Asianet Suvarna News Asianet Suvarna News

ಸುತ್ತೂರು ದೇಶದ ಪ್ರಸಿದ್ಧ ಮಠಗಳಲ್ಲಿ ಒಂದಾಗಿದೆ: ರಾಜ್ಯಪಾಲ ಗೆಹ್ಲೋತ್‌

ನಮ್ಮ ಧರ್ಮದ ಏಕತೆ, ಸಮಗ್ರತೆ ಮತ್ತು ಸನಾತನ ಧರ್ಮದ ಪರಂಪರೆಯನ್ನು ಶ್ರೀಮಂತಗೊಳಿಸುವಲ್ಲಿ ಸಾಧುಗಳು ಮತ್ತು ಸಂತರು ಅಪಾರ ಕೊಡುಗೆ ನೀಡಿದ್ದಾರೆ: ಗೆಹ್ಲೋತ್‌
 

Karnataka Governor Thawar Chand Gehlot Talks Over Sutturu Matha grg
Author
Bengaluru, First Published Aug 19, 2022, 1:28 PM IST

ಮೈಸೂರು(ಆ.19):  ಸದಾಚಾರ, ಧರ್ಮನಿಷ್ಠೆ ಮತ್ತು ಸಕಾರಾತ್ಮಕ ಶಕ್ತಿಯ ಹೊಂದಿರುವ ಸುತ್ತೂರು ಮಠವು ದೇಶದ ಪ್ರಸಿದ್ಧ ಮಠಗಳಲ್ಲಿ ಒಂದಾಗಿದ್ದು, ಮಠವು ಸಾಮಾಜಿಕ ಪ್ರಗತಿಯಲ್ಲಿ ಮಹತ್ವದ ಕೊಡುಗೆಯನ್ನು ನೀಡಿದೆ. ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಗುರು ಪರಂಪರೆಗೆ ದೂರದರ್ಶಿತ್ವವಾಗಿದ್ದಾರೆ ಎಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋತ್‌ ತಿಳಿಸಿದರು. ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಗುರುವಾರ ನಡೆದ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 107ನೇ ಜಯಂತಿ ಮಹೋತ್ಸವವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ರಾಜೇಂದ್ರ ಶ್ರೀಗಳು ಅಕ್ಷರ ದಾಸೋಹ, ಅನ್ನ ದಾಸೋಹ, ಆರೋಗ್ಯ ಸೇವೆ ಮೂಲಕ ಸಮಾಜದ ಉನ್ನತಿಗೆ ಅಪಾರ ಕೊಡುಗೆ ನೀಡಿದ್ದಾರೆ. ಧರ್ಮ, ಸಂಸ್ಕೃತಿ, ಅಧ್ಯಾತ್ಮದ ಸಂಗಮವಾಗಿ ವಿಚಾರಶೀಲ ಮತ್ತು ಸಂವೇದನಾಶೀಲರಾಗಿದ್ದರು. ಅಸಮಾನತೆ ನಿವಾರಣೆ ಪ್ರಯತ್ನ, ಬಡ ಮಕ್ಕಳ ಶಿಕ್ಷಣಕ್ಕಾಗಿ ಜೀವನ ಪರ್ಯಂತ ಶ್ರಮಿಸಿದರು ಎಂದು ಅವರು ಹೇಳಿದರು.

ಸ್ವಾತಂತ್ರ್ಯ ಕಳೆದುಕೊಂಡ ಕಾರಣದ ಅರಿವಿರಲಿ: ಸಿ.ಟಿ.ರವಿ

ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ ಅವರು ರಾಜೇಂದ್ರಶ್ರೀ ಅವರನ್ನು ರಾಜಗುರುತಿಲಕ ಎಂದು ಗೌರವದ ಬಿರುದು ನೀಡಿದ್ದಾರೆ. ಮೈಸೂರು ವಿವಿಯಿಂದ ಮರಣೋತ್ತರ ಗೌರವ ಡಾಕ್ಟರೇಟ್‌ ಪಡೆದಿರುವ ಶ್ರೀಗಳ ಸೇವೆ ಅನನ್ಯವಾದದ್ದು ಎಂದು ಅವರು ಸ್ಮರಿಸಿದರು.

ಸಾಮಾಜಿಕ, ಆರ್ಥಿಕ ಬದಲಾವಣೆಗಳನ್ನು ಮಾಡುವ ಮೂಲಕ ಸಮಾಜವನ್ನು ಸ್ವಾವಲಂಬಿಯನ್ನಾಗಿ ಮಾಡಲು, ಜೆಎಸ್‌ಎಸ್‌ ಮಹಾವಿದ್ಯಾಪೀಠವು ಸಾಮಾಜಿಕ ಸಮಾನತೆ, ಸಮೃದ್ಧಿ, ಶ್ರೇಷ್ಠತೆ, ಸಬಲೀಕರಣ, ಉದ್ಯಮಶೀಲತೆ ಮತ್ತು ಜ್ಞಾನೋದಯಕ್ಕಾಗಿ ಎಲ್ಲರಿಗೂ ಅಮೂಲ್ಯವಾದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ಜೆಎಸ್‌ಎಸ್‌ ಮಹಾವಿದ್ಯಾಪೀಠದ ಆಶ್ರಯದಲ್ಲಿ, ಅವರು ಅಕ್ಷರ ದಾಸೋಹಕ್ಕಾಗಿ ಶಾಲೆಗಳು ಮತ್ತು ಕಾಲೇಜುಗಳನ್ನು ಪ್ರಾರಂಭಿಸಿದರು. ಅನ್ನ ದಾಸೋಹಕ್ಕಾಗಿ ವಸತಿ ಮತ್ತು ಆರೋಗ್ಯ ದಾಸೋಹಕ್ಕಾಗಿ ಆಸ್ಪತ್ರೆಗಳನ್ನು ಪ್ರಾರಂಭಿಸಿದರು ಎಂದು ಅವರು ಶ್ಲಾಘಿಸಿದರು.

