ಶಿಕ್ಷಕರ ದಿನಾಚರಣೆಯಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಹಲವು ಸಿಹಿಸುದ್ದಿಗಳನ್ನು ನೀಡಿದ್ದಾರೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್, ಪಿಯು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ಹಾಗೂ 52 ಸಾವಿರ ಅತಿಥಿ ಶಿಕ್ಷಕರ ನೇಮಕಾತಿ ಸೇರಿದಂತೆ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.

ಬೆಂಗಳೂರು: ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಥಣೀಸಂದ್ರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ ಭಾಗಿಯಾಗಿದ್ದರು. ಶಿಕ್ಷಕರಿಗೆ ಶುಭಾಶಯ ಕೋರಿದ ಸಚಿವ ಮಧುಬಂಗಾರಪ್ಪ ಅವರು, ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡುವ ಸಂದರ್ಭದಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಸರ್ಕಾರಿ ವಿದ್ಯಾರ್ಥಿಗಳು ಹಾಗೂ ಪಿಯುಸಿ ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ಶಿಕ್ಷಕರಿಗೆ ಶುಭಾಶಯ ಕೋರಿ ಮಾತನಾಡಿದ ಸಚಿವ ಮಧುಬಂಗಾರಪ್ಪ, ತಂದೆ-ತಾಯಿ ಕತ್ತಲೆ ಲೋಕದಿಂದ ಬೆಳಕಿನ ಲೋಕಕ್ಕೆ ತರ್ತಾರೆ. ಆದರೆ ಮಕ್ಕಳ ಬಾಳಲ್ಲಿ ಸದಾ ಬೆಳಕನ್ನ ಸದಾ ತುಂಬೋರು ಗುರುಗಳು. ತಂದೆ ತಾಯಿ ಜನ್ಮ ನೀಡ್ತಾರೆ, ಗುರುಗಳು ಜನ್ಮಕ್ಕೆ ದಾರಿ ತೋರುವವರು. ಕಷ್ಟ-ಸುಖಗಳ ನಡುವೆ ಮಕ್ಕಳ ಜೀವನಕ್ಕೆ ದಾರಿ ತೋರಿಸುತ್ತಾರೆ. ಭಾಷೆ-ಜಾತಿ- ಧರ್ಮದ ಬೇಧಬಾವವಿಲ್ಲದ ವಿಚಾರವನ್ನ ಮಕ್ಕಳಿಂದ ನಾವು ಕಲಿಬೇಕಾಗುತ್ತದೆ. ರಾಜ್ಯ, ದೇಶ ಕಟ್ಟೋ ಜವಾಬ್ದಾರಿ ಗುರುಗಳ ಮೇಲೆ ಇರುತ್ತೆ. ಸರ್ಕಾರ ಅದನ್ನ ಯಾವತ್ತು ಮರೆಯಲ್ಲ ಎಂದು ಭರವಸೆ ನೀಡಿದರು.

52 ಸಾವಿರ ಅತಿಥಿ ಶಿಕ್ಷಕರ ನೇಮಕ, 16 ಸಾವಿರ ಶಿಕ್ಷಕರ ನೇಮಕ

ಇಂದಿನ ಸಮಾರಂಭದಲ್ಲಿ ಸಾಕಷ್ಟು ವಿಚಾರವನ್ನ ಮಕ್ಕಳು ಹಾಗೂ ಶಿಕ್ಷಕರು ಹೇಳಿದ್ದಾರೆ. ರಾಜ್ಯದಲ್ಲಿ 46 ಸಾವಿರ ಶಾಲೆ ಇದೆ. ಆದರೆ ಈಗ ಶಾಲೆಯಲ್ಲಿ ಮೂರು ವರ್ಷದ ಹಿಂದೆ 500, 600 ಮಕ್ಕಳಿದ್ದರು. ಆದರೆ ಈಗ 1000 ಸಂಖ್ಯೆಗೆ ಮಕ್ಕಳ ಹಾಜರಾತಿ ಏರಿಕೆ ಆಗಿದೆ. ಸರ್ಕಾರಿ‌ ಶಾಲೆಗೆ ಬೇಕಾದ ಸೌಲಭ್ಯವನ್ನ ಹಂತ ಹಂತವಾಗಿ ಮಾಡ್ತೇವೆ. ಶಿಕ್ಷಕರ ಆರನೇ ವೇತನ ಏಳನೇ ವೇತನಕ್ಕೆ ಬದಲಾವಣೆ ಮಾಡೋದು, ಒಪಿಎಸ್ ಯೋಜನೆ ಬಾಕಿ ಇರೋದನ್ನ ಮಾಡಲು ಮುಂದಾಗುತ್ತೇವೆ. ಶಿಕ್ಷಕರ ಕೊರತೆ ತುಂಬಾ ಇದೆ, 52 ಸಾವಿರ ಅತಿಥಿ ಶಿಕ್ಷಕರ ನೇಮಕ ಮಾಡಿದ್ದೇವೆ. ಈ ಹಿಂದೆ ಮಕ್ಕಳು, ಕಟ್ಟಡ ಇದ್ದರೂ ಶಿಕ್ಷಕರು ಇರ್ತಾ ಇರಲಿಲ್ಲ. ಆದರೆ ಈ ಬಾರಿ ಶಿಕ್ಷಕರು ಮಕ್ಕಳನ್ನ ಕಾಯೋ ಸ್ಥಿತಿಗೆ ಬದಲಾಯಿಸಿದ್ದೇವೆ. 16 ಸಾವಿರ ಶಾಲಾ ಶಿಕ್ಷಣಕ್ಕೆ ಶಿಕ್ಷಕರು, 800 ಪಿಯು ಶಿಕ್ಷಕರ ನೇಮಕ ಆಗ್ತಾ ಇದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ, ಶಿಕ್ಷಕರಿಗೆ ಭರವಸೆ!

