ದೇವೇಗೌಡರ ಧೃತರಾಷ್ಟ್ರ ಪ್ರೇಮ ವರ್ಕೌಟ್ ಆಗಲಿಲ್ಲ: ಪಿ.ರವಿಕುಮಾ‌ರ್

ಪಾಂಡವರ ಪರ ಧೃತರಾಷ್ಟ್ರ ಇದ್ದಿದ್ದರೆ ಮಹಾಭಾರತ ಯುದ್ಧವೇ ನಡೆಯುತ್ತಿರಲಿಲ್ಲ. ಸತ್ಯಕ್ಕೆ ಎಂದಿಗೂ ಜಯ ಸಿಗುತ್ತದೆ ಎನ್ನುವುದಕ್ಕೆ ಚನ್ನಪಟ್ಟಣ ಗೆಲುವು ಸಾಕ್ಷಿ ಎಂದ ಶಾಸಕ ಪಿ.ರವಿಕುಮಾರ್
 

Congress MLA P Ravikumar Talks Over Former PM HD Devegowda grg

ಮಂಡ್ಯ(ನ.24): ಧೃತರಾಷ್ಟ್ರ ಪ್ರೇಮ ಹೆಚ್ಚು ದಿನ ವರ್ಕೌಟ್ ಆಗುವುದಿಲ್ಲ. ಧೃತರಾಷ್ಟ್ರನ ಪ್ರೇಮ ಕೌರವರನ್ನು ಕೊಂದುಹಾಕಿತು ಎಂದು ಜೆಡಿಎಸ್ ಅಭ್ಯರ್ಥಿ ನಿಖಿಲ್ ಗೆಲುವಿಗಾಗಿ ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡರ ಚುನಾವಣೆ ಹೋರಾಟದ ಕುರಿತು ಶಾಸಕ ಪಿ.ರವಿಕುಮಾರ್ ಗೌಡರ ಹೋರಾಟವನ್ನು ಧೃತರಾಷ್ಟ್ರ ಪ್ರೇಮಕ್ಕೆ ಹೋಲಿಸಿದರು. 

ಉಪಚುನಾವಣೆ ಫಲಿತಾಂಶ ಕುರಿತಂತೆ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪಿ.ರವಿಕುಮಾರ್ ಅವರು, ಪಾಂಡವರ ಪರ ಧೃತರಾಷ್ಟ್ರ ಇದ್ದಿದ್ದರೆ ಮಹಾಭಾರತ ಯುದ್ಧವೇ ನಡೆಯುತ್ತಿರಲಿಲ್ಲ. ಸತ್ಯಕ್ಕೆ ಎಂದಿಗೂ ಜಯ ಸಿಗುತ್ತದೆ ಎನ್ನುವುದಕ್ಕೆ ಚನ್ನಪಟ್ಟಣ ಗೆಲುವು ಸಾಕ್ಷಿ ಎಂದರು. 

ಚನ್ನಪಟ್ಟಣ ಬೈಎಲೆಕ್ಷನ್‌: ಡಿಕೆಶಿಗೆ ಹೆಚ್ಚಿದ ಪ್ರಾಬಲ್ಯ, ಕುಮಾರಸ್ವಾಮಿಗೆ ಭಾರೀ ಹಿನ್ನಡೆ!

ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ನಿರೀಕ್ಷೆ ಇತ್ತು. ಗ್ಯಾರಂಟಿ ಕೊಟ್ಟು ಬಡವರ ಪರ ಆಡಳಿತ ಮಾಡುತ್ತಿದ್ದೇವೆ. ಬೇಡದೆ ಇರುವ ವಿಚಾರ ತಗೆದುಕೊಂಡು ನಮ್ಮ ಪಕ್ಷಕ್ಕೆ ಮಸಿ ಬಳಿಯುತ್ತಿದ್ದರು. ಜನರು ಉಪ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದಾರೆ. ಏಳು ವರ್ಷ ಆಡಳಿತ ಮಾಡಿದ ಕುಮಾರಣ್ಣ ಚನ್ನಪಟ್ಟಣದಲ್ಲಿ ಒಂದು ರಸ್ತೆಯನ್ನೂ ಮಾಡಿಲ್ಲ. ರಸ್ತೆಯೂ ಮಾಡೋಲ್ಲ ಅಂದ ಮೇಲೆ ರಾಜಕೀಯ ಯಾಕೆ ಮಾಡಬೇಕು?. ಜನ ಏನ್ ಹುಚ್ಚರಾ?, ಗೆಲ್ಲಿಸಿ ನೀನು ಹೋಗಿ ಮಜಾ ಮಾಡು ಅಂತ ಕಳಿಸ್ತಾರಾ ಎಂದು ಹೇಳಿದರು. 

