ನಿಮ್ಮ ಫ್ರಿಡ್ಜೊಳಗೆ ಏನೇನಿರಬೇಕು!
ಸಂಜೆ ಬೇಗ ತಿಂದು ನಿದ್ದೆ ಹೋಗಿದ್ದರೆ ಮಧ್ಯರಾತ್ರಿಗೆ ಜೋರು ಹಸಿವಾಗುತ್ತದೆ. ಈ ಅನುಭವವಂತೂ ಎಲ್ಲರಿಗೂ ಆಗಿರುತ್ತದೆ. ಒಮ್ಮೊಮ್ಮೆ ಹೊರಗೆ ಹೋಗಿ ಮನೆಗೆ ಬಂದಾಗ ತಿನ್ನಲು ಏನುಂಟು ಅಂತ ಹುಡುಕುವುದು ಸಹಜ. ಆಗ ಫ್ರಿಡ್ಜಲ್ಲಿ ಏನಾದರೂ ಇದ್ದರೆ ಪುಣ್ಯ. ಮೊದಲೇ ಸ್ವಲ್ಪ ಪ್ಲಾನ್ ಮಾಡಿಕೊಂಡಿದ್ದರೆ ಹಸಿವಿಗೆ ಕಾಟ ಕೊಡುವ ಅವಕಾಶವನ್ನೇ ನೀಡದೇ ಇರಬಹುದು. ಹಾಗಾಗಿ ತಿಳಿದುಕೊಳ್ಳಿ, ನಿಮ್ಮ ಫ್ರಿಡ್ಜೊಳಗೆ ಏನೇನಿರಬೇಕು!
ಮೇಘ ಎಂಎಸ್
ಹೊರಗಿನಿಂದ ಮನೆಗೆ ಬಂದಾಗ ಸುಸ್ತು ಜೊತೆಗೆ ಹೊಟ್ಟೆಯೂ ತಾಳ ಹಾಕುತ್ತಿರುತ್ತೆ. ಮಧ್ಯೆ ರಾತ್ರಿ ಒಂದು ಹೊತ್ತಿನಲ್ಲಿ ಹಸಿವು, ದಿನದಲ್ಲಿ ಯಾವಾಗಲಾದರು ಒಮ್ಮೆ ಏನಾದರೂ ತಿನ್ನಬೇಕು. ಹೀಗೆ ಹೊಟ್ಟೆ ತಿನ್ನಲು ಕೇಳಿದಾಗ ಒಂದು ತಾಳ್ಮೆಯಿಂದಿದ್ದು ಅಡುಗೆ ಮಾಡಿ ತಿನ್ನಬೇಕು ಹಾಗೂ ಯಾವ ರೀತಿಯ ಪದಾರ್ಥಗಳು ಬೇಕು ಎನ್ನುವುದೂ ಮುಖ್ಯ. ನಮ್ಮ ದೇಹಕ್ಕೆ ಯಾವ ರೀತಿಯ ಆಹಾರ ಬೇಕು. ಹೊರಗಿನಿಂದ ಬಂದು ಮಾಡಲು ತಿನ್ನುವುದು ಕಷ್ಟ ಎಂದವರಿಗೆ ಫ್ರಿಡ್ಜ್‌ನಲ್ಲಿ ಮೊದಲೇ ಇಟ್ಟಿರಬೇಕಾದ ಪದರ್ಥಾಗಳ ಪಟ್ಟಿ ಇಲ್ಲಿವೆ.
ನಿಮ್ಮ ವ್ಯಕ್ತಿತ್ವಕ್ಕೆ ಹೊಳಪು ನೀಡುವ 8 ಹವ್ಯಾಸಗಳು
- ಮೊಳಕೆ ಬಂದ ಧಾನ್ಯಗಳು ಫ್ರಿಡ್ಜ್‌ನಲ್ಲಿ ಇರಲಿ. ಹೆಸರುಕಾಳು, ಕಡಲೆಕಾಳು, ನೆನೆಸಿದ ಶೇಂಗಾ ಹೀಗೆ ಮೊಳಕೆ ಕಾಳುಗಳ ಸೇವನೆಯಿಂದ ದೇಹದ ಆರೋಗ್ಯ ಕಾಪಾಡುವುದರ ಜೊತೆಗೆ ಹೆಚ್ಚಿನ ಪೌಷ್ಠಿಕಾಂಶಗಳು ನೀಡುತ್ತವೆ. ಆಗಾಗ್ಗೆ ಮೊಳಕೆಕಾಳು ತಿನ್ನುವುದರಿಂದ ಸರಿಯಾದ ಸಮಯದಲ್ಲಿ ಹಸಿವಾಗುವುದು, ದೇಹ ಆ್ಯಕ್ಟಿವ್ ಆಗಿ ಇರುವಂತೆ ಮಾಡುತ್ತದೆ.
