Ghee making tips: ಮನೆಯಲ್ಲಿ ಹಾಲಿನ ಕೆನೆಯಿಂದ ತುಪ್ಪ ತಯಾರಿಸುವುದು ಒಂದು ಕಲೆ. ಆದರೆ ಅನೇಕ ಬಾರಿ ಎಷ್ಟೇ ಕೆನೆ ಸಂಗ್ರಹಿಸಿದರೂ ತುಪ್ಪ ಮಾತ್ರ ಸ್ವಲ್ಪವೇ ಬರುತ್ತದೆ. ನಿಮ್ಮ ಈ ಸಮಸ್ಯೆಗೆ ಒಂದು ಸುಲಭ ಪರಿಹಾರವಿದ್ದು, ಅತಿ ಕಡಿಮೆ ಸಮಯದಲ್ಲಿ ಹೆಚ್ಚು ತುಪ್ಪವನ್ನು ಹೇಗೆ ಪಡೆಯಬಹುದು ಎಂಬುದರ ಸಿಂಪಲ್ ಟ್ರಿಕ್ ಇಲ್ಲಿದೆ. ಈ ವಿಧಾನದಿಂದ ನಿಮ್ಮ ಸಮಯ ಮತ್ತು ಗ್ಯಾಸ್ ಎರಡೂ ಉಳಿತಾಯವಾಗುತ್ತದೆ. 

ನೆಯಲ್ಲಿ ತಯಾರಿಸಿದ ತುಪ್ಪವು ಮಾರುಕಟ್ಟೆಯಲ್ಲಿ ಸಿಗುವ ತುಪ್ಪಕ್ಕಿಂತ ರುಚಿ ಮತ್ತು ಪರಿಮಳ ಮಾತ್ರವಲ್ಲದೆ, ಶುದ್ಧತೆಯ ಕಾರಣದಿಂದ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಆದ್ದರಿಂದ ಹೆಚ್ಚಿನ ಗೃಹಿಣಿಯರು ಪ್ರತಿದಿನ ಸ್ವಲ್ಪ ಸ್ವಲ್ಪ ಹಾಲಿನ ಕೆನೆ ಸಂಗ್ರಹಿಸಿಟ್ಟುಕೊಂಡು, ನಂತರ ಅದರಿಂದ ತುಪ್ಪ ತಯಾರಿಸಿ ಶೇಖರಿಸಿಡುತ್ತಾರೆ. ಆದರೆ, ಎಷ್ಟು ಕೆನೆ ಸಂಗ್ರಹಿಸಿದರೂ ಅದರಿಂದ ನಿರೀಕ್ಷಿತ ಪ್ರಮಾಣದಲ್ಲಿ ತುಪ್ಪ ಬರುವುದಿಲ್ಲ ಎಂದು ಅನೇಕರು ದೂರುತ್ತಾರೆ. 10-15 ದಿನ ಕೆನೆ ಸಂಗ್ರಹಿಸಿದರೂ ಸ್ವಲ್ಪವೇ ತುಪ್ಪ ಬರುತ್ತದೆ, ಅಷ್ಟರಲ್ಲಿ ಕೆನೆ ಹಲವು ಬಾರಿ ಹುಳಿಯಾಗಿರುತ್ತದೆ. ನಿಮ್ಮ ಈ ಸಮಸ್ಯೆಗಳನ್ನು ದೂರ ಮಾಡಲು ಇಂದು ನಾವು ಒಂದು ಪುಟ್ಟ ಟ್ರಿಕ್ ತಂದಿದ್ದೇವೆ. ನೀವು ಕೆನೆಗೆ ಬರೀ ಈ ಒಂದು ಪದಾರ್ಥ ಸೇರಿಸಿದರೆ ಸಾಕು, ತುಪ್ಪವೂ ಹೆಚ್ಚಿಗೆ ಬರುತ್ತದೆ ಮತ್ತು ನಿಮ್ಮ ಗ್ಯಾಸ್ ಹಾಗೂ ಸಮಯ ಎರಡೂ ಉಳಿತಾಯವಾಗುತ್ತದೆ. ಹಾಗಾದರೆ ಬನ್ನಿ ಅದೇನೆಂದು ತಿಳಿಯೋಣ.

1 ಸಣ್ಣ ಬಟ್ಟಲು ಕೆನೆಯಿಂದ ಅರ್ಧ ಕೆಜಿ ತುಪ್ಪ ತಯಾರಿಸುವ ಹಂತ ಹಂತದ ವಿಧಾನ

ಹಂತ 1
ಈ ಟ್ರಿಕ್ ಮೂಲಕ ತುಪ್ಪ ತೆಗೆಯಲು ನಿಮಗೆ ಜಾಸ್ತಿ ಕೆನೆಯ ಅಗತ್ಯವಿಲ್ಲ. ವಾರವಿಡೀ ನೀವು ಸಂಗ್ರಹಿಸುವ ಒಂದು ಸಣ್ಣ ಬಟ್ಟಲು ಕೆನೆ ಸಾಕಾಗುತ್ತದೆ. ಇದನ್ನು ಫ್ರೀಜರ್‌ನಲ್ಲಿ ಶೇಖರಿಸಿಡಿ. ನಂತರ ತುಪ್ಪ ತಯಾರಿಸುವ 4-5 ಗಂಟೆಗಳ ಮೊದಲು ಕೆನೆಯನ್ನು ಫ್ರೀಜರ್‌ನಿಂದ ಹೊರತೆಗೆದು ರೂಮ್ ಟೆಂಪರೇಚರ್‌ನಲ್ಲಿ (ಸಾಮಾನ್ಯ ತಾಪಮಾನ) ಇಡಿ. ಇದರಿಂದ ಕೆನೆ ಚೆನ್ನಾಗಿ ಕರಗುತ್ತದೆ ಮತ್ತು ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.

