ಪ್ರಧಾನಿ ಮೋದಿ ಅವರು 4,000 ಕಿ.ಮೀ. ವ್ಯಾಪ್ತಿಯ ಬುಲೆಟ್ ಟ್ರೈನ್ ಕಾರಿಡಾರ್‌ಗೆ ಅನುಮೋದನೆ ನೀಡಿದ್ದು, ಇದರಲ್ಲಿ ಬೆಂಗಳೂರು-ಪುಣೆ ಮಾರ್ಗ ಸೇರಿದೆ. ಈ ಯೋಜನೆಯಿಂದ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ಐಟಿ ನಗರಗಳ ನಡುವಿನ ಪ್ರಯಾಣದ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ. ಇದರಿಂದ ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಬೆಂಗಳೂರು: ಪ್ರಧಾನಿ ಮೋದಿ ಅವರು 4,000 ಕಿ.ಮೀ. ವ್ಯಾಪ್ತಿಯ ಬುಲೆಟ್ ಟ್ರೈನ್ ಕಾರಿಡಾರ್‌ಗೆ ಅನುಮೋದನೆ ನೀಡಿದ್ದು, ಬೆಂಗಳೂರು-ಪುಣೆ ಬುಲೆಟ್ ಟ್ರೈನ್ ಈ ಕಾರಿಡಾರ್‌ನಲ್ಲಿ ಸೇರಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನ ಮಂತ್ರಿಗಳು ದಕ್ಷಿಣ ಕಾರಿಡಾರ್ ಹಾಗೂ ಉತ್ತರ ಕಾರಿಡಾರ್ ಎಂದು ಎರಡು ವಿಭಾಗಗಳನ್ನಾಗಿ ಬುಲೆಟ್ ಟ್ರೈನ್ ಅನ್ನು ವಿಂಗಡಿಸಿದ್ದು, ದಕ್ಷಿಣ ಕಾರಿಡಾರ್ ನಲ್ಲಿ ಬೆಂಗಳೂರು-ಹೈದರಾಬಾದ್-ಚೆನ್ನೈ ಹಾಗೂ ಬೆಂಗಳೂರು-ಪುಣೆ ನಡುವೆ ಬುಲೆಟ್‌ ಟ್ರೈನ್‌ ಸಂಚರಿಸಲಿವೆ. ಅಲ್ಲಿಗೆ ಒಟ್ಟು ದಕ್ಷಿಣದ ಎಲ್ಲಾ ರಾಜ್ಯಗಳ ಪ್ರಮುಖ ನಗರಗಳನ್ನು ಸಂಪರ್ಕಿಸುವ ಬುಲೆಟ್ ಟ್ರೈನ್ ಕಾರಿಡಾರ್ ನಿರ್ಮಾಣವಾದಂತಾಗುತ್ತದೆ ಎಂದರು.

ಮುಂದಿನ ವರ್ಷಗಳಲ್ಲಿ 3,000 ಕಿ.ಮೀ. ಬುಲೆಟ್ ಟ್ರೈನ್ ಕಾರಿಡಾರ್ ಘೋಷಣೆ ಆಗಲಿದ್ದು, ಬೆಂಗಳೂರು-ಪುಣೆ ಕಾರಿಡಾರ್ ನಿಂದಾಗಿ ಕರ್ನಾಟಕ ರಾಜ್ಯವನ್ನು ಪೂರ್ಣ ಪ್ರಮಾಣದಲ್ಲಿ ಸಂಪರ್ಕಿಸಿದಂತಾಗುತ್ತದೆ. ಈ ಟ್ರೈನ್ ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಪುಣೆಯವರೆಗೆ ಸಂಚರಿಸಲಿದೆ ಎಂದರು.

ಐಟಿ ನಗರಗಳ ಒಂದು ಮಾಡಲು ಅನುಮೋದನೆ

ಬೆಂಗಳೂರು, ಹೈದರಾಬಾದ್, ಅಮರಾವತಿ (ಆಂಧ್ರ ರಾಜಧಾನಿ) ಮತ್ತು ಚೆನ್ನೈ-ಈ ನಾಲ್ಕು ದೊಡ್ಡ ಐಟಿ ನಗರಗಳನ್ನು ಒಂದು ಮಾಡುವ ಕಾರಿಡಾರ್‌ಗೆ ಈಗಾಗಲೇ ಅನುಮೋದನೆ ದೊರೆತಿದೆ. ಈ ಮಾರ್ಗ ನಿರ್ಮಾಣವಾದ ನಂತರ ಬೆಂಗಳೂರು- ಚೆನ್ನೈ ಕೇವಲ 73 ನಿಮಿಷ (1 ಗಂಟೆ 13 ನಿಮಿಷ), ಬೆಂಗಳೂರು-ಹೈದ್ರಾಬಾದ್ ಪ್ರಯಾಣ ಕೇವಲ 2.10 ಗಂಟೆಗೆ ಇಳಿಯಲಿದೆ. ಆಗ ಈ ಎರಡೂ ನಗರಗಳು ಒಂದೇ ನಗರವಾಗುತ್ತವೆ ಎಂದು ಸಚಿವರು ಹೇಳಿದರು.

ಈ ಎಲ್ಲಾ ಯೋಜನೆಗಳು ಪೂರ್ಣಗೊಂಡರೆ ಶಕ್ತಿಯುತವಾದ ಆರ್ಥಿಕ ವ್ಯವಸ್ಥೆಯೊಂದಿಗೆ ಯುವಕರಿಗೆ ಉದ್ಯೋಗಾವಕಾಶಗಳೂ ದೊರೆಯಲಿವೆ. ಆ ಮೂಲಕ ಪ್ರಧಾನಿ ಅವರ ವಿಕಸಿತ ಭಾರತದ ಕನಸು ನನಸಾದಂತಾಗುತ್ತದೆ ಎಂದರು.