ಸ್ವಾತಂತ್ರ್ಯ ಅಮೃತ ಮಹೋತ್ಸವ: ಸನ್ನಡತೆಯಿಂದ 81 ಕೈದಿಗಳಿಗೆ ಬಿಡುಗಡೆ ಭಾಗ್ಯ

ಈ ಬಾರಿ ಕೊಲೆ ಕೃತ್ಯ ಹೊರತುಪಡಿಸಿ ಇನ್ನುಳಿದ ಅಪರಾಧ ಪ್ರಕರಣಗಳಲ್ಲಿ ಸಜಾ ಶಿಕ್ಷೆಗೆ ಗುರಿಯಾಗಿದ್ದ ಕೈದಿಗಳು ಮಾತ್ರ ಬಿಡುಗಡೆ

81 Prisoners Released From Various Jails in Karnataka grg

ಬೆಂಗಳೂರು/ಮೈಸೂರು(ಆ.16): ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ ಹಿನ್ನೆಲೆಯಲ್ಲಿ ರಾಜ್ಯದ ಒಂಬತ್ತು ಕೇಂದ್ರ ಕಾರಾಗೃಹಗಳಲ್ಲಿ ವಿವಿಧ ಅಪರಾಧ ಕೃತ್ಯಗಳಲ್ಲಿ ಶಿಕ್ಷೆ ಗುರಿಯಾಗಿದ್ದ 81 ಕೈದಿಗಳು ಸ್ವತಂತ್ರರಾಗಿದ್ದಾರೆ.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಸನ್ನಡತೆ ಆಧಾರದ ಮೇರೆಗೆ 81 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ಬಾರಿ ಕೊಲೆ ಕೃತ್ಯ ಹೊರತುಪಡಿಸಿ ಇನ್ನುಳಿದ ಅಪರಾಧ ಪ್ರಕರಣಗಳಲ್ಲಿ ಸಜಾ ಶಿಕ್ಷೆಗೆ ಗುರಿಯಾಗಿದ್ದ ಕೈದಿಗಳನ್ನು ಮಾತ್ರ ಬಿಡುಗಡೆಗೊಳಿಸಲಾಗಿದೆ ಎಂದು ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್‌ ಮೋಹನ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಸನ್ನಡತೆ ಕೈದಿಗಳ ಬಿಡುಗಡೆ ಸಂಬಂಧ ಸರ್ಕಾರವು ಹೊಸ ನಿಯಮಗಳನ್ನು ರೂಪಿಸಿದೆ. ಅದರನ್ವಯ ಕ್ರಮ ಜರುಗಿಸಲಾಗಿದೆ. ಕಾರಾಗೃಹದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಕೈದಿಗಳಿಗೆ ಬಂಧುಮುಕ್ತದ ಪ್ರಮಾಣ ಪತ್ರ ಹಾಗೂ ಸಿಹಿ ನೀಡಿ ಬೀಳ್ಕೊಡಲಾಯಿತು ಎಂದು ಡಿಜಿಪಿ ಹೇಳಿದ್ದಾರೆ.

ಸನ್ನಡತೆಯ ವೃದ್ಧ, ಮಹಿಳಾ ಕೈದಿಗಳಿಗೆ ಬಿಡುಗಡೆ ಭಾಗ್ಯ: ಸುತ್ತೋಲೆ ಹೊರಡಿಸಿದ ಕೇಂದ್ರ!

20 ಮಂದಿ ಕೈದಿಗಳಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ​ ಅಂಗವಾಗಿ ಬಿಡುಗಡೆ ಭಾಗ್ಯ

ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಅಂಗವಾಗಿ ಮೈಸೂರು ಕೇಂದ್ರ ಕಾರಾಗೃಹದಲ್ಲಿದ್ದ 20 ಮಂದಿ ಪುರುಷ ಅಲ್ಪಾವಧಿ ಶಿಕ್ಷಾ ಬಂಧಿಗಳನ್ನು ಸನ್ನಡತೆ ಆಧಾರದಲ್ಲಿ ಸೋಮವಾರ ಬಿಡುಗಡೆ ಮಾಡಲಾಯಿತು. ಕೇಂದ್ರ ಕಾರಾಗೃಹದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಬಳಿಕ, ಸನ್ನಡತೆ ಆಧಾರದಲ್ಲಿ ಬಿಡುಗಡೆಯಾದ 20 ಮಂದಿ ಅಲ್ಪಾವಧಿ ಶಿಕ್ಷಾ ಬಂಧಿಗಳಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ ಅವರು ಬಿಡುಗಡೆ ಪ್ರಮಾಣ ಪತ್ರ ವಿತರಿಸಿದರು.

