ಆರ್ ಎಸ್ ಎಸ್ ಹಿಂದೆಯೂ ನೋಂದಣಿಯಾಗಿಲ್ಲ ಮುಂದೆಯೂ ನೋಂದಣಿ ಆಗಲ್ಲ ಎಂದಿರುವ ಆರ್ಎಸ್ಎಸ್ ರಾಷ್ಟ್ರೀಯ ನಾಯಕ ಸಂತೋಷ್ ಅವರಿಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ತಣ್ಣಗೆ ತಿರುಗೇಟು ನೀಡಿದ್ದಾರೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಆ.16): ಸರ್ಕಾರಿ ಜಾಗ ಹಾಗೂ ಮೈದಾನಗಳನ್ನು ಬಳಸಿಕೊಳ್ಳಲು ಅನುಮತಿ ಪಡೆಯಬೇಕು ಎಂಬ ವಿಧೇಯ ಮಂಡಿಸಿರುವ ವಿಚಾರದಲ್ಲಿ ಆರ್ ಎಸ್ ಎಸ್ ಹಿಂದೆಯೂ ನೋಂದಣಿಯಾಗಿಲ್ಲ ಮುಂದೆಯೂ ನೋಂದಣಿ ಆಗಲ್ಲ ಎಂದಿರುವ ಆರ್ಎಸ್ಎಸ್ ರಾಷ್ಟ್ರೀಯ ನಾಯಕ ಸಂತೋಷ್ ಅವರಿಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ತಣ್ಣಗೆ ತಿರುಗೇಟು ನೀಡಿದ್ದಾರೆ. ಯಾರನ್ನೂ ನಾವು ಮನ ನೋಯಿಸುವುದಕ್ಕೆ ಈ ಕಾನೂನು ಮಾಡುತ್ತಿಲ್ಲ. ಕೋರ್ಟ್ ಆದೇಶಗಳನ್ನು ಪಾಲಿಸಿ ಕಾನೂನು ಮಾಡುತ್ತಿದ್ದೇವೆ. ಕೋರ್ಟಿನ ಕಾನೂನಿಗೆ ಗೌರವ ಕೊಡಬೇಕಲ್ವಾ?. ಆದ್ದರಿಂದ ಇದನ್ನು ಎಲ್ಲರೂ ಪಾಲಿಸಲೇಬೇಕು ಎಂದಿದ್ದಾರೆ.
ನಾವು ಫ್ರೀಡಂ ಹಬ್ಬ ಮಾಡಿದೆವು, ಆಗಲೂ ನಾವು ಪರ್ಮಿಷನ್ ತೆಗೆದುಕೊಂಡೇ ಮಾಡಿದ್ದೇವೆ. ಸಚಿವ ಕೃಷ್ಣಭೈರೇಗೌಡರು ಪರ್ಮಿಷನ್ ತೆಗೆದುಕೊಂಡು ಫ್ರೀಡಂ ಹಬ್ಬ ಮಾಡಿದರು. ಕಾನೂನಿನ ಚೌಕಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕಾಗಿದೆ ಎಂದರು. ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಭಗಂಡೇಶ್ವರ ದೇವಾಲಯಕ್ಕೆ ಆಗಮಿಸಿದ್ದ ಸಂದರ್ಭ ಹೆಲಿಪ್ಯಾಡ್ನಲ್ಲಿಯೇ ಮಾಧ್ಯಮಗಳೊಂದಿಗೆ ಮಾತನಾಡಿದರು. ನಾವು ಯಾರನ್ನೂ ಗುರಿಯಾಗಿಸಿಕೊಂಡು ಈ ಕಾನೂನು ಮಾಡುತ್ತಿಲ್ಲ. ಹೀಗಾಗಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಸೇರಿದಂತೆ ಯಾವುದೇ ಸಂಘಟನೆ ನೋವು ಮಾಡಿಕೊಳ್ಳುವ ಅಗತ್ಯವಿಲ್ಲ ಎಂದರು.
