ಮೈಸೂರು ಅರಮನೆಗೆ ಹೋಗುವ ದಾರಿಯನ್ನು ಕೇಳಿದ ಯುವತಿಗೆ ಯುವಕನೊಬ್ಬ ನೀಡಿದ ಉತ್ತರ ವಿಡಿಯೋ ವೈರಲ್ ಆಗಿದೆ. ಯುವಕ ಹೇಳಿದ ಉತ್ತರ ಕೇಳಿದ ಮೈಸೂರಿನ ಜನರು, ಆ ಮಾರ್ಗದಲ್ಲಿರುವ ಬೇರಾವ ಲ್ಯಾಂಡ್ಮಾರ್ಕ್ ನಿನಗೆ ಕಾಣಿಸಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಮೈಸೂರು: ಹೊಸ ಸ್ಥಳಗಳಿಗೆ ಭೇಟಿ ನೀಡಿದಾಗ ದಾರಿ ತಿಳಿಯದೇ ಸ್ಥಳೀಯರ ಸಹಾಯವನ್ನು ಪಡೆದುಕೊಳ್ಳಲಾಗುತ್ತದೆ. ಸ್ಥಳೀಯರು ಸಹ ತಮ್ಮೂರಿಗೆ ಬಂದ ದಾರಿ ಕೇಳಿದವರಿಗೆ ಮಾರ್ಗ ತೋರಿಸುತ್ತಾರೆ. ಆದ್ರೆ ಈ ಮಾರ್ಗ ತೋರಿಸುವ ವಿಧಾನ ಸ್ಥಳದಿಂದ ಸ್ಥಳಕ್ಕೆ ಅಥವಾ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಮಾತನಾಡುವ ಶೈಲಿ, ಆತನ್ನಾಡುವ ಪದಗಳು ಆ ವ್ಯಕ್ತಿ ಬಗೆಗಿನ ಕೊಂಚ ಮಾಹಿತಿಯನ್ನು ಹೇಳುತ್ತದೆ. ಇಂತಹ ಸೂಕ್ಷ್ಮ ವಿಷಯಗಳು ಆ ವ್ಯಕ್ತಿಯ ಗುರುತನ್ನು ಹೇಳುತ್ತವೆ. ಇದೀಗ ಮಾರ್ಗ ತೋರಿಸಿದ ಯುವಕನ ವಿಡಿಯೋವೊಂದು (Viral Video) ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದೆ.
ಇತ್ತೀಚೆಗಷ್ಟೇ ಇಡೀ ವಿಶ್ವದ ನಾಡಿನ ದಸರಾ ಹಬ್ಬವನ್ನು (Dasara Festival) ಕಣ್ತುಂಬಿಕೊಂಡಿದೆ. ಮೈಸೂರಿಗೆ ಆಗಮಿಸಲು ಸಾಧ್ಯವಾಗದ ಜನರು ಮನೆಯಿಂದಲೇ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದುಕೊಂಡ ಪುನೀತರಾಗಿದ್ದಾರೆ. ಮೈಸೂರು ದಸರಾ (Mysuru Dasara) ಅಂದ್ರೆ ಅಲ್ಲಿಗೆ ಅನೇಕ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳು ಆಗಮಿಸಿ, ತಮ್ಮದೇ ವಿನೂತನ ಶೈಲಿಯಲ್ಲಿ ವಿಡಿಯೋಗಳನ್ನು ಮಾಡುತ್ತಾರೆ. ಇಂತಹ ವ್ಲಾಗರ್ ಪೈಕಿ ಯುವತಿಯೊಬ್ಬರು, ಓರ್ವ ಯುವಕನಿಗೆ ಮೈಸೂರು ಅರಮನೆಗೆ (Mysuru Palace) ದಾರಿ ಕೇಳಿದ್ರೆ ನೀವು ಹೇಗೆ ವಿವರಿಸುತ್ತೀರಿ ಎಂದು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಯುವಕ ನೀಡಿದ ಉತ್ತರ ಸೋಶಿಯಲ್ ಮೀಡಿಯಾದಲ್ಲಿ ಪುರುಷರ (Men) ಖುಷಿಗೆ ಕಾರಣವಾಗಿದೆ.
ಅರಮನೆಗೆ ಯುವಕ ಹೇಳಿದ ದಾರಿ ಹೇಗಿತ್ತು?
ಯುವತಿ ಪ್ರಶ್ನೆ: ಅಪರಿಚಿತರು ಮೈಸೂರು ಪ್ಯಾಲೇಸ್ ಕೇಳಿದ್ರೆ ದಾರಿಯನ್ನು ಹೇಗೆ ಹೇಳ್ತೀರಿ?
