ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ (SBI) ಮೇಲೆ ಸೈಬರ್ ದಾಳಿಯಾಗಿದ್ದು, 3,897 ಗ್ರಾಹಕರ ವೈಯಕ್ತಿಕ ಮಾಹಿತಿ ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾಗಿದೆ. ಗ್ರಾಹಕರ ಹೆಸರು, ಫೋನ್ ನಂಬರ್ ಮತ್ತು ಸಾಲದ ದಾಖಲೆಗಳು ಲೀಕ್ ಆಗಿವೆ ಎಂದು ಬ್ಯಾಂಕ್ ಖಚಿತಪಡಿಸಿದೆ. ಆದರೆ, ಬ್ಯಾಂಕಿನ ಪ್ರಮುಖ ಕಾರ್ಯಾಚರಣೆಗಳು ಸಂಪೂರ್ಣ ಸುರಕ್ಷಿತವಾಗಿವೆ ಎಂದು ಎಸ್‌ಬಿಐ ಸ್ಪಷ್ಟಪಡಿಸಿದೆ.

ಮುಂಬೈ: ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ(SBI)ದ ಮೇಲೆ ದೊಡ್ಡ ರೀತಿಯ ಸೈಬರ್ ಅಟ್ಯಾಕ್ ಆಗಿದೆ. ಈ ಸೈಬರ್ ದಾಳಿಯಿಂದ ಸರಿಸುಮಾರು 3,897 ಗ್ರಾಹಕರ ಪರ್ಸನಲ್ ಡೇಟಾ ಡಾರ್ಕ್‌ ವೆಬ್‌ನಲ್ಲಿ ಲೀಕ್ ಆಗಿದೆ ಎಂದು ಸ್ವತಃ ಬ್ಯಾಂಕ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಲೀಕ್ ಆಗಿರುವ ಡೇಟಾದಲ್ಲಿ ಗ್ರಾಹಕರ ಹೆಸರು, ಫೋನ್ ನಂಬರ್, ಜನ್ಮ ದಿನಾಂಕ, ಲೋನ್ ಪಡೆಯಲು ನೀಡಿರುವ ಅಗತ್ಯ ದಾಖಲೆಗಳು ಲೀಕ್ ಆಗಿವೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಷೇರು ವಿನಿಮಯ ಕೇಂದ್ರಕ್ಕೆ ನೀಡಿರುವ ಮಾಹಿತಿಯಲ್ಲಿ ಡಾರ್ಕ್‌ ವೆಬ್‌ನಲ್ಲಿ ಪತ್ತೆಯಾದ ಸುಮಾರು 3.75 ಲಕ್ಷ ದಾಖಲೆಗಳ ಪ್ರಾಥಮಿಕ ತನಿಖೆಯ ಬಳಿಕ 3897 ಗ್ರಾಹಕರ ವೈಯುಕ್ತಿಕ ಗುರುತಿನ ಮಾಹಿತಿ ಲೀಕ್ ಆಗಿದೆ ಎನ್ನುವುದನ್ನು ಬ್ಯಾಂಕ್ ಖಚಿತಪಡಿಸಿದೆ.

ಅಕ್ಟೋಬರ್ 16ರಂದೇ ಸಿಕ್ಕಿತ್ತು ದಾಳಿಯ ಎಚ್ಚರಿಕೆ:

ಅಂದಹಾಗೆ ಎಸ್‌ಬಿಐ ಮೂಲಗಳ ಪ್ರಕಾರ, ಅಕ್ಟೋಬರ್ 16ರಂದು ಗ್ರಾಹಕರ ಡೇಟಾ ಸೋರಿಕೆಯಾಗುವ ಸಾಧ್ಯತೆಯ ಕುರಿತಂತೆ 'ಥ್ರೆಟ್ ಇಂಟೆಲಿಜೆನ್ಸ್' ಸೇವಾ ಪೂರೈಕೆದಾರರು, ಡಿಫೆನ್ಸ್ ಸೈಬರ್ ಏಜೆನ್ಸಿ ಮತ್ತು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌ನಿಂದ ಎಚ್ಚರಿಕೆಯ ಸಂದೇಶವೊಂದು ಬಂದಿತ್ತು. ಇದರ ಬೆನ್ನಲ್ಲೇ, ಬ್ಯಾಂಕ್ ತಕ್ಷಣವೇ ತನ್ನ ಸೈಬರ್ ಘಟನೆ ನಿರ್ವಹಣಾ ವ್ಯವಸ್ಥೆ ಮತ್ತು ಭದ್ರತಾ ನಿಯಮಾವಳಿಗಳನ್ನು ಜಾರಿಗೆ ತಂದಿತು ಎಂದು ತಿಳಿದು ಬಂದಿದೆ.