ಸಾಧುಗಳು, ಸಂತರು ಮತ್ತು ಗುರುಗಳ ಜನ್ಮ ದಿನವನ್ನು ಆಚರಿಸುವುದು ಈ ಮಹಾನ್‌ ರಾಷ್ಟ್ರದ ಸಂಸ್ಕೃತಿ ಮತ್ತು ನೀತಿಯ ಅವಿಭಾಜ್ಯ ಅಂಗವಾಗಿದೆ. ನಮ್ಮ ಧರ್ಮದ ಏಕತೆ, ಸಮಗ್ರತೆ ಮತ್ತು ಸನಾತನ ಧರ್ಮದ ಪರಂಪರೆಯನ್ನು ಶ್ರೀಮಂತಗೊಳಿಸುವಲ್ಲಿ ಸಾಧುಗಳು ಮತ್ತು ಸಂತರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಪುರಾತನ ಗ್ರಂಥಗಳ ಶ್ರೀಮಂತ ಜ್ಞಾನವನ್ನು ಪ್ರಸಾರ ಮಾಡುವ ಅಥವಾ ಆಧುನಿಕ ತಂತ್ರಜ್ಞಾನದಿಂದ ಸಮೃದ್ಧವಾಗಿರುವ ಆಧುನಿಕ ಶಿಕ್ಷಣವನ್ನು ನೀಡುವ ಕಾರ್ಯವಾಗಲಿ. ಸುತ್ತೂರು ಮಠವು ದೇಶ ಮತ್ತು ವಿದೇಶಗಳಲ್ಲಿ ತನ್ನ 300 ಹೆಚ್ಚು ಶಿಕ್ಷಣ ಮತ್ತು ಇತರ ಸಂಸ್ಥೆಗಳ ಮೂಲಕ ಅತ್ಯುತ್ತಮ ಕೆಲಸವನ್ನು ಮಾಡುತ್ತಿದೆ. ಸುತ್ತೂರು ಮಠದ ಈಗಿನ 24ನೇ ಜಗದ್ಗುರುಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ತಮ್ಮ ಗುರುಪರಂಪರೆ, ಮಠದ ಶ್ರೇಷ್ಠ ಪರಂಪರೆ ಮತ್ತು ಪ್ರಯತ್ನಗಳ ದರ್ಶನ ಮತ್ತು ಸದ್ಭಾವನೆಯನ್ನು ಹೆಚ್ಚಿಸುವ ಮೂಲಕ ಮಠದ ಸೇವಾ ಮನೋಭಾವ ಮತ್ತು ಕೀರ್ತಿಯನ್ನು ಜಾಗತಿಕ ಆಯಾಮಗಳಿಗೆ ಕೊಂಡೊಯ್ಯುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸನ್ನಡತೆಯಿಂದ 81 ಕೈದಿಗಳಿಗೆ ಬಿಡುಗಡೆ ಭಾಗ್ಯ

ಇದೇ ವೇಳೆ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂದೇಶ ಓದಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿವಿ ಬಿ.ಕೆ. ಲಕ್ಷ್ಮೇಜಿ ಅವರು ರಾಜ್ಯಪಾಲರ ಸಹಿತವಾಗಿ ಎಲ್ಲರಿಗೂ ರಾಖಿ ಕಟ್ಟಿದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೇಯರ್‌ ಸುನಂದಾ ಪಾಲನೇತ್ರ ಇದ್ದರು.

ಸಿಎಂ ಸಂದೇಶ

ಶ್ರೀ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಲೋಕ ಕಲ್ಯಾಣಕ್ಕಾಗಿ ಅವಿಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ಅನ್ನ, ಅರಿವು, ಆರೋಗ್ಯ, ಸಮಾಜ ಸುಧಾರಣೆ, ಧರ್ಮ ಜಾಗೃತಿ, ಅಧ್ಯಾತ್ಮ ಕ್ಷೇತ್ರದಲ್ಲಿ ಭದ್ರ ಬುನಾದಿ ಹಾಕಿದ್ದಾರೆ. ಶ್ರೀಗಳು ಶಾಂತಿ ಮತ್ತು ಧಾರ್ಮಿಕ ಸಾಮರಸ್ಯದ ರೂವಾರಿಗಳಾಗಿದ್ದು, ಜನರು ಸೌಹಾರ್ದಯುತವಾಗಿ ಬದುಕುಲ ಸ್ಫೂರ್ತಿಯಾಗಿದ್ದಾರೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.  
 

Follow Us:
Download App:
  • android
  • ios