Mysuru : ರಾಜಕಾರಣಿಗಳಿಗೂ ಶೈಕ್ಷಣಿಕ ಮಾನದಂಡ ಅಗತ್ಯ : ನ್ಯಾ. ಸಂತೋಷ್ ಹೆಗ್ಡೆ

ಎಲ್ಲಾ ವಿಭಾಗಗಳಲ್ಲೂ ಶೈಕ್ಷಣಿಕ ಮಾನದಂಡವಿದೆ ಆದರೆ ರಾಜಕಾರಣಿಗಳು ಈ ವ್ಯವಸ್ಥೆಯಿಂದ ಹೊರಗಿರುವುದು ವಿಷಾದನೀಯ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಹೇಳಿದರು.

Mysuru Politicians also need educational criteria  Santosh Hegde snr

 ಮೈಸೂರು (ನ.18):  ಎಲ್ಲಾ ವಿಭಾಗಗಳಲ್ಲೂ ಶೈಕ್ಷಣಿಕ ಮಾನದಂಡವಿದೆ ಆದರೆ ರಾಜಕಾರಣಿಗಳು ಈ ವ್ಯವಸ್ಥೆಯಿಂದ ಹೊರಗಿರುವುದು ವಿಷಾದನೀಯ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಹೇಳಿದರು.

ಮುಂಬೈನ ಅಖಿಲ ಭಾರತ ಹಿರಿಯ ನಾಗರಿಕರ ಸಂಘ ಮತ್ತು ಕರ್ನಾಟಕ (Karnataka)  ರಾಜ್ಯ ಹಿರಿಯ ನಾಗರೀಕರ ಸಂಘವು ಕಲಾಮಂದಿರದಲ್ಲಿ ಆಯೋಜಿಸಿದ್ದ ಹಿರಿಯ ನಾಗರೀಕರ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದುಡ್ಡಿನಿಂದ (Money)  ನೆಮ್ಮದಿ ಖರೀದಿಸಲು ಸಾಧ್ಯವಿಲ್ಲ. ಪ್ರತಿಷ್ಠೆಗೆ ಹೋಗಿ ನೀರಿಗಾಗಿ ಯುದ್ದ ಮಾಡುವ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ಪ್ರಸ್ತುತ ನಾನು ನನ್ನ ಹಕ್ಕುಗಳ ಬಗ್ಗೆ ಮಾತನಾಡುವಾಗ ಕರ್ತವ್ಯ ಪಾಲನೆಯ ಬಗ್ಗೆಯೂ ಯೋಚಿಸಬೇಕು. ಮಕ್ಕಳಿಗೆ ಜೀವನ ಮೌಲ್ಯದ ಅರಿವು ನೀಡಿ, ನೀತಿ ಪಾಠ ಮಾಡಬೇಕು. ಸಮಾಜದ ಬದಲಾವಣೆಗೆ ನಾವೇ ನಾಂದಿ ಹಾಡಬೇಕು ಎಂದು ಅವರು ತಿಳಿಸಿದರು.

ಅವ್ಯವಸ್ಥೆ ವ್ಯಕ್ತಿಯ ತಪ್ಪಲ್ಲ ಸಮಾಜದ ತಪ್ಪು. ನಾವು ಬದಲಾಗದಿದ್ದರೆ ಸಮಾಜದಲ್ಲಿ ಶಾಂತಿ ನೆಲೆಸುವುದು ಅಸಾಧ. ಸರ್ಕಾರದಲ್ಲಿ ಭ್ರಷ್ಟಾಚಾರ ಎಂಬುದು ಈ ಹಿಂದಿನಂತೆಯೇ ಇದ್ದು, ಯಾವುದೇ ಬದಲಾವಣೆಯಾಗಿಲ್ಲ. ಒಂದು ಪಕ್ಷದವರು ನೀವು ಶೇ. 40ರಷ್ಟುಕಮಿಷನ್‌ ವ್ಯವಹಾರ ಮಾಡಿದ್ದೀರಿ ಎಂದು ಆರೋಪಿಸಿದರೆ, ನಿಮ್ಮ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮಾಡಿದ್ದೀರಿ ಎಂದು ಪ್ರತ್ಯುತ್ತರಕ್ಕೆ, ನಾವು ಶೇ. 10 ಕಮಿಷನ್‌ ಮಾತ್ರ ತೆಗೆದುಕೊಂಡಿದ್ದು ಎನ್ನುತ್ತಾರೆ. ಆ ಮೂಲಕ ತಾವು ತಪ್ಪು ಮಾಡಿದ್ದರೂ ಇನ್ನೊಬ್ಬರಿಗಿಂತ ಕಡಿಮೆ ತಪ್ಪು ಮಾಡಿದ್ದೇವೆ ಎಂಬ ಭಾವ ಅವರಲ್ಲಿದೆಯೇ ಹೊರತು ಕಮಿಷನ್‌ ತೆಗೆದುಕೊಳ್ಳಬಾರದಿತ್ತು ಎನ್ನುವ ಪಶ್ಚಾತಾಪವಿಲ್ಲ. ಅಡಿಕೆ ಕದ್ದರೂ ಕಳ್ಳನೇ, ಆನೆ ಕದ್ದರೂ ಕಳ್ಳನೇ ಎಂಬ ಮಾತನ್ನು ರಾಜಕಾರಣಿಗಳು ಅರಿತುಕೊಳ್ಳಬೇಕು ಎಂದು ಚಾಟಿ ಬೀಸಿದರು.

