ಬ್ಯಾದನೆ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ಮೊಬೈಲ್ ನೆಟ್‌ವರ್ಕ್ ಇಲ್ಲದೆ ಜನಜೀವನ ಅಸ್ತವ್ಯಸ್ತವಾಗಿದೆ. ತುರ್ತು ಸೇವೆ, ವಿದ್ಯಾರ್ಥಿಗಳ ಶಿಕ್ಷಣ ಮತ್ತು ದೈನಂದಿನ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗಿದ್ದು, ಶಾಶ್ವತ ಪರಿಹಾರಕ್ಕಾಗಿ ಗ್ರಾಮಸ್ಥರು ಮೊಬೈಲ್ ಟವರ್ ಸ್ಥಾಪನೆಗೆ ಆಗ್ರಹಿಸುತ್ತಿದ್ದಾರೆ.

ಹಾಸನ: ಸಕಲೇಶಪುರ ತಾಲೂಕಿನ ಗಡಿಭಾಗದಲ್ಲಿರುವ ಬ್ಯಾದನೆ ಗ್ರಾಮದಲ್ಲಿ ಕಳೆದ ಸುಮಾರು 20 ವರ್ಷಗಳಿಂದ ಮೊಬೈಲ್ ನೆಟ್‌ವರ್ಕ್‌ ಸಂಪರ್ಕ ಸಮರ್ಪಕವಾಗಿ ಲಭ್ಯವಾಗದೆ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಸುಮಾರು 150 ಕುಟುಂಬಗಳಿದ್ದು, 600ಕ್ಕೂ ಹೆಚ್ಚು ಜನರು ವಾಸಿಸುತ್ತಿರುವ ಗ್ರಾಮದಲ್ಲಿ ಇಂದಿಗೂ ಸಮರ್ಪಕ ಮೊಬೈಲ್ ಸಂಪರ್ಕ ವ್ಯವಸ್ಥೆ ಇಲ್ಲದಂತಾಗಿದೆ. ಗ್ರಾಮದಲ್ಲಿ ಮೊಬೈಲ್ ನೆಟ್‌ವರ್ಕ್ ಸಂಪರ್ಕದ ಕೊರತೆಯಿಂದಾಗಿ ದಿನನಿತ್ಯದ ಹಲವು ಕೆಲಸಗಳಿಗೆ ಗ್ರಾಮಸ್ಥರು ಪರದಾಡುವಂತಾಗಿದೆ. ಯಾರಿಗಾದರೂ ದೂರವಾಣಿ ಕರೆ ಮಾಡಬೇಕಾದರೆ ಅಥವಾ ಮೊಬೈಲ್ ಮೂಲಕ ಅಗತ್ಯ ಮಾಹಿತಿ ಪಡೆಯಬೇಕಾದರೆ ಗ್ರಾಮದಿಂದ ಸುಮಾರು ಒಂದರಿಂದ ಎರಡು ಕಿ. ಮೀ. ದೂರ ತೆರಳಿದ ನಂತರವಷ್ಟೇ ನೆಟ್‌ವರ್ಕ್ ಲಭ್ಯವಾಗುತ್ತದೆ. ಇದರಿಂದ ವಯೋವೃದ್ಧರು, ಮಹಿಳೆಯರು ಹಾಗೂ ಇತರ ಗ್ರಾಮಸ್ಥರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಗ್ರಾಮದಿಂದ ದೂರ ಹೋದ್ರೆ ಮಾತ್ರ ಸಿಗುವ ನೆಟ್‌ವರ್ಕ್ 

ವಿಶೇಷವಾಗಿ ತುರ್ತು ಸಂದರ್ಭಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಹೇಳತೀರದು. ಗ್ರಾಮದಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆ ಉಂಟಾದಾಗ, ಅಪಘಾತ ಸಂಭವಿಸಿದಾಗ ಅಥವಾ ಇತರ ತುರ್ತು ಪರಿಸ್ಥಿತಿ ಎದುರಾದಾಗ ತಕ್ಷಣ ಆಂಬ್ಯುಲೆನ್ಸ್, ಆಸ್ಪತ್ರೆ, ಪೊಲೀಸ್ ಇಲಾಖೆ ಅಥವಾ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯವಾಗದೆ ಸಮಸ್ಯೆ ಎದುರಾಗುತ್ತಿದೆ. ತುರ್ತು ಸಹಾಯಕ್ಕಾಗಿ ದೂರವಾಣಿ ಕರೆ ಮಾಡಬೇಕಾದ ಸಂದರ್ಭದಲ್ಲೂ ನೆಟ್‌ವರ್ಕ್ ಇರುವ ಪ್ರದೇಶಕ್ಕೆ ತೆರಳಬೇಕಾದ ಅನಿವಾರ್ಯತೆ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಬ್ಯಾದನೆ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಉಪಟಳವೂ ಹೆಚ್ಚಾಗಿದೆ. ಕಾಡಾನೆಗಳು ಗ್ರಾಮಗಳತ್ತ ಬಂದ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಹಾಗೂ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ನೀಡುವುದು ಅಗತ್ಯವಾಗಿರುತ್ತದೆ. ಆದರೆ ಮೊಬೈಲ್ ನೆಟ್‌ವರ್ಕ್ ಇಲ್ಲದಿರುವುದರಿಂದ ಇಂತಹ ಸಂದರ್ಭದಲ್ಲಿ ತಕ್ಷಣ ಮಾಹಿತಿ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗದೆ ಆತಂಕದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ವಿದ್ಯಾರ್ಥಿಗಳಿಗೂ ತೊಂದರೆ

