ಲಾಕ್‌ಡೌನ್‌ ಸಡಿಲಿಕೆ: ದೊರೆಯದ ಸ್ಪಷ್ಟನೆ, ಗೊಂದಲದಲ್ಲಿ ಜನತೆ

ಮತ್ತೆ ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗುವ ಆತಂಕದಲ್ಲಿ ಜಿಲ್ಲೆಯ ಜನತೆ| ಗದಗ ಶಹರವನ್ನು ಹೊರತು ಪಡಿಸಿದಲ್ಲಿ ಜಿಲ್ಲೆಯ ಇನ್ನಾವುದೇ ತಾಲೂಕುಗಳಲ್ಲಿ ಕೊರೋನಾ ಇಲ್ಲ| ಗದಗ ತಾಲೂಕು ಮಾತ್ರ ಆರೇಂಜ್‌ ಝೋನ್‌ನಲ್ಲಿದೆ| 

Gadag People in Confusion for LockDown

ಗದಗ(ಮೇ.03): ಕೇಂದ್ರ ಸರ್ಕಾರ ಲಾಕ್‌ಡೌನ್‌ ಮೇ 17ರ ವರೆಗೆ ಮುಂದುವರಿಸಿದೆ. ಜಿಲ್ಲೆಯನ್ನು ಆರೇಂಜ್‌ ವಲಯದಲ್ಲಿ ಗುರುತಿಸಿದ್ದು, ಇತ್ತ ಗ್ರೀನ್‌ ವಲಯದ ಎಲ್ಲ ಸೌಲಭ್ಯಗಳು ಇರುತ್ತವಾ? ಅಥವಾ ರೆಡ್‌ ವಲಯದಂತೆ ಎಲ್ಲವೂ ಬಂದ್‌ ಆಗಿರುತ್ತಾ? ಎನ್ನುವ ಬಗ್ಗೆ ಜಿಲ್ಲಾಡಳಿತದಿಂದ ಯಾವುದೇ ಸ್ಪಷ್ಟನೆ ದೊರೆಯದೇ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆಯಲ್ಲಿ ವ್ಯಾಪಾರಸ್ಥರಲ್ಲಿ ಗೊಂದಲ ಮುಂದುವರಿದಿದೆ.

ಜಿಲ್ಲೆಯ ಗದಗ ಶಹರವನ್ನು ಹೊರತು ಪಡಿಸಿದಲ್ಲಿ ಜಿಲ್ಲೆಯ ಇನ್ನಾವುದೇ ತಾಲೂಕುಗಳಲ್ಲಿ ಕೊರೋನಾ ಇಲ್ಲ. ಹಾಗಾಗಿ ಗದಗ ತಾಲೂಕು ಮಾತ್ರ ಆರೇಂಜ್‌ ಝೋನ್‌ನಲ್ಲಿದೆ. ಇನ್ನುಳಿದ ತಾಲೂಕುಗಳಲ್ಲಿ ಸಮಸ್ಯೆ ಇಲ್ಲ. ಆ ಎಲ್ಲ ತಾಲೂಕುಗಳಲ್ಲಿ ಹೆಚ್ಚಿನ ಸಡಿಲಿಕೆ ನೀಡುತ್ತಾರೆ ಎನ್ನುವ ಮೂಲಕ ಸಡಿಲಿಕೆಯ ಕುರಿತು ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ.

ಸೋಂಕಿತ ಸಂಪರ್ಕದಲ್ಲಿ 188 ವೃದ್ಧರು; ಆತಂಕದಲ್ಲಿ ಗದಗ ಮಂದಿ!

