ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯು ಕಳೆದ ಐದು ವರ್ಷಗಳಿಂದ ಸೂಕ್ತ ಕಟ್ಟಡವಿಲ್ಲದೆ, ಸಣ್ಣ ಬಾಡಿಗೆ ಮನೆಯಲ್ಲಿ ನಡೆಯುತ್ತಿದೆ. ಇಲ್ಲಿನ 172 ವಿದ್ಯಾರ್ಥಿಗಳು ಒಂದೇ ಜಾಗದಲ್ಲಿ ಊಟ, ನಿದ್ರೆ, ಪಾಠ ಕಲಿಯುತ್ತಿದ್ದು, ಶೌಚಾಲಯದಂತಹ ಮೂಲಭೂತ ಸೌಕರ್ಯಗಳಿಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ.

ಬಡತನದ ನಡುವೆಯೂ ತಮ್ಮ ಮಕ್ಕಳು ಚಂದಗೆ ಓದಿ, ದೊಡ್ಡ ಅಧಿಕಾರಿಗಳಾಗಲಿ ಎಂದು ಹೆತ್ತವರು ಕನಸು ಕಾಣುತ್ತಾರೆ. ಆ ಕನಸಿಗೆ ಆಸರೆಯಾಗಬೇಕಿದ್ದ ಸರ್ಕಾರಿ ವಸತಿ ಶಾಲೆಯೇ ಇವತ್ತು ಕಂದಮ್ಮಗಳಿಗೆ ಜೀವಂತ ನರಕವಾಗಿ ಬದಲಾಗಿದೆ. ಹಾಸನ ತಾಲೂಕಿನ ಶಾಂತಿಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುವ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಕರುಳು ಹಿಂಡುವ ಸ್ಥಿತಿ ಇದು.

5 ವರ್ಷದಿಂದ ಸೂಕ್ತ ಕಟ್ಟಡವಿಲ್ಲ!

ಕಳೆದ ಐದು ವರ್ಷಗಳಿಂದ ಈ ವಸತಿ ಶಾಲೆಯು ಸೂಕ್ತ ಕಟ್ಟಡವಿಲ್ಲದೆ, ಅಮಾನವೀಯ ವಾತಾವರಣವಿರುವ ಸಣ್ಣ ಬಾಡಿಗೆ ಮನೆಯೊಂದರಲ್ಲಿ ನಡೆಯುತ್ತಿದೆ. ಇಲ್ಲಿ 6 ರಿಂದ 10 ನೇ ತರಗತಿಯವರೆಗೆ ಕಲಿಯುತ್ತಿರುವ ಒಟ್ಟು 172 ಬಡ ವಿದ್ಯಾರ್ಥಿಗಳು (92 ಬಾಲಕರು ಹಾಗೂ 80 ಬಾಲಕಿಯರು) ದಿನನಿತ್ಯ ಅನುಭವಿಸುತ್ತಿರುವ ನರಕಯಾತನೆ ಕಂಡರೆ ಎಂತವರ ಕಣ್ಣಲ್ಲೂ ನೀರು ಉಕ್ಕಿ ಹರಿಯುತ್ತದೆ.

ಗಾಳಿ-ಬೆಳಕಿಲ್ಲದ 'ಕೊಟ್ಟಿಗೆ'ಯಲ್ಲಿ ಅಕ್ಷರ ಅಭ್ಯಾಸ!

ವಿದ್ಯಾರ್ಥಿಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳೂ ಇಲ್ಲದ ಈ ಜಾಗವು ದನದ ಶೆಡ್‌ಗಿಂತಲೂ ಕಡೆಯಾಗಿದೆ. ಒಂದೇ ಒಂದು ಸಣ್ಣ ಜಾಗದಲ್ಲಿ ಮಕ್ಕಳು ಕುಳಿತು ಊಟ ಮಾಡಬೇಕು, ಅದೇ ಕಿರಿದಾದ ನೆಲದಲ್ಲಿ ನಿದ್ರಿಸಬೇಕು ಮತ್ತು ಅದೇ ಜಾಗದಲ್ಲೇ ಕುಳಿತು ಪಾಠವನ್ನೂ ಕೇಳಬೇಕು! ಆರನೇ ತರಗತಿಯ ಮುಗ್ಧ ಮಕ್ಕಳು ಯಾವುದೇ ಬೆಂಚ್, ಡೆಸ್ಕ್ ಇಲ್ಲದೆ ತಂಪಾದ ನೆಲದಲ್ಲೇ ಗಂಟೆಗಟ್ಟಲೆ ಕುಳಿತು ಅಕ್ಷರ ಕಲಿಯುವ ದೃಶ್ಯ ಮನಸ್ಸನ್ನು ಕಲಕುತ್ತದೆ. ಸ್ವಚ್ಛ ಗಾಳಿ ಮತ್ತು ಬೆಳಕಿನ ಸುಳಿವೇ ಇಲ್ಲದ ಈ ಕತ್ತಲ ಕೋಣೆಯಲ್ಲಿ ಮಕ್ಕಳು ಕಾಯಿಲೆಗಳ ಗೂಡಾಗುವ ಭೀತಿಯಲ್ಲಿದ್ದಾರೆ.