ಕಾಮನ್ವೆಲ್ತ…, 2ಜಿ ಮುಂತಾದ ಹಗರಣಗಳಿಂದ ಸರ್ಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೆ ನಷ್ಟವಾಗುತ್ತಿದೆ. ಇವೆಲ್ಲಾ ಜನರ ತೆರಿಗೆಯ ಹಣ. ನಮ್ಮ ಹಣದ ಬಗ್ಗೆ ಪ್ರಶ್ನಿಸುವುದಕ್ಕೆ ನಾವು ಧೈರ್ಯ ಮಾಡಬೇಕು, ಎಚ್ಚೆತ್ತು ಹೋರಾಡಬೇಕು ಎಂದರು.

ಹಿಂದೆ ಒಬ್ಬಾತ ತಪ್ಪು ಮಾಡಿ ಜೈಲಿಗೆ ಹೋದರೆ ಆತನ ಜೊತೆಗೆ ಕುಟುಂಬವನ್ನು ಜನ ಬಹಿಷ್ಕರಿಸುತ್ತಿದ್ದರು. ಆದರೆ ಇಂದು ಸೆರೆಮನೆಯಿಂದ ಬಿಡುಗಡೆಯಾದಾಗ ಹಾರ ಹಾಕಿ ಸ್ವಾಗತಿಸುತ್ತಿದ್ದೇವೆ. ಜೈಲಿಗೆ ಹೋದಾತ ಮಹಾತ್ಮ ಗಾಂಧಿಯೂ ಜೈಲಿಗೆ ಹೋಗಿ ಬಂದಿದ್ದಾರೆ ಎಂದು ತೃಪ್ತಿ ಪಡುವಂತಹ ಮನಸ್ಥಿತಿಯುಳ್ಳವರ ಜೊತೆ ಬದುಕುತ್ತಿದ್ದೇವೆ. ಇಂತಹ ಸಮಾಜದಲ್ಲಿ ಬದುಕಿದ ಮಕ್ಕಳಲ್ಲಿ ಉತ್ತಮ ಗುಣಗಳನ್ನು ಅಪೇಕ್ಷಿಸಲು ಸಾಧ್ಯವಿಲ್ಲ. ನಮ್ಮ ಭವಿಷ್ಯಕ್ಕಾಗಿ ನಾವು ಬದಲಾಗುವ ಅನಿವಾರ್ಯತೆ ಇದೆ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಅಖಿಲ ಭಾರತ ಹಿರಿಯ ನಾಗರಿಕ ಸಂಘದ ಅಧ್ಯಕ್ಷ ವಿಶ್ವಾಸ್‌ ರಾವ್‌ ಬದನೆ, ಸಂಘಟನಾ ಅಧ್ಯಕ್ಷ ಎನ್‌. ಓಬಯ್ಯ, ಬೀರಪ್ಪ ಇದ್ದರು.

