ಬೆಂಗಳೂರಿನ ಬಿಎಂಟಿಸಿ ಬಸ್‌ಗಳಿಗಿಂತ  ಹೆಚ್ಚಿಗೆ ತುಂಬಿದ ಮತ್ತೊಂದು ವಸ್ತುವೇನಾದರೂ ಇದ್ದರೆ ಅದು ಬಹುತೇಕರ ಮನೆಯ ಫ್ರಿಡ್ಜ್. ಅಲ್ಲಿ ಅಪ್ಪಅವ್ವನ ಹೊರತಾಗಿ ಎಲ್ಲವೂ ಇರುತ್ತವೆ. ಮನೆಗೆ ತಂದಿದ್ದೆಲ್ಲವನ್ನೂ ಈ ತಂಪು ಕೋಣೆಯೊಳಗಿಟ್ಟು ಬಾಗಿಲು ಹಾಕಲಾಗುತ್ತದೆ. ಆದರೆ, ಫ್ರಿಡ್ಜ್‌ನಲ್ಲಿಡದೆಯೂ ಕೆಡದ ಹಲವಾರು ಆಹಾರ ಪದಾರ್ಥಗಳಿವೆ. ಅವನ್ನು ಕೂಡಾ ಹಿಂದುಮುಂದು ಯೋಚಿಸದೆ ನೇರ ಫ್ರಿಡ್ಜ್‌ನಲ್ಲಿರಿಸುತ್ತೇವೆ. ಇದರಿಂದ ಸುಮ್ಮನೆ ಎನರ್ಜಿ ಪೋಲು, ಜೊತೆಗೆ, ಕೋಣೆಯ ತಾಪಮಾನದಲ್ಲೇ ಹೆಚ್ಚು ಆರೋಗ್ಯವಾಗಿರಬಲ್ಲ ಆಹಾರಗಳಿಗೂ ಜ್ವರ ಬರಿಸಿದಂತಾಗುವುದು.

ಕೆಲವೊಂದಿಷ್ಟು ಆಹಾರಗಳು ಕೋಲ್ಡ್‌ನಲ್ಲಿಡದಾಗಲೇ ರುಚಿ ಹಾಗೂ ಟೆಕ್ಸ್ಚರ್ ಚೆನ್ನಾಗಿರುತ್ತವೆ. ಅಲ್ಲದೆ ಆ್ಯಂಟಿ ಆಕ್ಸಿಡೆಂಟ್ಸ್ ಸೇರಿದಂತೆ ಬಹಳಷ್ಟು ನ್ಯೂಟ್ರಿಯೆಂಟ್‌ಗಳು ಫ್ರಿಡ್ಜ್‌ನಲ್ಲಿಟ್ಟರೆ ಕಳೆದುಹೋಗಿಬಿಡುತ್ತವೆ. ಅಂಥ ಆಹಾರ ಪದಾರ್ಥಗಳನ್ನು ಹೊರಗಿರಿಸುವುದೇ ಲೇಸು. ಫ್ರಿಡ್ಜ್‌ನ ಹಂಗಿಲ್ಲದೆ ಆರೋಗ್ಯವಾಗಿರಬಲ್ಲ ಕೆಲ ಆಹಾರ ಪದಾರ್ಥಗಳನ್ನಿಲ್ಲಿ ಕೊಡಲಾಗಿದೆ.

1. ಟೊಮ್ಯಾಟೋ

ಹೆಚ್ಚು ಸಮಯ ಇಡಲು ಬರಬೇಕು ಎಂದರೆ ಟೊಮ್ಯಾಟೋವನ್ನು ಫ್ರಿಡ್ಜ್‌ನಿಂದ ಹೊರಗಿಡಿ. ಕೋಣೆಯ ತಾಪಮಾನದಲ್ಲಿ, ತಮ್ಮ ಮಾಯಿಶ್ಚರ್ ಉಳಿಸಿಕೊಳ್ಳಬಹುದಾದಲ್ಲಿ ಅವು ಚೆನ್ನಾಗಿರುತ್ತವೆ.

2. ಬಾಳೆಹಣ್ಣುಗಳು

ಬಾಳೆಹಣ್ಣುಗಳು ಫ್ರೆಶ್ ಆಗಿರಬೇಕೆಂದರೆ ಫ್ರಿಡ್ಜ್‌ನಲ್ಲಿಡುವುದು ಬೇಡ, ಅವುಗಳ ತೊಟ್ಟಿಗೆ ಪ್ಯಾಸ್ಟಿಕ್‌ನಿಂದ ಸುತ್ತಿಡಿ. ಇದರಿಂದ ಅವು ಹೆಚ್ಚು ಹಣ್ಣಾಗಲು ಬೇಕಾದ ಎಥಿಲಿನ್ ಗ್ಯಾಸ್ ಬಿಡುಗಡೆಯಾಗುವುದು ನಿಲ್ಲುತ್ತದೆ.