5 ಪ್ರಕರಣಗಳು ಗದಗ ನಗರದಲ್ಲಿ:

5 ಪ್ರಕರಣಗಳು ಗದಗ ನಗರದಲ್ಲಿಯೇ ಪತ್ತೆಯಾಗಿವೆ. ಜಿಲ್ಲೆಯ ಇನ್ನುಳಿದ ತಾಲೂಕುಗಳಲ್ಲಿ ಗ್ರೀನ್‌ ವಲಯದಲ್ಲಿರುವಂತೆ ಸಡಿಲಿಕೆ ಮಾಡಬೇಕು, ಕೇವಲ ಗದಗ ನಗರದಲ್ಲಿ ಮಾತ್ರ ಆರೇಂಜ್‌ ವಲಯದ ನಿಯಮ ಜಾರಿಗೆ ತರಬೇಕು. ಇದರಿಂದ ತಾಲೂಕುಗಳಲ್ಲಾದರೂ ಆರ್ಥಿಕ ಚಟುವಟಿಕೆ ನಡೆದು ದುಡಿಯುವ ವರ್ಗಕ್ಕೆ ಅನುಕೂಲವಾಗುತ್ತದೆ ಎನ್ನುವ ಅಭಿಪ್ರಾಯಗಳಿವೆ. ಆದರೆ, ಗದಗ ಜಿಲ್ಲಾ ಕೇಂದ್ರವಾಗಿದೆ. 4 ಪಾಸಿಟಿವ್‌ ಪ್ರಕರಣ ಪತ್ತೆಯಾಗಿರುವ ರಂಗನವಾಡಾ ಹಾಗೂ ಗಂಜಿಬಸವೇಶ್ವರ ಓಣಿಯು ಗದಗ ನಗರದ ಹೃದಯ ಭಾಗದಲ್ಲಿವೆ. ನಿತ್ಯವೂ ಸಾವಿರ ಸಾವಿರ ಸಂಖ್ಯೆಯಲ್ಲಿ ಕಾರ್ಮಿಕರು ಕೆಲಸ ಅರಸಿ ಗದಗ ನಗರಕ್ಕೆ ಬಂದು ಹೋಗುತ್ತಾರೆ. ಹಾಗಾಗಿ ಕಾಯಿಲೆ ತಾಲೂಕಿಗೂ ವ್ಯಾಪಿಸಿದರೆ ಕಷ್ಟಎನ್ನುವ ಆತಂಕವನ್ನು ಜಿಲ್ಲಾಡಳಿತ ಹೊಂದಿದೆ.

ದೂರವಾಗದ ಆತಂಕ:

ಜಿಲ್ಲೆಯಲ್ಲಿ ಪತ್ತೆಯಾಗಿರುವ ಏ. 6ರ ಮೊದಲ ಪ್ರಕರಣದಿಂದ ಏ. 28ರಂದು ಪತ್ತೆಯಾದ ಕೊನೆ ಪ್ರಕರಣದಲ್ಲೂ ಕಾಯಿಲೆಯ ಮೂಲ ತಿಳಿದಿಲ್ಲ, ಎಲ್ಲಿಂದ ಬಂತು ಎನ್ನುವುದೇ ಯಾರಿಗೂ ಗೊತ್ತಿಲ್ಲ, ಮೊದಲ 4 ಪ್ರಕರಣಗಳು ಒಂದೇ ಪ್ರದೇಶದಿಂದ ಬಂದಾಗ ಜನತೆ ಸೋಂಕು ಅಲ್ಲಿಗಷ್ಟೇ ಸೀಮಿತವಾಗಿದೆ ಎಂದುಕೊಂಡಿದ್ದರು. ಆದರೀಗ ಪಕ್ಕದ ಗಂಜಿಬಸವೇಶ್ವರ ಓಣಿಯಲ್ಲಿ ಕಾಣಿಸಿಕೊಂಡಿದೆ. ಇದು ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಇವರ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕದಲ್ಲಿರುವವರ ಸ್ವಾ್ಯಬ್‌ ಟೆಸ್ಟಿಂಗ್‌ ಪ್ರಗತಿಯಲ್ಲಿದ್ದು, ಯಾವುದೇ ಕ್ಷಣದಲ್ಲಾದರೂ ಗದಗ ಜಿಲ್ಲೆಯಲ್ಲಿ ಪಾಸಿಟಿವ್‌ ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದೆ.