ಮುಡಾ ವಿಚಾರಕ್ಕೂ ಬಡವನಿಗೂ ಏನು ಸಂಬಂಧ?. ಬಡವನ ಬೇಳೆ, ಅಕ್ಕಿಗೂ ಮುಡಾಗೂ ಏನು ಸಂಬಂಧ. ಮುಡಾ ರಾಜಕೀಯ ಪ್ರಕರಣ ಅಷ್ಟೇ. ಬಡವನಿಗೆ ಬೇಕಿರೋದು ಬಸ್ ಟಿಕೆಟ್ ಉಚಿತ, 2 ಸಾವಿರ ದುಡ್ಡು, ಉಚಿತ ವಿದ್ಯುತ್ತೇ ವಿನಃ ಮುಡಾ ವಿಚಾರ ಅಲ್ಲ ಎಂದು ಉತ್ತರಿಸಿದರು.

ಜಾತಿ ವಿಚಾರ ತಗೊಂಡು ಭಾಷಣ ಮಾಡಿದರೆ ನಡೆಯುವುದಿಲ್ಲ. ಈಗ ಜನ ಎಚ್ಚೆತ್ತುಕೊಂಡಿದ್ದಾರೆ ಎಂದು ಜಮೀರ್‌ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಜಮೀರ್‌ ಹೇಳಿಕೆ ಕೊಡುವಷ್ಟರಲ್ಲಿ ಎಲೆಕ್ಷನ್ ಮುಗಿದಿತ್ತು. ಜನ ಆಗ ಬೇರೆ ಬೇರೆ ಲೆಕ್ಕಾಚಾರದಲ್ಲಿ ತೊಡಗಿದ್ದರು. ಜಮೀರ್ ಫ್ಲಾಟ್ ಪಕ್ಕದಲ್ಲೇ ನನ್ನ ಫ್ಲಾಟ್ ಇದೆ. ಜಮೀರ್. ಕುಮಾರಸ್ವಾಮಿ ಇಬ್ಬರು ಅಂಟಿಕೊಂಡೇ ಇರುತ್ತಿದ್ದರು. ಅವರವರು ಏನು ಬೈದಾಡಿಕೊಂಡಿದ್ದಾರೋ ನನಗೆ ಗೊತ್ತಿಲ್ಲ ಎಂದರು. ಕುಮಾರಸ್ವಾಮಿ ಅವರು ಜಮೀರ್‌ ಮನೆಗೆ ಬರುತ್ತಿದ್ದರು. ಅಲ್ಲಿ ಅವರಿಬ್ಬರು ಏನು ಮಾತನಾಡಿ ಕೊಂಡಿದ್ದಾರೋ ನಮಗೂ, ನಿಮಗೂ ಗೊತ್ತಿದೆಯಾ, ಜಮೀರ್‌ತಪ್ಪೇನು ಮಾತನಾಡಿ ರಲಿಲ್ಲ. ಅದು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಲಿಲ್ಲ ಎಂದು ಹೇಳಿದರು.

ದೇವೇಗೌಡರ 3ನೇ ತಲೆಮಾರಿನ ಎಂಟ್ರಿಗೆ ಕಾಂಗ್ರೆಸ್ ಬ್ರೇಕ್!