ಯುವಕನ ಉತ್ತರ: ಬಸ್ ನಿಲ್ದಾಣದಿಂದ ದಾರಿ ಆರಂಭಿಸೋಣ. ಬಸ್ ನಿಲ್ದಾಣದಿಂದ ನೇರವಾಗಿ ಬಂದ್ರೆ ನಿಮಗೆ ಶ್ರೀನಿವಾಸ್ ಬಾರ್ ಸಿಗುತ್ತದೆ. ಅಲ್ಲಿಂದ ರೈಟ್ ತೆಗೆದುಕೊಂಡು ಸ್ವಲ್ಪ ಮುಂದೆ ಬಂದ್ರೆ ಕರಾವಳಿ ಬಾರ್ ಸಿಗುತ್ತೆ. ಅಲ್ಲಿಂದ ನೇರವಾಗಿ ಬಂದ್ರೆ ವೆಂಕಟೇಶ್ವರ ಬಾರ್ ಸಿಗುತ್ತೆ. ಇಲ್ಲಿಂದ ಕೇವಲ 300 ಮೀಟರ್ ಹೋದ್ರೆ ಪ್ಯಾಲೇಸ್ ಸಿಗುತ್ತೆ!
ಯುವತಿ: ಬ್ರೋ ಎಲ್ಲಾನೂ ಬಾರ್ ಹೆಸರೇ ಹೇಳ್ತಿದ್ದೀರಿ ಅಲ್ಲವಾ? ಆ 300 ಮೀಟರ್ನಲ್ಲಿ ಯಾವುದೇ ಬಾರ್ ಇಲ್ಲವಾ?
ಯುವಕ: ಜನರಿಗೆ ಸರಳವಾಗಿ ಅರ್ಥ ಆಗ್ಲಿ ಅಂತ ಹೇಳಿದಷ್ಟೇ!
ಯುವತಿ: ಈ ಮೂರು ಬಾರ್ಗಳಲ್ಲಿ ನಿಮ್ಮ ನೆಚ್ಚಿನ ಬಾರ್ ಯಾವುದು?
ಯುವಕ: ನಾನು ತಮಾಷೆಯಾಗಿ ಹೇಳೋಕೆ ಹೋದ್ರೆ ನನ್ನ ಬುಡಕ್ಕೆ ಬಂತು ಅಲ್ಲವಾ ಎಂದು ಹೇಳಿ ನಗುತ್ತಾರೆ.
ವಿಡಿಯೋ ನೋಡಿದ ಜನರು ಹೇಳಿದ್ದೇನು?
ದಾರಿಯಲ್ಲಿ ಇಷ್ಟೊಂದು ಬಾರ್ ಬಂದ್ರೆ, ಪ್ಯಾಲೇಸ್ಗೆ ಯಾಕೆ ಹೋಗ್ತಾರೆ? ಮೂರು ಬಾರ್ಗಳಲ್ಲಿ ಕುಡಿದ್ರೆ ಅಲ್ಲೇ ಅರಮನೆಯ ದರ್ಶನವಾಗುತ್ತೆ. ಯುವಕ ಚೆನ್ನಾಗಿ ದಾರಿ ತೋರಿಸಿದ್ದಾನೆ. ಹೊಸಬರು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯ ಇದಾಗಿದೆ ಎಂದು ತಮಾಷೆ ಮಾಡಿದ್ದಾರೆ. ಕೆಲವರು ನಿಜಕ್ಕೂ ಮೈಸೂರಿನಲ್ಲಿ 100 ಮೀಟರ್ ಅಂತರದಲ್ಲೊಂದು ಬಾರ್ ಸಿಗುತ್ತೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾ ಬಳಕೆದಾರರು ತಮ್ಮ ಆಪ್ತವಲಯದಲ್ಲಿರುವ ಮದ್ಯಪ್ರಿಯರಿಗರ ವಿಡಿಯೋ ಟ್ಯಾಗ್ ಮಾಡುತ್ತಿದ್ದಾರೆ. ಇನ್ನು ಕೆಲವರು ಬಸ್ ನಿಲ್ದಾಣದಿಂದ ಅರಮನೆಗೆ ಹೋಗುವ ಮಾರ್ಗದಲ್ಲಿ ಹಲವು ಲ್ಯಾಂಡ್ಮಾರ್ಕ್ಗಳಿವೆ. ಆದ್ರೆ ಈ ಯುವಕನಿಗೆ ಬಾರ್ ಗಳ ದರ್ಶನ ಮಾತ್ರ ಆಗಿದೆ ಎಂದಿದ್ದಾರೆ. ವೈರಲ್ ವಿಡಿಯೋದಲ್ಲಿ ಯುವಕ ಹೇಳಿದ ದಾರಿ ಸರಿಯಾಗಿದೆಯಾ ಅಥವಾ ಇಲ್ಲವಾ ಎಂಬುದನ್ನು ನೀವು ಕಮೆಂಟ್ ಮಾಡಿ.
ಇದನ್ನೂ ಓದಿ: ಊಟದ ಬಿಲ್ನಲ್ಲಿ ಅರ್ಧ ಕೊಡು ಎಂದಿದ್ದೇ ತಪ್ಪಾಯ್ತಾ? ಮಹಿಳೆಗೆ ‘ಕೆಟ್ಟ ಸ್ನೇಹಿತೆ’ ಪಟ್ಟ ಕೊಟ್ಟ ಗೆಳತಿ!







