ಒಂದು ಕಾಲದಲ್ಲಿ ಮಧ್ಯಮ ವರ್ಗದ ಜೀವನ ನಡೆಸುತ್ತಿದ್ದ ಶ್ಯಾಮ್ ಸುಂದರ್ ಶರ್ಮಾ ಅವರು, ಎಸೆದ ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡುವ ಮೂಲಕ 2,700 ಕೋಟಿ ಮೌಲ್ಯದ 'ಗಣೇಶ್ ಇಕೋಸ್ಪಿಯರ್' ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ದಕ್ಷಿಣ ಕೊರಿಯಾದ ತಂತ್ರಜ್ಞಾನ ಬಳಸಿ, PET ಬಾಟಲಿಗಳಿಂದ ಪಾಲಿಯೆಸ್ಟರ್ ಫೈಬರ್ ತಯಾರಿಸಿ, ಪರಿಸರ ಸಂರಕ್ಷಣೆಯ ಜೊತೆಗೆ ಬೃಹತ್ ಉದ್ಯಮವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.

ಪ್ಲಾಸ್ಟಿಕ್​ ಬಳಕೆ ಮಾಡಬಾರದು ಎನ್ನುವ ಎಷ್ಟೇ ಕಾನೂನು ಇದ್ದರೂ, ಎಲ್ಲದಕ್ಕೂ ಪ್ಲಾಸ್ಟಿಕ್​ ಬೇಕೇ ಬೇಕು. ಇಂದು ಬಹುತೇಕ ಆಹಾರ ಸಾಮಗ್ರಿಗಳಿಂದ ಹಿಡಿದು ಎಲ್ಲೆಡೆ ಪ್ಲಾಸ್ಟಿಕ್​ದ್ದೇ ಕಾರುಬಾರು. ಪ್ಲಾಸ್ಟಿಕ್​ ಜೀವಕ್ಕೆ ಭಾರಿ ಅಪಾಯ ಎನ್ನುವುದು ತಿಳಿದಿದ್ದರೂ, ಅದು ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿಬಿಟ್ಟಿದೆ. ಪ್ಲಾಸ್ಟಿಕ್​ ಬಾಟಲಿ ಬಳಸುವುದು ಕೂಡ ಕಾಮನ್​ ಆಗಿದೆ. ನೀರು, ಜ್ಯೂಸ್ ಅಥವಾ ಇನ್ನಾವುದಾದರೂ ಪಾನೀಯ ಕುಡಿದ ಬಳಿಕ ಆ ಪ್ಲಾಸ್ಟಿಕ್​ ಬಾಟಲಿಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ, ಅದೇ ಎಸೆವ ಪ್ಲಾಸ್ಟಿಕ್​ನಿಂದಲೇ ಇಂದು 2,700 ಕೋಟಿ ಉದ್ಯಮ ಸ್ಥಾಪಿಸಿರುವ ಸಹಸ್ರ ಕೋಟ್ಯಧಿಪತಿಯ ಸ್ಟೋರಿ ಇಲ್ಲಿ ಹೇಳ್ತಿದ್ದೇವೆ ಕೇಳಿ.

ಇವರ ಹೆಸರು ಶ್ಯಾಮ್ ಸುಂದರ್ ಶರ್ಮಾ. ಭಾರತದ ಉದ್ಯಮ ಕ್ಷೇತ್ರದಲ್ಲಿ ಇವರಿಗೆ ಸಿಕ್ಕಾಪಟ್ಟೆ ಹೆಸರು ಇದೆ. ಹಿಂದೊಮ್ಮೆ ಮಿಡ್ಲ್ ಕ್ಲಾಸ್​​ ಜೀವನ ಸಾಗಿಸುತ್ತಿದ್ದ ಶರ್ಮಾ ಅವರು, ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡುವ ಮೂಲಕ ಸಹಸ್ರ ಕೋಟ್ಯಧಿಪತಿಯಾಗಿದ್ದಾರೆ. ಸುಮಾರು 2,700 ಕೋಟಿ ಮೌಲ್ಯದ ಸಾಮ್ರಾಜ್ಯ ಸ್ಥಾಪಿಸಿದ್ದಾರೆ. ಪರಿಸರ ಸಂರಕ್ಷಣೆ ಮತ್ತು ಉದ್ಯಮ ಎರಡನ್ನೂ ಒಟ್ಟಿಗೆ ಬೆಸೆಯುವ ಈ ಯಶೋಗಾಥೆ ಇಂದು ಅನೇಕರಿಗೆ ಸ್ಫೂರ್ತಿಯಾಗಿದೆ.