ನಮ್ಮ ಪಕ್ಷದಿಂದ ಭಾರತ್ ಜೋಡೋ ಕಾರ್ಯಕ್ರಮ ಮಾಡಿದೆವು. ಆಗ ರಾಹುಲ್ ಗಾಂಧಿಯವರು, ಖರ್ಗೆ ಸಾಹೇಬರು ಬಂದಿದ್ದರು. ಈ ವೇಳೆ ಫ್ರೀಡಂ ಪಾರ್ಕ್ ನಿಂದ ರ್ಯಾಲಿ ಮಾಡಲು ಅವಕಾಶ ಇರಲಿಲ್ಲ, ಕೋರ್ಟಿನಿಂದ ಅನುಮತಿ ಪಡೆಯಬೇಕಾಗಿತ್ತು. ನಾವು ರಾಹುಲ್ ಗಾಂಧಿಜಿಗೆ ಹಾಗೂ ಖರ್ಗೆಯವರಿಗೆ ಹೇಳಿ ಱಲಿ ಸಾಧ್ಯವಿಲ್ಲ ಎಂದು ಮನಪರಿವರ್ತನೆ ಮಾಡಿದೆವು. ನಮ್ಮದೇ ಸರ್ಕಾರ ಅಂತ ನಾವು ಕಾನೂನು ದುರ್ಬಳಕೆ ಮಾಡಿಕೊಳ್ಳಲು ಆಗಲ್ಲ ಎಂದರು. ಇನ್ನು ಚರಕ ಅಥವಾ ಉಪ್ಪಿನ ಸತ್ಯಾಗ್ರಹದಿಂದಲೇ ಸ್ವಾತಂತ್ರ್ಯ ಬಂದಿಲ್ಲ ಎಂದು ಸಂತೋಷ್ ಅವರು ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್ ಅವರು ಸಂತೋಷ್ ಅವರು ಹಿರಿಯರಿದ್ದಾರೆ, ನಾವು ಅವರ ಮಾತಿಗೂ ಗೌರವ ಕೊಡೋಣ. ಆದರೆ ಮೊದಲಿನಿಂದಲೂ ಇರುವ ಕಾನೂನಿಗೆ ಗೌರವ ಕೊಡೋಣ, ಆ ಮೂಲಕ ನೀವು ಕಾನೂನು ಪಾಲಿಸಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚ್ಯವಾಗಿ ಹೇಳಿದರು.
ಇನ್ನು ಚಾಮರಾಜನಗರದ ಹನೂರು ಅರಣ್ಯ ಪ್ರದೇಶದಲ್ಲಿ ನಡೆದಿರುವ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಕರಣದಲ್ಲಿ ಮೃತಪಟ್ಟವರು ಬೇಟೆಗೆ ಹೋಗಿದ್ದರು ಎನ್ನುವುದು ಬೆಳಿಗ್ಗೆ ನನ್ನ ಗಮನಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಎನ್ಕೌಂಟರ್ ಆಗಿರುವವರು ಬೇಟೆಗಾರರು, ಅವರ ಬಳಿ, ಕೋವಿ ಮಾಂಸ ದೊರೆತ್ತಿವೆ ಎಂದರೆ, ಅತ್ತ ಸಚಿವ ಪುಟ್ಟರಂಗಶೆಟ್ಟಿ ಅವರು ಮಾತ್ರ ಅವರು ದನ ಮೇಯಿಸಲು ಹೋದವರು ಎನ್ನುತ್ತಿದ್ದಾರೆ.
ಸಚಿವರ ನಡುವೆಯೇ ಗೊಂದಲಗಳಿವೆಯಲ್ಲ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೇಟೆಗಾರರು ಎಂಬುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಎಲ್ಲಾ ವಿಚಾರ ಎಲ್ಲರಿಗೂ ತಿಳಿಸಲು ಆಗಲ್ಲ. ನನಗೂ ಬೆಳಗ್ಗೆ ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಅವರ ಬಳಿ ಇದ್ದ ಬಂದೂಕು ಹಾಗೂ ಎರಡು ಚೀಲ ಮಾಂಸ ವಶಪಡಿಸಿಕೊಂಡಿದ್ದಾರೆ. ಒಬ್ಬ ಎಸ್ಕೇಪ್ ಆಗಿದ್ದು, ಮತ್ತಷ್ಟು ಮಾಹಿತಿ ಬರುವುದು ಇದೆ ಎಂದಿದ್ದಾರೆ. ಅರಣ್ಯ ಇಲಾಖೆಯವರ ಮೇಲೆ ಶೂಟ್ ಆಯಿತು ಹೀಗಾಗಿ ಅವರ ರಕ್ಷಣೆ ಅವರೂ ಶೂಟ್ ಮಾಡಿದಾರೆ ಎನ್ನುತ್ತಿದ್ದಾರೆ. ನೋಡೋಣ ಈಗಾಗಲೇ ಜೂಡಿಷಿಯಲ್ ತನಿಖೆ ಮಾಡಲು ಹೇಳಿದ್ದೇನೆ. ಮೃತಪಟ್ಟ ಮೂವರಿಗೂ ಪರಿಹಾರ ಕೊಡುವ ಕೆಲಸ ಮಾಡುತ್ತೇವೆ. ಆದರೆ ಯಾವ ರೀತಿಯ ರೀತಿ ಪರಿಹಾರ ಕೊಡೊದು ಅಂತ ಮುಂದೆ ತೀರ್ಮಾನ ಮಾಡಿ ಹೇಳುತ್ತೇವೆ ಎಂದಿದ್ದಾರೆ.