3. ಸಿಟ್ರಸ್ ಫ್ರೂಟ್ಸ್

ನಿಂಬೆಹಣ್ಣುಗಳು, ಆರೆಂಜ್, ದ್ರಾಕ್ಷಿಹಣ್ಣುಗಳು ಸೇರಿದಂತೆ ಯಾವ ಸಿಟ್ರಸ್ ಹಣ್ಣನ್ನೂ ಫ್ರಿಡ್ಜ್‌ನಲ್ಲಿರಿಸುವ ಅಗತ್ಯವಿಲ್ಲ. ಫ್ರೂಟ್ ಬಾಸ್ಕೆಟ್‌ನಲ್ಲಿ ಅವು ಆರಾಮಾಗಿರುತ್ತವೆ. ಕೆಲ ವಾರಗಳ ಕಾಲ ಚೆನ್ನಾಗಿಟ್ಟುಕೊಳ್ಳಬೇಕೆಂದರೆ ಹೆಚ್ಚು ಬೆಳಕಿರುವ ಪ್ರದೇಶದಿಂದ ತೆಗೆದು ನಿಮ್ಮ ವಾರ್ಡ್ರೋಬ್‌ನೊಳಗಿಟ್ಟುಕೊಳ್ಳಿ.

4. ಬೆಣ್ಣೆ

ನೆಲದ ಮೇಲೆ ಬಿದ್ದ ಚಿಪ್ಸ್‌ನ್ನು ಬೇಕಾದರೆ ಹೆಕ್ಕಿಕೊಂಡು ತಿನ್ನುತ್ತೇವೆ, ಆದರೆ, ರಾತ್ರಿ ಪೂರ್ತಿ ಹೊರಗಿಟ್ಟ ಬೆಣ್ಣೆಯನ್ನಲ್ಲ ಎನ್ನುವವರು ನಮ್ಮ ನಡುವೆ ಇದ್ದಾರೆ. ಮತ್ತೆ ಕೆಲವರಿಗೆ ಫ್ರಿಡ್ಜ್‌ನ ಹೊರತಾಗಿ ಬೆಣ್ಣೆಯನ್ನು ರಕ್ಷಿಸಿಟ್ಟುಕೊಳ್ಳಬಹುದೆಂಬ ಐಡಿಯಾವೇ ಇಲ್ಲ. ಬೆಣ್ಣೆಯು ಡೈರಿ ಉತ್ಪನ್ನವಾದ್ದರಿಂದ ಅದು ಫ್ರಿಡ್ಜ್‌ನಲ್ಲಿಡದಿದ್ದರೆ ಕೆಡುತ್ತದೆ  ಎಂಬ ಭಾವನೆ ಹಲವರಿಗೆ. ಆದರೆ, ಏರ್‌ಟೈಟ್ ಕಂಟೇನರ್‌ನೊಳಗೆ ಹಾಕಿಟ್ಟರೆ ಸಾಕು, ಕೋಣೆಯ ತಾಪಮಾನದಲ್ಲೇ ಬೆಣ್ಣೆ ಆರಾಮಾಗಿ ಕುಳಿತುಕೊಳ್ಳುತ್ತದೆ. 

5. ಕೇಕ್

ಬಟರ್ ಕ್ರೀಂ ಹಾಕಿದ ಕೇಕ್‌ಗಳು ಏರ್‌ಟೈಟ್ ಕಂಟೇನರ್‌ನಲ್ಲಿಟ್ಟರೆ ಕೋಣೆಯ ತಾಪಮಾನದಲ್ಲೇ ಸುಮಾರು 3 ದಿನಗಳ ಕಾಲ ಕೆಡದಂತೆ ಇರಬಲ್ಲವು. ಪೇಸ್ಟ್ರೀಸ್ ಆದರೆ ಮಾತ್ರ ಫ್ರಿಡ್ಜ್‌ನಲ್ಲಿಡಬೇಕು. 

6. ಬ್ರೆಡ್

ಬ್ರೆಡ್ ಫ್ರಿಡ್ಜ್ ಬೇಕೆಂದು ಹಟ ಹಿಡಿಯುವುದಿಲ್ಲ. ಆದರೆ, ಒಣಗುತ್ತದೆ ಎಂಬ ಭಯವಿದ್ದರೆ ಅದನ್ನು ರೆಫ್ರಿಜರೇಟ್ ಮಾಡುವ ಬದಲು ಫ್ರೀಜರ್‌ನಲ್ಲಿಡಿ. ಇದರಿಂದ ಬ್ರೆಡ್‌ನ ಟೆಕ್ಸ್ಚರ್ ಹಾಗೂ ಮೆದುತನ ಹಾಗೇ ಉಳಿಯುತ್ತದೆ. 

