ಬೆಳಿಗ್ಗೆ ತಿಂಡಿಗೆ ಮಾಡಿದ ಇಡ್ಲಿ ಉಳಿದಿದೆಯೇ? ಹಾಗಾದರೆ ಅದನ್ನು ಎಸೆಯುವ ಅಥವಾ ಮತ್ತೆ ಬಿಸಿ ಮಾಡಿ ತಿನ್ನುವ ಬದಲು ಸಂಜೆ ಹೊತ್ತಿಗೆ ರುಚಿಕರವಾದ ಸ್ನ್ಯಾಕ್ ಆಗಿ ಪರಿವರ್ತಿಸಬಹುದು. ಅದುವೇ ಬಾಯಲ್ಲಿ ನೀರೂರಿಸುವ ಗರಿಗರಿಯಾದ ಇಡ್ಲಿ ಪಕೋಡ!

ಬೆಳಿಗ್ಗೆ ತಿಂಡಿಗೆ ಮಾಡಿದ ಇಡ್ಲಿ ಉಳಿದಿದೆಯೇ? ಹಾಗಾದರೆ ಅದನ್ನು ಎಸೆಯುವ ಅಥವಾ ಮತ್ತೆ ಬಿಸಿ ಮಾಡಿ ತಿನ್ನುವ ಬದಲು ಸಂಜೆ ಹೊತ್ತಿಗೆ ರುಚಿಕರವಾದ ಸ್ನ್ಯಾಕ್ ಆಗಿ ಪರಿವರ್ತಿಸಬಹುದು. ಅದುವೇ ಬಾಯಲ್ಲಿ ನೀರೂರಿಸುವ ಗರಿಗರಿಯಾದ ಇಡ್ಲಿ ಪಕೋಡ! ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇಷ್ಟಪಟ್ಟು ತಿನ್ನುವ ಈ ಸ್ನ್ಯಾಕ್, ಒಂದು ಕಪ್ ಬಿಸಿ ಬಿಸಿ ಕಾಫಿ ಅಥವಾ ಟೀ ಜೊತೆ ಸವಿಯಲು ಹೇಳಿ ಮಾಡಿಸಿದ ಕಾಂಬಿನೇಷನ್.

ವಿಶೇಷವೆಂದರೆ ಈ ರೆಸಿಪಿ ಮಾಡಲು ಹೆಚ್ಚು ಸಮಯ ಬೇಕಿಲ್ಲ. ಮನೆಯಲ್ಲೇ ಸುಲಭವಾಗಿ ಸಿಗುವ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ರುಚಿಕರವಾದ ಇಡ್ಲಿ ಪಕೋಡ ತಯಾರಿಸಬಹುದು.

ಇಡ್ಲಿ ಪಕೋಡ ಮಾಡಲು ಬೇಕಾಗುವ ಪದಾರ್ಥಗಳು

ಉಳಿದ ಇಡ್ಲಿ – 4ರಿಂದ 5

ಅಕ್ಕಿ ಹಿಟ್ಟು ಅಥವಾ ಕಾರ್ನ್ ಫ್ಲೋರ್ – 2 ಚಮಚ

ಟೊಮೆಟೊ ಕೆಚಪ್ – 1ರಿಂದ 2 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಖಾರ ಬೇಕಿದ್ದರೆ ಮೆಣಸಿನ ಪುಡಿ – ಸ್ವಲ್ಪ

