ಶಿವಮೊಗ್ಗ ಲೋಕಸಭಾ ಕ್ಷೇತ್ರದ 398 ಗ್ರಾಮಗಳಲ್ಲಿ 4ಜಿ ಟವರ್ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, 232 ಗ್ರಾಮಗಳಿಗೆ ಮಂಜೂರಾತಿ ದೊರೆತಿದೆ. ತಿರಸ್ಕೃತಗೊಂಡ 148 ಗ್ರಾಮಗಳಿಗೆ ಮರುಪ್ರಸ್ತಾವನೆ ಸಲ್ಲಿಸಲು ಹಾಗೂ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸಂಸದ ಬಿ.ವೈ.ರಾಘವೇಂದ್ರ ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ನೆಟ್‌ವರ್ಕ್ ಕೊರತೆಯಿರುವ ಗ್ರಾಮಗಳನ್ನು ಗುರುತಿಸಿ ಒಟ್ಟು 398 ಗ್ರಾಮಗಳಲ್ಲಿ 4ಜಿ ಮೊಬೈಲ್ ಟವರ್‌ಗಳ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಪೈಕಿ 232 ಗ್ರಾಮಗಳಿಗೆ ಮಂಜೂರಾತಿ ದೊರೆತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಬಿಎಸ್‌ಎನ್‌ಎಲ್ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಮಹತ್ವದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, 148 ಗ್ರಾಮಗಳ ಪ್ರಸ್ತಾವನೆಗಳು ತಿರಸ್ಕೃತಗೊಂಡಿರುವುದರಿಂದ, ಆ ಗ್ರಾಮಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಮುಂದುವರಿದಿದೆ. ತಿರಸ್ಕೃತಗೊಂಡಿರುವ ಮತ್ತು ನೆಟ್ ವರ್ಕ್ ಸಿಗ್ನಲ್ ಬಹಳ ವೀಕ್ ಆಗಿ ಸಿಗುತ್ತಿರುವ 148 ಗ್ರಾಮಗಳ ಪ್ರಸ್ತಾವನೆಗಳನ್ನು ಮತ್ತೊಮ್ಮೆ ಸ್ಥಳೀಯ ಪರಿಸ್ಥಿತಿಯ ಆಧಾರದ ಮೇಲೆ ಪರಿಶೀಲಿಸಿ, ಅಗತ್ಯವಿರುವ ಕಡೆ ಮರುಪ್ರಸ್ತಾವನೆ ಸಲ್ಲಿಸುವಂತೆ ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ಸೂಚಿಸಿದರು. ಕೇವಲ ತಾಂತ್ರಿಕ ಅಥವಾ ಆಡಳಿತಾತ್ಮಕ ಕಾರಣಗಳಿಂದ ಗ್ರಾಮಗಳು ನೆಟ್‌ವರ್ಕ್ ಸೌಲಭ್ಯದಿಂದ ವಂಚಿತವಾಗಬಾರದು. ಪ್ರತಿಯೊಂದು ಗ್ರಾಮದಲ್ಲಿನ ನೈಜ ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ನಿರ್ದೇಶನ ನೀಡಿದರು.

ನೆಟ್‌ವರ್ಕ್ ಸಮಸ್ಯೆ ಆದ್ಯತೆ ಮೇರೆಗೆ ಪರಿಹರಿಸಲು ಸೂಚನೆ

ವಿಶೇಷವಾಗಿ ತೀರ್ಥಹಳ್ಳಿ, ಹೊಸನಗರ, ಸಾಗರ ಮತ್ತು ಸೊರಬ ತಾಲ್ಲೂಕುಗಳ ಮಲೆನಾಡು ಹಾಗೂ ಗ್ರಾಮೀಣ ಪ್ರದೇಶಗಳು ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕುಗ್ರಾಮಗಳಲ್ಲಿ ಭೌಗೋಳಿಕ ಹಾಗೂ ಗುಡ್ಡಗಾಡು ಪ್ರದೇಶಗಳ ಕಾರಣದಿಂದ ಉಂಟಾಗುತ್ತಿರುವ ನೆಟ್‌ವರ್ಕ್ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸುವಂತೆ ಸಂಸದರು ಸೂಚಿಸಿದರು.

