ಬೆಂಗಳೂರು (ಜೂ. 26): ಶರಾವತಿ ನೀರನ್ನು ಬೆಂಗಳೂರಿಗೆ ತರುವ ಪ್ರಸ್ತಾವನೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವಾಗಲೇ ಪಶ್ಚಿಮ ಘಟ್ಟದಲ್ಲಿ ಹರಿಯುವ ಅಘನಾಶಿನಿ ನದಿ ನೀರನ್ನು ಮಧ್ಯ ಕರ್ನಾಟಕ ಭಾಗಗಳಿಗೆ ತರುವ ಪ್ರಸ್ತಾಪವನ್ನು ಮಾಜಿ ಸಚಿವ ಟಿ.ಬಿ. ಜಯಚಂದ್ರ ಸರ್ಕಾರದ ಮುಂದಿಟ್ಟಿದ್ದಾರೆ.

ಪಶ್ಚಿಮ ಘಟ್ಟದ ಅಘನಾಶಿನಿ ನದಿ ಕೊಳ್ಳದಿಂದ ನೀರು ಹರಿದು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಈ ನೀರನ್ನು ಒಂದೆಡೆ ಸಂಗ್ರಹಿಸಿ ಮಧ್ಯ ಕರ್ನಾಟಕ ಪ್ರದೇಶದ ಜಿಲ್ಲೆಗಳಿಗೆ ಕುಡಿಯುವ ನೀರಿನ ಯೋಜನೆ  ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಈ ಯೋಜನೆಗೆ 10 ರಿಂದ 12 ಸಾವಿರ ಕೋಟಿ ರು. ಖರ್ಚಾಗಬಹುದು. ಇದರಿಂದ ಯಾವುದೇ ಪರಿಸರ ಹಾನಿ ಉಂಟಾಗುವುದಿಲ್ಲ. ಇದರಿಂದ ಬೆಂಗಳೂರು ಮತ್ತು ಮಾರ್ಗ ಮಧ್ಯದಲ್ಲಿ ಬರುವ ಪಟ್ಟಣ ಮತ್ತು ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ ರೂಪಿಸಬಹುದಾಗಿದೆ ಎಂದು ತಿಳಿಸಿದರು. ಮಳೆಗಾಲದಲ್ಲಿ ಅಘನಾಶಿನಿ ನದಿಯಲ್ಲಿ 100 ರಿಂದ 120 ಟಿಎಂಸಿಯಷ್ಟು ನೀರಿನ ಲಭ್ಯತೆ ಇದೆ ಎಂದರು.