ಸಾಮಾನ್ಯ ಅಕ್ಕಿ ಉದ್ದಿನಬೇಳೆ ದೋಸೆಗೆ ಬದಲಾಗಿ ಪೌಷ್ಟಿಕವಾದ ಕ್ವಿನೋವಾ ಮತ್ತು ಮಿಶ್ರ ಬೇಳೆಗಳಿಂದ ಮಾಡುವ ಪನೀರ್ ದೋಸೆಯ ವಿಧಾನವನ್ನು ಇಲ್ಲಿದೆ.. ಇದರೊಂದಿಗೆ ರುಚಿಕರವಾದ ಟೊಮೆಟೊ ಶೇಂಗಾ ಚಟ್ನಿ ಮಾಡುವ ಸುಲಭ ಹಂತಗಳ ಸಹ ನೀಡಲಾಗಿದೆ. ಇದು ಬೆಳಗಿನ ಉಪಾಹಾರಕ್ಕೆ ಅತ್ಯುತ್ತಮವಾದ ಪ್ರೋಟೀನ್ ಭರಿತ ಆಹಾರ.

ಪ್ರತಿದಿನವೂ ಅದೇ ಅಕ್ಕಿ ಉದ್ದಿನಬೇಳೆ ದೋಸೆ ತಿಂದು ಬೇಸತ್ತಿದ್ದೀರಾ? ದೋಸೆಯಲ್ಲಿ ಹೊಸ ರುಚಿ, ಹೊಸ ವರೈಟಿ ಹುಡುಕುತ್ತಿದ್ದೀರಾ ಹಾಗಾದರೆ ನೀವು ಸರಿಯಾದ ರೆಸಿಪಿಯನ್ನೇ ಓದುತ್ತಿದ್ದೀರಿ. ಸಾಮಾನ್ಯ ಅಕ್ಕಿ ಉದ್ದಿನಬೇಳೆಗಿಂತ ಸ್ವಲ್ಪ ಹೊಸ ರುಚಿಯೊಂದಿಗೆ ಪನೀರ್ ದೋಸೆ ಹೇಗೆ ಮಾಡಬಹುದು ಎಂಬುದನ್ನು ಇಲ್ಲಿ ಸ್ಟೆಪ್ ಬೈ ಸ್ಟೆಪ್ ತಿಳಿಸುತ್ತೇವೆ.

ಕ್ವಿನೋವಾ ಪನೀರ್ ದೋಸೆ ಮಾಡುವುದು ಹೇಗೆ?

ಇದು ಸಾಮಾನ್ಯ ದೋಸೆಯಂತೆ ಅಕ್ಕಿ ಉದ್ದಿನಬೇಳೆಯಿಂದ ಮಾಡುವಂತೆ ಅಲ್ಲ. ಇದರ ರೆಸಿಪಿ, ರುಚಿಯೂ ಬೇರೆಯೇ ಆಗಿದೆ. ಈ ಕ್ವಿನೋವಾ ಪನೀರ್ ದೋಸೆಯನ್ನ ಬೇಳೆ, ಮೆಂತ್ಯ ಕಾಳು ಸೇರಿಸಿ ಪೌಷ್ಟಿಕವಾದ ಹಿಟ್ಟು ತಯಾರಿಸಿ ಮಾಡಲಾಗುತ್ತೆ. ಆದರೆ ಇಲ್ಲಿ ತುರಿದ ಪನೀರ್ ರುಚಿಕರವಾದ ಪ್ರೋಟೀನ್‌ ಭರಿತವಾಗಿರುತ್ತದೆ. ಮೊರಿಂಗಾ ಪುಡಿ, ಟೋಮ್ಯಾಟೋ ಶೇಂಗಾ ಚಟ್ನಿಯೊಂದಿಗೆ ಇದನ್ನು ತಿಂದರೆ ಮೂರು ಹೊತ್ತು ಅದನ್ನೇ ತಿನ್ನಬೇಕೆನಿಸುವಷ್ಟು ರುಚಿಯಾಗಿರುತ್ತದೆ. ಬೆಳಗಿನ ತಿಂಡಿ ಅಥವಾ ಉಪಾಹಾರಕ್ಕೆ ಇದು ಸೂಕ್ತವಾಗಿದೆ.

