ಬೆಂಗಳೂರಿನ ತಂಪು ಮಳೆಗೆ ಸವಿಯಲು ಉತ್ತರ ಕರ್ನಾಟಕ ಶೈಲಿಯ ಗರಿಗರಿಯಾದ ಖಾರಾ ಮಂಡಕ್ಕಿ ಮಾಡುವ ಸುಲಭ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಕೇವಲ ಕೆಲವೇ ನಿಮಿಷಗಳಲ್ಲಿ ಮನೆಯಲ್ಲೇ ಲಭ್ಯವಿರುವ ಸಾಮಗ್ರಿಗಳನ್ನು ಬಳಸಿ ಈ ರುಚಿಕರವಾದ ಸ್ನ್ಯಾಕ್ಸ್ ತಯಾರಿಸಬಹುದು. ಬಿಸಿ ಚಹಾದೊಂದಿಗೆ ಸವಿಯಬಹುದು.
ಬೆಂಗಳೂರಿನ ವಾತಾವರಣವು ಕ್ಷಣ ಕ್ಷಣಕ್ಕೂ ಬದಲಾಗುತ್ತಿದೆ. ಬೆಳಗ್ಗೆ ಬಿಸಿಲಿದ್ದರೆ ಮಧ್ಯಾಹ್ನವೇಳೆ ಮೋಡ, ಸಂಜೆ ಕಾರ್ಮೋಡ ಗುಡುಗು ಸಿಡಿಲಿನೊಂದಿಗೆ ಭರ್ಜರಿ ಮಳೆ ಜೊತೆಗೆ ಮೈನಡುಗಿಸುವ ತಂಪು ಮಳೆಯಲ್ಲಿ ಏನಾದ್ರೂ ಚುರುಮುರಿ ತಿನ್ನಬೇಕು ಅನಿಸುತ್ತೆ. ಖಾರಾ ಮಂಡಕ್ಕಿ ತಿನ್ನೋಣವೆಂದರೆ ಮಳೆಯಲ್ಲಿ ದೂರ ಹೋಗುವುದು ಆಗದು. ಮನೆಯಲ್ಲೇ ಖಾರಾ ಮಂಡಕ್ಕಿ ಮಾಡೋಣ ಎಂದರೆ ರೆಸಿಪಿ ಗೊತ್ತಿಲ್ಲದೆ ಹೇಗೆ ಮಾಡುವುದು ಎಂಬ ಯೋಚನೆ. ಇಂಥವರಿಗೆ ನಾವು ಇಂದು ಖಾರಾ ಮಂಡಕ್ಕಿ ಹೇಗೆ ಕೆಲವೇ ನಿಮಿಷಗಳಲ್ಲಿ ತಯಾರಿಬಹುದು ಅನ್ನೋದು ತಿಳಿಸುತ್ತೇವೆ. ಈ ವಿಧಾನ ಸುಲಭವಾಗಿದೆ. ಒಮ್ಮೆ ಈ ಲೇಖನ ಓದಿ ಮುಗಿಸುತ್ತಿದ್ದಂತೆ ಇಂದು ಸಂಜೆಯೇ ಖಾರಾ ಮಂಡಕ್ಕಿಯೊಂದಿಗೆ ಮಳೆಯನ್ನ ನೋಡುತ್ತಾ ಎಂಜಾಯ್ ಮಾಡಬಹುದು.
ಉತ್ತರ ಕರ್ನಾಟಕ ಶೈಲಿಯ ಖಾರಾ ಮಂಡಕ್ಕಿ ಮಾಡುವ ವಿಧಾನ
ಉತ್ತರ ಕರ್ನಾಟಕ ಎಂದರೆನೇ ಅಲ್ಲಿ ಖಾರಾ ಮಸಾಲೆ ಇರಲೇಕು. ಚಳಿಗಾಲ, ಮಳೆಗಾಲದಲ್ಲಿ ಖಾರಾ ಮಂಡಕ್ಕಿ ತಿನ್ನುತ್ತಿದ್ದರೆ ಮೈಯಲ್ಲ ಬಿಸಿ, ಚಳಿ ಮಳೆಯ ಎಫೆಕ್ಟ್ ಇರಲ್ಲ. ಹೌದು ಖಾರಾ ಮಂಡಕ್ಕಿ ಇದರೊಂದಿಗೆ ಹಸಿಮೆಣಸಿನಕಾಯಿ ಈರುಳ್ಳಿ ಇದ್ದರಂತೂ ಆಹಾ..!