SBI ಗ್ರಾಹಕರ ಯಾವೆಲ್ಲಾ ಮಾಹಿತಿ ಲೀಕ್?

ಪ್ರಾಥಮಿಕ ತನಿಖೆಗಳ ಪ್ರಕಾರ, ಸೋರಿಕೆಯಾದ ದತ್ತಾಂಶಗಳ ಪೈಕಿ ಗ್ರಾಹಕರ ನೋಂದಾಯಿತ ಮೊಬೈಲ್ ನಂಬರ್, ಹೆಸರು, ಲಿಂಗ, ಇಮೇಲ್ ಐಡಿಗಳು, ಮನೆಯ ವಿಳಾಸ, ಜನ್ಮದಿನಾಂಕ, ಬ್ರ್ಯಾಂಚ್ ಕೋಡ್‌ಗಳು ಸೇರಿವೆ. ಇದರ ಜತೆಗೆ ಸಾಲದ ಡಾಕ್ಯೂಮೆಂಟ್, ಗ್ರಾಹಕರ ಮಾಹಿತಿ ಕಡತಗಳಿಗೆ ಸಂಬಂಧಿಸಿದ ದಾಖಲೆಗಳು ಕೂಡಾ ಇದರಲ್ಲಿ ಒಳಗೊಂಡಿವೆ ಎಂದು ತಿಳಿದು ಬಂದಿದೆ.

ಬ್ಯಾಂಕಿಂಗ್‌ನ ಪ್ರಮುಖ ಕಾರ್ಯಾಚರಣೆ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಎಸ್‌ಬಿಐ

ಈ ಘಟನೆಯು ತನ್ನ ಪ್ರಮುಖ ಬ್ಯಾಂಕಿಂಗ್ ಕಾರ್ಯಾಚರಣೆಗಳು, ಆರ್ಥಿಕ ಸ್ಥಿತಿ ಅಥವಾ ವ್ಯವಹಾರದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. ಎಸ್‌ಬಿಐ (SBI) ನ ಎಲ್ಲಾ ಪ್ರಮುಖ ವ್ಯವಹಾರ ಕಾರ್ಯಚಟುವಟಿಕೆಗಳು ಯಾವುದೇ ಅಡಚಣೆಯಿಲ್ಲದೆ ಎಂದಿನಂತೆ ಸುಗಮವಾಗಿ ನಡೆಯುತ್ತಿವೆ. ಈ ಮಾಹಿತಿಯನ್ನು ಪಡೆದ ಕೂಡಲೇ, ಬ್ಯಾಂಕ್ ತನ್ನ ಸೈಬರ್ ಘಟನೆ ಪ್ರತಿಕ್ರಿಯೆ (cyber incident response) ಮತ್ತು ಭದ್ರತಾ ನಿಯಮಾವಳಿಗಳನ್ನು ಸಕ್ರಿಯಗೊಳಿಸಿತು. ಇದಲ್ಲದೆ, ಈ ಸಂಪೂರ್ಣ ವಿಷಯದ ಬಗ್ಗೆ ಕೂಲಂಕಷ ತನಿಖೆ ಮತ್ತು ಅಪಾಯದ ಮೌಲ್ಯಮಾಪನವನ್ನು ನಡೆಸಲು, CERT-In ನೊಂದಿಗೆ ಸಂಬಂಧ ಹೊಂದಿರುವ ಸ್ವತಂತ್ರ ಸೈಬರ್ ಭದ್ರತಾ ಸಂಸ್ಥೆಯೊಂದನ್ನು ನಿಯೋಜಿಸಲಾಗಿದೆ. ತಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಬ್ಯಾಂಕ್ ತಿಳಿಸಿದೆ.

ಇತ್ತೀಚೆಗೆ, ‘ಸಿರಿಯಸ್‌ಇಮ್’ (Siriusim) ಎಂಬ ಅಷ್ಟಾಗಿ ಪರಿಚಯವಿಲ್ಲದ ಹ್ಯಾಕರ್ ಗುಂಪೊಂದು, ಎಸ್‌ಬಿಐ (SBI) ನ 3.75 ಲಕ್ಷ ಗ್ರಾಹಕರ ಡೇಟಾವನ್ನು ಕದ್ದಿರುವುದಾಗಿ ‘ಬ್ರೀಚ್‌ಫೋರಮ್ಸ್’ (BreachForums) ನಲ್ಲಿ ಹೇಳಿಕೊಂಡಿದೆ; ಆದರೆ, ಬ್ಯಾಂಕ್ ಯಾವುದೇ ನಿರ್ದಿಷ್ಟ ಹ್ಯಾಕರ್ ಗುಂಪಿನ ಹೆಸರನ್ನು ಉಲ್ಲೇಖಿಸಿಲ್ಲ.