- ಬೆಲ್ಲದ ಪಾಲನ ಇಲ್ಲವೇ ಬೆಲ್ಲದಿಂದ ಮಾಡಿದ ನಿಂಬೆ ಜ್ಯೂಸ್ ಫ್ರಿಡ್ಜ್‌ನಲ್ಲಿ ಇಟ್ಟರೆ ತುಂಬಾ ಒಳ್ಳೆಯದು. ಹೊರಗಿನಿಂದ ಮನೆಗೆ ಬಂದವರಿಗೆ ಇದನ್ನು ಕೊಟ್ಟರೆ ದೇಹದ ಆಯಾಸ ಕಡಿಮೆ ಮಾಡುತ್ತದೆ. ಬೆಲ್ಲದಲ್ಲಿನ ಕಬ್ಬಿಣದ ಅಂಶ ಹಾಗೂ ನಿಂಬೆ ದೇಹಕ್ಕೆ ಅಗತ್ಯ ಪೌಷ್ಠಿಕಾಂಶ ನೀಡಿ ಸುಸ್ತನ್ನು ನಿವಾರಿಸುತ್ತದೆ.
- ಸೇಬು, ದ್ರಾಕ್ಷಿ, ಸೀಜನಲ್ ಫ್ರೂಟ್ಸ್, ಬಾಳೆ ಹಣ್ಣು, ಮೋಸಂಬಿ ಹೀಗೆ ಹಣ್ಣುಗಳು ಇರುವುದು ಉತ್ತಮ. ಹೊರಗಿನಿಂದ ಬಂದಾಗ ಇಲ್ಲವೆ ಹಸಿವು ಎಂದಾಗ ತಕ್ಷಣ ಅಡಿಗೆ ಮಾಡಲು ಕಷ್ಟವಾಗಬಹುದು. ಆಗ ಹಣ್ಣು ತಿಂದು ಸುಧಾರಿಸಿಕೊಂಡು ಮುಂದಿನ ಕೆಲಸಕ್ಕೆ ಮುಂದಾಗಬಹುದು. ಹಣ್ಣುಗಳನ್ನು ಆಗಾಗೆ ತಿನ್ನುವುದರಿಂದ ಆರೋಗ್ಯಕ್ಕೂ ಉತ್ತಮ.
- ಸಾಮಾನ್ಯವಾಗಿ ಅಂಗಡಿಗಳಲ್ಲಿ ಮೈದಾದಿಂದ ತಯಾರಿಸಿದ ಬ್ರೆಡ್‌ಗಳು ಸಿಗುತ್ತವೆ. ಆದರೆ ಅದು ದೇಹಕ್ಕೆ ಉತ್ತಮ ಅಲ್ಲ. ಮೈದಾ ಬ್ರೆಡ್ ತಿನ್ನುವುದರಿಂದ ಕರುಳಿಗೆ, ಲಿವರ್‌ಗೆ ಮಾರಕ ಪರಿಣಾಮ ಬೀರುತ್ತದೆ. ಹಾಗಾಗಿ ಗೋಧಿಯಿಂದ ಮಾಡಿದ ಬ್ರೆಡ್ ತಿನ್ನುವುದು ಉತ್ತಮ ಎಂದು ತಜ್ಞರು ತಿಳಿಸುತ್ತಾರೆ. ಗೋಧಿ ಬ್ರೆಡ್‌ಗೆ ಸ್ವಲ್ಪ ಪೀನಟ್ ಬಟರ್(ಶೇಂಗಾದಿಂದ ತಯಾರಿಸಿದ್ದು) ಹಚ್ಚಿ ತಿನ್ನುವುದು ಆರೋಗ್ಯಕ್ಕೂ ಒಳ್ಳೆಯದು. ಶುದ್ಧ ಬೆಣ್ಣೆಗಿಂತ ಹೆಚ್ಚು ಪೌಷ್ಠಿಕಾಂಶ ಪೀನಟ್ ಬಟರ್‌ನಲ್ಲಿದೆ. ಇದನ್ನು ಹಾಗೆಯೂ ತಿನ್ನಬಹುದು ಇಲ್ಲವೆ ಬ್ರೆಡ್‌ಗೆ ಹಚ್ಚಿಕೊಂಡೂ ತಿನ್ನಬಹುದು.
- ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾಗಿ ರಾತ್ರಿ ಮಲಗುವ ಮುನ್ನ ಒಂದು ಗ್ಲಾಸ್ ಹಾಲು ಕುಡಿಯಬೇಕು ಎನ್ನುತ್ತಾರೆ. ರಾತ್ರಿ ಹಾಲು ಕುಡಿದು ಮಲಗುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ ಹಾಗೂ ಮಧ್ಯೆ ಮಧ್ಯೆ ಹಸಿವಾಗುವುದಿಲ್ಲ. ಅಷ್ಟೇ ಅಲ್ಲ ಹಾಲಿಗೆ ಬಾಳೆಹಣ್ಣು, ತುಪ್ಪ, ಜೇನುತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟರೆ ನೀವು ಯಾವಾಗ ಬೇಕಾದ್ರೂ ತಿನ್ನಬಹುದು. ಇದು ಹಸಿದುಕೊಂಡು ಬಂದಾಗ, ಸುಸ್ತಾಗಿ ಬಂದಾಗ ತಿನ್ನೋದಕ್ಕೆ ಬೆಸ್ಟ್ ಫುಡ್.