ಮೊಬೈಲ್ ನೆಟ್‌ವರ್ಕ್ ಕೊರತೆಯಿಂದ ಗ್ರಾಮದ ವಿದ್ಯಾರ್ಥಿಗಳ ಶಿಕ್ಷಣಕ್ಕೂ ತೊಂದರೆಯಾಗಿದೆ. ಕಾಲೇಜು ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳು, ಪರೀಕ್ಷಾ ವೇಳಾಪಟ್ಟಿ, ಶೈಕ್ಷಣಿಕ ಸೂಚನೆಗಳು, ಅರ್ಜಿ ಸಲ್ಲಿಕೆ ಸೇರಿದಂತೆ ವಿವಿಧ ಆನ್‌ಲೈನ್ ಸೇವೆಗಳನ್ನು ಬಳಸಲು ನೆಟ್‌ವರ್ಕ್ ಇರುವ ಪ್ರದೇಶಗಳಿಗೆ ತೆರಳಬೇಕಾಗಿದೆ. ಗ್ರಾಮದಲ್ಲಿಯೇ ಮೊಬೈಲ್ ಸಂಪರ್ಕ ಲಭ್ಯವಿದ್ದರೆ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಗ್ರಾಮಸ್ಥರ ದೈನಂದಿನ ಚಟುವಟಿಕೆಗಳಿಗೂ ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ನೆಟ್‌ವರ್ಕ್ ಕೇವಲ ದೂರವಾಣಿ ಕರೆಗಳಿಗಷ್ಟೇ ಸೀಮಿತವಾಗಿಲ್ಲ. ಬ್ಯಾಂಕಿಂಗ್, ಆನ್‌ಲೈನ್ ಪಾವತಿ, ಸರ್ಕಾರಿ ಸೇವೆಗಳು, ಆರೋಗ್ಯ ಸೇವೆಗಳು, ಶಿಕ್ಷಣ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಇಂಟರ್‌ನೆಟ್ ಅಗತ್ಯವಾಗಿದೆ. ಆದರೆ ಗ್ರಾಮದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಈ ಎಲ್ಲ ಸೇವೆಗಳನ್ನು ಪಡೆಯಲು ಗ್ರಾಮಸ್ಥರು ಪರದಾಡುವಂತಾಗಿದೆ.

ಸಿಕ್ಕಿಲ್ಲ ಶಾಶ್ವತ ಪರಿಹಾರ

ಕಳೆದ ಎರಡು ದಶಕಗಳಿಂದ ಸಮಸ್ಯೆ ಮುಂದುವರಿದಿದ್ದರೂ ಇದುವರೆಗೆ ಶಾಶ್ವತ ಪರಿಹಾರ ದೊರಕಿಲ್ಲ. ಹೀಗಾಗಿ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಮೊಬೈಲ್ ಸೇವಾಸಂಸ್ಥೆಗಳು ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು. ಗ್ರಾಮದಲ್ಲಿ ಮೊಬೈಲ್ ಟವರ್‌ ಸ್ಥಾಪಿಸುವುದು ಅಥವಾ ಪರ್ಯಾಯ ತಾಂತ್ರಿಕ ವ್ಯವಸ್ಥೆ ಕಲ್ಪಿಸುವ ಮೂಲಕ ಸಮರ್ಪಕ ಮೊಬೈಲ್ ಹಾಗೂ ಇಂಟರ್‌ನೆಟ್ ಸಂಪರ್ಕ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Vande Bharat Express: ಸಕಲೇಶಪುರದಲ್ಲಿ ವಂದೇ ಭಾರತ್ ರೈಲಿಗೆ ಸ್ವಾಗತ ಬೆನ್ನಲ್ಲೇ ಸಿಕ್ಕಿತು ಮತ್ತೊಂದು ಗುಡ್‌ನ್ಯೂಸ್