ಪೀಣ್ಯ ದಾಸರಹಳ್ಳಿಯಲ್ಲಿ ನಡೆದ ವಾರ್ಡ್ ಒನ್ ಅಭಿಯಾನದಲ್ಲಿ ಅಧಿಕಾರಿಗಳ ಗೈರುಹಾಜರಿಯಿಂದ ಶಾಸಕ ಎಸ್. ಮುನಿರಾಜು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫುಟ್ಪಾತ್ ಒತ್ತುವರಿ, ರಸ್ತೆ ಗುಂಡಿ ಹಾಗೂ ಚರಂಡಿ ಸಮಸ್ಯೆಗಳನ್ನು ಬಗೆಹರಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಚಿವ ಕೃಷ್ಣ ಬೈರೇಗೌಡರಿಗೆ ಪತ್ರ ಬರೆಯುವುದಾಗಿ ಎಚ್ಚರಿಸಿದ್ದಾರೆ.

ಬೆಂಗಳೂರು (ನ.02): ರಾಜ್ಯ ಸರ್ಕಾರದ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ವಾರ್ಡ್ ಒನ್ ಅಭಿಯಾನ ಕೇವಲ ಕಾಟಾಚಾರಕ್ಕೆ ನಡೆಯುವ ರೀತಿ ಕಾಣುತ್ತಿದೆ. ಎಲ್ಲ ಇಲಾಖೆಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಇರಬೇಕೆಂದು ಸರ್ಕಾರ ಸುತ್ತೋಲೆ ಇದ್ದರೂ ಅಧಿಕಾರಿಗಳು ಗೈರಾದರೆ ಕಾರ್ಯಕ್ರಮ ಹೇಗೆ ಯಶಸ್ವಿಯಾಗುತ್ತದೆ ಎಂದು ಶಾಸಕ ಎಸ್.ಮುನಿರಾಜು ಸರ್ಕಾರದ ವಿರುದ್ಧ ಕಿಡಿಕಾರಿದರು.

ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡ್ ಹಾಗೂ ನಾಗಸಂದ್ರ ವಾರ್ಡ್ ವ್ಯಾಪ್ತಿಯಲ್ಲಿ ವಾರ್ಡ್ ಒನ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚೆಗೆ ನಮ್ಮ ಕ್ಷೇತ್ರದಲ್ಲಿ ಫುಟ್ಪಾತ್ ವ್ಯಾಪಾರಿಗಳ ತೆರವು ಕಾರ್ಯ ಸರಿಯಾಗಿ ನಡೆಸುತ್ತಿಲ್ಲ, ಚರಂಡಿ, ಮೋರಿ ದುರಸ್ತಿ ಆಗಲಿಲ್ಲ, ಅದರಲ್ಲಿರುವ ತ್ಯಾಜ್ಯದ ಬ್ಲಾಕ್ ಸ್ಪಾಟ್ ತೆರವು ಗೊಳಿಸಿಲ್ಲ, ಅಲ್ಲಲ್ಲಿ ರಸ್ತೆ ಗುಂಡಿಗಳು ಇವೆ, ಹೀಗೆ ಯಾವುದೇ ಕೆಲಸ ಹೇಳಿದರೂ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದರು.

ಯಾವ ಇಲಾಖೆ ಅಧಿಕಾರಿಗಳೂ ಹಾಜರಿಲ್ಲ

ಸರ್ಕಾರ ಆಯ್ಕೆ ಮಾಡಿದ ವಾರ್ಡಿನಲ್ಲಿ ಕನಿಷ್ಠ ಎಲ್ಲಾ ಇಲಾಖೆ ಹಿರಿಯ ಅಧಿಕಾರಿಗಳು ಹಾಜರಿರಬೇಕಿತ್ತು. ಆದರೆ ಇಲ್ಲಿ ಬೆರಳಣಿಕೆ ಅಧಿಕಾರಿಗಳು ಮಾತ್ರ ಹಾಜರಿದ್ದಾರೆ. ಜಂಟಿ ಆಯುಕ್ತರು ಇಲ್ಲ, ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಸಂಚಾರಿ ಪೊಲೀಸ್ ಅಧಿಕಾರಿಗಳು ಇಲ್ಲ. ಅದೇ ರೀತಿ ವಿವಿಧ ಇಲಾಖೆಯ ಯಾವ ಅಧಿಕಾರಿಗಳೂ ಹಾಜರಿಲ್ಲ. ಈ ಬಗ್ಗೆ ಸಂಪೂರ್ಣ ವರದಿ ಪಡೆದು ಸಚಿವ ಕಷ್ಟ ಬೈರೇಗೌಡರವರಿಗೆ ಪತ್ರ ಬರೆಯುವೆ.ಅಂತಹವರ ಮೇಲೆ ಕಠಿಣ ಕ್ರಮ ಕೂಡಲೇ ಆಗಬೇಕು ಎಂದು ದಾಸರಹಳ್ಳಿ ಶಾಸಕ ಎಸ್ ಮುನಿರಾಜು ಆಗ್ರಹಿಸಿದ್ದಾರೆ.

ಈ ಬಗ್ಗೆ ಅನೇಕ ಸಲ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತಂದಿದ್ದೇನೆ ಏನೂ ಪ್ರಯೋಜನ ಆಗಿಲ್ಲ ಎಂದು ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಜನರ ಎದುರು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೆಲವೇ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಜೊತೆಗೆ ಸ್ಥಳೀಯ ಜನರು ಹಾಜರಿದ್ದರು.