ನಮ್ಮ ಮೆಟ್ರೋದ 'ಬ್ಲೂ ಲೈನ್' ಯೋಜನೆಯ ಕೆಆರ್ ಪುರಂ ಮತ್ತು ಮಾರತಹಳ್ಳಿ ನಡುವೆ ಅಕ್ಟೋಬರ್ ಅಂತ್ಯಕ್ಕೆ ಪ್ರಾಯೋಗಿಕ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ. ಸಚಿವ ಕೃಷ್ಣ ಬೈರೇಗೌಡ ಅವರು ಕಾಮಗಾರಿ ಪರಿಶೀಲಿಸಿ, ವಿಳಂಬ ಮಾಡದಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು (ಅ.23): ನಮ್ಮ ಮೆಟ್ರೋದ ಬಹುನಿರೀಕ್ಷಿತ 'ಬ್ಲೂ ಲೈನ್' (Blue Line) ಯೋಜನೆಯ ಕೆಆರ್ ಪುರಂ (KR Puram) ಮತ್ತು ಮಾರತಹಳ್ಳಿ (Marathahalli) ನಡುವಿನ ಮಾರ್ಗದಲ್ಲಿ ಅಕ್ಟೋಬರ್ ಅಂತ್ಯದ ವೇಳೆಗೆ ರೈಲುಗಳ ಪ್ರಾಯೋಗಿಕ ಸಂಚಾರ (Trial Run) ಆರಂಭವಾಗುವ ನಿರೀಕ್ಷೆಯಿದೆ. ಆದರೆ, ಸೆಂಟ್ರಲ್ ಸಿಲ್ಕ್ ಬೋರ್ಡ್ವರೆಗಿನ ಸಂಪೂರ್ಣ ಮಾರ್ಗವು ಮುಂದಿನ ವರ್ಷದ (2027) ಮಧ್ಯಭಾಗದ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಳ್ಳಲಿದೆ.
ನಡೆಯುತ್ತಿರುವ ಕಾಮಗಾರಿಗಳನ್ನು ಖುದ್ದಾಗಿ ಪರಿಶೀಲಿಸಿ, ಬಿಎಮ್ಆರ್ಸಿಎಲ್ ಹಾಗೂ ಸಂಬಂಧಿತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ಬೃಹತ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು, ಹೊರವರ್ತುಲ ರಸ್ತೆ (ORR) ವ್ಯಾಪ್ತಿಯಲ್ಲಿ ಮೆಟ್ರೋ ನಿಲ್ದಾಣಗಳು ಹಂತ-ಹಂತವಾಗಿ ಕಾರ್ಯಾರಂಭಗೊಳ್ಳುತ್ತಿದ್ದಂತೆ ರೈಲುಗಳ ಸಂಚಾರವನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ, ಕೆ.ಆರ್. ಪುರಂ - ಹೆಬ್ಬಾಳ - ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಕಾಮಗಾರಿಯನ್ನು ಅತ್ಯಂತ ವೇಗವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸಚಿವರು, ಮುಂದಿನ ವರ್ಷದ (2027) ನವೆಂಬರ್ ವೇಳೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸುವುದಾಗಿ ನಮ್ಮ ಮೆಟ್ರೋ ಭರವಸೆ ನೀಡಿದೆ ಎಂದರು.
ತಂತ್ರಜ್ಞಾನ ವಲಯ ಮತ್ತು ಏರ್ಪೋರ್ಟ್ಗೆ ಮಹತ್ವದ ಸಂಪರ್ಕ
ಮೆಟ್ರೋ ಹಂತ 2A ಮತ್ತು 2B ಯನ್ನು ಒಳಗೊಂಡಿರುವ 'ಬ್ಲೂ ಲೈನ್' ರಾಜಧಾನಿ ಬೆಂಗಳೂರಿನ ಅತ್ಯಂತ ಪ್ರಮುಖ ಮೂಲಸೌಕರ್ಯ ಯೋಜನೆಯಾಗಿದೆ. ಇದರಲ್ಲಿ ಕೆ.ಆರ್. ಪುರಂ - ಏರ್ಪೋರ್ಟ್ ಮಾರ್ಗವು 38.44 ಕಿ.ಮೀ ಉದ್ದವಿದ್ದರೆ, ಕೆ.ಆರ್. ಪುರಂ - ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗವು 19.75 ಕಿ.ಮೀ ಉದ್ದವಿದೆ. ಈ ಉಭಯ ಕಾರಿಡಾರ್ಗಳು ನಗರದ ತಂತ್ರಜ್ಞಾನ ಕಾರಿಡಾರ್ (Tech Corridor) ಅಷ್ಟೇ ಅಲ್ಲದೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ನೇರ ಸಂಪರ್ಕ ಕಲ್ಪಿಸಲಿವೆ.
