪದೇ ಪದೆ ಕಾಡುತ್ತದೆ, ನಮ್ಮ ಕೋಣೆಯಲ್ಲೇ ಇರು ಎನ್ನುತ್ತಿದ್ದ ಮಕ್ಕಳು ಕೋಣೆ ಬಿಟ್ಟು ಯಾವಾಗ ತೊಲಗುವರೋ ಎಂದು ನಿಮ್ಮನ್ನು ನೋಡತೊಡಗಿದಾಗ.