ಚಿಕ್ಕಮಗಳೂರಿನಲ್ಲಿ 62 ವರ್ಷದ ಹಿರಿಯ ನಾಗರಿಕರೊಬ್ಬರು ಅನುಮಾನಾಸ್ಪದ APK ಫೈಲ್ ಲಿಂಕ್ ಕ್ಲಿಕ್ ಮಾಡಿ ತಮ್ಮ ಬ್ಯಾಂಕ್ ಖಾತೆಯಿಂದ ₹3.12 ಲಕ್ಷ ಕಳೆದುಕೊಂಡಿದ್ದಾರೆ. ಈ ಸೈಬರ್ ವಂಚನೆ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಅಪರಿಚಿತ ಲಿಂಕ್‌ಗಳ ಬಗ್ಗೆ ಜಾಗರೂಕರಾಗಿರಲು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಚಿಕ್ಕಮಗಳೂರು: ಸೈಬರ್ ಅಪರಾಧಿಗಳು ಇದೀಗ ಹೊಸ ತಂತ್ರಗಳನ್ನು ಬಳಸಿಕೊಂಡು ಜನರನ್ನು ವಂಚಿಸುತ್ತಿರುವ ಘಟನೆಗಳು ಹೆಚ್ಚುತ್ತಿರುವ ನಡುವೆಯೇ, ನಗರದಲ್ಲಿ ಮತ್ತೊಂದು ದೊಡ್ಡ ಮೋಸ ಪ್ರಕರಣ ಬೆಳಕಿಗೆ ಬಂದಿದೆ. ಅನುಮಾನಾಸ್ಪದ APK ಫೈಲ್ ಕ್ಲಿಕ್ ಮಾಡಿದ ಪರಿಣಾಮ 62 ವರ್ಷದ ಹಿರಿಯ ನಾಗರಿಕನ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ಕಳುವಾಗಿರುವುದು ಆತಂಕ ಮೂಡಿಸಿದೆ.

ನಗರದ ವೆಂಕಟೇಶ್ ಎಂಬ ವೃದ್ಧರ ಮೊಬೈಲ್‌ಗೆ ಬಂದ ಅನುಮಾನಾಸ್ಪದ ಲಿಂಕ್‌ನ್ನು ಅವರು ತಿಳಿಯದೆ ಕ್ಲಿಕ್ ಮಾಡಿದ್ದರು. ಈ ಲಿಂಕ್ APK ಫೈಲ್ ರೂಪದಲ್ಲಿದ್ದು, ಅದನ್ನು ಡೌನ್‌ಲೋಡ್ ಮಾಡಿ ತೆರೆಯುತ್ತಿದ್ದಂತೆಯೇ ಸೈಬರ್ ಕಳ್ಳರು ಅವರ ಮೊಬೈಲ್‌ನಲ್ಲಿದ್ದ ವೈಯಕ್ತಿಕ ಹಾಗೂ ಬ್ಯಾಂಕ್ ಸಂಬಂಧಿತ ಮಾಹಿತಿಯನ್ನು ಕಳವು ಮಾಡಿಕೊಂಡಿದ್ದಾರೆ.

ಒಟ್ಟು ₹3 ಲಕ್ಷ 12 ಸಾವಿರ ಹಣ ಕಳಕೊಂಡ ವೃದ್ಧ

ಇದಾದ ಬಳಿಕ, ಅವರ ಕೆನರಾ ಬ್ಯಾಂಕ್ ಸೇವಿಂಗ್ ಖಾತೆಯಿಂದ ಒಟ್ಟು ₹3 ಲಕ್ಷ 12 ಸಾವಿರ ಹಣವನ್ನು ಹಂತ ಹಂತವಾಗಿ ಅನಧಿಕೃತವಾಗಿ ವರ್ಗಾವಣೆ ಮಾಡಲಾಗಿದೆ. ಮೊಬೈಲ್‌ಗೆ ಬಂದ ಬ್ಯಾಂಕ್ ಸಂದೇಶಗಳ ಮೂಲಕ ಈ ಹಣ ಕಳುವಾಗಿರುವುದು ವೆಂಕಟೇಶ್ ಅವರಿಗೆ ತಿಳಿದುಬಂದಿದೆ.

ಘಟನೆಯ ಬಗ್ಗೆ ಬ್ಯಾಂಕ್ ಕಸ್ಟಮರ್ ಕೇರ್ ಸಂಪರ್ಕಿಸಿದಾಗ, APK ಫೈಲ್ ಮೂಲಕ ಡೇಟಾ ಕಳವು ಮಾಡಿ ಈ ವಂಚನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ತಕ್ಷಣವೇ ಅವರು ಚಿಕ್ಕಮಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅಪರಿಚಿತ ಲಿಂಕ್‌ ಗಳ ಬಗ್ಗೆ ಎಚ್ಚರವಿರಲಿ

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದು, ಸೈಬರ್ ಅಪರಾಧಿಗಳನ್ನು ಶೀಘ್ರದಲ್ಲಿ ಬಂಧಿಸುವ ಭರವಸೆ ನೀಡಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಪರಿಚಿತ ಲಿಂಕ್‌ಗಳು, APK ಫೈಲ್‌ಗಳು ಅಥವಾ ಅನುಮಾನಾಸ್ಪದ ಸಂದೇಶಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಇಂತಹ ಸೈಬರ್ ಮೋಸಗಳಿಂದ ತಪ್ಪಿಸಿಕೊಳ್ಳಲು ಮೊಬೈಲ್‌ನಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು, ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳದಿರುವುದು ಹಾಗೂ ಯಾವುದೇ ಸಂದೇಹಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಅಗತ್ಯವಾಗಿದೆ.