ಮಂಗಳೂರು(ಮೇ.03): ಪ್ರತಿವರ್ಷ ಬೆಂಕಿ ಬಿದ್ದು ಸಾವಿರಾರು ಎಕರೆ ಸಸ್ಯ, ಪ್ರಾಣಿ ಸಂಪತ್ತು ನಾಶಕ್ಕೆ ಸಾಕ್ಷಿಯಾಗುತ್ತಿದ್ದ ರಾಜ್ಯದ ರಕ್ಷಣಾ ಗೋಡೆ ಪಶ್ಚಿಮಘಟ್ಟ ಈ ಬಾರಿ ಕೊರೋನಾ ಲಾಕ್‌ಡೌನ್‌ನಿಂದಾಗಿ ಮಾನವ ಹಸ್ತಕ್ಷೇಪವಿಲ್ಲದೆ ನಿರುಮ್ಮಳವಾಗಿದೆ.

ಅಲ್ಲಿರುವ ಸಸ್ಯ, ಪ್ರಾಣಿ ಸಂಕುಲಗಳು ಶಿಲಾಯುಗದಂತೆ ಸ್ವಚ್ಛಂದವಾಗಿ ಉಸಿರಾಡುತ್ತಿವೆ. ಕಾಡ್ಗಿಚ್ಚು ಪ್ರಮಾಣ ಈ ಬಾರಿ ಭಾರಿ ಇಳಿಮುಖವಾಗಿದ್ದೇ ಇದಕ್ಕೆ ಕಾರಣ. ಕಾಡ್ಗಿಚ್ಚಿಗೆ ಮಾನವ ಹಸ್ತಕ್ಷೇಪವೇ ಮುಖ್ಯ ಪ್ರೇರಣೆ ಎನ್ನುವ ಸತ್ಯವನ್ನು ಈ ಲಾಕ್‌ಡೌನ್‌ ಬಯಲುಗೊಳಿಸಿದೆ!

ಲಾಕ್‌ಡೌನ್‌ನಿಂದಾಗಿ ಗದ್ದೆಯಲ್ಲಿಯೇ ಸೃಷ್ಟಿಯಾಯ್ತು ಮಾರ್ಕೆಟ್..!

ಹಿಂದೆ ಪಶ್ಚಿಮ ಘಟ್ಟದಲ್ಲಿ ಭಾರಿ ಕಾಡ್ಗಿಚ್ಚು ಸಂಭವಿಸುತ್ತಿದ್ದಾಗ ಇದು ಮಾನವ ಮಾನವ ನಿರ್ಮಿತ ಎಂದು ಪರಿಸರವಾದಿಗಳು ಎಚ್ಚರಿಕೆ ನೀಡುತ್ತಲೇ ಬಂದಿದ್ದರು. ಘಟ್ಟಪ್ರದೇಶದಲ್ಲಿರುವ ನೂರಾರು ಅಕ್ರಮ ರೆಸಾರ್ಟ್‌, ಟಿಂಬರ್‌ ಮಾಫಿಯಾ, ಜನವಿರೋಧಿ ಕಾಮಗಾರಿಗಳನ್ನು ನಿಲ್ಲಿಸುವಂತೆ ಆಗ್ರಹಿಸುತ್ತಿದ್ದರು. ಆದರೆ ರಾಜ್ಯ ಅರಣ್ಯ ಇಲಾಖೆ ಮಾತ್ರ ಈ ಅಕ್ರಮಗಳನ್ನು ಒಪ್ಪುತ್ತಲೇ ಇರಲಿಲ್ಲ. ಈ ಬಾರಿ ಒಪ್ಪಲೇಬೇಕಾದ ಸಂದರ್ಭ ಬಂದೊದಗಿದೆ. ಪ್ರಳಯರೂಪಿಯಾಗಿ ಬಂದ ಕೊರೋನಾ ಲಾಕ್‌ಡೌನ್‌ನಿಂದಾಗಿ ಅರಣ್ಯದಲ್ಲಿ ಮಾನವ ಪ್ರವೇಶ ಬಹುತೇಕ ನಿಂತಿದೆ. ಹಾಗಾಗಿ ಕಾಡ್ಗಿಚ್ಚೂ ಇಲ್ಲವಾಗಿದೆ.

