ತುಮಕೂರು ಜಿಲ್ಲೆಯಲ್ಲಿ ನಟ ಕಿಚ್ಚ ಸುದೀಪ್ ಅವರ ತಾಯಿ ಹೆಸರಿನಲ್ಲಿ ಕ್ರಿಕೆಟ್ ಟೂರ್ನಿ ಆಯೋಜಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಹಣದೊಂದಿಗೆ ಪರಾರಿಯಾಗಿದ್ದಾನೆ. ಮತ್ತೊಂದೆಡೆ, ಚಿತ್ರದುರ್ಗದಲ್ಲಿ ನಡೆದ ಮದಕರಿ ನಾಯಕ ಜಯಂತಿಯಲ್ಲಿ ಸುದೀಪ್ ಭಾಗವಹಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ.

ತುಮಕೂರು: ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂದೀಪ್ ಹೆಸರಿನಲ್ಲಿ‌ ಕ್ರಿಕೆಟ್ ಟೂರ್ನಿ ಮಾಡುವುದಾಗಿ ನಂಬಿಸಿ ಹಣ ಪಡೆದು ಧೋಖಾ ಮಾಡಿರುವ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ದೊಡ್ಡಗುಳ ಗ್ರಾಮದಲ್ಲಿ ನಡೆದಿದೆ. ಪ್ರಶಾಂತ್ ಎಂಬಾತ ಹಣದ ಸಮೇತ ಪರಾರಿ ಆಗಿದ್ದಾನೆ. ಅ.9ರಂದೇ ಪಂದ್ಯಾವಳಿ ನಿಗದಿಯಾಗಿತ್ತು. ಸುಮಾರು 27 ಕ್ರಿಕೆಟ್ ತಂಡಗಳಿಂದ‌ ಹಣ ಪಡೆದಿದ್ದ ಪ್ರಶಾಂತ್, ಪಂದ್ಯಾವಳಿ ಶುರು ಆಗುತ್ತಿದ್ದಂತೆ ಹಣದ ಸಮೇತ ಪರಾರಿ ಆಗಿದ್ದಾನೆ ಎಂದು ತಿಳಿದು ಬಂದಿದೆ.

‘ಎರಡು ರಾಜ್ಯ ಒಂದು ಕಪ್’ ಎಂಬ ಹೆಸರಲ್ಲಿ ಟೂರ್ನಮೆಂಟ್‌ ಆಯೋಜಿದ್ದ. ಆಹ್ವಾನ ಪತ್ರಿಕೆಯಲ್ಲಿ ಕಿಚ್ಚ ಸುದೀಪ್ ಮತ್ತು ಅವರ ತಾಯಿ ಸರೋಜಾ ಫೋಟೋ ಹಾಕಿಸಿದ್ದ. 27 ತಂಡದಿಂದ ಹಣ ಸಂಗ್ರಹಿಸಿ ಒಂದೂವರೆ ಲಕ್ಷ ಹಣದೊಂದಿಗೆ ಪರಾರಿ ಆಗಿದ್ದು, ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದಕರಿ ನಾಯಕ ಜಯಂತೀಲಿ ನಟ ಸುದೀಪ್: ಹರ್ಷೋದ್ಘಾರ

ಚಿತ್ರದುರ್ಗ: ‘ಉಸಿರೇ ಉಸಿರೇ ನೀ ಉಸಿರ ಕೊಲ್ಲ ಬೇಡ, ಪ್ರೀತಿ ಹೆಸರಲಿ, ನೀ ಹೃದಯ ಗೆಲ್ಲಬೇಡ...’ ಎಂಬ ಕಿಚ್ಚ ಚಿತ್ರದ ಹಾಡಿಗೆ ಹಿಂದೊಮ್ಮೆ ಹಿರಿಯೂರಿನ ವಾಣಿವಿಲಾಸ ಸಾಗರ ಜಲಾಶಯದ ಮೇಲೆ ಹೆಜ್ಜೆಗಳನ್ನಿಡುತ್ತಾ ಸಾಗಿದ್ದ ನಟ ಸುದೀಪ್ ಮಂಗಳವಾರದ ಮಟ್ಟಿಗೆ ಚಿತ್ರದುರ್ಗದಲ್ಲಿ ಹವಾ ಸೃಷ್ಟಿಸಿದ್ದರು.

ರಾಜವೀರ ಮದಕರಿ ನಾಯಕನ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಬಂದ ಸುದೀಪ್ ಹೆಲಿಪ್ಯಾಡ್‌ನಿಂದ ನೇರವಾಗಿ ಹಳೆ ಮಾಧ್ಯಮಿಕ ಶಾಲಾ ಆವರಣಕ್ಕೆ ಆಗಮಿಸಿ ಅಭಿಮಾನಿಗಳತ್ತ ಕೈ ಬೀಸಿದರು. ಬ್ಯಾರಿಕೇಡ್‌ಗಳ ಮೇಲತ್ತಿ ನಟನ ನೋಡಲು ವೇದಿಕೆಯತ್ತ ನುಗ್ಗಿದ ಅಭಿಮಾನಿಗಳನ್ನು ಪೊಲೀಸರು ತಡೆದರು.

ಮದಕರಿ ನಾಯಕರ ಜಯಂತ್ಯುತ್ಸವದಲ್ಲಿ ಸುದೀಪ್ ಮಾತು

ನಂತರ ಮಾತನಾಡಿದ ಸುದೀಪ್‌, ಮದಕರಿ ನಾಯಕರ ಜಯಂತ್ಯುತ್ಸವ ಹಾಗೂ ಸ್ಮರಣಾರ್ಥ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕರೆದಾಗ ಯಾವತ್ತೂ ಇಂತಹ ಸಂದರ್ಭಗಳನ್ನು ಮಿಸ್ ಮಾಡುವುದಿಲ್ಲ. ಚಿತ್ರದುರ್ಗಕ್ಕೆ ಬರುವುದು ಒಂದು ಎತ್ತರವಾದ ಅನುಭವವಾದರೆ, ಇಲ್ಲಿಂದ ವಾಪಸ್ ಹೋಗುವಾಗ ಒಂದು ಆನೆ ಬಲವನ್ನು ಪಡೆದುಕೊಂಡು ಹೋದಂತೆ ಭಾಸವಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಕೋಟೆನಾಡಿಗೆ ಚಪ್ಪಲಿ ಹಾಕದೇ ಬರಿಗಾಲಲ್ಲಿ ಬಂದು ಹೋದ ನಟ ಕಿಚ್ಚ ಸುದೀಪ್, ಕಾರಣ ಏನು ಗೊತ್ತಾ?