ನಂತರ ನ್ಯಾಯಾಧೀಶ ದೇವರಾಜ ಭೂತೆ ಮಾತನಾಡಿ, ಪ್ರತಿವರ್ಷ ಕೇಂದ್ರ ಕಾರಾಗೃಹಗಳಕಲ್ಲಿ ಸನ್ನಡತೆ ಆಧಾರದಲ್ಲಿ ಕೈದಿಗಳನ್ನು ಬಿಡುಗಡೆ ಮಾಡುವ ಪದ್ಧತಿ ಇತ್ತು. ಆದರೆ ಈ ಬಾರಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಅಲ್ಪಾವಧಿ ಶಿಕ್ಷೆ ಅನುಭವಿಸುತ್ತಿರುವ 20 ಮಂದಿಯನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಕಾರಾಗೃಹ, ಶಿಕ್ಷೆ ಎಂಬುದು ಅಪಾರಾಧಿಗಳ ಸುಧಾರಣೆಗೆ ಇರುವಂತದ್ದು. ಇಲ್ಲಿಂದ ಹೋದವರು, ಮತ್ತೆ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸದೇ ಉತ್ತಮ ಬದುಕು ರೂಪಿಸಿಕೊಳ್ಳಬೇಕು. ಉತ್ತಮ ನಾಗರೀಕರಾಗಿ ಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು.

14 ವರ್ಷ ಜೈಲಲ್ಲಿ ಕೈದಿಯಾಗಿದ್ದಾತ ಈಗ ವೈದ್ಯ: ಓವರ್ ಟು ಸುಭಾಷ್ ಪಾಟೀಲ್!

ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಕೆ.ಸಿ. ದಿವ್ಯಶ್ರೀ ಮಾತನಾಡಿ, ಸರ್ಕಾರದ ನಿರ್ದೇಶನದ ಮೇರೆಗೆ ರಾಜ್ಯದಲ್ಲಿ 89 ಮಂದಿ ವಿವಿಧ ಕೇಂದ್ರ ಕಾರಾಗೃಹಗಳಲ್ಲಿ ಸನ್ನಡತೆ ಆಧಾರದಲ್ಲಿ ಅಲ್ಪಾವಧಿ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಅದರಂತೆ ಮೈಸೂರಿನ ಕಾರಾಗೃಹದಲ್ಲಿ 20 ಜನರನ್ನು ಬಿಡುಗಡೆ ಮಾಡಲಾಗುತ್ತಿದೆ. ಇವರು ವಿವಿಧ ಪ್ರಕರಣಗಳಲ್ಲಿ ಕಾರಾಗೃಹದಲ್ಲಿದ್ದು, ಶೇ.60 ರಷ್ಟುಶಿಕ್ಷೆ ಪೂರೈಸಿದವರಾಗಿದ್ದಾರೆ. ಇದು ಮೊದಲನೇ ಹಂತವಾಗಿದ್ದು, ಜ.26ರ ಗಣರಾಜ್ಯೋತ್ಸವದಂದು 2ನೇ ಹಂತದಲ್ಲಿ ಹಾಗೂ ಮುಂದಿನ ಆ.15ರ ಸ್ವಾತಂತ್ರ್ಯದಿನದಂದು 3ನೇ ಹಂತದಲ್ಲಿ ಅಲ್ಪಾವಧಿ ಸಜಾ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದರು.