ಹಂತ 2
ಈಗ ಒಂದು ದಪ್ಪ ತಳದ ಕಡಾಯಿಯನ್ನು ತೆಗೆದುಕೊಂಡು ಅದರಲ್ಲಿ ಕೆನೆಯನ್ನು ಕರಗಲು ಬಿಡಿ. ಇದನ್ನು ಒಂದು ಅಥವಾ ಎರಡು ನಿಮಿಷ ಕೈಯಾಡಿಸಿದರೆ ಅದು ಹಾಲಿನ ರೂಪಕ್ಕೆ ಬರುತ್ತದೆ. ಈ ಸಮಯದಲ್ಲಿ ಗ್ಯಾಸ್ ಉರಿಯನ್ನು ಮಧ್ಯಮವಾಗಿಯೇ (Medium Flame) ಇಡಿ.

ಹಂತ 3
ಕೆನೆ ಚೆನ್ನಾಗಿ ಕರಗಿದ ತಕ್ಷಣ, ಅದಕ್ಕೆ ಒಂದು ಸೀಕ್ರೆಟ್ ಪದಾರ್ಥವನ್ನು ಸೇರಿಸಬೇಕು. ಅದೇ ಗೋಧಿ ಹಿಟ್ಟು. ಹೌದು, ಗೋಧಿ ಹಿಟ್ಟನ್ನು ಬೆರೆಸುವುದರಿಂದ ಕೆನೆಯಲ್ಲಿರುವ ತುಪ್ಪ ಸಂಪೂರ್ಣವಾಗಿ ಹೊರಬರುತ್ತದೆ ಮತ್ತು ಬೇಗನೆ ತಯಾರಾಗುತ್ತದೆ. ಒಂದು ಬಟ್ಟಲು ಕೆನೆಗೆ ನೀವು ಎರಡು ಚಮಚ ಗೋಧಿ ಹಿಟ್ಟನ್ನು ಸೇರಿಸಬಹುದು. ಇದನ್ನು 1-2 ನಿಮಿಷಗಳ ಕಾಲ ಸತತವಾಗಿ ಕೈಯಾಡಿಸಿ, ಇದರಿಂದ ಹಿಟ್ಟು ಕೆನೆಯೊಂದಿಗೆ ಚೆನ್ನಾಗಿ ಬೆರೆಯುತ್ತದೆ.

ಹಂತ 4
ಈಗ ನೀವು ಮಧ್ಯಮ ಉರಿಯಲ್ಲಿ ಕೆನೆಯನ್ನು ಸತತವಾಗಿ ಕೈಯಾಡಿಸುತ್ತಾ ಬೇಯಿಸಬೇಕು. ಎರಡರಿಂದ ಮೂರು ನಿಮಿಷಗಳಲ್ಲಿಯೇ ತುಪ್ಪ ಮೇಲೆ ಬರಲು ಆರಂಭವಾಗುವುದನ್ನು ನೀವು ಗಮನಿಸಬಹುದು. ಇದನ್ನು ಅದರ ತಳದಲ್ಲಿ ಉಳಿಯುವ ಅವಶೇಷ ತಿಳಿ ಕೆಂಪು ಅಥವಾ ಬಂಗಾರದ ಬಣ್ಣಕ್ಕೆ ಬರುವವರೆಗೆ ಬೇಯಿಸಿ. ಅಷ್ಟೇ ನೋಡಿ.. ನಿಮ್ಮ ತುಪ್ಪ ಸಿದ್ಧವಾಗುತ್ತದೆ.

ಹಂತ 5
ಈ ಟ್ರಿಕ್‌ನಿಂದ ತುಪ್ಪವೂ ಹೆಚ್ಚಿಗೆ ಬರುತ್ತದೆ ಮತ್ತು ಉಳಿದ ಗಸಿ ಕೂಡ ಚೆನ್ನಾಗಿ ಸಿಗುತ್ತದೆ. ಗಸಿಗೆ ಸಕ್ಕರೆ ಸೇರಿಸಿ ನೀವು ಸಿಹಿ ತಿನಿಸು ತಯಾರಿಸಬಹುದು. ಇನ್ನು ತುಪ್ಪವನ್ನು ಸೋಸಿ ಬೇರೆ ಪಾತ್ರೆ ಅಥವಾ ಜಾರ್‌ನಲ್ಲಿ ಸಂಗ್ರಹಿಸಿಡಿ. ಬರೀ ಸ್ವಲ್ಪ ಕೆನೆಯಿಂದ ಅರ್ಧ ಕೆಜಿಯಷ್ಟು ತುಪ್ಪ ಆರಾಮವಾಗಿ ತಯಾರಾಗುತ್ತದೆ.

ಪಾತ್ರೆ ತಳ ಹಿಡಿಯದಂತೆ ತಡೆಯಲು

ತುಪ್ಪ ಕಾಯಿಸುವ ಮೊದಲು ಆ ಪಾತ್ರೆಗೆ ಸ್ವಲ್ಪ ನೀರು ಸವರಿ ಅಥವಾ ಒಂದು ಚಮಚ ಅಡುಗೆ ಎಣ್ಣೆ ಸವರಿ ನಂತರ ಕೆನೆ ಹಾಕಿದರೆ, ತಳದಲ್ಲಿ ಗಸಿ ಅಂಟಿಕೊಳ್ಳುವುದು ಕಡಿಮೆಯಾಗುತ್ತದೆ. ಪಾತ್ರೆ ತೊಳೆಯುವುದು ಸುಲಭವಾಗುತ್ತದೆ.

YouTube video player