ಆಶಾಭಾವನೆ:

ಸಧ್ಯ 5 ಪ್ರಕರಣಗಳಲ್ಲಿ ಒಬ್ಬ ವೃದ್ಧೆ ಮರಣ ಹೊಂದಿದ್ದಾಳೆ (ಪಿ-166). ಏ. 1ರಂದು (ಪಿ- 304) ವೃದ್ಧೆ ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ 3 ಜನ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದು, ಅವರೆಲ್ಲರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಶೀಘ್ರದಲ್ಲಿಯೇ ಇನ್ನಿಬ್ಬರ ಬಿಡುಗಡೆಯಾಗುತ್ತಾರೆ ಎನ್ನುವ ಆಶಾಭಾವನೆ ಜಿಲ್ಲಾಡಳಿತ ಹೊಂದಿದೆ.

ಅತಿಯಾದ ಸಡಿಲಿಕೆ:

ಗದಗ ಜಿಲ್ಲೆಯನ್ನು ಆರೇಂಜ್‌ ಝೋನ್‌ನಲ್ಲಿ ಗುರುತಿಸಿ ಸಡಿಲಿಕೆಯ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಗಳನ್ನು ನಡೆಯುತ್ತಿದ್ದಂತೆ ಗದಗ​- ಬೆಟಗೇರಿ ಅವಳಿ ನಗರದಲ್ಲಿ ವಾಹನ ಸಂಚಾರ ಬೀಕಾಬಿಟ್ಟಿಯಾಗಿ ನಡೆಯುತ್ತಿದೆ. ಇನ್ನು ಜನತೆ ಮಾಸ್ಕ್‌ಗಳನ್ನು ಹಾಕಿಕೊಳ್ಳದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ವ್ಯವಹರಿಸುತ್ತಿರುವ ದಿನ ಕಳೆದಂತೆ ಸಾಮಾನ್ಯವಾಗುತ್ತಿದೆ.

ಗೊಂದಲದಲ್ಲಿ ಜನತೆ

ಆರೇಂಜ್‌ ಝೋನ್‌ನಲ್ಲಿರುವ ಗದಗ ಜನತೆ ಅತ್ತ ಗ್ರೀನ್‌ ಝೋನ್‌ ಸೌಲಭ್ಯ ಪಡೆಯುತ್ತಾ, ಇತ್ತ ರೆಡ್‌ ಝೋನ್‌ನಂತೆ ಎಲ್ಲವೂ ಕಟ್ಟುನಿಟ್ಟಾಗಿ ಬಂದ್‌ ಆಗುತ್ತಾ? ಎನ್ನುವ ಗೊಂದಲ ಅವಳಿ ನಗರದ ವ್ಯಾಪಾರಸ್ಥರಲ್ಲಿ ತೀವ್ರವಾಗಿದೆ. ಎಲ್ಲ ಅಂಗಡಿಗಳನ್ನು ತೆರೆಯಬೇಕಾ? ಅಥವಾ ಬೇಡವಾ? ಮೊಬೈಲ್‌ ಇಲೆಕ್ಟ್ರಾನಿಕ್ಸ್‌ ಅಂಗಡಿಗಳು ತೆರೆಯಬೇಕಾ ಎನ್ನುವ ಗೊಂದಲಗಳಿದ್ದು ಇದಕ್ಕೆ ಜಿಲ್ಲಾಡಳಿತ ತಕ್ಷಣವೇ ಸ್ಪಷ್ಟವಾದ ನಿರ್ದೇಶನ ನೀಡಬೇಕಿದೆ.
 

Latest Videos
Follow Us:
Download App:
  • android
  • ios