ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಬನವಾಸಿ ಹೆದ್ದಾರಿ ಬಳಿಯ 110 ಎಕರೆ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆ 37 ವರ್ಷಗಳ ನಂತರ ಯಶಸ್ವಿಯಾಗಿ ವಶಕ್ಕೆ ಪಡೆದಿದೆ. ಈ ಭೂಮಿಯು 'ಕಾಮಧೇನು ಸಹಕಾರಿ ಸಂಸ್ಥೆ'ಗೆ ಗುತ್ತಿಗೆ ನೀಡಲಾಗಿದ್ದು, ಗುತ್ತಿಗೆ ಅವಧಿ ಮುಗಿದರೂ ಕಾನೂನು ಸಂಘರ್ಷದಿಂದಾಗಿ ಪ್ರಕ್ರಿಯೆ ವಿಳಂಬವಾಗಿತ್ತು.

ಬೆಂಗಳೂರು/ಶಿರಸಿ (ಆ.24): ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಬನವಾಸಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಹಾಗೂ ಪಶ್ಚಿಮ ಘಟ್ಟಗಳ ವನ್ಯಜೀವಿ ಕಾರಿಡಾರ್ ಭಾಗವಾಗಿರುವ ಸುಮಾರು 100 ಕೋಟಿ ರೂಪಾಯಿಗೂ ಅಧಿಕ ವಾಣಿಜ್ಯ ಮೌಲ್ಯದ 110 ಎಕರೆ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ಯಶಸ್ವಿಯಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಜಮೀನು ಸರ್ಕಾರದಿಂದ 'ಕಾಮಧೇನು ಸಹಕಾರಿ ಹಾಲು ಮತ್ತು ಹಣ್ಣು ಸಂಸ್ಕರಣಾ ಸಂಸ್ಥೆ'ಗೆ (Kamadhenu Cooperative Milk and Fruit Processing Society) ಗುತ್ತಿಗೆ ನೀಡಲಾಗಿದ್ದ ಒಟ್ಟು 389.07 ಎಕರೆ ಅರಣ್ಯ ಭೂಮಿಯ ಒಂದು ಭಾಗವಾಗಿದೆ.

37 ವರ್ಷಗಳ ಬಳಿಕ ತೆರವು ಕಾರ್ಯಾಚರಣೆ: ಕಾಮಧೇನು ಸಂಸ್ಥೆಗೆ ನೀಡಲಾಗಿದ್ದ ಗುತ್ತಿಗೆ ಅವಧಿಯು 1989 ರಲ್ಲೇ ಅಂತ್ಯಗೊಂಡಿತ್ತು. ಆದರೆ, ಭೂಮಿಯನ್ನು ಹಿಂಪಡೆಯಲು ಇಲಾಖೆ ನಡೆಸಿದ್ದ ತಪ್ಪಾದ ಪ್ರಯತ್ನ ಕಾನೂನು ಸಂಘರ್ಷಕ್ಕೆ ಕಾರಣವಾಗಿದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. ಇತ್ತೀಚೆಗೆ ಈ ಜಮೀನಿನ ಮೇಲಿನ ಹಕ್ಕನ್ನು ಪ್ರತಿಪಾದಿಸುತ್ತಿದ್ದವರು ತೆರವು ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ವಿಫಲರಾದ ಬೆನ್ನಲ್ಲೇ, ಉನ್ನತ ನ್ಯಾಯಾಲಯವು ಕಾನೂನುಬದ್ಧವಾಗಿ ಭೂಮಿಯ ವಶಕ್ಕೆ ಕ್ರಮ ಕೈಗೊಳ್ಳಿ ಎಂದು ಇಲಾಖೆಗೆ ನಿರ್ದೇಶನ ನೀಡಿತ್ತು. ಯಾವುದೇ ತಡೆಯಾಜ್ಞೆ ಸಿಗದಂತೆ ಅರಣ್ಯ ಇಲಾಖೆಯು ನ್ಯಾಯಾಲಯದಲ್ಲಿ ಮುನ್ನೆಚ್ಚರಿಕೆಯಾಗಿ ಕೇವಿಯೆಟ್‌ ಸಲ್ಲಿಸಿತ್ತು.