7. ಉಪ್ಪಿನಕಾಯಿಗಳು

ಉಪ್ಪಿನಲ್ಲಿ ಅದ್ದಿ ಕಾರ ಹಾಕಿದ ಉಪ್ಪಿನಕಾಯಿಗಳು ಸೋಡಿಯಂ ತುಂಬಿದ ರಸದಲ್ಲಿ ವರ್ಷಗಟ್ಟಲೆ ಕೆಡದಂತೆ ಇರಬಲ್ಲದು. ಅದಕ್ಕೆ ಫ್ರಿಡ್ಜ್‌ನ ಹಂಗಿಲ್ಲ.

8. ಸೋಯಾ ಸಾಸ್

ನಿಮ್ಮ ಫ್ರಿಡ್ಜೊಳಗೆ ಏನೇನಿರಬೇಕು!

ಸೋಡಿಯಂ ಸೇರಿಸಿದ ಸೋಯಾ ಸಾಸ್, ಫಿಶ್ ಸಾಸ್‌ಗಳು ಫ್ರಿಡ್ಜ್‌ನಿಂದ ಹೊರಗೆಯೂ ಬಹುಕಾಲ ಕೆಡದಂತೆ ಇರುತ್ತವೆ. ಉಪ್ಪು ಅವುಗಳಲ್ಲಿ ಬ್ಯಾಕ್ಟೀರಿಯಾ ಹಾಗೂ ಇತರೆ ಕ್ರಿಮಿಗಲು ಬೆಳೆಯದಂತೆ ನೋಡಿಕೊಳ್ಳುತ್ತದೆ. ಇದರಿಂದ ಅವು ಕೆಡುವುದಿಲ್ಲ. 

9. ಬೆಣ್ಣೆಹಣ್ಣುಗಳು

ಪೂರ್ತಿ ಹಣ್ಣಾದ ಬೆಣ್ಣೆಹಣ್ಣುಗಳನ್ನು ಫ್ರಿಡ್ಜ್‌ನಲ್ಲಿಡಬೇಕು. ಆದರೆ ಹಸಿರಾದ ಬೆಣ್ಣೆಹಣ್ಣುಗಳನ್ನು ಕೋಣೆಯ ತಾಪಮಾನದಲ್ಲೇ ಇಡಬೇಕು. ಅವು ಹಣ್ಣಾಗಿವೆಯೋ ಇಲ್ಲವೋ ಎಂದು ನೋಡುವುದು ಹೇಗೆ? ಹಣ್ಣಾಗಿದ್ದರೆ ಸ್ವಲ್ಪ ಒತ್ತಡಕ್ಕೆ ಅವು ಒಡೆಯಬಲ್ಲವು. 

10. ಮೆಲನ್

ತ್ವಚೆಯ ಸೌಂದರ್ಯಕ್ಕೇ ಕುತ್ತು ತರೋ ಆಹಾರಗಳಿವು...

ಕಲ್ಲಂಗಡಿ ಹಣ್ಣು, ಮಸ್ಕ್ ಮೆಲನ್ ಹಾಗೂ ಬನಾಸ್ಪತ್ರೆ ಹಣ್ಣುಗಳಲ್ಲಿ ವಿಟಮಿನ್ ಸಿ, ಜಿಯಾಕ್ಸಾಂತಿನ್, ಲೈಕೋಪೀನ್, ಬೀಟಾ ಕ್ಯಾರೋಟಿನ್‌ನಂಥ ಆ್ಯಂಟಿಆಕ್ಸಿಡೆಂಟ್‌ಗಳು ಹೇರಳವಾಗಿರುತ್ತವೆ. ಇವುಗಳ ಪೋಷಕಸತ್ವಗಳು ಫ್ರಿಡ್ಜ್‌ನಲ್ಲಿಟ್ಟಾಗ ನಷ್ಟವಾಗುತ್ತವೆ. ಹೀಗಾಗಿ, ಇವುಗಳನ್ನು ಅಡುಗೆಮನೆಯ ಮೂಲೆಯಲ್ಲಿಯೇ ಇಟ್ಟುಕೊಳ್ಳಬಹುದು. 

11. ಆಲೂಗಡ್ಡೆ

ಪೇಪರ್ ಬ್ಯಾಗ್‌ನಲ್ಲಿ ಹಾಕಿ ತಣ್ಣನೆಯ, ಸ್ವಲ್ಪ ಕತ್ತಲ ಜಾಗದಲ್ಲಿಟ್ಟರೆ ಆಲೂಗಡ್ಡೆ ಏನಿಲ್ಲವೆಂಜರೂ 3 ವಾರಗಳ ಕಾಲ ಕೆಡದಂತೆ ಇರುತ್ತದೆ. ಫ್ರಿಡ್ಜ್‌ನಲ್ಲಿಟ್ಟರೆ ಆಲೂಗಡ್ಡೆಯಲ್ಲಿರುವ ಸ್ಟಾರ್ಚ್ ಶುಗರ್ ಆಗಿ ಬದಲಾಗಿ, ಅಷ್ಟು ಹಿತವಲ್ಲದ ಸಿಹಿ ರುಚಿ ನೀಡುತ್ತದೆ.