ಬಸವಕಲ್ಯಾಣದಲ್ಲಿ ನಡೆದ ಉಪವಿಭಾಗ ಆಸ್ಪತ್ರೆ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಆರೋಗ್ಯ ಸಚಿವರ ಫೋಟೋ ಹಾಕದ ಕಾರಣ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಶಿಷ್ಟಾಚಾರ ಉಲ್ಲಂಘನೆ ಕುರಿತು 'ಕನ್ನಡಪ್ರಭ' ವರದಿ ಪ್ರಕಟಿಸಿದ ಬೆನ್ನಲ್ಲೇ ಸರ್ಕಾರ ಈ ಶಿಸ್ತು ಕ್ರಮ ಜರುಗಿಸಿದೆ.

ಬಸವಕಲ್ಯಾಣ (ಸೆ.17): ತಾಲೂಕಿನಲ್ಲಿ ಸೆ.16ರಂದು ನಡೆದ ಉಪವಿಭಾಗ ಆಸ್ಪತ್ರೆಯ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ಸರ್ಕಾರಿ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಆರೋಗ್ಯ ಸಚಿವರ ಫೋಟೋ ಹಾಕದೆ ನಿರ್ಲಕ್ಷ್ಯ ತೋರಿದ್ದ ಬೀದರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಧ್ಯಾಲೇಶ್ವರ ನಿರಗುಡೆ ಹಾಗೂ ಬಸವಕಲ್ಯಾಣ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶೋಕ ಮೈಲಾರೆ ಅವರನ್ನು ಅಮಾನತು ಮಾಡಲಾಗಿದೆ.

ಅಧಿಕಾರಿಗಳಿಂದ ಶಿಷ್ಟಾಚಾರ ಉಲ್ಲಂಘನೆ

ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದ ಉಪವಿಭಾಗೀಯ ಆಸ್ಪತ್ರೆ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ ಸಮಾರಂಭದಲ್ಲಿ ಅಧಿಕಾರಿಗಳ ಶಿಷ್ಟಾಚಾರದ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪದ ಕುರಿತು ‘ಕನ್ನಡಪ್ರಭ’ ದಿನಪತ್ರಿಕೆಯು ಬುಧವಾರದ ಆವೃತ್ತಿಯಲ್ಲಿ ವರದಿ ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.

ಈ ಕುರಿತು ಕರ್ತವ್ಯ ನಿರ್ಲಕ್ಷ್ಯ ಹಾಗೂ ‘ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು ಉಲ್ಲಂಘನೆ ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ಬಾಕಿ ಇರಿಸಿ ಈ ಶಿಸ್ತು ಕ್ರಮ ಜರುಗಿಸಲಾಗಿದೆ.

ಅಮಾನತು ಮಾಡಿ ಆದೇಶ:

‘ಕನ್ನಡಪ್ರಭ’ ವರದಿಗೆ ತಕ್ಷಣವೇ ಸ್ಪಂದಿಸಿರುವ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಯು ಇದೀಗ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದು, ಶಿಷ್ಟಾಚಾರ ನಿಯಮಗಳ ಉಲ್ಲಂಘನೆ ಹಾಗೂ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಹಿರಿಯ ವೈದ್ಯಾಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಹಾಗೂ ಶಿಸ್ತು ಪ್ರಾಧಿಕಾರಿಯಾದ ಗುರುದತ್ತ ಹೆಗಡೆ ಸೆ.17ರಂದು ಈ ಅಮಾನತು ಆದೇಶವನ್ನು ಹೊರಡಿಸಿದ್ದಾರೆ.