ಲಾಕ್‌ ಡೌನ್‌, ಕಾಡ್ಗಿಚ್ಚೂ ಡೌನ್‌:

ಮಾಚ್‌ರ್‍, ಏಪ್ರಿಲ್‌ ತಿಂಗಳು ಬಂತೆಂದರೆ ಪಶ್ಚಿಮಘಟ್ಟದ ಮೂಕ ಸಂಕುಲಗಳಿಗೆ ನಡುಕ. ಒಂದೆಡೆ ನೀರಿಲ್ಲದ ಸಂಕಟವಾದರೆ, ಮತ್ತೊಂದೆಡೆ ಬೆಂಕಿ ಯಾವ ಮೂಲೆಯಿಂದ ಬರುತ್ತದೋ ಎನ್ನುವ ಭಯ. ಘಟ್ಟಪ್ರದೇಶದಲ್ಲಿ ಸಾವಿರಾರು ಎಕರೆ ಅರಣ್ಯ ಬೆಂಕಿಗೆ ಆಹುತಿಯಾಗುತ್ತಲೇ ಇರುತ್ತದೆ. ಆದರೆ ಕಳೆದ ಒಂದೂವರೆ ತಿಂಗಳಿನಿಂದ ಲಾಕ್‌ಡೌನ್‌ ಸಮಯದಲ್ಲಿ ಗಮನಾರ್ಹವಾದ ಬೆಂಕಿ ಬಿದ್ದಿಲ್ಲ ಎನ್ನುವುದು ವಿಶೇಷ.

ಲಾಕ್‌ಡೌನ್‌ ಎಫೆಕ್ಟ್‌: ಈರುಳ್ಳಿ ಬೆಳೆದ ರೈತನ ಕಣ್ಣಲ್ಲಿ ನೀರು, ನಿಲ್ಲದ ಸಂಕಷ್ಟ..!

ಕಳೆದ ವರ್ಷ, ಸುಮಾರು 25 ವರ್ಷಗಳಲ್ಲಿ ಮೊದಲ ಬಾರಿಗೆ ಪಶ್ಚಿಮಘಟ್ಟದ ಚಾರ್ಮಾಡಿ, ಶಿರಾಡಿ, ಬಿಸಿಲೆ ಘಾಟಿ, ಆಗುಂಬೆ ಪ್ರದೇಶಗಳಲ್ಲಿ ಜನವರಿ ತಿಂಗಳಲ್ಲೇ ಕಾಡ್ಗಿಚ್ಚು ಬಿದ್ದು ಆತಂಕ ಮೂಡಿತ್ತು. ಈ ಬಾರಿ ಕುದುರೆಮುಖ, ಸಕಲೇಶಪುರ, ಶಿಶಿಲ, ಜೋಯಿಡಾ ಪ್ರದೇಶಗಳಲ್ಲಿ ಸ್ವಲ್ಪ ಮಾತ್ರವೇ ಬೆಂಕಿ ಬಿದ್ದಿದೆ. ದೊಡ್ಡಮಟ್ಟದ ಅನಾಹುತ ಸೃಷ್ಟಿಸುವ ಕಾಡ್ಗಿಚ್ಚು ಬಿದ್ದೇ ಇಲ್ಲ ಎಂದು ವರ್ಷಗಳಿಂದ ಪಶ್ಚಿಮ ಘಟ್ಟದುದ್ದಕ್ಕೂ ಸಂಚರಿಸುತ್ತ ಜನರಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿರುವ ದಿನೇಶ್‌ ಹೊಳ್ಳ ಹೇಳುತ್ತಾರೆ.

ಕಾಡ್ಗಿಚ್ಚಿಗೆ ಮುಖ್ಯ ಕಾರಣ ಪಶ್ಚಿಮ ಘಟ್ಟದ ಉದ್ದಕ್ಕೂ ನೂರಾರು ಸಂಖ್ಯೆಯಲ್ಲಿರುವ ಅಕ್ರಮ ರೆಸಾರ್ಟ್‌ಗಳು. ಪ್ರತಿವಾರ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ರೆಸಾರ್ಟ್‌ ಗಳಿಗೆ ಲಗ್ಗೆಯಿಟ್ಟು ಕ್ಯಾಂಪ್‌ ಫೈರ್‌ ಹೆಸರಿನಲ್ಲಿ ಕಾಡ್ಗಿಚ್ಚು ಸೃಷ್ಟಿಮಾಡುತ್ತಿದ್ದರು. ವೀಕೆಂಡ್‌ಗಳಲ್ಲಂತೂ ರೆಸಾರ್ಟ್‌ಗಳು ಹೌಸ್‌ಫುಲ್‌ ಆಗಿರುತ್ತಿದ್ದವು. ಅಲ್ಲದೆ ಟಿಂಬರ್‌, ಬೇಟೆ ಮತ್ತಿತರ ಮಾಫಿಯಾಗಳು ಕೂಡ ಕಾಡಿನ ಬೆಂಕಿಗೆ ಕಾರಣವಾಗುತ್ತಿದ್ದವು ಎನ್ನುತ್ತಾರೆ ಹೊಳ್ಳ.