ರಾಮನಗರ: ತಾತನ ಪ್ರಭಾವ, ತಂದೆ ಮಾಡಿದ ಅಭಿವೃದ್ಧಿ ಹಾಗೂ ತಾಯಿಯ ತ್ಯಾಗಕ್ಕೂ ಮರುಗದ ಚನ್ನಪಟ್ಟಣ ಕ್ಷೇತ್ರದ ಮತದಾರರು ಕಾಂಗ್ರೆಸ್ ನ ಸಿ.ಪಿ.ಯೋಗೇಶ್ವರ್‌ರವರ ಕೈ ಹಿಡಿದಿದ್ದರಿಂದ ಜೆಡಿಎಸ್‌ನ ನಿಖಿಲ್ ಕಮಾರಸ್ವಾಮಿ ಹೀನಾಯ ಸೋಲು ಅನುಭವಿಸುವಂತಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ನಟಿ ಸುಮಲತಾ ವಿರುದ್ಧ ಸೋತಿದ್ದ ನಿಖಿಲ್ ತಂದೆಯವರ ಕರ್ಮಭೂಮಿಯಲ್ಲಿ ರಾಜಕೀಯ ಆಶ್ರಯ ಪಡೆಯುವ ತವಕದಲ್ಲಿದ್ದರು. ಮಗನ ರಾಜಕೀಯ ಭವಿಷ್ಯ ರೂಪಿಸಲು ಶಾಸಕರಾಗಿದ್ದ ಅನಿತಾ ಕುಮಾರಸ್ವಾಮಿ 2023ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರ ತ್ಯಾಗ ಮಾಡಿದ್ದರು. ಆ ತ್ಯಾಗವೂ ಮಗನಿಗೆ ಫಲಿಸಿರಲಿಲ್ಲ.

2018ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರಚಂಡ ಗೆಲುವು ಸಾಧಿಸಿದ್ದ ಕುಮಾರಸ್ವಾಮಿಯವರು ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಂಡಿದ್ದರು. ಆಗ ರಾಮನಗರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ ಶಾಸಕರಾಗಿ ಆಯ್ಕೆಯಾಗಿದ್ದರು. 2023ರ ಚುನಾವಣೆಯಲ್ಲಿಯೂ ಸ್ಪರ್ಧಿಸುವ ಇರಾದೆ ಹೊಂದಿದ್ದ ಅವರು ಒಲ್ಲದ ಮನಸ್ಸಿನಿಂದಲೇ ನಿಖಿಲ್‌ಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಜೆಡಿಎಸ್‌ನ ನಿಖಿಲ್ ಮತ್ತು ಕಾಂಗ್ರೆಸ್‌ನ ಇಕ್ಬಾಲ್ ಹುಸೇನ್ ನಡುವಿನ ಹಣಾಹಣಿಯಿಂದಾಗಿ 2023ರ ರಾಮನಗರ ಕ್ಷೇತ್ರ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ಅಂತಿಮವಾಗಿ ತಮ್ಮ ತಂದೆಯ ಭದ್ರಕೋಟೆಯಲ್ಲಿಯೇ ನಿಖಿಲ್ (76,975), 10,715 ಮತಗಳ ಅಂತರದಿಂದ ಇಕ್ಬಾಲ್ ಎದುರು ಸೋಲೊಪ್ಪಿದ್ದರು.

ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಜಿಗಿದಿದ್ದರಿಂದ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಅನಿವಾರ್ಯವಾಯಿತು. ಕ್ರಮವಾಗಿ ಎರಡು ಚುನಾವಣೆಗಳಲ್ಲಿ ಸೋಲು ಕಂಡಿದ್ದ ನಿಖಿಲ್ ಹಾಗೂ ಯೋಗೇಶ್ವರ್ ಅವರಿಗೆ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಉಪಚುನಾವಣೆ ಮಾಡು ಇಲ್ಲವೆ ಮಡಿ ಎನ್ನುವಂತಾಗಿತ್ತು. ಈ ಕಾರಣದಿಂದಾಗಿಯೇ ನಿಖಿಲ್ ಪರವಾಗಿ ತಾತ, ಮಾಜಿ ಪ್ರಧಾನಿ ದೇವೇಗೌಡ, ತಂದೆ ಕೇಂದ್ರ ಸಚಿವ ಕುಮಾರಸ್ವಾಮಿ, ತಾಯಿ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ಪತ್ನಿ ರೇವತಿ ಸೇರಿ ದೋಸ್ತಿ ನಾಯಕರು ಅಬ್ಬರದ ಪ್ರಚಾರ ನಡೆಸಿದ್ದರು.

