ಕಿಚ್ಚ ಸುದೀಪ್ ಅವರ ಗನ್ ಮ್ಯಾನ್ ಒಬ್ಬರು ಅಭಿಮಾನಿಯ ಕಪಾಳಕ್ಕೆ ಬಾರಿಸಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ಚಿತ್ರದುರ್ಗ: ಕಿಚ್ಚ ಸುದೀಪ್ (Kiccha Sudeep) ಅವರು ಇವತ್ತು ಕೋಟೆನಾಡು ಚಿತ್ರದುರ್ಗದಲ್ಲಿ (Chitradurga) ನಡೆದ ಮದಕರಿ ನಾಯಕ ಜಯಂತಿ ಆಚರಣೆಗೆ ಆಗಮಿಸಿದ್ದರು. ಈ ಕಾರ್ಯಕ್ರಮ ಮುಗಿಸಿ ಹೊರಡುವ ವೇಳೆ ಸುದೀಪ್ ಅವರ ಗನ್‌ಮ್ಯಾನ್ ಯಡವಟ್ಟು ಒಂದನ್ನು ಮಾಡಿದ್ದಾರೆ.

ಅಸಲಿಗೆ ಆಗಿದ್ದೇನು?

ಮದಕರಿ ನಾಯಕ ಜಯಂತಿ ಆಚರಣೆ ನಂತರ ಸುದೀಪ್ ಅಲ್ಲಿಂದ ಹೊರಡಲು ಮುಂದಾಗಿದ್ದಾರೆ. ಸುದೀಪ್ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ದೌಡಾಯಿಸಿದ್ದರು. ಸುದೀಪ್ ಹೊರಡುತ್ತಿದ್ದಂತೆಯೇ ನೂಕು ನುಗ್ಗಲು ಉಂಟಾಗಿದೆ. ಆಗ ಸುದೀಪ್ ಅವರಿಗೆ ರಕ್ಷಣೆ ನೀಡುವ ಧಾವಂತದಲ್ಲಿ ಅಭಿಮಾನಿಗಳ ಮೇಲೆ ತಾಳ್ಮೆ ಕಳೆದುಕೊಂಡಿದ್ದಾರೆ. ಕಿಚ್ಚ ನಡೆದುಕೊಂಡು ಬರುತ್ತಿರುವಾಗ ದೂಡುತ್ತಿದ್ದ ಅಭಿಮಾನಿಗಳನ್ನ ನಿಯಂತ್ರಿಸಲು ಸಾಧ್ಯವಾಗದೇ ಓರ್ವ ಅಭಿಮಾನಿಯ ಕೆನ್ನೆಗೆ ಬಾರಿಸಿದ್ದಾರೆ. ಕೆನ್ನೆಗೆ ಹೊಡೆಯುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಸುದೀಪ್ ನೋಡಲು ಮುಗಿಬಿದ್ದ ಫ್ಯಾನ್ಸ್

ಈ ಘಟನೆಗೂ ಮುನ್ನ ಸುದೀಪ್ ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಸುದೀಪ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮತ್ತು ಅವರನ್ನು ಹತ್ತಿರದಿಂದ ಕಾಣಲು ಮುಗಿಬಿದ್ದಿದ್ದಾರೆ. ಆಗ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ನೂಕು-ನುಗ್ಗಲು ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು ಅಭಿಮಾನಿಗಳ ನಿಯಂತ್ರಿಸಲು ಹರಸಾಹಸ ಪಟ್ಟರು. ವೇದಿಕೆ ಮೇಲೆ ಜಮಾಯಿಸಿದ್ದ ಫ್ಯಾನ್ಸ್‌ನ ಕಂಟ್ರೋಲ್‌ಗೆ ತೆಗೆದುಕೊಳ್ಳುವುದು ತುಂಬಾ ಕಷ್ಟ ಆಯಿತು.

ಇನ್ನು ಕಾರ್ಯಕ್ರಮದಲ್ಲಿ ಮಾತನ್ನಾಡಿರುವ ಸುದೀಪ್.. ನೀವೆಲ್ಲ ಹೇಗಿದ್ದೀರಿ ಎಂದು ಕೇಳುತ್ತ ಮಾತನ್ನ ಆರಂಭಿಸಿದರು. ಇನ್ನು ಕಳೆದ ಬಾರಿ ಬಂದಿದ್ದ ಘಟನೆಯನ್ನೂ ಸ್ಮರಿಸಿದರು. ನಾನು ಚಿತ್ರದುರ್ಗಕ್ಕೆ ಕರೆದಾಗ ತಾವು ಯಾವತ್ತೂ ತಪ್ಪಿಸಿಕೊಳ್ಳುವುದಿಲ್ಲ. ಆಗಾಗ ನಿಮ್ಮನ್ನು ನೋಡಲು ಬರುತ್ತೇನೆ. ನೀವೆಲ್ಲರೂ ಚೆನ್ನಾಗಿರಬೇಕು ಎಂದು ಆಶಿಸುತ್ತೇನೆ ಎಂದರು.

ಕಾರ್ಯಕ್ರಮಕ್ಕೆ ಬರುವುದಕ್ಕೂ ಮೊದಲು ಸುದೀಪ್ ಬಸವಮೂರ್ತಿ ಮಾದಾರ ಚನ್ನಯ್ಯ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರ್ಶೀವಾದ ಪಡೆದರು. ಮಾದಾರ ಚನ್ನಯ್ಯ ಸ್ವಾಮೀಜಿಗಳು ಸುದೀಪ್ ಅವರನ್ನು ಅಭಿನಂದಿಸಿ ಕೆಲಕಾಲ ಅವರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕ ರಾಜುಗೌಡ ಸೇರಿದಂತೆ ಹಲವು ಗಣ್ಯರ ಉಪಸ್ಥಿತರಿದ್ದರು.

ಒಟ್ಟಾರೆ ಇವತ್ತು ಚಿತ್ರದುರ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದೀಪ್ ಅವರನ್ನು ಕಣ್ತುಂಬಿಕೊಂಡು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ತಮ್ಮ ನೆಚ್ಚಿನ ನಟನನ್ನು ಹತ್ತಿರದಿಂದ ಕಂಡು ಸಂತೋಷಗೊಂಡಿದ್ದಾರೆ. ಆದರೆ ಸುದೀಪ್ ಆಗಮನದ ವೇಳೆ ಉಂಟಾಗಿರುವ ನೂಕು ನುಗ್ಗಲುಗಳು ಕೆಲ ಕಾಲ ಆಂತಕ ಸೃಷ್ಟಿಸಿರೋದು ಅಲ್ಲಿನ ವ್ಯವಸ್ಥಾಪಕರ ಮೇಲೆ ಪ್ರಶ್ನೆಗಳು ಇದ್ದಿವೆ. ಸುದೀಪ್ ಬರುತ್ತಾರೆ ಎಂದು ಗೊತ್ತಿದ್ದರೂ ಭದ್ರತಾ ಕ್ರಮಗಳ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲವಾ? ಎಂಬ ಪ್ರಶ್ನೆ ಶುರುವಾಗಿದೆ.