ಪನೀರ್ ದೋಸೆ ತಯಾರಿಸುವ ವಿಧಾನ:

ನಿಮಗೆ ½ ಕಪ್ ಕ್ವಿನೋವಾ(ನವಣೆ), ½ ಕಪ್ ಮಿಶ್ರ ಬೇಳೆ (ಹಳದಿ ಹೆಸರುಬೇಳೆ, ಕಪ್ಪು ಉದ್ದಿನ ಬೇಳೆ, ಹೆಸರುಬೇಳೆ ಮತ್ತು ಮಸೂರ್) ಮತ್ತು 1 ಚಮಚ ಮೆಂತ್ಯ ಬೀಜಗಳು ಬೇಕಾಗುತ್ತವೆ. ಕ್ವಿನೋವಾ ಮತ್ತು ಬೇಳೆಗಳನ್ನು ಚೆನ್ನಾಗಿ ತೊಳೆದು ಮೆಂತ್ಯ ಬೀಜಗಳೊಂದಿಗೆ ಕನಿಷ್ಠ 5-6 ಗಂಟೆಗಳ ಕಾಲ ನೆನೆಸಿಡಿ. ನೀರನ್ನು ಬಸಿದು ಎಲ್ಲವನ್ನೂ ಮಿಕ್ಸರ್‌ಗೆ ಹಾಕಿ ಕೆಲವು ಚಮಚ ನೀರನ್ನು ಸೇರಿಸಿ ಮತ್ತು ನಯವಾದ, ದಪ್ಪ ಬರುವಂತೆ ದೋಸೆ ಹಿಟ್ಟು ತಯಾರಿಸಿಕೊಳ್ಳಿ. ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ನೀವು ಬ್ಯಾಟರ್ ಅನ್ನು ರಾತ್ರಿಯಿಡೀ ಅಥವಾ 6-7 ಗಂಟೆಗಳ ಕಾಲ ಹುದುಗಿಸಬಹುದು. ಒಂದು ವೇಳೆ ನಿಮಗೆ ಸಮಯ ಕಡಿಮೆಯಿದ್ದರೆ ನೇರವಾಗಿಯೇ ದೋಸೆ ತಯಾರಿಸಬಹುದು.

ಈ ಪನೀರ್ ದೋಸೆಗೆ ಚಟ್ನಿ ಮಾಡುವ ವಿಧಾನ:

ಚಟ್ನಿಗಾಗಿ, ಒಂದು ಪ್ಯಾನ್‌ನಲ್ಲಿ(ಪಾತ್ರೆ) 2 ಚಮಚ ಎಣ್ಣೆಯನ್ನು ಬಿಸಿ ಮಾಡಿ. ಬಿಸಿಯಾದ ನಂತರ 3-4 ಒಣಗಿದ ಕೆಂಪು ಮೆಣಸಿನಕಾಯಿಗಳು, ½ ಕಪ್ ಶೇಂಗಾ ಸೇರಿಸಿ ಮತ್ತು ಶೇಂಗಾ ಚೆನ್ನಾಗಿ ಬೇಯುವವರೆಗೆ ಅಂದರೆ ಸುಮಾರು 4-5 ನಿಮಿಷಗಳ ಕಾಲ ಹುರಿಯಿರಿ. 2-ಇಂಚಿನ ಶುಂಠಿ ಮತ್ತು 10-12 ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ, ಹಸಿ ವಾಸನೆ ಹೋಗುವವರೆಗೆ ಇನ್ನೊಂದು ಎರಡು ನಿಮಿಷಗಳ ಕಾಲ ಹುರಿಯಿರಿ. ನಂತರ 3 ಹೋಳು ಮಾಡಿದ ಈರುಳ್ಳಿಯನ್ನು ಸೇರಿಸಿ, ಮಧ್ಯಮ ಉರಿಯಲ್ಲಿ 3-4 ನಿಮಿಷಗಳ ಕಾಲ ಹಾಗೆ ಬೇಯಿಸಿ. ಬಳಿಕ ಕತ್ತರಿಸಿದ ಟೊಮೆಟೊ ಜೊತೆಗೆ ಉಪ್ಪನ್ನು ಸೇರಿಸಿದ ಬಳಿಕ ಚೆನ್ನಾಗಿ ಕಲಸಿ. ಈಗ ಪ್ಯಾನ್ ಅನ್ನು ಒಂದು ಪಾತ್ರೆಯಿಂದ ಮುಚ್ಚಿ. ಹೀಗೆ 5-6 ನಿಮಿಷಗಳ ಕಾಲ ಮುಚ್ಚಿದಾಗ ಟೊಮೆಟೊ ಮೃದು ಬೇಯುತ್ತದೆ. ಅನಂತರ ಇದೆಲ್ಲದರ ಮಿಕ್ಸ್ ಮಾಡಿದ ಚಟ್ನಿ ಸ್ವಲ್ಪ ತಣ್ಣಗಾಗಲು ಬಿಡಿ, ನಂತರ ಅದನ್ನು ನಯವಾದ ಪೇಸ್ಟ್ ರೀತಿ ಬರುವವರೆಗೆ ಕಲಸಿ.