ಎಣ್ಣೆ – ಕರಿಯಲು

ಇಡ್ಲಿ ಪಕೋಡ ಮಾಡುವ ವಿಧಾನ

ಮೊದಲು ಬೆಳಿಗ್ಗೆ ಉಳಿದಿರುವ ಇಡ್ಲಿಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಒಂದು ಪಾತ್ರೆಗೆ ಈ ಇಡ್ಲಿ ತುಂಡುಗಳನ್ನು ಹಾಕಿ. ಇದಕ್ಕೆ ಅಕ್ಕಿ ಹಿಟ್ಟು ಅಥವಾ ಕಾರ್ನ್ ಫ್ಲೋರ್ ಸೇರಿಸಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಟೊಮೆಟೊ ಕೆಚಪ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಖಾರವಾಗಿ ತಿನ್ನಲು ಇಷ್ಟಪಡುವವರು ಸ್ವಲ್ಪ ಮೆಣಸಿನ ಪುಡಿ ಅಥವಾ ಖಾರದ ಮಸಾಲೆಯನ್ನೂ ಸೇರಿಸಿಕೊಳ್ಳಬಹುದು. ಇಡ್ಲಿಯ ಪ್ರತಿಯೊಂದು ತುಂಡಿಗೂ ಮಸಾಲೆ ಮತ್ತು ಹಿಟ್ಟು ಚೆನ್ನಾಗಿ ಅಂಟಿಕೊಳ್ಳುವಂತೆ ಕಲಸಿಕೊಳ್ಳಿ.

ಈಗ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಎಣ್ಣೆ ಕಾದ ಬಳಿಕ ಮಸಾಲೆ ಮಿಶ್ರಿತ ಇಡ್ಲಿ ತುಂಡುಗಳನ್ನು ಒಂದೊಂದಾಗಿ ಹಾಕಿ ಮಧ್ಯಮ ಉರಿಯಲ್ಲಿ ಕರಿಯಿರಿ. ಇಡ್ಲಿ ತುಂಡುಗಳು ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗಿ ಗರಿಗರಿಯಾಗುವವರೆಗೆ ಕರಿದರೆ ಸಾಕು. ನಂತರ ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹಾಕಿ.

ರುಚಿಕರವಾದ ಇಡ್ಲಿ ಪಕೋಡ ಸವಿಯಲು ಸಿದ್ಧ

ರುಚಿ ಹೆಚ್ಚಿಸಲು ಈ ಟಿಪ್ಸ್ ಪಾಲಿಸಿ

ಹೊರಭಾಗ ಹೆಚ್ಚು ಕ್ರಿಸ್ಪಿಯಾಗಬೇಕೆಂದರೆ ಅಕ್ಕಿ ಹಿಟ್ಟು ಅಥವಾ ಕಾರ್ನ್ ಫ್ಲೋರ್ ಬಳಸಬಹುದು.

ಮಕ್ಕಳಿಗಾಗಿ ತಯಾರಿಸುವಾಗ ಖಾರ ಕಡಿಮೆ ಮಾಡಿ.

ದೊಡ್ಡವರಿಗೆ ಖಾರ ಇಷ್ಟವಿದ್ದರೆ ಮೆಣಸಿನ ಪುಡಿ, ಚಿಲ್ಲಿ ಫ್ಲೇಕ್ಸ್ ಸೇರಿಸಬಹುದು.

ಪಕೋಡವನ್ನು ಕರಿದ ತಕ್ಷಣ ಬಿಸಿಬಿಸಿಯಾಗಿ ಸವಿದರೆ ಹೆಚ್ಚು ರುಚಿಯಾಗಿರುತ್ತದೆ.

ಹೀಗೆ ಬೆಳಿಗ್ಗೆ ತಿಂಡಿಗೆ ಮಾಡಿದ್ದ ಸಾಮಾನ್ಯ ಇಡ್ಲಿಯೇ ಸಂಜೆ ಹೊತ್ತಿಗೆ ಹೊಸ ರೂಪ ಪಡೆದುಕೊಳ್ಳುತ್ತದೆ. ಉಳಿದ ಆಹಾರವನ್ನು ವ್ಯರ್ಥ ಮಾಡದೆ, ಕಡಿಮೆ ಖರ್ಚಿನಲ್ಲಿ ಮನೆಯವರಿಗಾಗಿ ಹೊಸ ರುಚಿಯ ಸ್ನ್ಯಾಕ್ ತಯಾರಿಸಬಹುದು. ಮುಂದಿನ ಬಾರಿ ಇಡ್ಲಿ ಉಳಿದರೆ ಈ ರೆಸಿಪಿಯನ್ನು ಒಮ್ಮೆ ಪ್ರಯತ್ನಿಸಿ ನೋಡಿ!