ಖಾರಾ ಮಂಡಕ್ಕಿ ಮಾಡುವ ವಿಧಾನವನ್ನ ಇಲ್ಲಿ ಹಂತ ಹಂತವಾಗಿ ವಿವರಿಸುತ್ತೆವೆ. ಮಂಡಾಳು(ಚುರುಮುರಿ), ಹುರಿದ ಶೇಂಗಾ, ಮೆಣಸಿನಕಾಯಿ, ಈರುಳ್ಳಿ, ಕರಿಬೇವಿನ ಮಿಶ್ರಣವಾಗಿದೆ. ಈ ಖಾರಾ ಮಂಡಕ್ಕಿ ಸಂಜೆ ಮಳೆ ನಡುವೆ ಚಹಾ ಇರುತ್ತಾ ತಿನ್ನುವುದು ಸಖತ್ ಟೇಸ್ಟ್. ತಿಂದೇ ಅನುಭವಿಸಬೇಕು.
ಬೆಂಗಳೂರಿನಂಹ ಆಗಾಗ ಸುರಿಯುವ ಮಳೆಗೆ ಈ ರುಚಿಕರವಾದ, ಸುಲಭವಾಗಿಯೂ ತಯಾರಿಸಬಹುದು. ಇದಕ್ಕೆ ಹೆಚ್ಚು ಸಮಯ ಬೇಕಿಲ್ಲ.ಮಕ್ಕಳಿಗೂ ಇದನ್ನ ಸಂಜೆಯ ತಿಂಡಿಗೆ ಪಕ್ಕಾ ಇಷ್ಟಪಡ್ತಾರೆ. ಉತ್ತರ ಕರ್ನಾಟಕದ ಈ ಖಾರಾ ಮಂಡಕ್ಕಿ ಅದೆಷ್ಟು ರುಚಿಕರ ಎಂದರೆ ಇದನ್ನ ಒಮ್ಮೆ ತಯಾರಿಸಿ ಗಾಳಿಯಾಡದ ಡಬ್ಬಿಯಲ್ಲಿಟ್ಟರೆ ಹದಿನೈದಿಪ್ಪತ್ತು ದಿನಗಳಿಗೂ ತಿನ್ನಬಹುದು. ಅದೇ ಕ್ರಿಸ್ಪಿ, ರುಚಿ! ಇದನ್ನ ಬೆಂಗಳೂರಿನಂತಹ ಸಿಟಿಯಲ್ಲಿ ಖಾರಾ ಪುರಿ, ಕಡ್ಲೆಪುರಿ, ಖಾರಾ ಫಾರ್ಮುಲಾ, ಖಾರಾ ಕುರ್ಮುರಾ ಅನೇಕ ಹೆಸರುಗಳಿಂದ ಕರೆಯುತ್ತಾರೆ, ರುಚಿಯೂ ಬೇರೆ ಬೇರೆಯಾಗಿರುತ್ತದೆ. ಆದರೆ ಉತ್ತರ ಕರ್ನಾಟಕದ ಖಾರಾ ಮಂಡಕ್ಕಿ ರುಚಿಯೇ ಬೇರೆ. ಇದಕ್ಕೆ ಯಾವುದೂ ಸರಿಸಾಟಿ ಆಗದು.
ಖಾರಾ ಮಂಡಕ್ಕಿ ಮಾಡುವ ವಿಧಾನ:
ಉತ್ತರ ಕರ್ನಾಟಕ ಶೈಲಿಯ ಖಾರಾ ಮಂಡಕ್ಕಿ ಮಾಡುವ ವಿಧಾನ ನೋಡೋಲು ಸುಲಭ. ಮಾಡೋಕೂ ಸುಲಭ ಆದರೆ ಒಂದು ಸಣ್ಣ ತಪ್ಪಾದರೂ ರುಚಿ ಬಣ್ಣ ಕೆಡುತ್ತದೆ. ಸರಿಯಾಗಿ ಮಾಡುವ ವಿಧಾನ ಹೇಗೆಂಬುದು ಇಲ್ಲಿ ತಿಳಿಯಿರಿ.
