ತದಡಿ-ಅಘನಾಶಿನಿ ನಡುವಿನ ಬಾರ್ಜ್ ಸೇವೆಗೆ ಕೊನೆಗೂ ದರಪಟ್ಟಿ ಅಳವಡಿಸಲಾಗುತ್ತಿದ್ದು, ಇಲಾಖೆ ನಿಗದಿತ ದರಕ್ಕಿಂತ ಹೆಚ್ಚಳ ಮಾಡಲಾಗಿದೆ. ಈ ಹೊಸ ದರಪಟ್ಟಿಯು ಸ್ಥಳೀಯರು ಮತ್ತು ಪ್ರವಾಸಿಗರ ನಡುವೆ ದರ ತಾರತಮ್ಯದ ಅನುಮಾನ ಮೂಡಿಸಿ, ಪ್ರಯಾಣಿಕರಲ್ಲಿ ಗೊಂದಲ ಸೃಷ್ಟಿಸಿದೆ.
ಗೋಕರ್ಣ: ತದಡಿ-ಅಘನಾಶಿನಿ ನಡುವೆ ಸಂಚರಿಸುವ ಬಾರ್ಜ್‌ನ ಪ್ರಯಾಣದ ದರ ಪಟ್ಟಿಯನ್ನು ಅಂತೂ ಅಳವಡಿಸಲು ಸಿದ್ಧತೆ ನಡೆದಿದೆ. ಗೋಕರ್ಣದಿಂದ ಕುಮಟಾಕ್ಕೆ ತೆರಳುವ ನಿತ್ಯ ಪ್ರಯಾಣಿಕರು, ಹಾಗೂ ಅಘನಾಶಿನಿ, ಬಾಡ ಕಡೆ ತೆರಳುವ ಪ್ರವಾಸಿಗರು ಈ ಬಾರ್ಜ ಅವಲಂಬಿಸಿದ್ದಾರೆ.
ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಇಲಾಖೆಯಿಂದ ಎರಡು ವರ್ಷದ ಹಿಂದೆ ಟೆಂಡರ್ ಮೂಲಕ ಬಾರ್ಜ ನಡೆಸಲು ಖಾಸಗಿಯರಿಗೆ ನೀಡಲಾಗಿತ್ತು. ಆದರೆ ಇಲಾಖೆಯ ನಿಯಮದಂತೆ ಪ್ರಯಾಣದರ ಆಕರಿಸದೆ ದುಪ್ಪಟ್ಟು ಹಣ ಪಡೆಯಲಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿ, ದರಪಟ್ಟಿ ಹಾಕುವಂತೆ ಆಗ್ರಹಿಸಿದ್ದರು. ಈ ಕುರಿತು ನಿರಂತರ ಪತ್ರಿಕೆ ವರದಿ ಪ್ರಕಟಿಸಿ ಜನರಿಗೆ ಆಗುತ್ತಿರುವ ತೊಂದರೆ ಬಗ್ಗೆ ವಿವರಿಸಿತ್ತು. ಇದರ ಪರಿಣಾಮ ಬಾರ್ಜ್ ನಡೆಸುವವರು ದರ ಪಟ್ಟಿಯನ್ನು ಹಾಕಿದ್ದಾರೆ.
ದರ ಹೆಚ್ಚಳದ ನಾಮಫಲಕ
ಇಲಾಖೆ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚು ತೋರಿಸಲಾಗಿದೆ. ಪ್ರಸ್ತುತ ಡಿಸೇಲ್ ದರ ಏರಿಕೆ, ಕೆಲಸಗಾರರ ಸಂಬಳ, ನಿರ್ವಹಣೆ ಕಾರಣದಿಂದ ದರ ಹೆಚ್ಚಿಸಲಾಗಿದೆ ಎಂದು ನಾಮಫಲಕದಲ್ಲಿ ತಿಳಿಸಲಾಗಿದೆ. ಆದರೆ ಇದಕ್ಕೆ ಇಲಾಖೆ ಅನುಮತಿ ಇದೆಯೇ ಎಂಬುದು ತಿಳಿಯದಾಗಿದೆ.
ಇನ್ನು ಈ ದರ ಪಟ್ಟಿಯಲ್ಲಿ ಸ್ಥಳೀಯರಿಗೆ ಎಂದು ದರ ನಮೂದಿಸಲಾದೆ. ಇದರಿಂದ ಪ್ರವಾಸಿಗರಿಗೆ ಹಾಗೂ ಹೊರಗಿನವರಿಗೆ ಇದಕ್ಕೂ ಹೆಚ್ಚು ಹಣ ಪಡೆಯುತ್ತಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಅಲ್ಲದೆ ಕನ್ನಡದಲ್ಲಿ ಮಾತ್ರ ದರಪಟ್ಟಿ ಹಾಕಿದ್ದು, ಉಳಿದ ಭಾಷೆಯಲ್ಲೂ ನಮೂದು ಮಾಡಬೇಕಿದೆ.
ದರ ಎಷ್ಟು?
ಈ ಮೊದಲು ಜನರಿಗೆ ₹5, ದ್ವಿಚಕ್ರವಾಹನಕ್ಕೆ ₹10 ಇಲಾಖೆಯಿಂದ ನಿಗದಿ ಮಾಡಲಾಗಿತ್ತು. ಆದರೂ ಹೆಚ್ಚು ಹಣ ಪಡೆಯುತ್ತಿದ್ದರು. ಹೊಸ ದರಪಟ್ಟಿಯಲ್ಲಿ ಸ್ಥಳೀಯ ಪ್ರಯಾಣಿಕರಿಗೆ 20, ಸ್ಥಳೀಯ ದ್ವಿಚಕ್ರವಾಹನ್ನಕ್ಕೆ 20 ಎಂದು ನಮೂದಿಸಿದ್ದಾರೆ. ಆದರೆ ಪ್ರವಾಸಿಗರಿಗೆ ಎಷ್ಟು ಹಣ ಎಂದು ಎಲ್ಲಿಯೂ ನಮೂದಿಸಿಲ್ಲ, ಹಿಂದೆ ₹50 ಪಡೆಯುತ್ತಿದ್ದು, ಪ್ರಸ್ತುತ ಎಷ್ಟು ತೆಗೆದುಕೊಳ್ಳುತ್ತಾರೆ ಎಂಬುದು ತಿಳಿಯದಾಗಿದ್ದು, ಪ್ರವಾಸಿಗರು ಎಂದರೆ ಎಲ್ಲರಂತೆ ಪ್ರಯಾಣಿಕರೇ ಆಗಿದ್ದು, ಎಲ್ಲರಿಗೂ ಒಂದೇ ದರ ನಿಗದಿಪಡಿಸುವಂತೆ ಇಲಾಖೆ ಕ್ರಮವಹಿಸಬೇಕಿದೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳನ್ನ ಸಂಪರ್ಕಿಸಲು ಪತ್ರಿಕೆ ದೂರವಾಣಿ ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲ.


