ಬೆಳ್ತಗಂಡಿ ತಾಲೂಕಿನ ಸೌಜನ್ಯ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಮರು ತನಿಖೆಗೆ ರಚನೆಗೊಂಡ ಎಸ್ಐಟಿ ತಂಡ ಬೆಳ್ತಂಗಡಿ ಕೋರ್ಟ್ನಲ್ಲೇ ಸೌಜನ್ಯ ತಾಯಿ ರಕ್ತದ ಮಾದರಿ ಸಂಗ್ರಹಿಸಿದೆ. ಜೊತೆಗೆ ಕೆಲ ದಾಖಲೆ ಸಲ್ಲಿಸಿದೆ.
ಬೆಳ್ತಗಂಡಿ (ಅ.23) ಕಳೆದ ಹಲವು ವರ್ಷಗಳಿಂದ ಸತತವಾಗಿ ಚರ್ಚೆಯಾಗುತ್ತಿರುವ, ಪ್ರತಿಭಟನೆ, ಹೋರಾಟಗಳ ಮೂಲಕ ಜೀವಂತವಾಗಿರುವ ಬೆಳ್ತಂಗಡಿ ತಾಲೂಕಿನ ಸೌಜನ್ಯ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಸೌಜನ್ಯ ಪ್ರಕರಣ ಮರುತನಿಕೆಗೆ ಸುಪ್ರೀಂ ಕೋರ್ಟ್ ಸೂಚನೆ ಮೇರೆ ಸರ್ಕಾರ ಹೊಸ ಎಸ್ಐಟಿ ತಂಡ ರಚಿಸಿದೆ. ಇದೀಗ ತನಿಖೆ ಚುರುಕುಗೊಂಡಿದ್ದು, ಎಸ್ಐಟಿ ತಂಡ ಬೆಳ್ತಂಗಡಿಗೆ ಆಗಮಿಸಿದೆ. ಬೆಳ್ತಂಗಡಿ ನ್ಯಾಯಾಲಯದಲ್ಲೇ ಸೌಜನ್ಯ ತಾಯಿ ಕುಸುಮಾವತಿಯ ರಕ್ತ ಮಾದರಿಯನ್ನು ಸಂಗ್ರಹಿಸಲಾಗಿದೆ.
ಜಡ್ಜ್ ಸಮ್ಮುಖದಲ್ಲಿ ರಕ್ತ ಮಾದರಿ ಸಂಗ್ರಹ
ಎಎಸ್ಐಟಿ ಅಧಿಕಾರಿಗಳು ಬೆಳ್ತಗಂಡಿ ನ್ಯಾಯಾಲಯಕ್ಕೆ ಎಲ್ಲಾ ತಯಾರಿಯೊಂದಿಗೆ ಆಗಮಿಸಿದ್ದರು. ವೈದ್ಯರ ಜೊತೆ ಆಗಮಿಸಿದ ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ಕೋರ್ಟ್ನ ಜಡ್ಜ್ ಸಮ್ಮುಖದಲ್ಲೇ ರಕ್ತದ ಮಾದರಿ ಸಂಗ್ರಹಿಸಿದೆ. DNA ಟೆಸ್ಟ್ ಗಾಗಿ ರಕ್ತದ ಮಾದರಿ ಸಂಗ್ರಹಿಸಿರೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದೇ ವೇಳೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಎಸ್ಐಟಿ ಅಧಿಕಾರಿಗಳಾದ ಲೋಕೇಶ್ ಜಗಲ್ಸಾರ್, ಎಸಿಪಿ ಮನೋಜ್ ಕುಮಾರ್ ನಾಯ್ಕ್ ತಂಡ ಪ್ರಿಂಟರ್ ಮತ್ತು ಲ್ಯಾಪ್ಟಾಪ್ನ್ನು ಕೋರ್ಟ್ಗೆ ತಂದಿದ್ದಾರೆ. ಹಲವು ದಾಖಲೆ ಸೇರಿದಂತೆ ಕೆಲ ಮಹತ್ವದ ಮಾಹಿತಿಗಳನ್ನು ಜಡ್ಜ್ ಸಮ್ಮುಖದಲ್ಲಿ ಪಡೆಯಲು ಎಸ್ಐಟಿ ಮುಂದಾಗಿದೆ. ಸೌಜನ್ಯ ತಾಯಿಯ ರಕ್ತದ ಮಾದರಿ ಸಂಗ್ರಹ ಹಾಗೂ ಈ ಹಿಂದಿನ ಹಲವು ಸ್ಯಾಂಪಲ್ಗಳ ವರದಿ ಕಾರಣದಿಂದ ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆ ವೈದ್ಯರನ್ನು ನ್ಯಾಯಾಲಯಕ್ಕೆ ಕರೆಸಿಕೊಂಡಿದ್ದರು. ಬ್ಲಡ್ ಸ್ಯಾಂಪಲ್ ಕಿಟ್ ಸಮೇತ ವೈದ್ಯಕೀಯ ಸಿಬ್ಬಂದಿಗಳು ಕೋರ್ಟ್ಗೆ ಆಗಮಿಸಿದ್ದರು.