ಎಲ್ಲಿಂದ ಶುರುವಾಯ್ತು ಈ ಪಯಣ

ಭಾರತದವರಾಗಿದ್ದರೂ, ಶ್ಯಾಮ್ ಸುಂದರ್ ಶರ್ಮಾ ಅವರು ದಕ್ಷಿಣ ಕೊರಿಯಾದಿಂದ ಅತ್ಯಾಧುನಿಕ ಪ್ಲಾಸ್ಟಿಕ್ ಮರುಬಳಕೆ ತಂತ್ರಜ್ಞಾನವನ್ನು ಕಲಿತು ಅದನ್ನು ಭಾರತಕ್ಕೆ ಪರಿಚಯಿಸಿದ್ದಾರೆ. ಈ ಮೂಲಕ ಗಣೇಶ್​​ ಇಕೋಸ್ಪಿಯರ್​ (Ganesh Ecosphere) ಸಂಸ್ಥೆಯನ್ನು ಆರಂಭಿಸಿದರು. ಇಂದು ಈ ಸಂಸ್ಥೆ ದೇಶದ ಪ್ರಮುಖ PET (ಪಾಲಿಥಿಲೀನ್ ಟೆರೆಫ್ತಾಲೇಟ್) ಪ್ಲಾಸ್ಟಿಕ್ ಬಾಟಲಿ ಮರುಬಳಕೆ ಸಂಸ್ಥೆಗಳಲ್ಲಿ ಒಂದಾಗಿದ್ದು, ಸಹಸ್ರಾರು ಕೋಟಿಯ ವ್ಯವಹಾರ ನಡೆಸುತ್ತಿದೆ. ಪ್ಲಾಸ್ಟಿಕ್ ಬಾಟಲಿಯಿಂದ ಪಾಲಿಯೆಸ್ಟರ್ ಫೈಬರ್ ತಯಾರಿ ಮಾಡುವತ್ತ ಈ ಸಂಸ್ಥೆ ಕೇಂದ್ರೀಕೃತವಾಗಿದೆ.

ಪಾಲಿಯೆಸ್ಟರ್ ಫೈಬರ್ ತಯಾರಾಗುವುದು ಹೇಗೆ?

ಸಂಗ್ರಹಿಸಿದ ಪ್ಲಾಸ್ಟಿಕ್ ಬಾಟಲಿಗಳನ್ನು ಮೊದಲು ಪ್ರತ್ಯೇಕಿಸಿ, ಅದನ್ನು ಸಂಪೂರ್ಣ ಶುದ್ಧಗೊಳಿಸಲಾಗುತ್ತದೆ. ಬಳಿಕ ಅವುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ವಿಶೇಷ ತಂತ್ರಜ್ಞಾನದ ಮೂಲಕ ಅತ್ಯಂತ ಸೂಕ್ಷ್ಮ ಪಾಲಿಯೆಸ್ಟರ್ ಫೈಬರ್ ಆಗಿ ಪರಿವರ್ತಿಸಲಾಗುತ್ತದೆ. ಈ ಫೈಬರ್‌ನಿಂದ ಹಲವು ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಅವುಗಳಲ್ಲಿ ಟೀ-ಶರ್ಟ್‌ಗಳು, ಜಾಕೆಟ್‌ಗಳು, ಬೆಡ್‌ಶೀಟ್‌ಗಳು, ಬ್ಲಾಂಕೆಟ್‌ಗಳು, ಕೈಗಾರಿಕಾ ಬಳಕೆಯ ವಿವಿಧ ಫ್ಯಾಬ್ರಿಕ್ ಉತ್ಪನ್ನಗಳು ಸೇರಿದಂತೆ ವಿವಿಧ ಉತ್ಪನ್ನಗಳು ರೆಡಿಯಾಗುತ್ತವೆ.

ಗಣೇಶ್​​ ಇಕೋಸ್ಪಿಯರ್​ ಸಂಸ್ಥೆಯಲ್ಲಿ ಪ್ರತಿವರ್ಷ ಸುಮಾರು 9.4 ಬಿಲಿಯನ್ ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡಲಾಗುತ್ತದೆ. ಈ ಮೂಲಕ ಲಕ್ಷಾಂತರ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡಿ ಪರಿಸರ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಲಾಗುತ್ತಿದೆ. ಶ್ಯಾಮ್ ಸುಂದರ್ ಶರ್ಮಾ ಅವರ ಯಶೋಗಾಥೆ ಕಸದ ವಸ್ತುವಿಗೂ ಮೌಲ್ಯವಿದೆ ಎಂಬುದನ್ನು ಸಾಬೀತುಪಡಿಸಿದೆ. ಸರಿಯಾದ ತಂತ್ರಜ್ಞಾನ, ಹೊಸ ಆಲೋಚನೆ ಮತ್ತು ದೃಢ ಸಂಕಲ್ಪ ಇದ್ದರೆ ಪರಿಸರವನ್ನು ರಕ್ಷಿಸುತ್ತಲೇ ದೊಡ್ಡ ಉದ್ಯಮವನ್ನು ಕಟ್ಟಬಹುದು ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆಯಾಗಿದೆ.