ದೇಶದ ವಿವಿಧೆಡೆ ಸೈಬರ್ ವಂಚನೆ ಮೂಲಕ ಲೂಟಿ ಮಾಡಿದ ಹಣವನ್ನು ಹುಬ್ಬಳ್ಳಿ-ಧಾರವಾಡದ 5 ಬ್ಯಾಂಕ್ಗಳಿಗೆ ಜಮೆ ಮಾಡಿ ಚೆಕ್ ಮೂಲಕ ನಗದೀಕರಿಸಿದ ಬೃಹತ್ ಜಾಲ ಪತ್ತೆಯಾಗಿದೆ. 'ಆಪರೇಷನ್ ಸೈಬರ್ ಶೀಲ್ಡ್' ಕಾರ್ಯಾಚರಣೆಯಲ್ಲಿ ಈ ಅಕ್ರಮ ಬಯಲಾಗಿದ್ದು, 31 ಅನುಮಾನಾಸ್ಪದ ಚೆಕ್ಗಳ ಮೂಲಕ ಕೋಟ್ಯಂತರ ರೂಪಾಯಿ ಹಿಂಪಡೆಯಲಾಗಿದೆ.
ಹುಬ್ಬಳ್ಳಿ/ಧಾರವಾಡ (ನ.02): ದೇಶದ ವಿವಿಧೆಡೆಗಳಲ್ಲಿ ಜನರನ್ನು ಸೈಬರ್ ವಂಚನೆಯಲ್ಲಿ ವಂಚಿಸಿ ಲೂಟಿ ಮಾಡಲಾದ ಹಣವನ್ನು ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯ ಐದು ಬ್ಯಾಂಕ್ಗಳ ಖಾತೆಗಳಿಗೆ ಜಮೆ ಮಾಡಿ, ಹಣವನ್ನು ಚೆಕ್ ಮೂಲಕ ನಗದೀಕರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. 31 ಅನುಮಾನಾಸ್ಪದ ಚೆಕ್ಗಳ ಮೂಲಕ ಹತ್ತಾರು ಕೋಟಿ ರುಪಾಯಿ ಹಣ ಹಿಂಪಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಹುಬ್ಬಳ್ಳಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇಶಾದ್ಯಂತ ನಡೆಯುತ್ತಿರುವ ಸೈಬರ್ ವಂಚನೆ ಪ್ರಕರಣಗಳ ಹಣದ ವಹಿವಾಟು ಪತ್ತೆಹಚ್ಚಲು ಪೊಲೀಸ್ ಇಲಾಖೆ ಕೈಗೊಂಡಿರುವ ‘ಆಪರೇಷನ್ ಸೈಬರ್ ಶೀಲ್ಡ್’ ಕಾರ್ಯಾಚರಣೆಯಲ್ಲಿ ಈ ಅಕ್ರಮ ವಹಿವಾಟು ಪತ್ತೆಯಾಗಿದೆ. ಬೆಂಗಳೂರಿನ ಸೈಬರ್ ಅಪರಾಧ ನಿಯಂತ್ರಣ ಘಟಕ ನಡೆಸಿದ ಪರಿಶೀಲನೆಯಲ್ಲಿ ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯ ಬ್ಯಾಂಕ್ ಖಾತೆಗಳ ಮೂಲಕ ಅನುಮಾನಾಸ್ಪದ ಹಣದ ವಹಿವಾಟು ನಡೆದಿರುವುದು ಗೊತ್ತಾಗಿದೆ.
31 ಬಾರಿ ಚೆಕ್ಗಳಿಂದ ಹಣ ವಿತ್ಡ್ರಾ
ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿವಿಧ ಖಾತೆಗಳಲ್ಲಿ ವಹಿವಾಟು ನಡೆದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. 2025ರ ಜ. 8ರಿಂದ 2026ರ ಆ.3ರವರೆಗೆ ಒಟ್ಟು 31 ಬಾರಿ ಚೆಕ್ಗಳ ಮೂಲಕ ಹಣ ಹಿಂಪಡೆಯಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸೈಬರ್ ವಂಚನೆಗೆ ಒಳಗಾದ ಸಾರ್ವಜನಿಕರ ಹಣವೇ ಈ ಖಾತೆಗಳಿಗೆ ವರ್ಗಾವಣೆಯಾಗಿದ್ದು, ಬಳಿಕ ಚೆಕ್ಗಳ ಮೂಲಕ ನಗದೀಕರಿಸಲಾಗಿದೆ ಎನ್ನಲಾಗಿದೆ. ವಂಚನೆಯ ಹಣ ತಮ್ಮ ಖಾತೆಗಳಿಗೆ ಜಮೆಯಾಗಿರುವುದು ತಿಳಿದಿದ್ದರೂ ಖಾತೆದಾರರು ಚೆಕ್ಗಳನ್ನು ಬ್ಯಾಂಕ್ಗೆ ಸಲ್ಲಿಸಿ ಹಣ ಪಡೆದಿರುವ ಶಂಕೆ ವ್ಯಕ್ತವಾಗಿದೆ. ಮಧ್ಯವರ್ತಿಗಳ ನೆರವಿನಿಂದ ಹಣ ನಗದೀಕರಿಸಿಕೊಂಡು ಸ್ವಂತ ಲಾಭಕ್ಕೆ ಬಳಸಿಕೊಂಡಿರುವ ಸಾಧ್ಯತೆಯ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಖಾತೆದಾರರು ಯಾರು, ಶಂಕಿತರ ಮಾಹಿತಿ, ಹಣದ ಮೂಲ, ಚೆಕ್ ಮೊತ್ತದ ಮಾಹಿತಿ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