ಎಸ್ ಐ ಟಿ ಮುಖ್ಯಸ್ಥ ಶಶಿಕುಮಾರ್, ಐಪಿಎಸ್ ಅಧಿಕಾರಿಗಳಾದ ನಿಶಾ ಜೇಮ್ಸ್, ಲೋಕೆಶ್ ಜಗಲ್ಸಾರ್,ಸುಧೀರ್ ಕುಮಾರ್ ರೆಡ್ಡಿ ಸೇರಿದ ತಂಡ ಇತ್ತೀಚೆಗ ಮಂಗಳೂರು ಎಸ್ಐಟಿ ಕಚೇರಿಗೆ ಆಗಮಿಸಿ ಸೌಜನ್ಯ ಪ್ರಕರಣ ಕುರಿತು ಹಲವು ದಾಖಲೆಗಳ ಪರಿಶೀಲನೆ ನಡೆಸಿತ್ತು. ಸೌಜನ್ಯ ಪ್ರಕರಣದ ಮರುತನಿಖೆ ಆರಂಭಿಕ ಹಂತದಲ್ಲಿ ಈ ಹಿಂದಿನ ತನಿಖೆಯಲ್ಲಿನ ಲೋಪದೋಷ ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿತ್ತು. ಬೆಳ್ತಂಗಡಿ ಪೊಲೀಸ್, ಸಿಐಡಿ ಹಾಗೂ ಸಿಬಿಐ ತನಿಖೆಯ ಲೋಪ ಪತ್ತೆ ಹಚ್ಚಲು ಹಲವು ದಾಖಲೆಗಳು, ಕೇಸ್ ಡೈರಿ, ಚಾರ್ಜ್ ಶೀಟ್ ಪರಿಶೀಲನೆ ನಡೆಸಲಾಗಿತ್ತು. ಡಿಎನ್ಎ ಮಾದರಿ ಸಂಗ್ರಹಣೆ, ಪ್ರಯೋಗಾಲಯಕ್ಕೆ ಸಾಗಣೆ ಮತ್ತು ಪರೀಕ್ಷೆಯ ಮೂಲ ದಾಖಲೆಗಳ ಪರಿಶೀಲನೆ ಮಾಡಲಾಗಿತ್ತು. ಛತ್ರಿ, ಚಪ್ಪಲಿ, ಒಳ ಉಡುಪು ಮತ್ತು ಇತರ ವೈಯಕ್ತಿಕ ವಸ್ತುಗಳ ಹುಡುಕಾಟ ಹಾಗೂ ಜಪ್ತಿ ದಾಖಲೆಗಳ ಹೋಲಿಕೆ ಮಾಡಲಾಗಿತ್ತು.
2012ರ ಕ್ಯಾಮೆರಾ ಮಾಹಿತಿ ಪರಿಶೀಲನೆ
ಘಟನೆ ನಡೆದ 2012ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ಯಾಮೆರಾ, ಈ ಕುರಿತು ದಾಖಲೆಗಳನ್ನು ಎಸ್ಐಟಿ ತಂಡ ಪರಿಶೀಲನೆ ನಡೆಸಿದೆ. ಇದೇ ವೇಳೆ ಅಂದಿನ ಮೊಬೈಲ್ ಟವರ್ ದಾಖಲೆಗಳ ಕುರಿತು ಪರಿಶೀಲನೆ ನಡೆಸಿದೆ. ಸೌಜನ್ಯಳನ್ನ ಕೊನೆಯದಾಗಿ ನೋಡಿದ ಸಂಬಂಧಿಕರು ಮತ್ತು ಸ್ಥಳೀಯರ ಹೇಳಿಕೆಗಳ ಮರುಪರಿಶೀಲನೆ ನಡೆಸಲಾಗಿದೆ. ಇದೇ ವೇಳೆ ಸುಪ್ರೀಂ ಕೋರ್ಟ್ನಲ್ಲಿ ಉಲ್ಲೇಖಿಸಲಾದ ಎಂಟು ಸಂಭಾವ್ಯ ಸಾಕ್ಷಿಗಳ ಮಾಹಿತಿಯನ್ನು ಪರಿಶೀಲಿಸಲಾಗಿದೆ.
ಮರಣೋತ್ತರ ಪರೀಕ್ಷೆ, ವೈದ್ಯರ ಹೇಳಿಕೆಗಳು, ಗಾಯಗಳ ವಿವರ, ಸಾವಿನ ಅಂದಾಜು ಸಮಯ ಮತ್ತು ಮೂಲ ವೈದ್ಯಕೀಯ ದಾಖಲೆಗಳನ್ನು ಹೋಲಿಕೆ ಮಾಡಲಾಗಿದೆ. ಸಾಕ್ಷಿಗಳ ಹೇಳಿಕೆಗಳ ವ್ಯತ್ಯಾಸಗಳ ಬಗ್ಗೆಯೂ ಎಸ್ಐಟಿ ತಂಡ ನೋಟ್ ಮಾಡಿಕೊಂಡಿದೆ. ನ್ಯಾಯಾಲಯದ ಸಾಕ್ಷ್ಯ ಮತ್ತು ನಂತರದ ಹೇಳಿಕೆಗಳಲ್ಲಿನ ವ್ಯತ್ಯಾಸ, ಸಂತ್ರಸ್ತ ಕುಟುಂಬವು ಹಿಂದೆ ಹೆಸರಿಸಿದ್ದ ವ್ಯಕ್ತಿಗಳ ಬಗ್ಗೆ ಲಭ್ಯವಿರುವ ದಾಖಲೆಗಳನ್ನು ಮರುಪರಿಶೀಲಿಸುವುದು ಸೇರಿದಂತೆ ಹಲವು ದಾಖಲೆಗಳ ಪರಿಶೀಲನೆ ಮಾಡಲಾಗಿದೆ ಎಂದು ಎಸ್ಐಟಿ ತಂಡ ಹೇಳಿತ್ತು.