ಖಾರಾ ಮಂಡಕ್ಕಿ ಮಾಡಲು ಬೇಕಾಗುವ ಸಾಮಗ್ರಿಗಳು:
- 200 ಗ್ರಾಂ ಮಂಡಕ್ಕಿ ಅಥವಾ ಪಫ್ಡ್ ರೈಸ್
- ಚಮಚ ಕಡಲೆಕಾಯಿ ಅಥವಾ ಶೇಂಗಾ
- 3 ಟೇಬಲ್ಸ್ಪೂನ್ ಹುರಿದ ಕಡಲೆ
- 1 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಜೀರಿಗೆ
- 1 ಕೆಂಪು ಮೆಣಸಿನಕಾಯಿ
- ಒಂದು ಅಥವಾ ಎರಡು ಹಸಿ ಮೆಣಸಿನಕಾಯಿಗಳು
- 5 - 6 ಬೆಳ್ಳುಳ್ಳಿ ಎಸಳುಗಳು, ಜಜ್ಜಿದ್ದು
- 2 ಚಮಚ ಎಣ್ಣೆ
- 1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ (ನಿಮಗೆ ಎಷ್ಟು ಅಗತ್ಯವೋ ಅಷ್ಟು)
- 1/4 ಟೀಸ್ಪೂನ್ ಅರಿಶಿನ ಪುಡಿ
- 7 - 8 ಕರಿಬೇವು ಎಲೆಗಳು
- 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ)
ಈಗ ಖಾರ ಮಂಡಕ್ಕಿ ಅಥವಾ ಮಂಡಕ್ಕಿ ಚಿವ್ಡಾ ಮಾಡಲು ಸೂಚನೆಗಳು:
ಒಂದು ಪ್ಯಾನ್‌ನಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ, ಅದಕ್ಕೆ ಶೇಂಗಾ ಸೇರಿಸಿ, ಅದು ಸಿಡಿಯಲು ಪ್ರಾರಂಭವಾಗುವವರೆಗೆ ಹುರಿಯಿರಿ.
ಸಾಸಿವೆ ಮತ್ತು ಜೀರಿಗೆ ಸೇರಿಸಿ. ಸ್ವಲ್ಪ ಹೊತ್ತಿನಲ್ಲೇ ಸಾಸಿವೆ ಮತ್ತು ಜೀರಿಗೆ ಸಿಡಿಯುತ್ತದೆ. ಆಗ ತೆಗೆಯಿರಿ.
ನಂತರ ತುಂಡು ಮಾಡಿದ ಕೆಂಪು ಮೆಣಸಿನಕಾಯಿ, ಸೀಳಿದ ಹಸಿರು ಮೆಣಸಿನಕಾಯಿ, ಕರಿಬೇವು ಮತ್ತು ಜಜ್ಜಿದ ಬೆಳ್ಳುಳ್ಳಿ ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ.
ಈಗ ಹುರಿದ ಶೇಂಗಾ ಅಥವಾ ಕಡಲೆಕಾಯಿ ಅಥವಾ ಪುಟಾಣಿ ಸೇರಿಸಿ ಬೇಗನೆ ಮಿಶ್ರಣ ಮಾಡಿ.
ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿ ಬೇಗನೆ ಮಿಶ್ರಣ ಮಾಡಿ.
ಎಲ್ಲ ಮಿಕ್ಸ್ ಆಗಿ ಒಗ್ಗರಣೆ ಆಗಿರುತ್ತಲ್ಲ, ಈಗ ಮಂಡಾಳು ಇರುವ ಪಾತ್ರೆಗೆ ಹಾಕಿ ಐದು ನಿಮಿಷಗಳ ಕಾಲ ತುಂಬಾ ಚೆನ್ನಾಗಿ ಅರಶಿಣ ಬಣ್ಣಕ್ಕೆ ತಿರುಗುವವರೆಗೆ ಮಂಡಕ್ಕಿ ಉದ್ದನೆಯ ಚಮಚ ಅಥವಾ ಕೈಗಳಿಂದಲೇ ಮಿಶ್ರಣ ಮಾಡಿ. ಈಗ ಗರಿಗರಿಯಾದ ಮಂಡಕ್ಕಿ ಸಿದ್ಧವಾಗಿರುತ್ತೆ.
ಇದರೊಂದಿಗೆ ಮೆಣಸಿನ ಕಾಯಿ ಭಜಿ ಇದ್ದರೆ ಉತ್ತಮ. ಭಜಿ ಇಲ್ಲದಿದ್ರೆ ಚಿಂತೆಯಿಲ್ಲ. ಹಸಿ ಈರುಳ್ಳಿ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಂಡು ಖಾರಾ ಮಂಡಕ್ಕಿಯೊಂದಿಗೆ ತಿನ್ನಬಹುದು. ಜೊತೆಗೆ ಬಿಸಿ ಬಿಸಿ ಚಹಾ ಇರುತ್ತಿದ್ದರೆ, ಹೊರಗಡೆ ಮಳೆ, ತಂಪಾದ ಗಾಳಿ ಬೀಸುತ್ತಿದ್ದರೆ ಹೊತ್ತು ಸರಿದಿದ್ದೇ ಗೊತ್ತಾಗಲ್ಲ!


