ಕೊಡಗಿನಲ್ಲಿ ಮಾನವ-ಆನೆ ಸಂಘರ್ಷ ತೀವ್ರಗೊಂಡಿದ್ದು, ಆನೆ ದಾಳಿ ನಿಯಂತ್ರಣಕ್ಕೆ ವೈಜ್ಞಾನಿಕ ಯೋಜನೆ ಆಗ್ರಹಿಸಿ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ ಸೇರಿದಂತೆ ಹಲವೆಡೆ ಬಂದ್‌ಗೆ ರೈತ ಮತ್ತು ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ.

ವರದಿ : ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಆ.20): ಕೊಡಗು ಜಿಲ್ಲೆಯಲ್ಲಿ ಕಾಡಾನೆ ಮಾನವ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಇದೆ. ಜಿಲ್ಲೆಯಲ್ಲಿ ನಿತ್ಯ ಕಾಡಾನೆಗಳ ದಾಳಿಯಿಂದ ಹಲವರು ಪ್ರಾಣ ಕಳೆದುಕೊಂಡಿದ್ದರೆ, ಇನ್ನು ಕೆಲವರು ಅಂಗಾಂಗ ಊನಕ್ಕೊಳಗಾಗಿದ್ದಾರೆ. ಇದರಿಂದ ರೋಸಿ ಹೋಗಿರುವ ಕಾರ್ಮಿಕ ಸಂಘಟನೆ, ರೈತ ಸಂಘಟನೆಗಳು ವಿರಾಜಪೇಟೆ ಭಾಗದ ಹಲವೆಡೆ ಬಂದ್ ಗೆ ನಿರ್ಧರಿಸಿವೆ. ಆ ಮೂಲಕ ಅರಣ್ಯ ಇಲಾಖೆ, ಸರ್ಕಾರದ ವಿರುದ್ಧ ಸಂಘರ್ಷಕ್ಕೆ ಇಳಿದಿವೆ.

ವಿರಾಜಪೇಟೆ ತಾಲ್ಲೂಕಿನ ಕೆಲವು ಭಾಗದಲ್ಲಿ ಬಂದ್ ಗೆ ಕರೆ ನೀಡಿವೆ. ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ, ನೆಲ್ಯಹುದಿಕೇರಿ ಹಾಗೂ ಕರಡಿಗೋಡು ಭಾಗದಲ್ಲಿ ಬಂದ್ ಗೆ ನಿರ್ಧರಿಸಿವೆ. ಬಂದ್ ಮಾಡುವ ದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆವರೆಗೆ ಬಂದ್ ಗೆ ಕರೆ ನೀಡಿವೆ. ಬಂದ್ ನಡೆಸುವ ಕುರಿತು ತೋಟ ಕಾರ್ಮಿಕರ ಸಂಘಟನೆ ಮತ್ತು ರೈತ ಸಂಘಟನೆಗಳು ಸಿದ್ದಾಪುರದಲ್ಲಿ ಸಭೆ ನಡೆಸಿದ್ದು, ಸಭೆಗೆ ಚೇಂಬರ್ ಆಫ್ ಕಾಮರ್ಸ್, ಆಟೋ ಚಾಲಕರ ಸಂಘಗಳು ಬಂದ್ ಗೆ ಬೆಂಬಲ ಸೂಚಿಸಲು ಚಿಂತನೆ ನಡೆಸಿವೆ.

ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ ಸುತ್ತಮುತ್ತ ಕಾಡಾನೆಗಳಿಗಿಂತ ತೋಟದಲ್ಲಿರುವ ಆನೆಗಳಿಂದಲೇ ಹೆಚ್ಚಿನ ದಾಳಿ ನಡೆಯುತ್ತಿದೆ ಎನ್ನುವುದು ಸಂಘಟನೆಗಳ ಆಕ್ರೋಶ. ಕಾಡು ಬಿಟ್ಟು ತೋಟಗಳಲ್ಲಿಯೇ 240 ಆನೆಗಳು ಉಳಿದಿವೆ ಎಂದು ಈಗಾಗಲೇ ಅರಣ್ಯ ಇಲಾಖೆಯೇ ಮಾಹಿತಿ ನೀಡಿದೆ. ಹೀಗಾಗಿಯೇ ಕಾರ್ಮಿಕರು, ಜನರ ಮೇಲೆ ಆನೆಗಳು ದಾಳಿ ಮಾಡುತತ್ತಿವೆ. ಈ ಆನೆಗಳ ನಿಯಂತ್ರಣಕ್ಕೆ ವೈಜ್ಞಾನಿಕ ಯೋಜನೆಗೆ ಸಂಘಟನೆಗಳು ಆಗ್ರಹಿಸುತ್ತಿವೆ. ಆನೆಗಳು ತೋಟದಲ್ಲಿ ಕಂಡಾಗ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಆನೆಗಳನ್ನು ಓಡಿಸಲಾಗುತ್ತಿದೆ.

ಹೀಗಾಗಿ ಆನೆಗಳು ಪದೇ ಪದೇ ತೋಟ ಕಾರ್ಮಿಕರ ಮೇಲೆ ದಾಳಿ ಮಾಡುತ್ತಿವೆ. ಆನೆಗಳ ಕಾಡಿಗಟ್ಟುವ ನೆಪದಲ್ಲಿ ನೂರಾರು ಕೋಟಿ ಹಣ ಪೋಲು ಮಾಡಲಾಗುತ್ತಿದೆ ಎಂದು ಸಂಘಟನೆ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ಕಾಡಾನೆಗಳ ಹಾವಳಿ ತಪ್ಪಿಸಲು ವೈಜ್ಞಾನಿಕ ಯೋಜನೆಗೆ ಆಗ್ರಹಿಸಿದ್ದು, ಆನೆಗಳ ನಿಯಂತ್ರಣಕ್ಕೆ ಸರಿಯಾದ ಯೋಜನೆ ರೂಪಿಸದ ಕೊಡಗು ಸಿಸಿಎಫ್ ಅವರನ್ನು ವರ್ಗಾವಣೆ ಮಾಡಬೇಕು. ಕೂಡಲೇ ಸಚಿವರು, ಶಾಸಕರು, ಸಂಸದರು ಹೋರಾಟಗಾರರೊಂದಿಗೆ ಸಭೆ ನಡೆಸಬೇಕು.

ಸ್ಥಳೀಯರೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಬೇಕು ಎಂಬ ಬೇಡಿಕೆಗಳಿಗೆ ಆಗ್ರಹಿಸಿ ಬಂದ್ ಗೆ ಕರೆ ನೀಡಿವೆ. ಅದಕ್ಕೂ ಸ್ಪಂದಿಸದಿದ್ದಲ್ಲಿ ತೀವ್ರತರವಾದ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿವೆ. ಸದ್ಯ ಕರಡಿಗೋಡಿನಲ್ಲಿ ಮೊನ್ನೆ ದಾಳಿ ಮಾಡಿ ವ್ಯಕ್ತಿಯ ಸಾವಿಗೆ ಕಾರಣವಾದ ಆನೆ ಸೆರೆ ಮಾಡಲಾಗಿದ್ದು, ಇನ್ನೂ ಎರಡು ಆನೆಗಳ ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ. ನೂರಕ್ಕೂ ಹೆಚ್ಚು ಸಿಬ್ಬಂದಿ, ಆರು ಸಾಕಾನೆಗಳ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.