ದ.ಕ.ದಲ್ಲಿ ಶೇ.4ರಷ್ಟೂಕಾಡ್ಗಿಚ್ಚಿಲ್ಲ:

ಇದನ್ನು ಅರಣ್ಯ ಅಧಿಕಾರಿಗಳು ಕೂಡ ಒಪ್ಪಿಕೊಂಡಿದ್ದಾರೆ. ಅರಣ್ಯ ಇಲಾಖೆಯ ಮಂಗಳೂರು ವಲಯವೊಂದರಲ್ಲೇ ಪ್ರತಿವರ್ಷ ಏನಿಲ್ಲವೆಂದರೂ 400- 500 ಎಕರೆ ಪ್ರದೇಶ ಕಾಡ್ಗಿಚ್ಚಿಗೆ ಆಹುತಿ ಆಗುತ್ತಿತ್ತು. ಆದರೆ ಈ ಬಾರಿ ಹೆಚ್ಚೆಂದರೆ ಕೇವಲ 20 ಎಕರೆಗೆ ಮಾತ್ರ ಬೆಂಕಿ ಬಿದ್ದಿದೆ ಎಂದು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಕರಿಕಲನ್‌ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ. ಅಂದರೆ ಪ್ರತಿ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಶೇ. 4ರಷ್ಟುಕೂಡ ಕಾಡ್ಗಿಚ್ಚು ಬಿದ್ದಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ಲಾಕ್‌ಡೌನ್‌ ಸಡಿಲಿಕೆ: ದೊರೆಯದ ಸ್ಪಷ್ಟನೆ, ಗೊಂದಲದಲ್ಲಿ ಜನತೆ

ಪ್ರತಿ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಾಡಿಗೆ ಬೆಂಕಿಯೇ ಬಿದ್ದಿಲ್ಲ ಎಂದೇ ಹೇಳಬೇಕು. ಈ ವರ್ಷ ಮಳೆಯೂ ಸ್ವಲ್ಪ ಆಗಿ ಆಗಿ ಪಶ್ಚಿಮಘಟ್ಟದಲ್ಲಿ ತೇವಾಂಶ ಉಳಿದಿರುವುದು ಒಂದೆಡೆಯಾದರೆ, ಮಾನವ ಸಂಚಾರ ಕೂಡ ಕಡಿಮೆಯಾಗಿರುವುದು ಕಾರಣವಾಗಿದೆ ಎಂದು ಮಂಗಳೂರು ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಕರಿಕಲನ್‌ ತಿಳಿಸಿದ್ದಾರೆ.

ಪಶ್ಚಿಮಘಟ್ಟಕ್ಕೆ ಪ್ರತಿವರ್ಷ ಬೀಳುತ್ತಿರುವ ಕಾಡ್ಗಿಚ್ಚು ಮಾನವ ನಿರ್ಮಿತ ಎನ್ನುವುದು ಈ ಬಾರಿ ಸ್ಪಷ್ಟವಾಗಿದೆ. ಹಿಂದೆಲ್ಲ ನಾವು ಮಾನವ ನಿರ್ಮಿತ ಕಾಡ್ಗಿಚ್ಚು ಎಂದರೆ ಅರಣ್ಯ ಅಧಿಕಾರಿಗಳು ನೈಸರ್ಗಿಕ ಕಾಡ್ಗಿಚ್ಚು ಎಂದು ವಾದ ಮಾಡುತ್ತಿದ್ದರು. ಈಗ ಏನಂತಾರೆ? ಎನ್ನುತ್ತಾರೆ ಪರಿಸರವಾದಿ ದಿನೇಶ್‌ ಹೊಳ್ಳ.

-ಸಂದೀಪ್‌ ವಾಗ್ಲೆ