ಇದೇ ವೇಳೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಡಬಲ್ ಗುಡ್‌ ನ್ಯೂಸ್ ಕೊಟ್ಟ ಸಚಿವರು, ಮುಂದಿನ ವರ್ಷದಿಂದ ಉಚಿತ ನೋಟ್ ಬುಕ್ ಕೊಡ್ತೇವೆ. ಈಗಾಗಲೇ ಈ ವರ್ಷವೇ ಕೊಡಬೇಕು ಅನ್ನೋ ಪ್ರಯತ್ನ ಮಾಡ್ತಾ ಇದ್ದೇವೆ. ಆದರೆ ಈ ವರ್ಷವೇ ಉಚಿತ ಪುಸ್ತಕ ನೀಡ್ತೇವೆ. ಇಲ್ಲವಾದಲ್ಲಿ ಮುಂದಿನ ವರ್ಷ ನೂರಕ್ಕೆ ನೂರು ಉಚಿತ ನೋಟ್ ಬುಕ್ ನೀಡ್ತೇವೆ. ಪಿಯು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಉಚಿತವಾಗಿ ಈ ವರ್ಷದಿಂದ ಕೊಡ್ತೇವೆ, ಈ ವರ್ಷ ನೂರಕ್ಕೆ ನೂರು ರಿಸಲ್ಟ್ ಬರೋ ಹಾಗೇ ಓದಿ. ಒಂದು ವೇಳೆ ಉತ್ತಮ ಅಂಕ ಬರದಿದ್ದರೆ, ಇನ್ನೋಂದು ಪರೀಕ್ಷೆಯನ್ನ 20 ದಿನದೊಳಗೆ ಬರೆಯಿರಿ ಎಂದು ಹೇಳಿದರು.

ಅಲ್ಲದೇ, ಮುಂದಿನ ದಿನಗಳಲ್ಲಿ ಶಿಕ್ಷಣಯೇತರ ಕೆಲಸಗಳಿಂದ ದೂರ ಹಿಡಲು ಪ್ರಯತ್ನ ಮಾಡ್ತೇವೆ. ಆದರೆ ಇದು ಒಂದೇ ಬಾರಿಗೆ ಅದು ಸಾಧ್ಯವಿಲ್ಲ. ಹಂತ ಹಂತವಾಗಿ ಇದನ್ನ ಜಾರಿಗೆ ತರಲು ಪ್ರಯತ್ನ ಮಾಡ್ತೇವೆ ಎಂದು ಶಿಕ್ಷಕರಿಗೆ ಸಚಿವ ಮಧುಬಂಗಾರಪ್ಪ ಭರವಸೆ ನೀಡದರು.

ನಿವೃತ್ತಿ ನಂತರವೂ ಮಕ್ಕಳಿಗೆ ಪಾಠ ಮಾಡಲು ಅವಕಾಶ ಕೊಡಿ!

ನಿವೃತ್ತಿ ನಂತರವೂ ಮಕ್ಕಳಿಗೆ ಪಾಠ ಮಾಡಲು ಅವಕಾಶ ಮಾಡಿಕೊಡಿ ಎಂದು ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕಿಯೊಬ್ಬರು ಸಚಿವರಿಗೆ ಮನವಿ ಮಾಡಿದರು. ನನಗೆ ಸಂಬಳ ಬೇಡಾ ಕೆಲಸ ಮಾಡಲು ಅವಕಾಶ ಕೊಡಿ, ಮಕ್ಕಳಿಗೆ ಕಲಿಸುವ ಆಸೆ ಇದೆ ಎಂದು ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕಿ ಕಣ್ಣೀರಿಟ್ಟಿದ್ದರು. ಈ ಮನವಿಗೂ ಸಕರಾತ್ಮಕವಾಗಿ ಸ್ಪಂಧಿಸಿದ ಸಚಿವರು, ಶಿಕ್ಷಕರು ಪಾಠ ಮಾಡುತ್ತೇನೆ ಅಂದರೆ ನಮಗೆ ಸಂತೋಷವೇ. ಇದನ್ನು ಯಾವ ರೀತಿ ಅಳವಡಿಸಿಕೊಳ್ಳಬಹುದು ಅನ್ನೋದನ್ನು ಕಾನೂನಾತ್ಮಕವಾಗಿ‌ ಪರಿಶೀಲಿಸುತ್ತೇನೆ. ನಮಗೆ ಟೀಚರ್ಸ್ ಕೊರತೆ ಇದೆ ಅನ್ನೋದಾಗಿ ಹೇಳಿದರು.