ಊಟದ ಜೊತೆ ನೀರು, ಪಿಜ್ಜಾದೊಂದಿಗೆ ಕೋಕ್ ಕುಡಿದ್ರೆ ತಪ್ಪಾ?
- ಬೀಟ್ರೂಟ್, ಕ್ಯಾರೆಟ್, ಟೊಮ್ಯಾಟೊ, ಎಳೆದಾಗಿರುವ ನವಿಲು ಕೋಸು, ಎಳೆಯದಾಗಿರುವ ಸೀಮೆ ಬದನೆಕಾಯಿ, ಸೌತೆಕಾಯಿ ಇಂತಹ ತರಕಾರಿಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ ಒಳ್ಳೆಯದು. ಎಲ್ಲಾ ತರಕಾರಿಯಲ್ಲೂ ಒಂದೊಂದು ರೀತಿಯ ವಿಟಮಿನ್ಸ್ ಗಳು ಇರುತ್ತವೆ. ಹಾಗಾಗಿ ಹಸಿ ತರಕಾರಿಗಳು ಹಾಗೇ ತಿನ್ನುವುದು ಇಲ್ಲ ಸಲಾಡ್ ರೀತಿ ಮಾಡಿ ತಿನ್ನುವುದು ಇನ್ನೂ ಚೆಂದ.
- ಮೊಟ್ಟೆಗಳಿಗಾಗಿ ಫ್ರಿಡ್ಜ್‌ನಲ್ಲಿ ಕಾಂಪಾರ್ಟ್‌ಮೆಂಟೇ ಇರುತ್ತೆ. ಹೊರಗಿನಿಂದ ಬಂದಾಗ ಹೊಟ್ಟೆ ಹಾಕೊ ತಾಳಕ್ಕೆ ಸರಿಯಾಗಿ ಬೇಗ ಆಗುವ ಪದಾರ್ಥ ಮೊಟ್ಟೆ. 5 ನಿಮಿಷದಲ್ಲಿ
ತಯಾರಿಸಬಹುದಾದ ಮೊಟ್ಟೆಯ ಪದಾರ್ಥಗಳು ಹೊಟ್ಟೆಗೆ ಆಪ್ತ ಬಂಧು ಇದ್ದಂತೆ. ಆಮ್ಲೆಟ್ ಅಥವಾ ಬೇಯಿಸಿ ತಿನ್ನಬಹುದು.
- ಮೊಸರು ಮಿಸ್ ಮಾಡ್ದೆ ಇರ್ಲಿ. ಯಾಕಂದ್ರೆ ಮೊಸರು ತಿನ್ನುವುದು ಒಳ್ಳೆಯದು ಜೊತೆಗೆ ಹೊರಗೆ ತಿರುಗಾಡಿ ಬಂದಾಗ ಆಯಾಸ ಕಡಿಮೆ ಮಾಡುತ್ತೆ. ಹೊರಗಿನಿಂದ ತಂದ ಜ್ಯೂಸ್ ಬದಲು ಮಜ್ಜಿಗೆ ಇದ್ದರೆ ಇನ್ನೂ ಒಳ್ಳೆಯದು. ಮಜ್ಜಿಗೆ ದೇಹ ತಂಪಾಗಿಸುತ್ತೆ.
- ಅದು ಇದು ಸ್ನ್ಯಾಕ್ಸ್ ಅನ್ನು ಫ್ರಿಡ್ಜ್‌ನಲ್ಲಿ ಇಡುವ ಬದಲು ಬಾದಾಮಿ, ಪಿಸ್ತಾ, ಗೋಡಂಬಿ, ಡ್ರೈ ಖರ್ಜೂರ, ವಾಲ್‌ನಟ್, ಶೇಂಗಾ ಹೀಗೆ ಡ್ರೈ ಫ್ರೂಟ್ಸ್‌ಗಳಿಂದ ಬೆಲ್ಲ ಹಾಕಿ ಮನೆಯಲ್ಲೇ ತಯಾರಿಸಿದ ಮಿಠಾಯಿಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ ಒಳ್ಳೆಯದು. ಡೈರೆಕ್ಟ್ ಆಗಿ ಡ್ರೈ ಫ್ರೂಟ್ಸ್ ತಿನ್ನಲು ಇಷ್ಟಪಡದವರು ಹೀಗೆ ಮಾಡಿ ತಿನ್ನುವುದು ಒಳ್ಳೆಯದು.
ಮಕ್ಕಳಿಂದ ಹಿಡಿದು ಹಿರಿಯರಿಗೂ ಇದು ಒಳ್ಳೆಯದು. ಇಂತಹ ಸಮಯದಲ್ಲೇ ತಿನ್ನಬೇಕೆಂದೇನಿಲ್ಲ ಅಡ್ಡಾಡಿಕೊಂಡು ತಿನ್ನುತ್ತಿದ್ದರೂ ಆಗುತ್ತೆ.