ಚನ್ನಪಟ್ಟಣ ಉಪಚುನಾವಣೆ: ರೇಷ್ಮೆ ನಾಡಲ್ಲಿ ದಳಪತಿ ಭದ್ರಕೋಟೆ ಧ್ವಂಸ!

ಚನ್ನಪಟ್ಟಣ ಕ್ಷೇತ್ರ ಗೆಲ್ಲುವುದು ದೇವೇಗೌಡ ಹಾಗೂ ಡಿ.ಕೆ.ಶಿವಕುಮಾರ್, ಸಿ.ಪಿ.ಯೋಗೇಶ್ವರ್ ಕುಟುಂಬಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಜಿಲ್ಲೆಯಲ್ಲಿ ಜೆಡಿಎಸ್ ಅಸ್ತಿತ್ವವನ್ನು ಮರು ಸ್ಥಾಪಿಸಲು ದೇವೇಗೌಡರು ಹಾಗೂ ಜೆಡಿಎಸ್ ಪಕ್ಷವನ್ನು ಕ್ಲೀನ್ ಸ್ವೀಪ್ ಮಾಡಲು ಡಿ.ಕೆ.ಶಿವಕುಮಾರ್, ಸಿ.ಪಿ.ಯೋಗೇಶ್ವರ್ ಪಣ ತೊಟ್ಟು ಹೋರಾಟ ನಡೆಸಿದರು. ದೇವೇಗೌಡರು ತಮ್ಮ ಕುಟುಂಬದ 3ನೇ ತಲೆಮಾರಿನ ನಾಯಕನಾಗಿರುವ ಮೊಮ್ಮಗ ನಿಖಿಲ್‌ರ ರಾಜಕೀಯ ಭವಿಷ್ಯ ಭದ್ರ ಬಡಿಸಲು ಅನಾರೋಗ್ಯದ ನಡುವೆಯೂ ಅಖಾಡಕ್ಕೆ ಇಳಿದಿದ್ದರು. ಅವರಿಗೆ ಕುಮಾರಸ್ವಾಮಿ ಜೊತೆಗೆ ಬಿಜೆಪಿ ನಾಯಕರು ಬೆಂಬಲ ನೀಡಿದ್ದರು.

ಕುಮಾರಸ್ವಾಮಿಯವರ ಮಾಜಿ ಆಪ್ತ ಸ್ನೇಹಿತರು ಡಿಕೆ ಸಹೋದರರೊಂದಿಗೆ ಕೈ ಜೋಡಿಸಿ ಯೋಗೇಶ್ವರ್ ಗೆಲುವಿಗಾಗಿ ಟೊಂಕ ಕಟ್ಟಿ ನಿಂತರು. ಇಷ್ಟಕ್ಕೂ ಆ ಮಾಜಿ ಸ್ನೇಹಿತರೆಲ್ಲರು ದೇವೇಗೌಡರ ಗರಡಿಯಲ್ಲಿಯೇ ರಾಜಕಾರಣದ ಪಾಠ ಕಲಿತವರು. ಈಗ ಗುರುಗಳ ಮೊಮ್ಮಗನ ವಿರುದ್ಧವೇ ಅವರ ಶಿಷ್ಯರು ರಾಜಕೀಯ ಪಟ್ಟು ತೋರಿಸಿ ಯಶಸ್ಸು ಸಾಧಿಸಿದ್ದಾರೆ. ಆ ಮೂಲಕ ದೇವೇಗೌಡರ ಕುಟುಂಬದ 3ನೇ ತಲೆಮಾರಿನ ಎಂಟ್ರಿಗೆ ಕಾಂಗ್ರೆಸ್ ತಡೆಯೊಡ್ಡಿದಂತಾಗಿದೆ.

Latest Videos
Follow Us:
Download App:
  • android
  • ios