ಗದಗ(ಮೇ.03):  ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರೈತರು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದು, ಅವರ ಸಾಲಿಗೆ ಈಗ ಈರುಳ್ಳಿ ಬೆಳೆದ ರೈತರು ಸೇರ್ಪಡೆಯಾಗಿದ್ದು, ಲಕ್ಷಾಂತರ ರುಪಾಯಿ ಖರ್ಚು ಮಾಡಿ ಬೆಳೆದಿರುವ ಗುಣಮಟ್ಟದ ಈರುಳ್ಳಿಯನ್ನು ಕೇಳುವವರೇ ಇಲ್ಲದಂತಾಗಿದ್ದು, ರೈತರು ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತುಕೊಳ್ಳುವಂತಾಗಿದೆ.

ಡಂಬಳ ಗ್ರಾಮದಲ್ಲಿ ನೂರಾರು ರೈತರು ಬೇಸಿಗೆ ಈರುಳ್ಳಿಯನ್ನು ಬೆಳೆದಿದ್ದಾರೆ. ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಬೇಕೆಂದರೆ ದಿನೇ ದಿನೇ ಕಾಯಿಲೆಯ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತೀವ್ರ ಸಮಸ್ಯೆಯಾಗುತ್ತಿದ್ದು, ಖರೀದಿದಾರರು ಅಗ್ಗದ ಬೆಲೆಗೆ ಕೇಳುತ್ತಿದ್ದಾರೆ.

ಲಾಕ್‌ಡೌನ್‌ ಸಡಿಲಿಕೆ: ದೊರೆಯದ ಸ್ಪಷ್ಟನೆ, ಗೊಂದಲದಲ್ಲಿ ಜನತೆ

3 ಎಕರೆಯಲ್ಲಿ 5 ಟ್ರ್ಯಾಕ್ಟರ್‌ನಷ್ಟು ಬೆಳೆದ ಬೆಳೆಯನ್ನು ಹೊಲದಲ್ಲಿ ಕೂಡಿ ಹಾಕಲಾಗಿದ್ದು ಇನ್ನು ಸಾಕಷ್ಟು ಪ್ರಮಾಣದಲ್ಲಿ ಕೀಳುವುದಿದೆ. ಆದರೆ, ಮಾರಾಟವಾಗದೇ ಇರುವುದರಿಂದಾಗಿ ಸಾಕಷ್ಟುಬೆಳೆ ಮಣ್ಣು ಪಾಲಾಗುತ್ತಿದೆ ನಮ್ಮ ಸಮಸ್ಯೆಗೆ ಪರಿಹಾರವೇ ಇಲ್ಲದಂತಾಗಿದೆ ಎನ್ನುತ್ತಾರೆ ರೈತ ಮಹಿಳೆ ಬಾನುಬಿ ಮೂಲಿಮನಿ.

ಸುಮಾರು 3 ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದೇನೆ ಆದರೆ, ಬೇಸಿಗೆಯ ಈರುಳ್ಳಿ ಖರೀರಿಗಾಗಿ ಗ್ರಾಮದತ್ತ ದಲ್ಲಾಳಿಗಳು ಬರುತ್ತಿದ್ದರು. ಆದರೆ, ಈಗ ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ತಕ್ಷಣ ಸರ್ಕಾರ ಸ್ಪಂದಿಸಿ ವರ್ಷಾನುಗಟ್ಟಲೇ ಶ್ರಮ ವಹಿಸಿ ಬೆಳೆದ ಬೆಳೆಗೆ ಸೂಕ್ತ ನ್ಯಾಯ ಒದಗಿಸಬೇಕು ಎನ್ನುತ್ತಾನೆ ರೈತ ಸಂಜೀವ ಮಾನೆ.

ಸಮೃದ್ಧವಾಗಿ ಬೆಳೆದಿರುವ ಈರುಳ್ಳಿ ಬೆಳೆಯನ್ನು ಕಟಾವು ಮಾಡಿ ಮಾರುಕಟ್ಟೆಗೆ ಒಯ್ಯಲು ಆಗುತ್ತಿಲ್ಲ. ಇನ್ನು ಇಲ್ಲಿಗೆ ಬಂದು ದಲ್ಲಾಳಿಗಳು ಅಗ್ಗದ ದರಕ್ಕೆ ಕೇಳುತ್ತಿದ್ದಾರೆ. ಶೀಘ್ರವಾಗಿ ಸರ್ಕಾರವೇ ಈರುಳ್ಳಿ ರೈತರಿಂದ ನೇರವಾಗಿ ಖರೀದಿಯನ್ನು ಮಾಡಲು ಮುಂದಾಗಬೇಕು ಎಂದು ಡಂಬಳ ಗ್ರಾಮದ ರೈತ ಸೋಮಪ್ಪ ಗೋರವರ ಅವರು ಹೇಳಿದ್ದಾರೆ.