ಸನ್ನಡತೆಯಿಂದ ಬಿಡುಗಡೆಯಾದವರು

ನಂಜನಗೂಡು ತಾಲೂಕು ಕಾಟೂರಿನ ಕುಮಾರ, ಕೊಡಗು ಜಿಲ್ಲೆ ಬಳಮ್ಮವಟ್ಟಿಗ್ರಾಮದ ಮಾದೇಯಾಂಡ ಸಿ.ರಾಜೇಶ್‌, ಟಿ. ನರಸೀಪುರ ತಾಲೂಕು ಬೆನಕನಹಳ್ಳಿಯ ಶಾಂತರಾಜು, ಸರಗೂರು ತಾಲೂಕು ಕಳ್ಳಂಬಾಳು ಗ್ರಾಮದ ಕುಮಾರ ಮತ್ತು ಕೃಷ್ಣ, ಕೇರಳದ ಮಾನಂದವಾಡಿ ಆಣೆಬೇಗೂರು ಗ್ರಾಮದ ಮಾದವನ್‌, ಮಂಡ್ಯ ಜಿಲ್ಲೆ ಕಿರುಗಾವಲಿನ ಜಯರಾಮ, ಹುಣಸೂರು ತಾಲೂಕು ಅಬ್ಬೂರಿನ ಮಹೇಶ, ನಂಜನಗೂಡು ತಾಲೂಕು ಹರತಲೆಯ ನಂಜುಂಡ.
ಕೊಡಗು ಜಿಲ್ಲೆಯ ಅಮ್ಮಂಗಾಲದ ಪಿ.ಜಿ.ಪುಟ್ಟ, ಕೊಡಗು ಜಿಲ್ಲೆ ಒಡೆಯನಪುರದ ವಿ.ಜೆ.ಹರೀಶ್‌, ಸೋಮವಾರಪೇಟೆ ತಾಲೂಕು ಕೂಡ್ಲೂರಿನ ಚಂದ್ರೇಗೌಡ, ಭೂತನಕಾಡಿನ ಮಂಜು, ಚಾಮರಾಜನಗರ ಜಿಲ್ಲೆಯ ಹೊನ್ನೂರಿನ ಶಿವಣ್ಣ, ಮಂಡ್ಯದ ಗಾಂಧಿನಗರದ ಜಗದೀಶ, ಮೈಸೂರಿನ ಮಂಡಿ ಮೊಹಲ್ಲಾದ ಅಬ್ದುಲ್‌ ಫಾರೂಕ್‌, ಮಂಡ್ಯ ಜಿಲ್ಲೆ ಗಣಿಗ ಗ್ರಾಮದ ಕೃಷ್ಣ ಅ. ಕೃಷ್ಣೇಗೌಡ, ಕೊಡಗು ಜಿಲ್ಲೆ ವಲಗುಂಡದ ಜೇನುಕುರುಬರ ಗಣೇಶ್‌, ಹುಣಸೂರು ತಾಲೂಕಿನ ನೇರಳಕುಪ್ಪೆಯ ಬೆಟ್ಟಶೆಟ್ಟಿಮತ್ತು ಟಿ. ನರಸೀಪುರ ತಾಲೂಕು ಎ.ಜೆ. ಕಾಲೋನಿಯ ಆರ್‌. ಸದಾನಂದ ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾದರು.

ಕಾರಾಗೃಹದ ಸಹಾಯಕ ಅಧೀಕ್ಷಕ ವಿಜಯ್‌ ರೋಡ್ಕರ್‌, ಮುಖ್ಯ ವೈದ್ಯಾಧಿಕಾರಿ ಡಾ. ಸಂತೋಷ್‌, ಜನರಲ್‌ ಸರ್ಜನ್‌ ಡಾ. ಕಿರಣ್‌, ಎಸ್‌ಐ ಅಮರ್‌ ಹುಲ್ಲೋಳಿ, ಜೈಲರ್‌ಗಳಾದ ಗೀತಾ ಮಾಲಗಾರ, ರಘುಪತಿ ಇದ್ದರು.

ಬಂಧಿತರಾದವರು ಉತ್ತಮ ಜೀವನ ನಡೆಸಲು ಹಾಗೂ ಕಾರಾಗೃಹದಲ್ಲಿ ಒತ್ತಡ ಕಡಿಮೆ ಮಾಡುವ ಸಲುವಾಗಿ ಕೈದಿಗಳ ಸನ್ನಡತೆ ಗುರುತಿಸಿ ರಾಜ್ಯಪಾಲರ ಅಂಕಿತದೊಂದಿಗೆ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಈ ರೀತಿ ಬಿಡುಗಡೆಯಾದವರು ಜಿವನದಲ್ಲಿ ಒಳ್ಳೆಯ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ಜೀವಿಸಬೇಕು. ಇಡೀ ಸಮಾಜ ನಿಮ್ಮನ್ನು ಗೌರವಿಸುವಂತೆ ಬದುಕು ನಡೆಸಬೇಕು ಅಂತ ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಕೆ.ಸಿ. ದಿವ್ಯಶ್ರೀ ತಿಳಿಸಿದ್ದಾರೆ.  
 

Latest Videos
Follow Us:
Download App:
  • android
  • ios