ಕೊಡಗಿನ ಹಾರಂಗಿ ಹಿನ್ನೀರಿನಲ್ಲಿ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್ನ ಬೋಟ್ ಪಲ್ಟಿಯಾಗಿ ಗುಜರಾತ್ ಮೂಲದ ದಂಪತಿ ಮೃತಪಟ್ಟಿದ್ದಾರೆ. ಲೈಫ್ ಜಾಕೆಟ್ ಧರಿಸಿದ್ದರೂ ಬೋಟ್ ಅಡಿಯಲ್ಲಿ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಪಾರಾಗಿದ್ದಾರೆ.
ಕೊಡಗು (ನ.13): ಪ್ರವಾಸಕ್ಕೆಂದು ಮಂಜಿನ ನಗರಿ ಕೊಡಗಿಗೆ ಆಗಮಿಸಿದ್ದ ಗುಜರಾತ್ ಮೂಲದ ಕುಟುಂಬವೊಂದಕ್ಕೆ ವಿಧಿ ಕ್ರೂರ ಆಟವಾಡಿದೆ. ಕುಶಾಲನಗರ ಸಮೀಪದ ಹಾರಂಗಿ ಹಿನ್ನೀರಿನಲ್ಲಿ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್ನ ಬೋಟ್ ಪಲ್ಟಿಯಾದ ಪರಿಣಾಮ ಗುಜರಾತ್ ಮೂಲದ ಪ್ರವಾಸಿ ದಂಪತಿ ದಾರುಣವಾಗಿ ಮೃತಪಟ್ಟಿದ್ದು, ಅವರೊಂದಿಗೆ ಇದ್ದ ಇಬ್ಬರು ಮಕ್ಕಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತ ದುರ್ದೈವಿಗಳನ್ನು ಗುಜರಾತ್ ಮೂಲದ ಧರ್ಮೇಶ್ (50) ಹಾಗೂ ಅವರ ಪತ್ನಿ ನಿಮ್ಮಿ (48) ಎಂದು ಗುರುತಿಸಲಾಗಿದೆ.
ನೀರಿನಲ್ಲಿ ತಿರುವು ತೆಗೆದುಕೊಳ್ಳುವಾಗ ಸಂಭವಿಸಿದ ದುರ್ಘಟನೆ
ಗುಜರಾತ್ನಿಂದ ಕೊಡಗು ಪ್ರವಾಸಕ್ಕೆ ಬಂದಿದ್ದ ಧರ್ಮೇಶ್, ಪತ್ನಿ ನಿಮ್ಮಿ ಹಾಗೂ ಇಬ್ಬರು ಮಕ್ಕಳು ಹಾರಂಗಿ ಹಿನ್ನೀರಿನಲ್ಲಿರುವ 'ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್' (Adventure Water Sports) ನಲ್ಲಿ ಬೋಟಿಂಗ್ ಆಟವಾಡುತ್ತಿದ್ದರು. ಈ ವೇಳೆ ಬೋಟ್ ನೀರಿನಲ್ಲಿ ವೇಗವಾಗಿ ತಿರುವು ತೆಗೆದುಕೊಳ್ಳುತ್ತಿದ್ದಾಗ ನಿಯಂತ್ರಣ ತಪ್ಪಿ ಏಕಾಏಕಿ ಮಗುಚಿ ಬಿದ್ದಿದೆ. ಪರಿಣಾಮ ಬೋಟ್ನಲ್ಲಿದ್ದ ನಾಲ್ವರೂ ಹಿನ್ನೀರಿಗೆ ಬಿದ್ದಿದ್ದಾರೆ.
ಲೈಫ್ ಜಾಕೆಟ್ ಧರಿಸಿದ್ದರೂ ತಪ್ಪದ ದುರಂತ
ವಿಶೇಷವೆಂದರೆ, ಬೋಟಿಂಗ್ ಮಾಡುವಾಗ ಸುರಕ್ಷತಾ ದೃಷ್ಟಿಯಿಂದ ನಾಲ್ವರೂ ಲೈಫ್ ಜಾಕೆಟ್ (Life Jacket) ಧರಿಸಿದ್ದರು. ಬೋಟ್ ಮಗುಚಿದ ತಕ್ಷಣ ನೀರಿನಲ್ಲಿ ತೇಲುತ್ತಿದ್ದ ಇಬ್ಬರು ಮಕ್ಕಳನ್ನು ಸ್ಥಳೀಯರು ಹಾಗೂ ಸಿಬ್ಬಂದಿ ತಕ್ಷಣವೇ ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ. ಆದರೆ, ದುರದೃಷ್ಟವಶಾತ್ ಪತಿ ಧರ್ಮೇಶ್ ಮತ್ತು ಪತ್ನಿ ನಿಮ್ಮಿ ಅವರು ಪಲ್ಟಿಯಾದ ಬೋಟ್ನ ಅಡಿಯಲ್ಲಿ ಸಿಲುಕಿಕೊಂಡಿದ್ದರಿಂದ ಮೇಲೆ ಬರಲಾಗದೆ ನೀರಿನಲ್ಲಿ ಉಸಿರುಗಟ್ಟಿ ದುರ್ಮರಣಕ್ಕೀಡಾಗಿದ್ದಾರೆ. ಹೆತ್ತವರನ್ನು ಕಣ್ಣೆದುರೇ ಕಳೆದುಕೊಂಡ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ.
ಪೊಲೀಸರು ಮತ್ತು ಅಗ್ನಿಶಾಮಕ ದಳದ ಕಾರ್ಯಾಚರಣೆ
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ನೀರಿನಲ್ಲಿ ಮುಳುಗಿದ್ದ ದಂಪತಿಯ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರಕ್ಕೆ ರವಾನಿಸಲಾಗಿದೆ. ಈ ದುರ್ಘಟನೆಯು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಹಾಗೂ ತನಿಖೆ ಕೈಗೊಂಡಿದ್ದಾರೆ.