ಹೆಣ್ಣುಮಕ್ಕಳಿಗೆ ಕನಿಷ್ಠ ಸೌಕರ್ಯವಿಲ್ಲ, 92 ಗಂಡುಮಕ್ಕಳಿಗೆ ಐದೇ ಶೌಚಾಲಯ!

ಶುಚಿತ್ವ ಮತ್ತು ನೈರ್ಮಲ್ಯದ ವಿಷಯದಲ್ಲಂತೂ ಈ ಶಾಲೆ ಅಮಾನವೀಯತೆಯ ಎಲ್ಲ ಎಲ್ಲೆಗಳನ್ನೂ ಮೀರಿದೆ. 92 ಬೆಳೆಯುವ ಗಂಡು ಮಕ್ಕಳಿಗೆ ಇರುವುದು ಕೇವಲ 5 ಶೌಚಾಲಯಗಳು! ಪ್ರತಿದಿನ ಬೆಳಿಗ್ಗೆ ಶೌಚಾಲಯಕ್ಕೆ ಸಾಲು ನಿಲ್ಲುವುದರಲ್ಲೇ ಮಕ್ಕಳ ಅರ್ಧ ಸಮಯ ವ್ಯರ್ಥವಾಗುತ್ತಿದೆ. ಇನ್ನು 80 ಬಾಲಕಿಯರ ಸ್ಥಿತಿಯಂತೂ ಹೇಳತೀರದಾಗಿದೆ. ಹೆಣ್ಣುಮಕ್ಕಳಿಗೆ ಅಗತ್ಯವಿರುವ ಕನಿಷ್ಠ ಖಾಸಗಿತನ ಮತ್ತು ನೈರ್ಮಲ್ಯದ ವ್ಯವಸ್ಥೆಯೂ ಇಲ್ಲದೆ, ಆ ಕಂದಮ್ಮಗಳು ಪ್ರತಿದಿನ ಪಡುತ್ತಿರುವ ಯಾತನೆ ವರ್ಣಿಸಲು ಸಾಧ್ಯವಿಲ್ಲ.

ಸರ್ಕಾರದ ಹಣ ಪೋಲು, ಇಲಾಖೆಯ ನಿರ್ದಯಿ ಮೌನ!

ಖಾಸಗಿ ಬಾಡಿಗೆ ಕಟ್ಟಡದ ಮಾಲೀಕರಿಗೆ ಸಮಾಜ ಕಲ್ಯಾಣ ಇಲಾಖೆಯು ಪ್ರತಿ ತಿಂಗಳು ಭಾರಿ ಮೊತ್ತದ 1 ಲಕ್ಷದ 8 ಸಾವಿರ ರೂಪಾಯಿ ಬಾಡಿಗೆಯನ್ನು ಪಾವತಿಸುತ್ತಿದೆ. ಲಕ್ಷ ಲಕ್ಷ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ನೀರಲ್ಲಿ ಹೋಮ ಮಾಡಿದಂತೆ ಪೋಲಾಗುತ್ತಿದ್ದರೂ, ಮಕ್ಕಳಿಗೆ ಮಾತ್ರ ಮಾನವೀಯ ವಾತಾವರಣ ಸಿಗುತ್ತಿಲ್ಲ. ಈ ಬಗ್ಗೆ ಶಾಲೆಯ ಪ್ರಾಂಶುಪಾಲರು ಹಾಗೂ ಸಿಬ್ಬಂದಿಯನ್ನು ಕೇಳಿದರೆ, "ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ, ಸದ್ಯಕ್ಕೆ ಬೇರೆ ಎಲ್ಲೂ ಸೂಕ್ತ ಜಾಗ ಸಿಗುತ್ತಿಲ್ಲ" ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿ ಕೈ ತೊಳೆದುಕೊಳ್ಳುತ್ತಿದ್ದಾರೆ.

ಪೋಷಕರಿಂದ ತೀವ್ರ ಆಕ್ರೋಶ!

ಅಧಿಕಾರಿಗಳ ಈ ಬೇಜವಾಬ್ದಾರಿ ಮತ್ತು ಕ್ರೂರ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಹಾಗೂ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಮಕ್ಕಳು ಬಡವರಾಗಿ ಹುಟ್ಟಿದ್ದೇ ತಪ್ಪಾ? ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಹೆಸರಿನ ಶಾಲೆಯಲ್ಲೇ ಮಕ್ಕಳಿಗೆ ಈ ಮಟ್ಟದ ಅನ್ಯಾಯವಾಗುತ್ತಿರುವುದು ನಾಚಿಕೆಗೇಡು" ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಕೂಡಲೇ ಸರ್ಕಾರ ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಂಡು, ಅಪಾಯಕಾರಿ ವಾತಾವರಣದಲ್ಲಿರುವ ಈ 172 ಮಕ್ಕಳನ್ನು ಸುಸಜ್ಜಿತ ಹಾಗೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ರೂಪಿಸುವುದಾಗಿ ಸಾರ್ವಜನಿಕರು ಎಚ್ಚರಿಸಿದ್ದಾರೆ.