ಪರಿಶೀಲನೆ ವೇಳೆ, ಹೆಬ್ಬಾಳ ಮತ್ತು ಕಸ್ತೂರಿ ನಗರ ನಡುವಿನ ಹೊರವರ್ತುಲ ರಸ್ತೆಯ ಸರ್ವೀಸ್ ರಸ್ತೆ ಸಂಪೂರ್ಣವಾಗಿ ಹಾಳಾಗಿರುವುದನ್ನು ಸಚಿವರು ಗಮನಿಸಿದರು. ಕೆಲವು ಕಡೆಗಳಲ್ಲಿ ಮೆಟ್ರೋ ಎಂಜಿನಿಯರ್ಗಳು ಕಾಮಗಾರಿ ಆರಂಭಿಸಿದ್ದರೂ ರಸ್ತೆಯನ್ನು ಸೂಕ್ತವಾಗಿ ಅಗಲೀಕರಣಗೊಳಿಸಿರಲಿಲ್ಲ. ಅಲ್ಲದೆ, ಕಾಮಗಾರಿ ಸಾಮಗ್ರಿಗಳನ್ನು ರಸ್ತೆಯ ಮೇಲೆಯೇ ಹಾಕಿದ್ದರಿಂದ ರಸ್ತೆ ಸಂಚಾರ ಮತ್ತಷ್ಟು ಕಿರಿದಾಗಿತ್ತು.
ವೀರಣ್ಣಪಾಳ್ಯ ಮೆಟ್ರೋ ನಿಲ್ದಾಣದ ಬಳಿ ರಸ್ತೆಯಲ್ಲಿ ಬಿದ್ದಿರುವ ಕಾಮಗಾರಿ ಸಾಮಗ್ರಿಗಳನ್ನು ತೆರವುಗೊಳಿಸಿ ಒಂದು ವಾರದೊಳಗೆ ರಸ್ತೆ ಅಗಲೀಕರಣ ಮಾಡುವಂತೆ ಅಧಿಕಾರಿಗಳಿಗೆ ಸಚಿವರು ಗಡುವು ನೀಡಿದರು. ಜೊತೆಗೆ, ಸರ್ವೀಸ್ ರಸ್ತೆಯನ್ನು ಅಗಲಗೊಳಿಸಿ ಅತಿಕ್ರಮಣಗಳನ್ನು ತೆರವುಗೊಳಿಸುವಂತೆ 'ಉತ್ತರ ಪಾಲಿಕೆ'ಗೆ ನಿರ್ದೇಶಿಸಿದರು.
ಕಾವೇರಿ ಪೈಪ್ಲೈನ್ ಅಡ್ಡಿ - ಕಾಮಗಾರಿ ಜಡತ್ವಕ್ಕೆ ಸಚಿವರ ಗರಂ
ವಿಶೇಷವಾಗಿ ವೀರಣ್ಣಪಾಳ್ಯ ಮತ್ತು ಹೆಬ್ಬಾಳ ನಡುವೆ ಕಾವೇರಿ ಕುಡಿಯುವ ನೀರಿನ ಪೈಪ್ಲೈನ್ಗಳು ಹಾಗೂ ಒಳಚರಂಡಿ ಲೈನ್ಗಳು ಹಾದುಹೋಗಿರುವುದರಿಂದ ಕಾಮಗಾರಿ ವಿಳಂಬವಾಗಿದೆ ಮತ್ತು ಭಾರಿ ವಾಹನ ಸಂಚಾರದಿಂದಾಗಿ ಕೆಲಸದ ವೇಗ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ವಿವರಣೆ ನೀಡಿದರು.
ಈ ಸವಾಲುಗಳನ್ನು ಒಪ್ಪಿಕೊಂಡ ಸಚಿವ ಕೃಷ್ಣ ಬೈರೇಗೌಡ, ಬೃಹತ್ ಮೂಲಸೌಕರ್ಯ ಯೋಜನೆಗಳಲ್ಲಿ ಇಂತಹ ಸಣ್ಣಪುಟ್ಟ ಅಡೆತಡೆಗಳು ಸಹಜ. ಆದರೆ ಸಂಬಂಧಪಟ್ಟ ಗುತ್ತಿಗೆದಾರರು ಅಗತ್ಯವಿರುವಷ್ಟು ತುರ್ತಿನಿಂದ ಸ್ಪಂದಿಸಿಲ್ಲ ಎಂದರು. "ಕಾಮಗಾರಿಯನ್ನು ವೇಗಗೊಳಿಸಲು ಸರ್ಕಾರವು ನಿರಂತರವಾಗಿ ಅವರೊಂದಿಗೆ ಮಾತುಕತೆ ನಡೆಸುತ್ತಿದೆ. ಯೋಜನೆ ಈಗಾಗಲೇ ಒಂದು ವರ್ಷ ವಿಳಂಬವಾಗಿದೆ, ಇನ್ಮುಂದೆ ಯಾವುದೇ ಕಾರಣಕ್ಕೂ ಮತ್ತೆ ವಿಳಂಬವಾಗಬಾರದು" ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು.