389.07 ಎಕರೆ ಅರಣ್ಯ ಭೂಮಿಯ ಬಳಕೆ ವಿವರ

ಇಲಾಖೆಯು ಭೂಬಳಕೆ ಮಾದರಿಯನ್ನು ವಿಶ್ಲೇಷಿಸಿದಾಗ, 389.07 ಎಕರೆ ಜಮೀನನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು ಎಂಬುದು ಕಂಡುಬಂದಿದೆ. ಇದರಲ್ಲಿ ದೊಡ್ಡ ಪ್ರಮಾಣದ ಜಾಗ ಅಂದಾಜು 110 ಎಕರೆ ಭೂಮಿ ಖಾಲಿಯಾಗಿಯೇ ಉಳಿದಿತ್ತು. ಉಳಿದಂತೆ ತೆಂಗು, ಬತ್ತ ಸೇರಿದಂತೆ ಬೆಳೆದು ನಿಂತಿರುವ ಕೃಷಿ ಭೂಮಿ, ಅಡಿಕೆ ಮರಗಳನ್ನು ಹೊಂದಿರುವ ತೋಟಗಾರಿಕೆ ಭಾಗ ವಶಪಡಿಸಿಕೊಳ್ಳಲಾಗಿದೆ. 9 ಎಕರೆಗಿಂತ ಕಡಿಮೆ ಜಾಗದಲ್ಲಿ 33 ಕಟ್ಟಡಗಳನ್ನು ಕೂಡ ನಿರ್ಮಾಣ ಮಾಡಲಾಗಿತ್ತು.

ಮಹಿಳೆಯಿಂದ ವಿಷ ಸೇವನೆ ಯತ್ನ

ಅಧಿಕಾರಿಗಳು ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆ, ಬೆಳೆದು ನಿಂತಿರುವ ಕೃಷಿ ಭೂಮಿಯನ್ನೂ ಇಲಾಖೆ ಸ್ವಾಧೀನಪಡಿಸಿಕೊಳ್ಳಲಿದೆ ಎಂಬ ವದಂತಿ ಹಬ್ಬಿ ನೂರಾರು ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದರು. ಈ ವೇಳೆ ಮಹಿಳೆಯೊಬ್ಬಳು ವಿಷ ಸೇವಿಸುವುದಾಗಿ ಬೆದರಿಕೆ ಹಾಕಿದ್ದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಜೆಸಿಬಿ ಬಳಸಿ ತೆರವು, ಸ್ಥಳದಲ್ಲೇ ಸಸಿ ನೆಟ್ಟು ಬೇಲಿ

ಶಿರಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಸಂದೀಪ್ ಸೂರ್ಯವಂಶಿ ಅವರ ನೇತೃತ್ವದಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಕಾರ್ಯಾಚರಣೆ ನಡೆಸಿದರು. ವಶಪಡಿಸಿಕೊಂಡ ಖಾಲಿ ಜಾಗದಲ್ಲಿ ಜೆಸಿಬಿ (Earthmovers) ಮೂಲಕ ಗುಂಡಿಗಳನ್ನು ತೋಡಿ, ಸಂಜೆಯ ವೇಳೆಗೆ ಸ್ಥಳೀಯ ತಳಿಯ ಗಿಡಗಳನ್ನು ನೆಡಲಾಯಿತು. ಜೊತೆಗೆ ಇಡೀ 110 ಎಕರೆ ಪ್ರದೇಶಕ್ಕೆ ಬೇಲಿ ಹಾಕುವ ಕಾಮಗಾರಿಗೆ ಚಾಲನೆ ನೀಡಲಾಯಿತು.

ಕಾರ್ಯಾಚರಣೆಯ ಕುರಿತು ಮಾತನಾಡಿದ ಡಿಎಸ್‌ಎಫ್ ಸಂದೀಪ್ ಸೂರ್ಯವಂಶಿ, "ನ್ಯಾಯಾಲಯದ ಆದೇಶವನ್ನು ಸಂಪೂರ್ಣವಾಗಿ ಪಾಲಿಸಿ, ಕಾನೂನು ಪ್ರಕಾರವೇ ಭೂಮಿಯನ್ನು ಹಿಂಪಡೆಯುತ್ತಿದ್ದೇವೆ. ಪ್ರಸ್ತುತ ಖಾಲಿ ಜಾಗವನ್ನು ವಶಕ್ಕೆ ಪಡೆದಿದ್ದೇವೆ. ಇನ್ನುಳಿದ ಜಾಗದ ಕುರಿತು ಕಾನೂನು ತಂಡದೊಂದಿಗೆ ಸಮಾಲೋಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ," ಎಂದು ತಿಳಿಸಿದ್ದಾರೆ.