ಕೇಂದ್ರಕ್ಕೆ ಶಿಫಾರಸು:

ಸೊರಬ ತಾಲೂಕಿನ 6, ಹೊಸನಗರ ತಾಲೂಕಿನ 4, ತೀರ್ಥಹಳ್ಳಿ ತಾಲ್ಲೂಕಿನ 3 ಹಾಗೂ ಸಾಗರ ತಾಲೂಕಿನ 1 ಗ್ರಾಮಕ್ಕೆ ನೆಟ್ ವರ್ಕ್ ಸೌಲಭ್ಯದ ಕೊರತೆಯಿದ್ದು, ಈ ಗ್ರಾಮಗಳಿಗೆ ಹೊಸದಾಗಿ 4ಜಿ ಬಿ.ಎಸ್.ಎನ್.ಎಲ್ ಟವರ್ ಗಳನ್ನು ಮಂಜೂರು ಮಾಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಕಳುಹಿಸಿದ್ದು, ಮಂಜೂರಾತಿ ನಿರೀಕ್ಷೆಯಿದೆ. ಮಂಜೂರಾತಿ ದೊರೆತಿರುವ ಟವರ್‌ಗಳ ನಿರ್ಮಾಣ ಕಾಮಗಾರಿಗಳಲ್ಲಿ ವಿಳಂಬವಾಗದಂತೆ, ಪ್ರಗತಿಯಲ್ಲಿರುವ ಎಲ್ಲಾ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಸದರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಟವರ್ ನಿರ್ಮಾಣಕ್ಕೆ ಅಗತ್ಯವಿರುವ ಜಾಗ, ವಿದ್ಯುತ್ ಸಂಪರ್ಕ, ತಾಂತ್ರಿಕ ಸಮಸ್ಯೆಗಳು, ಉಪಕರಣಗಳ ಅಳವಡಿಕೆ, ಅನುಮತಿಗಳು ಸೇರಿದಂತೆ ಯಾವುದೇ ಆಡಳಿತಾತ್ಮಕ ಅಡಚಣೆಗಳಿದ್ದಲ್ಲಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಽಸಿ ಶೀಘ್ರವಾಗಿ ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಗ್ರಾಮೀಣ ಭಾಗಗಳಲ್ಲಿ ಇನ್ನೂ ಸಮರ್ಪಕ ಮೊಬೈಲ್ ನೆಟ್‌ವರ್ಕ್ ಲಭ್ಯವಾಗದಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ವಿದ್ಯಾರ್ಥಿಗಳು, ನ್ಯಾಯಬೆಲೆ ಅಂಗಡಿಗಳು, ಶಾಲೆಗಳು, ಅಂಗನವಾಡಿ ಕೇಂದ್ರಗಳು, ಸಣ್ಣ ವ್ಯಾಪಾರಸ್ಥರು ಹಾಗೂ ವಿವಿಧ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವ ಜನರಿಗೆ ಆನ್‌ಲೈನ್ ಸೇವೆಗಳು ಮತ್ತು ಡಿಜಿಟಲ್ ಸಂಪರ್ಕದ ಕೊರತೆಯಿಂದ ಸಮಸ್ಯೆಯಾಗುತ್ತಿದೆ. ಸರ್ಕಾರದ ವಿವಿಧ ಸೇವೆಗಳು ಡಿಜಿಟಲ್ ವ್ಯವಸ್ಥೆಯ ಮೂಲಕ ಲಭ್ಯವಾಗುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ನೆಟ್‌ವರ್ಕ್ ಸೌಲಭ್ಯ ಕಲ್ಪಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಸಂಸದರು ಅಧಿಕಾರಿಗಳ ಗಮನಕ್ಕೆ ತಂದರು.

ಸಭೆಯಲ್ಲಿ ಬೆಂಗಳೂರು ಬಿಎಸ್‌ಎನ್‌ಎಲ್ ವೃತ್ತ ಕಚೇರಿಯ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಸುಕುಮಾರನ್ ಎನ್.ಕೆ., ಶಿವಮೊಗ್ಗ ಬಿಎಸ್‌ಎನ್‌ಎಲ್ ವೃತ್ತ ಕಚೇರಿಯ ಜನರಲ್ ಮ್ಯಾನೇಜರ್ ಬಿನಯ್ ಕುಮಾರ್ ಸಿಹ್ನಾ, ಉಪ ಪ್ರಧಾನ ವ್ಯವಸ್ಥಾಪಕರಾದ ಎಸ್.ಬಿ. ಕೊಪ್ಪ, ಎಜಿಎಂ ವಿಜಯ್ ರೂಬಾನ್ ಸಿಂಗ್ ಸೇರಿದಂತೆ ಬಿಎಸ್‌ಎನ್‌ಎಲ್ ಇಲಾಖೆಯ ಇತರೆ ಅಧಿಕಾರಿಗಳು ಹಾಜರಿದ್ದರು.