ಭ್ರಷ್ಟಮುಕ್ತವಾಗಬೇಕು

ಚಿಕ್ಕಮಗಳೂರು  ದೇಶದ ಯುವಕರು ಎಚ್ಚೆತ್ತುಕೊಳ್ಳಬೇಕು, ಭ್ರಷ್ಟಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಹೇಳಿದರು. ನಗರದ ಎಐಟಿ ಕಾಲೇಜಿನ ಬಿಜಿಎಸ್‌ ಸಭಾಂಗಣದಲ್ಲಿ ಗುರುವಾರ ಬಿಕ್ಕಿಮನೆಯ ನೇಚರ್‌ ಕನ್ಸರ್ವೇಷನ್‌ ಟ್ರಸ್ಟ್‌ ಆಯೋಜಿಸಿದ್ದ ‘ಭೂಮಿ ಉಳಿದರೆ ನಾವು ಉಳಿದೇವು’, ‘ಭ್ರಷ್ಟಾಚಾರ ಮುಕ್ತವಾದರೆ ದೇಶ ಉಳಿದೀತು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರಗಳು 10 ಪರ್ಸೆಂಟ್‌ನಿಂದ 50 ಪರ್ಸೆಂಟ್‌ಗೆ ಏರಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾದ ವಿಷಯ. ಯುವಕರು ಎಚ್ಚೆತ್ತು ತಡೆಗಟ್ಟದೇ ಇದ್ದಲ್ಲಿ ಭಾರತವು ಶಾಂತಿಯುತವಾಗಿ, ಜಾತ್ಯತೀತವಾಗಿ ಹೊಂದಾಣಿಕೆಯಿಂದ ನಡೆದುಕೊಂಡು ಹೋಗುವುದು ಅಸಾಧ್ಯ. ಉತ್ತಮ ಸಮಾಜ ನಿರ್ಮಾಣ ಮಾಡಲು ನಮ್ಮಲ್ಲಿ ಮಾನವೀಯ ಮೌಲ್ಯಗಳು ಹಾಗೂ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಹಲವರು ಪ್ರಚಾರಕ್ಕಾಗಿ ಮಾನವೀಯತೆ ತೋರುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ: ದಲಿತ ಸಂಘಟನೆಗಳಿಂದ ಬಾಳೆಹೊನ್ನೂರು ಚಲೋ ಬೃಹತ್ ಜಾಥಾ

ನಡತೆ ಹೇಗಿರಬೇಕು ಎಂದು ಯೋಚಿಸಬೇಕು. ಉತ್ತಮ ಗುಣಗಳನ್ನು ರೂಢಿಸಿಕೊಳ್ಳಬೇಕು. ಸಮಾಜವನ್ನು ಬದಲಾಯಿಸಲು ಮುಂದಾಗಬೇಕು. ಚರಿತ್ರೆ ಅವಲೋಕಿಸಬೇಕು. ಬದಲಾವಣೆ ಸಾಧ್ಯ ಇದೆ. ಮಕ್ಕಳಿಗೆ ಮೌಲ್ಯಗಳನ್ನು ಹೇಳಿಕೊಡುವವರು ಇಲ್ಲ. ಶಾಲೆಗಳಲ್ಲಿ ನೀತಿ ಪಾಠ ಬೋಧನೆ ಇಲ್ಲ. ಹಿಂದಿನ ಕಾಲದಲ್ಲಿ ಪೋಷಕರು, ಶಿಕ್ಷಕರು ಮಕ್ಕಳಲ್ಲಿ ಮೌಲ್ಯಗಳನ್ನು ಕಲಿಸುತ್ತಿದ್ದರು. ಈಗ ಅದು ಮರೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೈ ತುಂಬಾ ಸಂಬಳ ಪಡೆಯುತ್ತಾರೆ. ಆದರೂ, ಹಲವರು ಲಂಚಕ್ಕೆ ಕೈ ಚಾಚುತ್ತಾರೆ. ಆಸ್ಪತ್ರೆ ಸಹಿತ ಎಲ್ಲ ಕಡೆ ಲಂಚದ ಹಾವಳಿ ಇದೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಲಂಚಕ್ಕೆ ಕಡಿವಾಣ ಹಾಕಬೇಕು. ಮನುಷ್ಯರ ದುರಾಸೆಗಳಿಂದ ಪರಿಸರ ಯಾವ ರೀತಿ ನಾಶವಾಗುತ್ತಿದೆ ಅರ್ಥ ಮಾಡಿಕೊಳ್ಳಬೇಕು. ಪರಿಸರವನ್ನು ರಕ್ಷಿಸುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಕರೆ ನೀಡಿದರು. ಬಿಕ್ಕಿಮನೆಯ ನೇಚರ್‌ ಕನ್ಸರ್ವೇಷನ್‌ ಟ್ರಸ್ಟ್‌ ಅಧ್ಯಕ್ಷ ಡಾ. ಸುಂದ್ರೇಗೌಡ ಅಧ್ಯಕ್ಷತೆ ವಹಿಸಿದ್ದರು. ಎಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿ.ಟಿ. ಜಯದೇವ್‌ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios